7

ಆಸಕ್ತರಿಗೆ ಒಲಿದ ಕಾಷ್ಠಶಿಲ್ಪ ಕೆತ್ತನೆ

Published:
Updated:
ಆಸಕ್ತರಿಗೆ ಒಲಿದ ಕಾಷ್ಠಶಿಲ್ಪ ಕೆತ್ತನೆ

ಬಾದಾಮಿ: ಕಾಷ್ಠದಲ್ಲಿ ಕುಸುರಿ ಕಲೆಯಲ್ಲಿ ಬಾಗಿಲು ಚೌಕಟ್ಟು ಒಡಮೂಡಿಸಿ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಹೊಳೆ ಆಲೂರು ಮತ್ತು ಸುತ್ತಲಿನ ಗ್ರಾಮೀಣ ಕಲಾವಿದರು ಈಗ ಅದೇ ಮಾದರಿಯಲ್ಲಿ ರಥ ನಿರ್ಮಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಪರಂಪರಾಗತವಾಗಿ ಈ ಕಲೆಯನ್ನು ಸ್ಥಳೀಯ ಬಡಿಗೇರ ಸಮುದಾಯ ಮಾತ್ರ ಕರಗತ ಮಾಡಿಕೊಂಡಿತ್ತು. ಆದರೆ ಈಗ ಎಲ್ಲ ಜಾತಿ ಜನಾಂಗದ ಯುವಕರು ಕಾಷ್ಠ ಕಲೆಯಲ್ಲಿ ಪರಿಣತಿ ಪಡೆದಿದ್ದಾರೆ.

ಬಡಿಗೇರ ಜೊತೆಗೆ ಗಾಣಿಗೇರ, ಕುರುಬರು, ಕ್ಷತ್ರೀಯರು, ಭಜಂತ್ರಿ, ವಾಲ್ಮೀಕಿ ಮತ್ತು ಮುಸ್ಲಿಮರಿಗೂ ಈ ಕಲೆ ಸಿದ್ಧಿಸಿದ್ದು, ಎಲ್ಲರೂ ಈ ಕಲಾತ್ಮಕ ಬಾಗಿಲು ಚೌಕಟ್ಟುಗಳನ್ನು ವರ್ಷವಿಡೀ ಮಾಡುತ್ತಾರೆ.

ಹೊಳೆ ಆಲೂರಿನ ಮಹೇಶ ಶಿವಪ್ಪ ಗಾಣಿಗೇರ (ಹೆಬ್ಬಳ್ಳಿ) ಕೇವಲ ಏಳನೇ ತರಗತಿ ಓದಿದ್ದು, ಶಾಲೆ ಬಿಟ್ಟ ನಂತರ ಮನೆಯ ಪಕ್ಕದಲ್ಲಿ ಕರೀಮ್‌ಸಾಬ್‌ ಕೊತಬಾಳ ಎಂಬವರ ಹತ್ತಿರ ಕೆಲಸಕ್ಕೆ ಸೇರಿ ಎರಡು ವರ್ಷ ಬಾಗಿಲು ಚೌಕಟ್ಟು ತಯಾರಿಸುವ ಕಲೆ ಅರಿತಿದ್ದಾರೆ.

‘ನೋಡಿ ಕಲಿ ಮಾಡಿ ನಲಿ’ ತತ್ವದಂತೆ ಮಹೇಶ ಕೊಪ್ಪಳದ ರಥಶಿಲ್ಪಿ ಮಲ್ಲಪ್ಪ ಬಡಿಗೇರ ಅವರ ಬಳಿ ಸತತ ನಾಲ್ಕು ವರ್ಷ ಕೆಲಸ ಮಾಡಿ ರಥ ನಿರ್ಮಾಣ ಕಲೆ ತಿಳಿದಿದ್ದಾರೆ. ಗುರುವಿನ ಮಾರ್ಗದರ್ಶನದಲ್ಲಿ ವಿವಿಧ ಊರು ಸುತ್ತಿ 10 ರಥಗಳ ನಿರ್ಮಿಸಿದ್ದಾರೆ. ಅದೇ ಈಗು ನನ್ನ ಕುಟುಂಬದ ಅನ್ನದ ಬಂಡಿಯನ್ನು ಉರುಳಿಸುತ್ತಿದೆ ಎಂದು ಮಹೇಶ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘2007ರಿಂದ ಸ್ವತಂತ್ರವಾಗಿ ರಥ ನಿರ್ಮಾಣ ಮಾಡುತ್ತಿರುವೆ. ಸೂಡಿಯ ಚಿದಂಬರೇಶ್ವರ, ತಳ್ಳಿಹಾಳದ ಕಲ್ಮೇಶ್ವರ, ಹಾವರಗಿಯ ಮಲ್ಲಿಕಾರ್ಜುನ, ಪಟ್ಟಲಚಿಂತಿಯ ಬಸವೇಶ್ವರ, ತಾರಿಹಾಳದ ಕಲ್ಮೇಶ್ವರ, ಕಿತ್ತಲಿ ಮಾರುತೇಶ್ವರ, ಮೂಡಲಗಿಯ ವೀರಭದ್ರೇಶ್ವರ, ಹೊನ್ನಿಗನೂರಿನ ಹುಲಿಗೆಮ್ಮದೇವಿ, ಸೊಲ್ಲಾಪುರದ ಬನಶಂಕರಿ  ರಥ ನಿರ್ಮಿಸುವುದಾಗಿ’ ಹೇಳುತ್ತಾರೆ. ಕಳೆದ ನಾಲ್ಕು ತಿಂಗಳಿನಿಂದ ನಂದಿಕೇಶ್ವರ ನಂದಿಬಸವೇಶ್ವರ ರಥ ನಿರ್ಮಿಸುತ್ತಿರುವ ಅವರು, ದೇವರು, ಶರಣರ ಮತ್ತು ಸಂತರ ಚಿಕ್ಕ ಚಿಕ್ಕ ಮೂರ್ತಿ ಕೆತ್ತಿದ್ದಾರೆ.

ರಥದಲ್ಲಿ ಅಷ್ಟದಿಕ್ಪಾಲಕರು, ಆದಿಶಕ್ತಿ, ಶಿವಪಾರ್ವತಿ, ನಟರಾಜ, ಸರಸ್ವತಿ, ಲಕ್ಷ್ಮಿ, ಗಣೇಶ, ಷಣ್ಮುಖ, ನಂದಿ ಬಸವೇಶ್ವರ, ಕುಮಾರ ಶ್ರೀಗಳು, ಪಂ. ಪಂಚಾಕ್ಷರ ಗವಾಯಿಗಳು, ಪುಟ್ಟರಾಜಕವಿ ಗವಾಯಿಗಳು, ಸದಾಶಿವ ಶ್ರೀಗಳು, ಹಾವೇರಿ, ಯಳಂದೂರ, ಡಾ. ಕೆಳದಿ ಶ್ರೀಗಳ ಚಿಕ್ಕ ಚಿಕ್ಕ ಮೂರ್ತಿಗಳನ್ನು ಕಾಷ್ಠದಲ್ಲಿ ಆಕರ್ಷವಾಗಿ ನಿರ್ಮಿಸಿದ್ದಾರೆ.

ಆನೆಗಳ ಸಾಲು, ಸಿಂಹ, ಜಾಲರಿ ಮತ್ತು ಬಳ್ಳಿಯನ್ನು ಸೂಕ್ಷ್ಮವಾಗಿ ಕೆತ್ತನೆ ಮಾಡಿದ್ದಾರೆ. ಅವರಿಗೆ ಸ್ಥಳೀಯರಾದ ಮಾನಪ್ಪ , ಮೌನೇಶ , ಸಂತೋಷ , ಶಿವಾನಂದ , ಮುತ್ತಣ್ಣ ಬಡಿಗೇರ ನೆರವಾಗಿದ್ದಾರೆ.

ರಥದ ನಿರ್ಮಾಣದ ಕಲೆಯಿಂದ ಆತ್ಮಸಂತೋಷವಾಗಿದೆ. ಸಾಂಪ್ರದಾಯಿಕ ಕಲೆಯನ್ನು ಉಳಿಸಲು ಯುವಕರು ರಥ ನಿರ್ಮಾಣ ಕಲೆಯನ್ನು ಕಲಿಯಬೇಕು ಎಂದು ಮಹೇಶ ಆಶಯ ವ್ಯಕ್ತಪಡಿಸಿದರು. ಮಹೇಶ ಅವರ ಮೊಬೈಲ್‌ ಸಂಖ್ಯೆ: 9902749918 ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry