ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಬೆಳೆಗೆ ಸೈನಿಕ ಹುಳು ದಾಳಿ

Last Updated 26 ನವೆಂಬರ್ 2017, 7:21 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತಕ್ಕೆ ಈ ಬಾರಿ ಸೈನಿಕ ಹುಳುಕಾಟ ಆರಂಭವಾಗಿದೆ. ಇನ್ನೇನು ಭತ್ತದ ಕೊಯ್ಲು ಸಂದರ್ಭದಲ್ಲಿ ಈ ಹುಳುಗಳ ದಾಳಿ ಆರಂಭವಾಗಿದ್ದು ರೈತರ ನಿದ್ದೆಗೆಡಿಸಿದೆ. ಕಳೆದ ವರ್ಷ ಮಳೆಯ ಕೊರತೆಯಿಂದ ಭತ್ತದ ಇಳುವರಿ ಕುಸಿದಿತ್ತು. ಈ ಬಾರಿ ಸೈನಿಕ ಹುಳು ಬಾಧೆಯು ರೈತರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಜಿಲ್ಲೆಯಾದ್ಯಂತ ಸೈನಿಕ ಹುಳುಬಾಧೆಯಿದೆ. ವಿರಾಜಪೇಟೆ, ಗೋಣಿಕೊಪ್ಪಲು, ಅಮ್ಮತ್ತಿ ವ್ಯಾಪ್ತಿಯಲ್ಲಿ ಈ ಸಮಸ್ಯೆ ತೀವ್ರವಾಗಿದೆ ಎನ್ನುತ್ತಾರೆ ರೈತರು. ಪ್ರಸ್ತಕ ವರ್ಷ 32 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಮಾಡಲಾಗಿದ್ದು, ನೂರಾರು ಎಕರೆಯಲ್ಲಿ ಈ ಬಾಧೆ ಕಾಣಿಸಿದೆ.

ಹುಳುಗಳು ಬೆಳೆದು ನಿಂತ ಭತ್ತದ ತೆನೆ ಮತ್ತು ಕಾಂಡವನ್ನು ತುಂಡರಿಸಿ ಕೆಳಗೆ ಬೀಳಿಸುತ್ತಿವೆ. ರಾತ್ರಿ ವೇಳೆ ಹುಳುಗಳು ಕ್ರಿಯಾಶೀಲವಾಗುತ್ತಿವೆ. ಬೆಳೆದಿರುವ ತೆನೆಯನ್ನೇ ಕತ್ತರಿಸಿ ಹಾಕುತ್ತಿರುವ ಕಾರಣ ಮೂರು ತಿಂಗಳಕಾಲ ಹಾಕಿದ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ ಎಂದು ಕೃಷಿಕರು ಅಲವತ್ತುಕೊಳ್ಳುತ್ತಿದ್ದಾರೆ.

‘ಹಗಲು ವೇಳೆ ಸೈನಿಕ ಹುಳುಗಳು ಕಣ್ಣಿಗೆ ಕಾಣಿಸುವುದಿಲ್ಲ. ಇದರಿಂದ ಅವುಗಳ ನಾಶಪಡಿಸಲು ಸಾಧ್ಯವಾಗುತ್ತಿಲ್ಲ. ಬಿಸಿಲಿನ ಶಾಖಕ್ಕೆ ಪೈರಿನ ಒಳಭಾಗದಲ್ಲಿ ಅವಿತುಕೊಳ್ಳುವ ಹುಳುಗಳು ಸೂರ್ಯಾಸ್ತದ ಬಳಿಕ ಹೊರಬಂದು ಕಾರ್ಯ ಚರಿಸುತ್ತವೆ; ಹತೋಟಿ ಕ್ರಮದಿಂದ ಭತ್ತದ ಬೆಳೆ ರಕ್ಷಣೆ ಸಾಧ್ಯವಿದೆ’ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ವೀರೇಂದ್ರ ಕುಮಾರ್‌ ಹೇಳುತ್ತಾರೆ.

ಹತೋಟಿಯ ಕ್ರಮಗಳು: ಕೀಟಬಾಧೆಯ ಗದ್ದೆಗಳಿಗೆ ತಂಪು ಹೊತ್ತಿನಲ್ಲಿ (ಸಂಜೆ 5.30ರ ನಂತರ) ಕ್ಲೋರೊಪೈರಿಫಾಸ್‌ ಹಾಗೂ ಸೈಪರ್‌ಮೆತ್ರಿನ್ (ಆಮ್ಲಾ) ಎಂಬ ಕೀಟನಾಶಕವನ್ನು ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. ಸಿಂಪಡಣೆಯನ್ನು ಕಡ್ಡಾಯವಾಗಿ ಸಂಜೆ ಹೊತ್ತಿನಲ್ಲಿಯೇ ಮಾಡುವುದರಿಂದ ಹುಳು ಬಾಧೆ ನಿಯಂತ್ರಣಕ್ಕೆ ತರಬಹುದು.

ಅಷ್ಟು ಮಾತ್ರವಲ್ಲದೆ 50 ಕೆ.ಜಿ ಭತ್ತದ ತೌಡು, 5 ಕೆ.ಜಿ ಬೆಲ್ಲವನ್ನು 10 ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದರಿಂದಲೂ ಬೆಳೆ ರಕ್ಷಣೆ ಮಾಡಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.

ಮಿಶ್ರಣ ತಯಾರಿ: 5 ಲೀಟರ್‌ ನೀರಿನಲ್ಲಿ ತೌಡು– ಬೆಲ್ಲವನ್ನು ಪಾಕದಂತೆ ಮಾಡಿಕೊಳ್ಳಬೇಕು. ನಂತರ, ಅದಕ್ಕೆ 10 ಲೀಟರ್ ನೀರಿನೊಡನೆ ಮಿಶ್ರಣ ಮಾಡಿ, 12 ಗಂಟೆ ಇಡಬೇಕು. ನಂತರ, ಅದಕ್ಕೆ 600 ಮಿ.ಲೀ ಮೋನೋಕ್ರೋಟೊಫಾಸ್ ಎಂಬ ಕೀಟನಾಶಕವನ್ನು ಸೇರಿಸಿ, ಮಿಶ್ರಣ ಮಾಡಿದ ಪುಡಿಯನ್ನು ಸಂಜೆ ವೇಳೆಯಲ್ಲಿ ಗದ್ದೆಗೆ ಎರಚಬೇಕು. ಇದರಿಂದ ಸೈನಿಕ ಹುಳುಗಳು ಈ ವಿಷ ಮಿಶ್ರಿತ ಅಹಾರಕ್ಕೆ ಆಕರ್ಷಣೆಗೊಂಡು ಅದನ್ನು ತಿಂದು ಸಾಯುತ್ತವೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

* * 

ಗದ್ದೆಯಲ್ಲಿ ನೀರಿದ್ದರೆ ಮಾತ್ರ ಕೀಟನಾಶಕವನ್ನು ಸಿಂಪಡಣೆ ಮಾಡಬೇಕು; ನೀರಿಲ್ಲದಿದ್ದರೆ ಮಿಶ್ರಣವನ್ನೇ ಗದ್ದೆಗೆ ಎರಚುವುದು ಒಳಿತು
ಡಾ.ವೀರೇಂದ್ರ ಕುಮಾರ್‌,
ಸಸ್ಯ ಸಂರಕ್ಷಣಾ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT