7

ಬಿಜೆಪಿಯದು ಒಡೆದು ಆಳುವ ನೀತಿ

Published:
Updated:
ಬಿಜೆಪಿಯದು ಒಡೆದು ಆಳುವ ನೀತಿ

ಚಿಕ್ಕಬಳ್ಳಾಪುರ: ಬಿಜೆಪಿಯು ಹಣ ನೀಡಿ ಪಕ್ಷಗಳನ್ನು ಹುಟ್ಟು ಹಾಕುವ ಮೂಲಕ ಅಲ್ಪಸಂಖ್ಯಾತರನ್ನು ವಿಭಜಿಸಿ ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಶಾಸಕ ಡಾ.ಕೆ.ಸುಧಾಕರ್ ಆರೋಪಿಸಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಸಂಸದ ಅಸಾದುದ್ದೀನ್‌ ಒವೈಸಿ ನೇತೃತ್ವದ ಆಲ್‌ ಇಂಡಿಯಾ ಮಜಿಲಿಸ್‌ ಇ–ಇತ್ತೆಹಾದುಲ್‌ ಮುಸ್ಲಿಮಿನ್‌ (ಎಐಎಂಐಎಂ) ಪಕ್ಷ ಸೇರಿದಂತೆ ಇವತ್ತು ಅನೇಕ ಪಕ್ಷಗಳು ಬಿಜೆಪಿ ಪ್ರಾಯೋಜಿತ ಪಕ್ಷಗಳಾಗಿವೆ. ಹೀಗಾಗಿ ಅಲ್ಪಸಂಖ್ಯಾತರು ಬಿಜೆಪಿ ಈ ತಂತ್ರಗಾರಿಕೆ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಹೇಳಿದರು.

‘ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪ್ರಗತಿಪರ ಚಿಂತಕರ ಹತ್ಯೆಗೆ ಸುಫಾರಿ ನೀಡುವ ಪ್ರವೃತ್ತಿ ಕಾಣುತ್ತಿದೆ. ಕೆಲವರು ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಇವತ್ತು ಶೋಷಿತ ವರ್ಗಗಳೆಲ್ಲವೂ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ’ ಎಂದು ತಿಳಿಸಿದರು.

ಇವತ್ತು ದೇಶದಲ್ಲಿ ಮನೆ ಮಾಡಿರುವ ಆತಂಕ ದೂರವಾಗಬೇಕಾದರೆ ಕಾಂಗ್ರೆಸ್ ಆಯ್ಕೆ ಮಾಡುವುದು ಉಳಿದಿರುವ ಏಕೈಕ ಮಾರ್ಗವಾಗಿದೆ. ಹೀಗಾಗಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಪ್ರತಿಯೊಬ್ಬರೂ ಬೆಂಬಲಿಸಬೇಕು. ಇವತ್ತು ದೇಶದ ಜನ ಎಚ್ಚೆತ್ತುಕೊಂಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಂಕು ಬೂದಿ ಎರಚುವ ಆಟ ಇನ್ನು ಮುಂದೆ ನಡೆಯುವುದಿಲ್ಲ’ ಎಂದು ಅವರು ತಿಳಿಸಿದರು.

‘ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ಒಬ್ಬೇ ಒಬ್ಬ ಮುಸ್ಲಿಮನಿಗೆ ಟಿಕೆಟ್ ನೀಡಿಲ್ಲ. ಆದ್ದರಿಂದ ಇವತ್ತು ದೇಶದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾಗಿದೆ. ಕೋಮುವಾದಿಗಳಿಗೆ ಪಾಠ ಕಲಿಸಲು ಅಲ್ಪಸಂಖ್ಯಾತರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ’ ಎಂದು ಹೇಳಿದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಇರ್ಷಾದ್‌ ಅಹಮ್ಮದ್ ಮಾತನಾಡಿ, ‘ಆರ್‍ಎಸ್‍ಎಸ್‌ನವರು ಚಡ್ಡಿಯಿಂದ ಪ್ಯಾಂಟ್‌ಗೆ ಬರಲು 60 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿಯಿಂದ ಕಾಂಗ್ರೆಸ್ ಕಲಿಯಬೇಕಾದ್ದದ್ದು ಏನೂ ಇಲ್ಲ. ಅವರೇ ಪರಿವರ್ತನೆಯಾಗಲು 60 ವರ್ಷ ತೆಗೆದುಕೊಂಡಿರುವಾಗ ದೇಶವನ್ನು ಏನು ಪರಿವರ್ತನೆ ಮಾಡುತ್ತಾರೆ’ ಎಂದು ಟೀಕಿಸಿದರು.

‘ದೇಶದಲ್ಲಿ ಇವತ್ತು ಸರ್ವಕಾರಿ ಧೋರಣೆ ಇದೆ. ರಾಜಕಾರಣದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಇದಕ್ಕೆ ಕೊನೆ ಹಾಡಬೇಕಾದರೆ ಅಲ್ಪಸಂಖ್ಯಾತರೆಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಅಭಿವೃದ್ಧಿ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ನಾವೆಲ್ಲರೂ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕಿದೆ’ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ ಮಾತನಾಡಿ, ‘ಯಡಿಯೂರಪ್ಪ ಅವರು ಕೆಜೆಪಿಯಲ್ಲಿ ಇದ್ದಾಗ ಟಿಪ್ಪು ವೇಷ ತೊಟ್ಟು ಟಿಪ್ಪು ಜಯಂತಿ ಆಚರಿಸಿದ್ದರು. ಆದರೆ ಇವತ್ತು ವಿರೋಧ ಮಾಡುತ್ತಿದ್ದಾರೆ. ಇತರ ಯಾವುದೇ ಜಯಂತಿಯನ್ನು ವಿರೋಧಿಸದವರು ಇವತ್ತು ಜನರ ಭಾವನೆಗಳನ್ನು ಕೆರಳಿಸಿ ಓಟ್‌ ಬ್ಯಾಂಕ್‌ ರಾಜಕಾರಣ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಘಟಕದ ಅಧ್ಯಕ್ಷ ಸಯ್ಯದ್ ಅಹಮ್ಮದ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ. ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಅಮಾನುಲ್ಲಾ, ಮುಖಂಡರಾದ ರಾಯಪ್ಪ, ಅಬ್ದುಲ್ ಖುದ್ದೂಸ್, ಗೋವಿಂದ ಸ್ವಾಮಿ, ಆಲ್ಬರ್ಟ್, ದಾವೂದ್ ಉಪಸ್ಥಿತರಿದ್ದರು.

ಕಾಲಲ್ಲಿರುವುದು ತೆಗೆದು ಹೊಡೆಯಿರಿ

‘ಮುಸ್ಲಿಮರ ಮತಗಳು ಬೇಡ ಎನ್ನುವ ಕೇಸರಿ ಪಕ್ಷದವರು ಮತ ಕೇಳಲು ಮನೆಯ ಬಾಗಿಲಿಗೆ ಬಂದರೆ ಕಾಲಲ್ಲಿರುವುದು ತೆಗೆದು ಹೊಡೆಯಿರಿ. ದೇಶದ 14 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೇವಲ ಒಬ್ಬ ಮುಸ್ಲಿಮನನ್ನು ಸಚಿವನನ್ನಾಗಿ ಮಾಡಿದೆ’ ಎಂದು ಮುಖಂಡ ರಿಯಾಜ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.

* * 

ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ರಾಹುಲ್ ಗಾಂಧಿ ಅವರು ದೇಶದ ಪ್ರಧಾನ ಮಂತ್ರಿಯಾಗಲಿದ್ದಾರೆ

ಡಾ.ಕೆ.ಸುಧಾಕರ್  ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry