ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24x7 ಕುಡಿವ ನೀರು: 3 ವರ್ಷದಲ್ಲಿ 6 ವಲಯಗಳು ಪೂರ್ಣ

Last Updated 26 ನವೆಂಬರ್ 2017, 7:47 IST
ಅಕ್ಷರ ಗಾತ್ರ

ಗದಗ: ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೆರವಿನ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮದಡಿ (ಎನ್‌.ಕೆ.ಯು.ಎಸ್‌.ಐ.ಪಿ)ಗದಗ–ಬೆಟಗೇರಿ ಅವಳಿ ನಗರದ ಜನತೆಗೆ ದಿನದ 24 ಗಂಟೆಯೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವ 24x7 ಯೋಜನೆ ಕಾಮಗಾರಿ ಪ್ರಾರಂಭಗೊಂಡು ಡಿ. 24ಕ್ಕೆ ಮೂರು ವರ್ಷ ಪೂರ್ಣಗೊಳ್ಳಲಿವೆ.

ಈ ಯೋಜನೆಗೆ ಸರ್ಕಾರ 2012ರ ನ. 22ರಂದು ಅನುಮೋದನೆ ನೀಡಿತ್ತು. 2014ರ ಡಿ. 24ರಂದು ಕಾಮಗಾರಿ ಪ್ರಾರಂಭಿಸಲಾಗಿತ್ತು. ಆರು ತಿಂಗಳ ಹಿಂದೆ ಅಂದರೆ ಜೂನ್‌. 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು 12 ವಲಯಗಳ ಪೈಕಿ, 4 ವಲಯಗಳಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆಗೆ ಚಾಲನೆ ನೀಡಿದ್ದರು. ಒಪ್ಪಂದದಂತೆ 2017ರ ಜೂನ್‌ 23ರ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಇದುವರೆಗೆ 6 ವಲಯಗಳಲ್ಲಿ ಮಾತ್ರ ಬಾಗಶಃ ನೀರು ಪೂರೈಕೆ ಪ್ರಾರಂಭವಾಗಿದೆ. ಇನ್ನೂ 6 ವಲಯಗಳು ಬಾಕಿ ಉಳಿದಿವೆ. ಕಾಮಗಾರಿ ಪೂರ್ಣಗೊಳಿಸಲು 2018ರ ಜ. 31ರವೆರೆಗೆ ಗುತ್ತಿಗೆದಾರರಿಗೆ ಕಾಲಾವಧಿ ವಿಸ್ತರಿಸಲಾಗಿದೆ.

ಆನಂದ ನಗರ, ಹುಡ್ಕೋ ಕಾಲೊನಿ, ಶಾಪೂರಪೇಟೆ, ಎಸ್‌.ಎಂ ಕೃಷ್ಣಾ ನಗರ, ಕೆ.ಸಿ ಪಾರ್ಕ್‌, ಬಳ್ಳಾರಿ ಗೇಟ್‌ ಇವು ಕಾಮಗಾರಿ ಪೂರ್ಣಗೊಂಡ 6 ವಲಯಗಳು. ವೀರನಾರಾಯಣ ಪಾರ್ಕ್‌, ತಿಲಕ್‌ ಪಾರ್ಕ್‌,ಸರ್ವೋದಯ ಕಾಲೊನಿ, ಎಚ್‌.ಎಚ್‌. ಕಾಲೊನಿ, ಸಂಜಯ ನಗರ ಇನ್ನುಳಿದ 6 ವಲಯಗಳಾಗಿದ್ದು,ಇಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣಗೊಂಡು ಗದುಗಿನ 35 ವಾರ್ಡ್‌ಗಳ ನಿವಾಸಿಗಳು 24x7 ನೀರು ಕುಡಿಯಲು ಇನ್ನೂ ಕನಿಷ್ಠ ಒಂದು ವರ್ಷ ಕಾಯಬೇಕು ಎನ್ನುತ್ತಾರೆ ಯೋಜನೆ ಗುತ್ತಿಗೆ ಪಡೆದಿರುವ ಕಂಪೆನಿಯ ತಾಂತ್ರಿಕ ಸಿಬ್ಬಂದಿ.

ಈ ಯೋಜನೆಗೆ ಪೈಪ್‌ಲೈನ್‌ ಅಳವಡಿಕೆ ಸೇರಿದಂತೆ ಸಿವಿಲ್ ಕಾಮಗಾರಿಕೆ ₹ 72.21 ಕೋಟಿ, ನೀರು ಪೂರೈಕೆ ಪ್ರಾರಂಭಗೊಂಡ ನಂತರ 5 ವರ್ಷಗಳ ನಿರ್ವಹಣೆಗಾಗಿ ₹ 35.65 ಕೋಟಿ ಸೇರಿ ಒಟ್ಟು ಒಟ್ಟು 107.86 ಕೋಟಿ ಮೊತ್ತ ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು ಮೊತ್ತದಲ್ಲಿ ₹ 41.37 ಕೋಟಿ ಖರ್ಚಾಗಿದೆ ಎಂದು ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್ ಅವರು, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಅವರು ಸದನದಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ವಿಳಂಬಕ್ಕೆ ಕಾರಣಗಳು
* ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ನೀರು ವಿತರಣಾ ಜಾಲದ ಉದ್ದ 300.71 ಕಿ.ಮೀ ಎಂದು ಅಂದಾಜಿಸಲಾಗಿತ್ತು. ಆದರೆ, ನಂತರ ಇದು 443 ಕಿ.ಮೀ.ಆಯಿತು. ಅದರಂತೆ ವಿನ್ಯಾಸ ಮತ್ತು ನಕ್ಷೆಗಳನ್ನು ಬದಲಿಸಿ ಅನುಮೋದನೆ ಪಡೆದು ಕಾಮಗಾರಿ ಕೈಗೊಂಡಿದ್ದರಿಂದ ವಿಳಂಬವಾಯಿತು.

* ಯೋಜನೆಯ ಸಮಾಲೋಚಕರು ಜಲ ಸಂಗ್ರಹಗಾರಗಳ ವಿನ್ಯಾಸ ಮಾಡುವ ಸಂದರ್ಭದಲ್ಲಿ ಭೂ ಪರೀಕ್ಷೆ ಸರಿಯಾದ ರೀತಿಯಲ್ಲಿ ಮಾಡದೇ ಇದ್ದುದರಿಂದ ಮೇಲ್ಮಟ್ಟದ ಜಲ ಸಂಗ್ರಹಗಾರಗಳ ಬುನಾದಿ ಆಳ ಮತ್ತು ಎತ್ತರ ಬದಲಾಯಿತು. ಇದು ಕೂಡ ಕಾಮಗಾರಿಯ ಹಿನ್ನಡೆಗೆ ಕಾರಣವಾಯಿತು.

* ಕಾಮಗಾರಿ ಅವಧಿಯಲ್ಲಿ ಅನಿರೀಕ್ಷಿತವಾಗಿ ಭಾರಿ ಮಳೆ ಸುರಿಯಿತು. ಇದೂ ಕಾಮಗಾರಿಗೆ ಅಡ್ಡಿಯಾಯಿತು.

* ಗುತ್ತಿಗೆದಾರರು ಯೋಜನೆಗೆ ಅಗತ್ಯ ಸಂಪನ್ಮೂಲಗಳನ್ನು ಸಜ್ಜುಗೊಳಿಸುವಲ್ಲಿ ವಿಫಲರಾಗಿದ್ದರಿಂದ ಅನುಷ್ಠಾನದಲ್ಲಿ ವಿಳಂಬವಾಯಿತು.

24x7 ನೀರು ಪೂರೈಕೆ ಯೋಜನೆಯ ಮುಖ್ಯಾಂಶಗಳು

ಗದಗ–ಬೆಟಗೇರಿ ಜನಸಂಖ್ಯೆ 1.72 ಲಕ್ಷ

ಒಟ್ಟು ವಾರ್ಡ್‌ಗಳು 35

ಪ್ರತಿದಿನ ಒಬ್ಬ ವ್ಯಕ್ತಿಗೆ ಸರಾಸರಿ135 ಲೀಟರ್ ನೀರು

ಇಡೀ ನಗರಕ್ಕೆ ಬೇಕಾಗುವ ನೀರು 45.02 ಎಂ.ಎಲ್‌.ಡಿ

ಒಟ್ಟು 41,618 ಮನೆಗಳಿಗೆ ನಳ ಸಂಪರ್ಕ ಗುರಿ

5 ಮೇಲ್ಮಟ್ಟದ ಜಲ ಸಂಗ್ರಹಗಾರಗಳು
ಈ ಯೋಜನೆಗಾಗಿ ನಗರ ವ್ಯಾಪ್ತಿಯಲ್ಲಿ ಒಟ್ಟು 5 ಮೇಲ್ಮಟ್ಟದ ಜಲ ಸಂಗ್ರಹಗಾರಗಳನ್ನು ನಿರ್ಮಿಸಲಾಗುತ್ತಿದೆ. ಇವು ವೀರೇಶ್ವರನಗರ, ಸರ್ವೋದಯ ಕಾಲೊನಿ, ತಿಲಕ್‌ ಪಾರ್ಕ್‌ , ಕೆ.ಸಿ ಪಾರ್ಕ್‌ ಮತ್ತು ಸಂಜಯ ನಗರದಲ್ಲಿ ನಿರ್ಮಾಣಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT