ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲುಕ್ಯರ ಪಾರಂಪರಿಕ ಪ್ರದೇಶ ಅಭಿವೃದ್ಧಿಗೆ ಮಸೂದೆ

Last Updated 26 ನವೆಂಬರ್ 2017, 9:23 IST
ಅಕ್ಷರ ಗಾತ್ರ

ಬೆಳಗಾವಿ: ಚಾಲುಕ್ಯರ ಪಾರಂಪರಿಕ ಪ್ರದೇಶಗಳಾದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಅನನ್ಯತೆ ಸಂರಕ್ಷಿಸಲು ಅವಕಾಶ ಕಲ್ಪಿಸುವ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮಸೂದೆಗೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಸೂದೆ ಮಂಡಿಸಿದರು. ಈ ಪ್ರದೇಶಗಳ ಒಳಗೆ ಇರುವ ಸ್ವತ್ತುಗಳ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ ಎಂದೂ ಅವರು ವಿವರಿಸಿದರು. ಪ್ರಾಧಿಕಾರ ರಚನೆಗೆ ₹ 1 ಕೋಟಿಗೂ ಹೆಚ್ಚು ವೆಚ್ಚ ಅಂದಾಜಿಸಲಾಗಿದೆ.

ಪರಂಪರೆ ಪ್ರದೇಶದ ಅನಿಯಂತ್ರಿತ ಅಭಿವೃದ್ಧಿ ಮತ್ತು ವಾಣಿಜ್ಯ ದುರ್ಬಳಕೆ ತಡೆಗಟ್ಟುವ ಅಧಿಕಾರವನ್ನು ಈ ಪ್ರಾಧಿಕಾರಕ್ಕೆ ನೀಡಲಾಗುವುದು. ಬಾಗಲಕೋಟೆಯಲ್ಲಿ ಕೇಂದ್ರ ಕಚೇರಿ ಹೊಂದಲಿರುವ ಪ್ರಾಧಿಕಾರಕ್ಕೆ, ಸ್ಥಳೀಯ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಸದಸ್ಯ ಕಾರ್ಯದರ್ಶಿ (ಪ್ರಾಧಿಕಾರದ ಆಯುಕ್ತ) ಸೇರಿ ಒಟ್ಟು 13 ಸದಸ್ಯರಿರುತ್ತಾರೆ. ಕೆಎಎಸ್‌– ಎ (ಹಿರಿಯ ಶ್ರೇಣಿ)ಯ ಅಧಿಕಾರಿಯನ್ನು ಆಯುಕ್ತರಾಗಿ ಸರ್ಕಾರ ನೇಮಿಸಲಿದೆ.

ಈ ಸ್ಥಳಗಳ ಚರ ಮತ್ತು ಸ್ಥಿರ ಆಸ್ತಿಗಳ ಅಭಿವೃದ್ಧಿ, ರಕ್ಷಣೆ ಹೊಣೆಯನ್ನು ಈ ಪ್ರಾಧಿಕಾರ ‌ಹೊಂದಿರುತ್ತದೆ. ಒತ್ತುವರಿ ತಡೆಯಲು ಭದ್ರತಾ ದಳ ರಚಿಸಲು ಅವಕಾಶ ಇದೆ.

ಅಲ್ಲದೆ, ಪ್ರಾಧಿಕಾರ ಕಾರ್ಯಚಟುವಟಿಕೆ‌ ಸಮನ್ವಯಗೊಳಿಸಲು ಮತ್ತು ಉಸ್ತುವಾರಿ ನೋಡಿಕೊಳ್ಳಲು ಮುಖ್ಯಮಂತ್ರಿ ಅಧ್ಯಕ್ಷರು ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುವ ರಾಜ್ಯಮಟ್ಟದ ಸಮಿತಿ ರಚಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.


ಅಕ್ರಮ– ಸಕ್ರಮ: ನಿಗದಿಪಡಿಸಿದ್ದ ದಿನ ವಿಸ್ತರಣೆ

ಬೆಳಗಾವಿ: ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿದ ವಾಸದ ಮನೆಗಳ ಸಕ್ರಮಕ್ಕೆ ನಿಗದಿಪಡಿಸಿದ್ದ ಕೊನೆ ದಿನವನ್ನು 2015ರ ಜನವರಿ 1ರವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸುವ ಭೂ ಕಂದಾಯ (ನಾಲ್ಕನೇ ತಿದ್ದುಪಡಿ) ಮಸೂದೆಗೂ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಸೂದೆ ಮಂಡಿಸಿದರು. ಅಕ್ರಮ– ಸಕ್ರಮ ಯೋಜನೆಯಲ್ಲಿ ಭೂ ಕಂದಾಯ ಕಾಯ್ದೆಯ 94 ಸಿ ಮತ್ತು 94ಸಿಸಿ ನಿಯಮದಡಿ ಸಕ್ರಮಗೊಳಿಸುವ ಕಟ್‌ಆಫ್‌ ದಿನವನ್ನು ಈ ಹಿಂದೆ 2012ರ ಜ. 1 ಎಂದು ನಿಗದಿಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT