7

ಮಕ್ಕಳ ಶಾಲಾ ಚೀಲಗಳು ಇ-ಪುಸ್ತಕಗಳಾದರೆ...!

Published:
Updated:
ಮಕ್ಕಳ ಶಾಲಾ ಚೀಲಗಳು ಇ-ಪುಸ್ತಕಗಳಾದರೆ...!

ಬೆಳಗೆದ್ದು ಸ್ನಾನ–ತಿಂಡಿ ಮುಗಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ರೆಡಿ ಮಾಡಿ ಮಣಭಾರದ ಶಾಲಾಚೀಲವನ್ನು ಹೊತ್ತು ಮನೆ ಬಾಗಿಲಿನಲ್ಲಿ ಶಾಲಾವಾಹನಕ್ಕೆ ಕಾಯುವ ಪೋಷಕರು ಹಾಗೂ ಮಕ್ಕಳ ನಿತ್ಯದ ಗೋಳು ಬಹುಶಃ ಎಲ್ಲೆಡೆ ಸಾಮಾನ್ಯ. ಅದೇ ಸಂಜೆ ಆದರೆ ಸಾಕು, ಮತ್ತದೇ ಮಣ ಭಾರದ ಶಾಲಾಚೀಲವನ್ನು ಮೂಟೆಯಂತೆ ಹೊತ್ತು ಸಾಕಾಯ್ತು ಎಂದು ಬರುವ ಮಕ್ಕಳ ದಯನೀಯತೆ ಕೂಡ ಸಾಮಾನ್ಯ. ಸರ್ಕಾರಿ , ಅನುದಾನಿತ ಶಾಲಾ ಮಕ್ಕಳ ಪಠ್ಯ, ಚೀಲದ ಹೊರೆ ಶೇ.25ರಷ್ಟು ತಗ್ಗಿದ್ದರೂ ಸಹ ಖಾಸಗಿ ಶಾಲಾಮಕ್ಕಳು ಹೊರುವ ಭಾರದ ಇಳಿಕೆಗಿನ್ನೂ ಕಾಲ ಕೂಡಿ ಬಂದಿಲ್ಲ. ಎಲ್‌ಕೆಜಿ, ಯುಕೆಜಿ ಮಕ್ಕಳು ಹೊರುವ ಶಾಲಾಚೀಲದ ಭಾರದ ಬಗ್ಗೆಯಂತೂ ಹೇಳತೀರದು.

ಪಠ್ಯಪುಸ್ತಕಗಳು ಮತ್ತು ನೋಟುಪುಸ್ತಕಗಳನ್ನು ಪ್ರತಿದಿನ ಶಾಲೆಗೆ ಹೊತ್ತು ಹೋಗುವ ಮಕ್ಕಳ ಪುಸ್ತಕದ ಹೊರೆ ಕಟುಕರ ಮನಸ್ಸನ್ನೂ ಕರಗಿಸಬಲ್ಲುದು. ಆದರೆ ನಮ್ಮ ಶಿಕ್ಷಣತಜ್ಞರು ಮಾತ್ರ ಅದಕ್ಕಿನ್ನೂ ಪರಿಹಾರ ಕಂಡುಕೊಂಡಿಲ್ಲ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇನ್ನೊಂದೆಡೆ ಶಾಲಾಮಕ್ಕಳ ಪಠ್ಯ ಪುಸ್ತಕಗಳ ಬ್ಯಾಗ್ ಲೆಕ್ಕಕ್ಕಿಂತ ಹೆಚ್ಚು ಭಾರವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ಇದು ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬ ಬಗ್ಗೆ ಹೆತ್ತವರಿಂದ, ಶಿಕ್ಷಣ ಸಂಘಟನೆಗಳಿಂದ ಹಾಗೂ ವೈದ್ಯರಿಂದ ಬರುತ್ತಿರುವ ಆಕ್ಷೇಪಗಳನ್ನು ಕೇಳುತ್ತಲೇ ಬರುತ್ತಿದೆ. ಆದರೆ ಪರಿಹಾರ ಮಾತ್ರ ಶೂನ್ಯ.

ಯಶ್‌ಪಾಲ್ ವರದಿ ಫಲ ನೀಡಿದೆಯೆ?

ಕೇಂದ್ರ ಸರ್ಕಾರವು 1986ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1992ರಲ್ಲಿ ಪರಿಷ್ಕರಿಸಿ ಜಾರಿಗೊಳಿಸಿತು. ಈ ಕುರಿತು ಯುಜಿಸಿ ಅಧ್ಯಕ್ಷ ಪ್ರೊ. ಯಶ್‌ಪಾಲ್ ನೇತೃತ್ವದಲ್ಲಿ ನೇಮಿಸಿದ ರಾಷ್ಟ್ರೀಯ ಸಲಹಾ ಸಮಿತಿಯು 1993ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿಯಲ್ಲಿ ಹೊರೆ ರಹಿತ ಕಲಿಕೆ, ಸಂತಸದ ಕಲಿಕೆ ಎಂಬ ಮುಖ್ಯ ಧ್ಯೇಯದೊಂದಿಗೆ ಪಠ್ಯಭಾರವನ್ನು ಕಡಿಮೆ ಮಾಡಲು ಪಠ್ಯವನ್ನು ವಿಶ್ಲೇಷಿಸಿ, ಶೇ.20ರಷ್ಟು ಗಾತ್ರ ಕಡಿತ ಮಾಡುವ ಸಲುವಾಗಿ ಕೆಲವಹ ಪಾಠವನ್ನು ತೆಗೆದು ಹಾಕಲಾಗಿತ್ತು. ಎಲ್ಲ ಪುಸ್ತಕಗಳನ್ನು ನಿತ್ಯ ತೆಗೆದುಕೊಂಡು ಹೋಗದೆ ಕೆಲವು ಪುಸ್ತಕಗಳನ್ನು ಶಾಲೆಯಲ್ಲಿಯೇ ಇಡುವ ವ್ಯವಸ್ಥೆ, ಹೋಮ್‌ವರ್ಕ್ ಕಡಿಮೆ ನೀಡಲು, ಹಾಳೆಗಳಲ್ಲಿ ನೋಟ್ಸ್ ಬರೆದು ಜೋಡಿಸಲು, ಮಕ್ಕಳ ಮನಸ್ಸು ಮತ್ತು ವಯಸ್ಸಿಗೆ ಅನುಗುಣವಾಗಿ ವಿಷಯ ಸರಳಗೊಳಿಸಲು ಶಿಫಾರಸ್ಸು ಮಾಡಲಾಗಿತ್ತು.

ಆದರೆ ಆಧುನಿಕ ಜಗತ್ತಿನ ಪ್ರಸ್ತುತ ಜಾಗತೀಕರಣದ ಪರಿಣಾಮದಿಂದಾಗಿ ಪರಿಸ್ಥಿತಿ ಬದಲಾಗಿದ್ದು 10 ವರ್ಷಕ್ಕೊಮ್ಮೆ ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮವನ್ನು ಅಂತರರಾಷ್ಟ್ರೀಯ ಪಠ್ಯಕ್ರಮ, ಗುಣಮಟ್ಟಕ್ಕೆ ಅನುಗುಣವಾಗಿ ಬದಲಾಯಿಸುವ ಪರಿಪಾಠವಿದೆ. ರಾಜ್ಯ/ಪ್ರಾದೇಶಿಕ ಭಾಷಾ ಪಠ್ಯವನ್ನು ಐಸಿಎಸ್‌ಇ, ಸಿಬಿಎಸ್‌ಇ ಮಾದರಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಇಷ್ಟೆಲ್ಲಾ ಮಾಡಿದ್ದರೂ ಸಹ ಪಠ್ಯ, ಚೀಲದ ಹೊರೆ ಕಡಿಮೆಯಾಗುವ ಬದಲು ಏರಿಕೆಯಾಗುತ್ತಲೇ ಇದೆ. ಖಾಸಗಿ ಶಾಲೆಗಳ 1ರಿಂದ 3ನೇ ತರಗತಿ ಮಕ್ಕಳಿಗೆ ಹೋರ್ಮ್‌ವರ್ಕ್‌ ಕೊಟ್ಟು ಆಟದ ಸಹಜ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಹೀಗಾಗಿ ಪ್ರೊ. ಯಶಪಾಲ್ ಸಮಿತಿ ನೀಡಿದ ಶಿಫಾರಸ್ಸು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ; ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇದರ ಬೆನ್ನಲ್ಲೇ ಶಿಕ್ಷಣತಜ್ಞರು, ಕೇಂದ್ರ, ರಾಜ್ಯ ಶಿಕ್ಷಣ ಇಲಾಖೆಗಳು ಸಿಬಿಎಸ್‌ಇ, ಐಸಿಎಸ್‌ಇ ಮಕ್ಕಳ ಶಾಲಾ ಪಠ್ಯ, ಚೀಲದ ಹೊರೆ ತಗ್ಗಿಸಲು ಗಮನಹರಿಸಬೇಕು ಎಂದು ಹೇಳುತ್ತಲೇ ಇವೆ.

ಪಠ್ಯಚೀಲಕ್ಕೆ ಪರ್ಯಾಯವಿಲ್ಲವೆ?

ಖಂಡಿತ ಇದೆ. ಇಂತಹ ಸಮಸ್ಯೆಗೆ ಪರಿಹಾರವನ್ನು ತಂತ್ರಜ್ಞಾನ ನೀಡುವ ಸಾಧ್ಯತೆಗಳು ಉಜ್ವಲವಾಗಿವೆ. ಅದಕ್ಕಾಗಿ ಮಕ್ಕಳ ಚೀಲದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನ ಯುಗದಲ್ಲಿರುವ ನಾವುಗಳು ಈ ಬಗ್ಗೆ ಇನ್ನಷ್ಟು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ಜರೂರತ್ತಿದೆ. ಎಲ್ಲಿ ನೋಡಿದರೂ ಮೊಬೈಲ್, ಐಪಾಡ್ ಎನ್ನುವ ಈ ಸಾಂಸ್ಕೃತಿಕ ಸಂದರ್ಭದಲ್ಲಿ ಮಕ್ಕಳಿಗಾಗಿಯೇ ಇರುವಂತಹ ಗ್ಯಾಜೆಟ್‌ಗಳ ಮುಖಾಂತರ ಶಿಕ್ಷಣ ಒದಗಿಸುವ ಕುರಿತು ಕ್ರಮ ಕೈಗೊಳ್ಳಬಹುದಾಗಿದೆ. ಇ-ಪುಸ್ತಕಗಳ ಬಳಕೆಯಿಂದಾಗಿ ಕೆ.ಜಿ.ಗಟ್ಟಲೆ ಪುಸ್ತಕಗಳ ಚೀಲ ಹೊರುವುದನ್ನು ತಪ್ಪಿಸಬಹುದಾಗಿದೆ. ರಾಜ್ಯ ಪಠ್ಯಕ್ರಮ, ಕೇಂದ್ರ ಪಠ್ಯಕ್ರಮವನ್ನು ಇ-ವ್ಯವಸ್ಥೆಯಲ್ಲಿ ಅಳವಡಿಸಿ ಅದರ ಮುಖಾಂತರ ಶಿಕ್ಷಣ ನೀಡುವ ಕ್ರಮವನ್ನು ಕೈಗೊಳ್ಳಲು ನಮ್ಮ ಸರ್ಕಾರಗಳು ಮುಂದಾಗಬೇಕಿದೆ. ಪಠ್ಯಪುಸ್ತಕಗಳ ಇ-ಪುಸ್ತಕವನ್ನು ಬಳಸಿಕೊಂಡು ಓದಲು ಅನುಕೂಲ ಕಲ್ಪಿಸುವ ಮಿತಬೆಲೆಯ ಇ-ಪುಸ್ತಕಗಳನ್ನು ತಯಾರಿಸುವ ಅಗತ್ಯತೆ ಜರೂರಿದೆ.

ಇ-ಪುಸ್ತಕಗಳೆಂದರೇನು? ಅದರ ಉಪಯೋಗಗಳೇನು?

‘ಇ’ ಎನ್ನುವುದು ಎಲೆಕ್ಟ್ರಾನಿಕ್ ಎನ್ನುವುದರ ಸಂಕ್ಷಿಪ್ತರೂಪ. ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಇಟ್ಟಿರುವ, ಮಾಡಬಹುದಾದ ಆಲಯ. ಇದಕ್ಕೆ ಸ್ಥಳದ ಅಪೇಕ್ಷೆ ಬಹಳ ಕಡಿಮೆ. ಸಂರಕ್ಷಣೆಯ ವೆಚ್ಚ ಅತ್ಯಲ್ಪ. ಒಂದೇ ಪುಸ್ತಕವನ್ನು ಎಷ್ಟು ಜನ ಬೇಕಾದರೂ ಪಡೆಯಬಹುದು, ಓದಬಹುದು. ಇ-ಪುಸ್ತಕದಲ್ಲಿ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಬಹುದು. ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಹುಡುಕಿ ಓದುವುದಕ್ಕೂ, ಅಂಗೈಲಿ ಗ್ರಂಥಾಲಯ ಇಟ್ಟುಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಸಾವಿರಾರು ಪುಸ್ತಕಗಳನ್ನು ನಮಗೆ ಬೇಕಾದಲ್ಲಿಗೆ ಒಯ್ಯಬಲ್ಲ ಸೌಲಭ್ಯವೇ ರೋಮಾಂಚಕಾರಿ ಸಂಗತಿ! ಒಂದನೆಯ ತರಗತಿಯಿಂದ ಎಂಜಿನಿಯರಿಂಗ್‌ವರೆಗಿನ ಪಠ್ಯಗಳನ್ನು ಒಂದೇ ಇ-ಪುಸ್ತಕದಲ್ಲಿ ಸಂಗ್ರಹಿಸಬಹುದು. ಹಾಗೆಯೇ ಇ-ಪುಸ್ತಕವನ್ನು ಪವರ್‌ಕಟ್/ಲೋಡ್‌ಶೆಡ್ಡಿಂಗ್ ಸಮಯದಲ್ಲೂ ಬಳಸಬಹುದು.

ಮಕ್ಕಳ ಹೋಮ್‌ವರ್ಕ್ ಮಾಡಲು ಮನೆಯಲ್ಲಿ ಇ-ಚೀಲ ತೆರೆದು ಶಾಲೆಯಲ್ಲಿ ಕೊಟ್ಟ ಹೋಮ್‌ವರ್ಕ್ ಯಾವುದು ಎಂದು ತಿಳಿದು ಅಲ್ಲಿಯೇ ಮಾಡಿ ಮುಗಿಸಬಹುದು. ದಿನಕ್ಕೆ ಕೊಡುವಂತಹ ನಾಲ್ಕಾರು ಬಗೆಯ ಹೋಮ್‌ವರ್ಕ್‌ಗಳನ್ನು ಒಂದೇ ಇ-ಪುಸ್ತಕದಲ್ಲಿ ಮಾಡಬಹುದು. ಅಷ್ಟೇ ಅಲ್ಲದೆ ಶಾಲೆಗೆ ಅಂದಿನ ದಿನದ ಎಲ್ಲಾ ಪಠ್ಯಪುಸ್ತಕಗಳನ್ನು ಚೀಲದಲ್ಲಿ ತುಂಬಿ ಮೂಟೆಯಂತೆ ಹೊತ್ತೊಯ್ಯುವ ಬದಲು ಒಂದೇ ಇ-ಪುಸ್ತಕದ ಮೂಲಕ ಸಲೀಸಾಗಿ ಒಯ್ಯಬಹುದು. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಮಕ್ಕಳೂ ಆಧುನಿಕ ಸಮಾಜದ ಡಿಜಿಟಲ್ ಜಮಾನದ ವಾಸ್ತವ ಅರಿವನ್ನು ಪಡೆಯಬಹುದು.

ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಲ್ಲವೆ?

ಇಂತಹ ಒಂದು ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಇ-ಪುಸ್ತಕದ ಪರದೆಯನ್ನು ಸದಾ ಉಪಯೋಗಿಸುವುದರಿಂದ ಮಕ್ಕಳ ಕಣ್ಣಿಗೆ ಹಾನಿಯಾಗುತ್ತದೆ ಎನ್ನುತ್ತಾರೆ. ಆದರೆ ಟಿ.ಎಫ್.ಟಿ. ಪರದೆ ಬಳಸುವುದರಿಂದ ಕಣ್ಣಿಗೆ ಹಾನಿಯಾಗುವುದಿಲ್ಲ. ಅಷ್ಟಲ್ಲದೆ ಮಕ್ಕಳಿಗೆ ಜಾಗತೀಕರಣದ ಸಂದರ್ಭದಲ್ಲಿನ ಆಧುನಿಕ ವಿಧಾನದ ಶಿಕ್ಷಣದ ಪರಿಚಯ ಆಗುತ್ತದೆ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ. ಮಕ್ಕಳ ಕೈಯಲ್ಲಿ ನಿರ್ವಹಣೆ ಸಾಧ್ಯವೆ – ಎಂಬ ಪ್ರಶ್ನೆ ಇಲ್ಲಿ ಅಲ್ಲಗೆಳೆಯಲಾಗದು ಕೂಡ. ಆದರೆ ಮಕ್ಕಳ ಕೈಯಲ್ಲಿನ ಜಾಗರೂಕತೆಯಿಲ್ಲದ ನಿರ್ವಹಣೆಯನ್ನು ತಾಳಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದುವಂತಹ ವಿನ್ಯಾಸಗಳನ್ನು ರೂಪಿಸಬೇಕು. ಈಗಾಗಲೇ ಮೊಬೈಲ್‌ಗಳಲ್ಲಿ ದೊರಕುವ ಚಿಣ್ಣರ ಕಲಿಕೆಯು ಆಡುತ್ತಾ ಕಲಿಸುತ್ತದೆ. ಅಂತೆಯೇ ಮಕ್ಕಳ ಶಿಕ್ಷಣವನ್ನು ಇ-ಪುಸ್ತಕಗಳ ಮೂಲಕ ವ್ಯವಸ್ಥಿತಗೊಳಿಸಬಹುದಾಗಿದೆ. ಜೊತೆಗೆ ಇ-ಪುಸ್ತಕಗಳಂತಹ ಪರಿಹಾರ ಮೇಲ್ವರ್ಗ, ಮಧ್ಯಮ ವರ್ಗದ ಮಕ್ಕಳಿಗೆ ಮಾತ್ರ ಎಟಕುವ ಹಾಗಾಗಬಾರದು ಅಷ್ಟೆ. ಹಾಗಾದಲ್ಲಿ ಮಾತ್ರ ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯತತ್ಪರರಾಗಬೇಕಿದೆ.

**

(ಲಕ್ಷ್ಮೀಕಾಂತ್ ಎಲ್ ವಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry