7

ಜೀವನಕ್ಕೆ ಮುಳುವಾದ ಕೈ ಕಸಬು

Published:
Updated:
ಜೀವನಕ್ಕೆ ಮುಳುವಾದ ಕೈ ಕಸಬು

ಕಂಪ್ಲಿ: ವಿದ್ಯುತ್ ಪೂರೈಕೆ ವ್ಯವಸ್ಥೆ ಈಗಿನಷ್ಟು ಉತ್ತಮವಾಗಿರದಿದ್ದ ಆ ದಿನಗಳಲ್ಲಿ ಚಿಮಣಿಗೆ (ಸೀಮೆ ಎಣ್ಣೆ ಬುಡ್ಡಿ) ಬಹು ಬೇಡಿಕೆಯಿತ್ತು. ಇದನ್ನು ತಯಾರಿಸುವವರು ನಾಲ್ಕು ಕಾಸು ಸಂಪಾದನೆ ಮಾಡುತ್ತಿದ್ದರು. ಆದರೆ ಇಂದು ದೀಪದ ಬುಡ್ಡಿ ಸಿದ್ಧಪಡಿಸುವ ಈ ದಂಪತಿಯ ಬಾಳು ಕತ್ತಲೆಯಲ್ಲಿ ಮುಳುಗಿದೆ.

ಕಂಪ್ಲಿ ಪಟ್ಟಣದ ಓದ್ಸೋ ಜಡೆಮ್ಮ ಗುರುಸಿದ್ದಯ್ಯ ಪ್ರೌಢಶಾಲೆ ಹಿಂಭಾಗದ ಪುಟ್ಟ ಮನೆಯಲ್ಲಿ ವಾಸಿಸುವ ಮೇರಿ ರಿಜನಾ (72) ಮತ್ತು ಫ್ಯ್ರಾಂಕಿ(77) ದಂಪತಿ ಎರಡು ದಶಕದಿಂದ ಚಿಮಣಿ ಬುಡ್ಡಿ ತಯಾರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ಕಿರಾಣಿ ಮತ್ತು ಗುಜರಿ ಅಂಗಡಿಯಲ್ಲಿ ದೊರೆಯುವ ವಿವಿಧ ಗಾತ್ರದ ತಗಡಿನ ಡಬ್ಬಿಗಳನ್ನು ಖರೀದಿಸಿ ತಂದ ನಂತರ ಫ್ಯ್ರಾಂಕಿ ಅವರು ವಿವಿಧ ಗಾತ್ರದ ಬುಡ್ಡಿ, ಲಾಳಿಕೆ, ಎಣ್ಣೆ ಎಳೆಯುವ ಪೈಪ್‌, ಸಸಿಗಳಿಗೆ ನೀರು ಹಾಕುವ ಕ್ಯಾನ್‌ಗಳ ತಯಾರಿಕೆಗೆ ಬೇಕಾದ ಅಳತೆಯಲ್ಲಿ ತಗಡು ಕತ್ತರಿಸುತ್ತಾರೆ. ನಂತರ ಇವರ ಪತ್ನಿ ಮೇರಿ ರಿಜಿನಾ, ಕುಲುಮೆಯಲ್ಲಿ ಬೆಸುಗೆ ಹಾಕಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ. ಇದು ದಂಪತಿಯ ದೈನಂದಿನ ಕಾಯಕ.

‘ದಿನಾಲೂ ಮೂರು ಡಜನ್‌ ಚಿಮಣಿ ಬುಡ್ಡಿ ಮಾಡಿ ಮಾರಾಟ ಮಾಡುತ್ತಿದ್ದೆವು. ಯಾವಾಗ ಸರ್ಕಾರ ಸೀಮೆಎಣ್ಣೆ ಬಂದ್‌ ಮಾಡ್ತೊ ಅವಾಗ್ಲಿಂದ ದಿನಕ್ಕೆ ಮೂರು ಬುಡ್ಡಿನೂ ಕೊಳ್ಳೂರು ಇಲ್ಲ. ಆಗೊಮ್ಮೆ ಈಗೊಮ್ಮೆ ಹಳ್ಳಿಗಳಲ್ಲಿ ಹೇರ್‌ ಪಿನ್‌ ಮಾರೋ ಜೋಗೇರು ಬಂದು ವಯ್ತಾರೆ. ಇತ್ತಿತ್ಲಗಾ ಅವರೂ ಬಂದು ತಗೊಂಡು ಹೋಗೋದು ಕಡಿಮೆ ಮಾಡ್ಯಾರ’ ಎಂದು ಚಿಮಣಿ ಬುಡ್ಡಿಗೆ ಬೆಸುಗೆ ಹಾಕುತ್ತಲೆ ಮೇರಿ ರಿಜಿನಾ ತಮ್ಮ ಶೋಚನೀಯ ಸ್ಥಿತಿಯನ್ನು ನೋವಿನಿಂದ ಹೇಳಿದರು.

‘ಈಗೆಲ್ಲ ಮಾರ್ಕೆಟ್‌ನ್ಯಾಗ ಲೆಡ್‌ ಟಾರ್ಚ್‌, ಸೋಲಾರ್‌(ಸೌರ) ಲೈಟ್‌, ಆ್ಯಸಿಡ್‌ ಬ್ಯಾಟ್ರಿಗಳು ಬಂದವ್ರಿ, ವಿಶೇಷವಾಗಿ ಮೊಬೈಲ್ ಟಾರ್ಚ್‌ ಎಲ್ರ ಬಳಿ ಇದ್ದೆ ಇರುತ್ತೆ. ಜೊತೆಗೆ ಕರೆಂಟ್‌ ಕಟ್‌(ವಿದ್ಯುತ್‌ ಕಡಿತ) ಕಡಿಮೆ ಆಗೈತಿ. ಇಂಥ ಸ್ಥಿತ್ಯಾಗ ನಮ್‌ ಚಿಮಣಿ ಬುಡ್ಡಿ ಯಾವ ಲೆಕ್ಕ’ ಅಂಥ ಬ್ಲೋರ್(ಕುಲುಮೆ ಗಾಳಿ ಊದುವ ಸಾಧನ) ತಿರುವುತ್ತಾ ಫ್ಯ್ರಾಂಕಿ ಹತಾಶೆಯಿಂದ ನುಡಿದರು.

‘ಚಿಮಣಿ ಬುಡ್ಡಿ, ಲಾಳಿಕೆ, ಎಣ್ಣೆ ಎಳೆಯುವ ಪೈಪ್‌, ಸಸಿಗಳಿಗೆ ನೀರು ಹಾಕುವ ಕ್ಯಾನ್‌ ತಯಾರಿಕೆಗೆ ಬೇಕಾದ ಬೆಸುಗೆ ವಸ್ತುಗಳಾದ ನವಸಾಗರ, ತವರ(ಲೆಡ್), ಕರಿ ಇದ್ದಿಲು ಬೆಲೆ ಹೆಚ್ಚಾಗಿದೆ. ಆದರೂ ಈ ವಸ್ತುಗಳನ್ನು ಕಷ್ಟಪಟ್ಟು ಸಿದ್ಧಪಡಿಸುತ್ತೇವೆ. ಆದರೆ ಕೊಳ್ಳಲು ಬರುವ ಗಿರಾಕಿಗಳು ಬುಡ್ಡಿ ₹15 ಹೇಳಿದರೆ ₹10ಕ್ಕೆ ಕೊಡುವಂತೆ ಕೇಳುತ್ತಾರೆ. ಇನ್ನು ಲಾಳಿಕೆ ₹10 ಹೇಳಿದರೆ ₹ 8ಕ್ಕೆ ಕೇಳುತ್ತಾರೆ. ಕೊನೆಗೆ ಅವರು ಕೇಳಿದ ರೇಟಿಗೆ ಕೊಟ್ಟು ಹೊಟ್ಟೆ ತುಂಬಿಸಿಕೊಳ್ಳಬೇಕಿದೆ’ ಎಂದು ಅಳಲು ತೋಡಿಕೊಂಡರು.

‘ಚಿಮಣಿ ಬುಡ್ಡಿ ತಯಾರಿಸಿಯೇ ಐದು ಹೆಣ್ಣು ಮಕ್ಕಳ ಮದುವೆ ಮಾಡಿದ್ದೇವೆ. ನಮಗೂ ಈಗ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ವೃದ್ದಾಪ್ಯ ವೇತನಕ್ಕೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಮಂಜೂರಾಗಿಲ್ಲ. ಮೂರು ತಿಂಗಳ ಹಿಂದೆ ಮತ್ತೆ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಕರುಣೆ ತೋರಿ ಸಂಬ್ಳ ಮಂಜೂರು ಮಾಡಿದ್ರೆ ಅದರಲ್ಲಿ ಗಂಜಿ ಕಾಣುತ್ತೇವೆ. ಇದರಿಂದ ಕತ್ಲಾಗಿರುವ ನಮ್ಮ ಬಾಳೇವು ಬೆಳಕಾಗ್‌ತೈತಿ’ ಎಂದು ದಂಪತಿ ಮುಗ್ದವಾಗಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry