ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಮಠದ ಒಡೆತನಕ್ಕೆ 193 ಎಕರೆ ಆಸ್ತಿ

Last Updated 26 ನವೆಂಬರ್ 2017, 7:19 IST
ಅಕ್ಷರ ಗಾತ್ರ

ಸಿದ್ದಾಪುರ: ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಬೆಟ್ಟಗೇರಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಚೌರೀರ ಕುಟುಂಬಸ್ಥರು ಹಾಗೂ ಕನ್ನಡಮಠದ ನಡುವೆ ನಡೆಯುತ್ತಿದ್ದ ಭೂಮಿ ವಿವಾದವು ಶನಿವಾರ ಮಠಕ್ಕೆ ಆಸ್ತಿ ದಾಖಲೆಗಳನ್ನು ಹಸ್ತಾಂತರಿಸುವ ಮೂಲಕ ಅಂತ್ಯವಾಯಿತು.

ಭೋಗ್ಯಕ್ಕೆ ಪಡೆದಿದ್ದ 193 ಎಕರೆ ಭೂಮಿಯನ್ನು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ವಿರಾಜಪೇಟೆ ತಹಶೀಲ್ದಾರ್‌ ಆರ್‌. ಗೋವಿಂದರಾಜ್‌ ಅವರ ಮೂಲಕ ಮಠಕ್ಕೆ ಹಸ್ತಾಂತರಿಸಲಾಯಿತು. ಚೌರೀರ ಕುಟುಂಬವು ಮಠಕ್ಕೆ ಸೇರಿದ್ದ ಆಸ್ತಿಯನ್ನು ಭೋಗ್ಯಕ್ಕೆ ಪಡೆದುಕೊಂಡಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಚೌರೀರ ಕುಟುಂಬವು ಆ ಆಸ್ತಿ ನಮಗೇ ಸೇರಬೇಕೆಂದು ವಾದಿಸಿತ್ತು. ವಿವಾದವು ಕೋರ್ಟ್‌ ಮೆಟ್ಟಿಲೇರಿತ್ತು. ಬೆಟ್ಟಗೇರಿಯ ವಿವಿಧ ಸರ್ವೇ ನಂಬರ್‌ಗಳ 193 ಎಕರೆಯ ಆಸ್ತಿ ದಾಖಲೆ ಹಸ್ತಾಂತರಿಸುವ ಮೂಲಕ ಗ್ರಾಮದಲ್ಲಿ ಮಠದ ಒಟ್ಟು ಆಸ್ತಿ 197 ಎಕರೆಯಾಗಿದೆ.

ಮಠಕ್ಕೆ ಸೇರಿದ ಆಸ್ತಿಯನ್ನು ಭೋಗ್ಯಕ್ಕೆ ಪಡೆದುಕೊಂಡು ಅನುಭವಿಸುತ್ತಿದ್ದ ಚೌರೀರ ಕುಟುಂಬಸ್ಥರು, ಸ್ವಇಚ್ಛೆಯಿಂದ ಶನಿವಾರ ತೆರವುಗೊಳಿಸಿದರು. ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸ್ವಾಧೀನದ ಮಹಜರ್‌ ಬರಹವನ್ನು ಸಾರ್ವಜನಿಕವಾಗಿ ಓದಿ ತಿಳಿಸಿದ ಬಳಿಕ ಸ್ಥಳೀಯರಿಂದಲೂ ಸಹಿ ಮಾಡಿಸಿ ದಾಖಲೆಗಳನ್ನು ವಿರಕ್ತಮಠದ ಚನ್ನಮಲ್ಲದೇಶಿಕೇಂದ್ರ ಸ್ವಾಮೀಜಿಗೆ ತಹಶೀಲ್ದಾರ್‌ ಆರ್. ಗೋವಿಂದರಾಜು ಹಸ್ತಾಂತರಿಸಿದರು.

ಈ ಹಿಂದೆಯೂ ಕೋರ್ಟ್‌ ಆದೇಶದಂತೆ ತೆರವು ಮಾಡುವ ವೇಳೆ ಗಲಾಟೆ ನಡೆದ ಕಾರಣ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಡಿವೈಎಸ್‌ಪಿ ಸುಂದರ್‌ರಾಜ್, ಇನ್‌ಸ್ಪೆಕ್ಟರ್‌ ಮೇದಪ್ಪ ನೇತೃತ್ವದಲ್ಲಿ 150 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ತೀರ್ಪು ಸಂತಸ ತಂದಿದೆ: ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಭೂಮಿಯು ತಮ್ಮ ಕೈಸೇರಿರುವುದು ಸಂತಸವಾಗಿದೆ. ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಸಂದರ್ಭದಲ್ಲಿ ಕನ್ನಡದ ಕಲಿಕೆಗಾಗಿ ಶತಮಾನಗಳ ಹಿಂದೆ ಸ್ಥಾಪಿತವಾದ ಮಠವು ಲಭಿಸಿದೆ. ಮುಂದೆಯೂ ಸಾಮಾಜಿಕ ಅಭಿವೃದ್ಧಿಗೆ ಮಠ ಕಾರ್ಯ ನಿರ್ವಹಿಸಲಿದೆ ಎಂದು ಚನ್ನಮಲ್ಲ ದೇಶಿಕೇಂದ್ರದ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಏನಿದು ವಿವಾದ?: ಅಮ್ಮತ್ತಿಯಿಂದ ಪಾಲಿಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಈ ಪ್ರದೇಶವಿದೆ. ವೀರರಾಜೇಂದ್ರ ಒಡೆಯರ್ ಆಡಳಿತದ ಸಂದರ್ಭ 1809ರಲ್ಲಿ ಅಮ್ಮತ್ತಿಯಲ್ಲಿ ಕನ್ನಡಮಠವನ್ನು ಸ್ಥಾಪಿಸಲಾಗಿತ್ತು. 1954ರವರೆಗೂ ಕನ್ನಡಮಠ ಇಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಚನ್ನವೀರದೇಶಿ ಕೇಂದ್ರದ ಸ್ವಾಮೀಜಿ ಅವರ ಮೂಲಕ ಚೌರೀರ ಕುಟುಂಬಕ್ಕೆ ₹ 40 ಸಾವಿರಕ್ಕೆ 99 ವರ್ಷಗಳವರೆಗೆ ಭೋಗ್ಯಕ್ಕೆ ಆಸ್ತಿಯನ್ನು ನೀಡಲಾಗಿತ್ತು.

1972ರಲ್ಲಿ ಜಾರಿಗೆ ಬಂದ ಭೂಸುಧಾರಣಾ ಕಾಯ್ದೆಯ ಅನ್ವಯ ಈ ಜಾಗವನ್ನು ಸರ್ಕಾರದ ಜಾಗ ಎಂದು ವರ್ಗಾವಣೆಗೊಂಡಿತು. ಅದನ್ನು ಆಕ್ಷೇಪಿಸಿದ ಮಠವು 1993ರಲ್ಲಿ ಭೂನ್ಯಾಯ ಮಂಡಳಿಯ ಮೂಲಕ ತನ್ನ ಮಾಲೀಕತ್ವವನ್ನು ಪಡೆದುಕೊಳ್ಳಲು ಯಶಸ್ವಿಯಾಗಿತ್ತು. ಬಳಿಕ ಮತ್ತೆ ಅದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈಗ ಕೋರ್ಟ್‌ ಆದೇಶದಂತೆ ಮಠದ ಸ್ವಾಧೀನಕ್ಕೆ ಬಂದಿದೆ.

2017ರ ಜುಲೈ 27ರಂದು ತಹಶೀಲ್ದಾರ್‌ ದಾಖಲೆ ಪರಿಶೀಲಿಸಿ ಆಸ್ತಿ ಹಸ್ತಾಂತರಿಸುವಂತೆ ಆದೇಶಿಸಿತ್ತು. ವಿರಕ್ತಮಠದ ಪುಟ್ಟಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಹಾಜರಿದ್ದರು.

* *

ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ಕನ್ನಡದ ಕಲಿಕೆಗಾಗಿ ಶತಮಾನಗಳ ಹಿಂದೆ ಸ್ಥಾಪಿತವಾದ ಮಠ ಹಾಗೂ ಅದರ ಆಸ್ತಿ ಲಭಿಸಿರುವುದು ಸಂತಸವಾಗಿದೆ
ಚನ್ನಮಲ್ಲದೇಶಿಕೇಂದ್ರ ಸ್ವಾಮೀಜಿ, ವಿರಕ್ತಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT