7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಅನುಭವ ಮಂಟಪ: ಹೊಸರೂಪಕ್ಕೆ ಯೋಜನೆ

Published:
Updated:
ಅನುಭವ ಮಂಟಪ: ಹೊಸರೂಪಕ್ಕೆ ಯೋಜನೆ

ಬಸವಕಲ್ಯಾಣ: ಇಲ್ಲಿನ ಅನುಭವ ಮಂಟಪದ ಸ್ಥಳದಲ್ಲಿ ಶೀಘ್ರ ಸರ್ಕಾರದಿಂದ ಬೃಹತ್ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳು ಆರಂಭಗೊಂಡಿವೆ. ಸಮಾನತೆಯ ಹರಿಕಾರ ಬಸವಣ್ಣನವರು 12 ನೇ ಶತಮಾನದಲ್ಲಿ ಇಲ್ಲಿ ಅನುಭವ ಮಂಟಪ ಕಟ್ಟಿ ವಚನ ಸಾಹಿತ್ಯವನ್ನು ರಚಿಸಿದರು. ಜಗತ್ತಿನ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಂದಿನ ಆ ಮಂಟಪದ ಕುರುಹುಗಳು ಪತ್ತೆಯಾಗಿಲ್ಲ. ಆದರೂ, ಭಾಲ್ಕಿಯ ಲಿಂ.ಚನ್ನಬಸವ ಪಟ್ಟದ್ದೇವರು ತ್ರಿಪುರಾಂತ ಕೆರೆ ದಂಡೆಯಲ್ಲಿ ಅಂದಿನ ಮಂಟಪ ಇದ್ದಿರಬಹುದೆಂದು ಊಹಿಸಿ ಸತತ ಪರಿಶ್ರಮಪಟ್ಟು ನೂತನ ಅನುಭವ ಮಂಟಪ ಕಟ್ಟಿದರು.

ಮೈಸೂರು ಸಂಸ್ಥಾನದ ರಾಜ ಜಯಚಾಮರಾಜೇಂದ್ರ ಒಡೆಯರ 1955 ರಲ್ಲಿ ಇದರ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಕಟ್ಟಡಕ್ಕೆ 62 ವರ್ಷ ಪೂರ್ಣವಾಗಿದೆ. ಇಲ್ಲಿನ ಶರಣ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚಿಸಿದೆ. ಮಂಡಳಿಯಿಂದ ಕಳೆದ 10 ವರ್ಷಗಳಲ್ಲಿ 19 ಶರಣ ಸ್ಥಳಗಳ ಅಭಿವೃದ್ಧಿ ಗೊಳಿಸಿದೆ. ಆದರೆ, ಅನುಭವ ಮಂಟಪದ ಕಾಮಗಾರಿ ಇಲ್ಲಿಯವರೆಗೆ ಕೈಗೆತ್ತಿಕೊಂಡಿರಲಿಲ್ಲ. ಇಲ್ಲಿ ಬಸವಣ್ಣನವರ ಕಾಲದಲ್ಲಿ ಮಂಟಪ ಇತ್ತೋ ಇಲ್ಲವೋ? ಅದು ಹೇಗಿತ್ತು? ಈಗ ಅದನ್ನು ಯಾವ ರೀತಿ ನಿರ್ಮಿಸಬೇಕು? ಎಂಬುದರ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಒಂದು ವರ್ಷದ ಹಿಂದೆ ಗೋ.ರು.ಚನ್ನಬಸಪ್ಪನವರ ನೇತೃತ್ವದಲ್ಲಿ 10 ಜನರ ತಜ್ಞರ ಸಮಿತಿ ರಚಿಸಲಾಗಿತ್ತು. ಸಮಿತಿಯಿಂದ ಇಲ್ಲಿ ಮತ್ತು ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಿ ಮುಖ್ಯಮಂತ್ರಿಗಳಿಗೆ ಅಂತಿಮ ವರದಿ ಸಲ್ಲಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ₹ 600 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

`ಹೊಸ ಕಟ್ಟಡ ಬೇರೆ ಕಡೆಯಲ್ಲಿ ನಿರ್ಮಿಸಲು ಸಮಿತಿಯಿಂದ ಸ್ಥಳ ಪರಿಶೀಲನೆ ಮಾಡಲಾಗಿತ್ತು. ಆದರೂ, ಈಗ ಮಂಟಪ ಇರುವ ಸ್ಥಳ ಬದಲಾಯಿಸಿದರೆ ಬಸವಾನುಯಾಯಿಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು ಎಂದು ಭಾವಿಸಿ ಇಲ್ಲಿನ 25 ಎಕರೆ ಜಮೀನನ್ನು ಅದಕ್ಕಾಗಿ ಒದಗಿಸಲಾಗಿದೆ’ ಎಂದು ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷರಾದ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.

ಕಟ್ಟಡ 108 ಅಡಿ ಎತ್ತರ ದ್ದಾಗಿರುತ್ತದೆ. ಮಧ್ಯದಲ್ಲಿ ಮೂರು ಅಂತಸ್ತಿನ ವೃತ್ತಾಕಾರದ ಮಂಟಪ ವಿರುತ್ತದೆ. ಸುತ್ತಲಿನಲ್ಲಿ ಉದ್ಯಾನ ಇರುತ್ತದೆ. 770 ಶರಣರನ್ನು ನೆನಪಿ ಸುವುದಕ್ಕಾಗಿ ಅಷ್ಟು ಸಂಖ್ಯೆಯ ಆಸನಗಳುಳ್ಳ ಸಭಾಂಗಣವನ್ನು ಒಳಗೊಂಡಿರುತ್ತದೆ. ಕಾಯಕ, ದಾಸೋಹ, ಅನುಭಾವವನ್ನು ಸಂಕೇತಿಸುವಂತೆ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಿಲಾಗುವುದು ಹಾಗೂ ಗ್ರಂಥಾಲಯ, ಸಂಶೋಧನಾ ಕೇಂದ್ರ, ಪ್ರಸಾದ ನಿಲಯ, ಪ್ರಾರ್ಥನಾ ಮಂದಿರ, ಇಷ್ಟಲಿಂಗ ಯೋಗ ಕೇಂದ್ರ ಇರಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ತಿಂಗಳಲ್ಲಿ ಇಲ್ಲಿಗೆ ಬಂದು ಮಂಟಪದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸದಸ್ಯ ಶಿವರಾಜ ನರಶೆಟ್ಟಿ ತಿಳಿಸಿದರು.

* * 

ಸಾಹಿತಿ ಗೋ.ರು.ಚನ್ನಬಸಪ್ಪನವರ ನೇತೃತ್ವದ ಸಮಿತಿಯಿಂದ ಹೊಸ ಅನುಭವ ಮಂಟಪದ ರೂಪುರೇಷೆ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ.

ಶಿವರಾಜ ನರಶೆಟ್ಟಿ

ಸದಸ್ಯ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry