7

ಗೊಂದಲ ನಿವಾರಣೆಗೆ ಪರಿಷ್ಕೃತ ವರದಿ ಸಲ್ಲಿಸಿ

Published:
Updated:
ಗೊಂದಲ ನಿವಾರಣೆಗೆ ಪರಿಷ್ಕೃತ ವರದಿ ಸಲ್ಲಿಸಿ

ಬೀದರ್‌: ‘ಜಿಲ್ಲೆಯಲ್ಲಿ ಹೊಸದಾಗಿ ಘೋಷಣೆ ಮಾಡಿರುವ ಮೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಗ್ರಾಮಗಳನ್ನು ಸೇರಿಸುವ ವಿಷಯದಲ್ಲಿ ಗೊಂದಲಗಳಿದ್ದರೆ ಪರಿಷ್ಕೃತ ವರದಿ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣರೆಡ್ಡಿ ಸೂಚನೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಹೊಸ ಹುಲಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಡಿಮೆ ಗ್ರಾಮಗಳನ್ನು ಸೇರಿಸಲಾಗಿದೆ. ಹೋಬಳಿಗಳನ್ನು ಒಡೆದು ಹೊಸ ತಾಲ್ಲೂಕಿಗೆ ಸೇರಿ ಸಲು ಅವಕಾಶ ಕಲ್ಪಿಸಲಾಗಿದೆ. ಹೊಸ ಮಾರ್ಗಸೂಚಿ ಅನ್ವಯ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು’ ಎಂದು ಹೇಳಿದರು.

‘ಹೊಸ ತಾಲ್ಲೂಕುಗಳಲ್ಲಿ 97 ಕಂದಾಯ ಗ್ರಾಮಗಳಿವೆ. 82 ಗ್ರಾಮಗಳನ್ನು ಕಂದಾಯ ಗ್ರಾಮಗಳ ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮಾರ್ಗಸೂಚಿ ಅನ್ವಯ 15 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಶಿಫಾರಸು ಮಾಡಲು ತಾಂತ್ರಿಕ ಅಡಚಣೆ ಎದುರಾಗುತ್ತಿವೆ. ಈ ಕುರಿತು ತಹಶೀಲ್ದಾರರು ವರದಿಯನ್ನೂ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

‘ಕೆಲವು ಗ್ರಾಮಗಳನ್ನು ಯಾವ ತಾಲ್ಲೂಕಿಗೆ ಸೇರಿಸಬೇಕು ಎನ್ನುವ ಗೊಂದಲ ಇದೆ. ಗ್ರಾಮಸ್ಥರು ಪರ ಹಾಗೂ ವಿರುದ್ಧ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕಂದಾಯ ಅಧಿಕಾರಿಗಳ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಷಣ್ಮುಖ ಹೇಳಿದರು.

ರೈತರಿಗೆ ತ್ವರಿತವಾಗಿ ಪರಿಹಾರ ಕಲ್ಪಿಸಿ: ‘ರೈತ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರೈತನ ಕುಟುಂಬಕ್ಕೆ ತ್ವರಿತ ಪರಿಹಾರ ಕೊಡಬೇಕು. ಮೃತ ರೈತನ ಪತ್ನಿಗೆ ವಿಧವಾ ವೇತನ ಮಂಜೂರು ಮಾಡಬೇಕು. ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸಬೇಕು’ ಎಂದು ರಮಣರೆಡ್ಡಿ ಸೂಚನೆ ನೀಡಿದರು.

‘2016–2017ನೇ ಸಾಲಿನದಲ್ಲಿ ದಾಖಲಾದ ಮೂರು ಪ್ರಕರಣಗಳು ಇತ್ಯರ್ಥವಾಗಿಲ್ಲ. ಭಾಲ್ಕಿ ತಾಲ್ಲೂಕಿನ ಎರಡು ಹಾಗೂ ಬಸವಕಲ್ಯಾಣ ತಾಲ್ಲೂಕಿನ ಒಂದು ಪ್ರಕರಣದಲ್ಲಿ ತಡವಾಗಿ ಅರ್ಜಿ ಸಲ್ಲಿಸಲಾಗಿದೆ. 2017ರ ಏಪ್ರಿಲ್‌ನಿಂದ ಈವರೆಗೆ ಐದು ಪ್ರಕರಣಗಳು ಬಾಕಿ ಉಳಿದಿವೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ವರದಿ ಬಂದ ತಕ್ಷಣ ಪರಿಹಾರ ವಿತರಿಸಲಾಗುವುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಹೇಳಿದರು.

‘ಈವರೆಗೆ 231 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 189 ಮಹಿಳೆಯರಿಗೆ ವಿಧವಾ ವೇತನ ಮಂಜೂರು ಮಾಡಲಾಗಿದೆ.  3 ಅರ್ಜಿಗಳು ಬಾಕಿ ಇದ್ದು, 39 ಅರ್ಜಿಗಳು ತಿರಸ್ಕೃತಗೊಂಡಿವೆ’ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಇಲಾಖೆಯ ಉಪ ನಿರ್ದೇಶಕಿ ಪಾವಲಿ ಸಭೆಗೆ ಮಾಹಿತಿ ನೀಡಿದರು.

‘ರಾಷ್ಟ್ರೀಯ ಅಂತ್ಯ ಸಂಸ್ಕಾರ ಯೋಜನೆ ಅಡಿಯಲ್ಲಿ ಜಿಲ್ಲೆಗೆ ಮೊದಲ ಕಂತಾಗಿ ₹ 55 ಲಕ್ಷ ಹಾಗೂ ಎರಡನೇ ಕಂತಾಗಿ ₹ 80 ಲಕ್ಷ ಬಂದಿದೆ. ಇನ್ನೂ ₹ 60 ಲಕ್ಷ ಬರಬೇಕಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ಪೈಕಿ ಆರು ಮಕ್ಕಳಿಗೆ ಮಾತ್ರ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ಪರಿಶಿಷ್ಟ ಜಾತಿಯವರ ಸ್ಮಶಾನಕ್ಕೆ ಜಾಗ ಗುರುತಿಸಿ ಕಾಯ್ದಿರಿಸಬೇಕು. ಜಾಗ ಇಲ್ಲದಿದ್ದರೆ ಹೊಸದಾಗಿ ಖರೀದಿ ಸ್ಮಶಾನಕ್ಕೆ ಜಾಗ ಒದಗಿಸಬೇಕು’ ಎಂದು ರಮಣರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಬಹುಗ್ರಾಮ ಯೋಜನೆ ಅಡಿಯಲ್ಲಿ ಅಳವಡಿಸಲಾಗಿರುವ ಪಿವಿಸಿ ಪೈಪ್‌ಗಳು ರಸ್ತೆ ನಿರ್ಮಾಣದಲ್ಲಿ ಒಡೆದಿವೆ. ಜಿಐ ಪೈಪ್‌ ಹಾಕಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಹೀಗಾಗಿ ಮತ್ತೆ ಹೊಸದಾಗಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ವರದಿ ಸಲ್ಲಿಸಬೇಕಾಗುತ್ತದೆ’ ಎಂದು ರಾಮಕೃಷ್ಣ ಸಭೆಗೆ ತಿಳಿಸಿದರು. ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಆರ್‌.ಸೆಲ್ವಮಣಿ ಇದ್ದರು.

* * 

ನಗರ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಅಮೃತ ಯೋಜನೆ ಅಡಿಯಲ್ಲಿ ₹ 13.20 ಕೋಟಿ ಮಂಜೂರು ಆಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ.

ಬಲಭೀಮ ಕಾಂಬಳೆ

ಡಿಯುಡಿಸಿ ಯೋಜನಾ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry