7
ಎಫ್‌ಐಎಚ್ ವಿಶ್ವ ಹಾಕಿ ಲೀಗ್ ಫೈನಲ್

ಭಾರತಕ್ಕೆ ಕಾದಿದೆ ಅಗ್ನಿಪರೀಕ್ಷೆ

Published:
Updated:
ಭಾರತಕ್ಕೆ ಕಾದಿದೆ ಅಗ್ನಿಪರೀಕ್ಷೆ

ಹೊಸ ಕೋಚ್ ಮಾರ್ಗದರ್ಶನದಲ್ಲಿ ಪ್ರಬಲ ತಂಡವಾಗಿ ರೂಪುಗೊಳ್ಳುತ್ತಿರುವ ಭಾರತ ಹಾಕಿ ತಂಡಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ. ಎಫ್‌ಐಎಚ್ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿ ಒಡಿಶಾದ ಭುವನೇಶ್ವರದಲ್ಲಿ ಡಿಸೆಂಬ‌ರ್ 1 ರಿಂದ ನಡೆಯಲಿದ್ದು, ಜಿದ್ದಾಜಿದ್ದಿನ ಸೆಣಸಾಟ ನಿರೀಕ್ಷಿಸಲಾಗಿದೆ.

ನೂತನ ಕೋಚ್ ಶೊರ್ಡ್‌ ಮ್ಯಾರಿಜ್ ಮಾರ್ಗದರ್ಶನದಲ್ಲಿ ಭಾರತ ಆಡಲಿರುವ ಎರಡನೇ ಪ್ರಮುಖ ಟೂರ್ನಿ ಇದು. ಹೋದ ತಿಂಗಳು ನಡೆದಿದ್ದ ಏಷ್ಯಾ ಕಪ್ ಮ್ಯಾರಿಜ್ ಅವರಿಗೆ ಮೊದಲ ಟೂರ್ನಿ ಎನಿಸಿಕೊಂಡಿತ್ತು. ‘ನನಗೂ ಈ ತಂಡಕ್ಕೂ ಇದು ಹೊಸ ಆರಂಭ’ ಎಂದು ಮ್ಯಾರಿಜ್ ಏಷ್ಯಾ ಕಪ್‌ಗೆ ಮುನ್ನ ಹೇಳಿದ್ದರು.

ಢಾಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಭಾರತ ಕಿರೀಟಮುಡಿಗೇರಿಸಿಕೊಂಡಿತ್ತು. ಫೈನಲ್‌ನಲ್ಲಿ 2–1 ರಲ್ಲಿ ಮಲೇಷ್ಯಾ ತಂಡವನ್ನು ಮಣಿಸಿತ್ತು. ಮ್ಯಾರಿಜ್‌ ಮೊದಲ ಟೂರ್ನಿಯಲ್ಲೇ ಗೆಲುವಿನ ನಗು ಬೀರಿದ್ದರು. ಆದರೆ ಏಷ್ಯಾ ಕಪ್ ಮತ್ತು ಎಫ್‌ಐಎಚ್‌ ವಿಶ್ವ ಹಾಕಿ ಲೀಗ್‌ ನಡುವಿನ ವ್ಯತ್ಯಾಸ ತುಂಬಾ ದೊಡ್ಡದು.

ವಿಶ್ವದ ಎಂಟು ದಿಗ್ಗಜ ತಂಡಗಳ ನಡುವಿನ ಪೈಪೋಟಿ ಇದಾಗಿದೆ. ಏಷ್ಯಾ ಕಪ್‌ನಲ್ಲಿ ದೊರೆತ ಯಶಸ್ಸನ್ನು ಇಲ್ಲೂ ಮುಂದುವರಿಸಬೇಕಾದ ಸವಾಲು ಭಾರತದ ಮುಂದಿದೆ.ಡಿ.1 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಆಸ್ಟ್ರೇಲಿಯಾದ ಸವಾಲು ಎದುರಿಸಲಿದೆ. ಮರುದಿನ ಇಂಗ್ಲೆಂಡ್ ವಿರುದ್ಧ ಪೈಪೋಟಿ ನಡೆಸಲಿದ್ದು, ಡಿ.4ರಂದು ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಜರ್ಮನಿ ಜತೆ ಹೋರಾಡಲಿದೆ.

ಫಿಟ್‌ನೆಸ್‌ಗೆ ಒತ್ತು: ಕೋಚ್ ಮ್ಯಾರಿಜ್ ಅವರು ಫಿಟ್‌ನೆಸ್‌ಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ತಂಡದ ಆಟಗಾರರ ಶಕ್ತಿ, ದೌರ್ಬಲ್ಯಗಳು ಏನು ಎಂಬುದನ್ನು ಅವರು ಏಷ್ಯಾ ಕಪ್ ಟೂರ್ನಿಯ ವೇಳೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹಿರಿಯ ಆಟಗಾರ ಸರ್ದಾರ್ ಸಿಂಗ್ ಅವರಿಗೆ ಈ ಟೂರ್ನಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಅವರ ಫಿಟ್‌ನೆಸ್ ಬಗ್ಗೆ ಮ್ಯಾರಿಜ್ ತೃಪ್ತಿ ಹೊಂದದಿರುವುದೇ ತಂಡದಲ್ಲಿ ಸ್ಥಾನ ಕಳೆದುಕೊಳ್ಳಲು ಕಾರಣ ಎಂಬ ಮಾತುಗಳು ಕೇಳಿಬರುತ್ತಿದೆ.

ರೂಪಿಂದರ್‌ ಪಾಲ್ ಸಿಂಗ್ ಮತ್ತು ಬೀರೇಂದ್ರ ಲಾಕ್ರ ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ಲಾಕ್ರ ಅವರು ಕಳೆದ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ತಂಡದಲ್ಲಿ ಕೊನೆಯದಾಗಿ ಆಡಿದ್ದರು. ಗಾಯದ ಕಾರಣ ರಿಯೊ ಒಲಿಂಪಿಕ್ಸ್‌ ನಲ್ಲೂ ಆಡಿರಲಿಲ್ಲ.

ಆದರೆ ಅಗ್ರಮಾನ್ಯ ಗೋಲ್‌ಕೀಪರ್‌ ಶ್ರೀಜೇಶ್ ಅವರ ಅನುಪಸ್ಥಿತಿ ತಂಡವನ್ನು ಕಾಡಬಹುದು. ಆಕಾಶ್ ಅನಿಲ್ ಚಿಕ್ತೆ ಮತ್ತು ಸೂರಜ್‌ ಕರ್ಕೇರಾ ಅವರಲ್ಲೊಬ್ಬರು ಗೋಲ್‌ಕೀಪರ್‌ನ ಜವಾಬ್ದಾರಿ ನಿಭಾಯಿಸಲಿದ್ದಾರೆ. ಯುರೋಪ್‌ನ ಆಟಗಾರರು ಗೋಲುಪೆಟ್ಟಿಗೆ ಗುರಿಯಾಗಿಸಿ ಬುಲೆಟ್‌ನ ವೇಗದಲ್ಲಿ ಹೊಡೆಯುವ ಚೆಂಡನ್ನು ತಡೆಯಲು ಇವರು ಎಷ್ಟರಮಟ್ಟಿಗೆ ಯಶಸ್ವಿಯಾಗುವರು ಎಂಬುದನ್ನು ನೋಡಬೇಕು.

ಭಾರತ ತಂಡ ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ಗುರುವಾರದಿಂದ ಕಠಿಣ ಅಭ್ಯಾಸ ನಡೆಸುತ್ತಿದೆ. ಅದಕ್ಕೂ ಮುನ್ನ ತಂಡದ ಆಟಗಾರರು ಬೆಂಗಳೂರಿನಲ್ಲಿ 18 ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಯುರೋಪಿನ ತಂಡಗಳು ವೇಗದ ಆಟಕ್ಕೆ ಹೆಸರುವಾಸಿಯಾಗಿವೆ. ಆಟದ ವೇಗದ ವಿಚಾರದಲ್ಲಿ ಭಾರತಕ್ಕೆ ಆ ತಂಡಗಳ ಜತೆ ಸರಿಸಾಟಿಯಾಗಿ ನಿಲ್ಲಲು ಆಗುತ್ತಿಲ್ಲ. ಆದ್ದರಿಂದ ಮ್ಯಾರಿಜ್ ಅವರು ಆಟದ ವೇಗ ಹೆಚ್ಚಿಸಲು ಬೇಕಾದ ತಂತ್ರಗಳನ್ನು ಕಲಿಸಿಕೊಡುತ್ತಿದ್ದಾರೆ.

ಏಷ್ಯಾದಲ್ಲಿ ಮತ್ತೊಮ್ಮೆ ಪ್ರಭುತ್ವ ಸಾಧಿಸಿರುವ ಭಾರತಕ್ಕೆ ವಿಶ್ವಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಈ ಟೂರ್ನಿ ಉತ್ತಮ ಅವಕಾಶ ಎನಿಸಿದೆ. ಯುರೋಪ್‌ ಮತ್ತು ದಕ್ಷಿಣ ಅಮೆರಿಕದ ತಂಡಗಳ ಎದುರು ಆಡುವಾಗ ಭಾರತ ಒತ್ತಡಕ್ಕೆ ಒಳಗಾಗುವುದು ಸಹಜ. ಆ ಒತ್ತಡ ಮೀರಿ ನಿಲ್ಲಲು ಯಶಸ್ವಿಯಾದರೆ ಮತ್ತು ಕೊನೆಯ ನಿಮಿಷಗಳಲ್ಲಿ ಎದುರಾಳಿಗಳಿಗೆ ಗೋಲುಬಿಟ್ಟುವ ಕೊಡುವ ಹಳೆಯ ಚಾಳಿ ಮುಂದುವರಿಸದಿದ್ದರೆ ಭಾರತಕ್ಕೆ ಪ್ರಶಸ್ತಿ ಗೆಲ್ಲುವುದು ಕಷ್ಟವಲ್ಲ.

(ಭಾರತ ತಂಡದ ಬೀರೇಂದ್ರ ಲಾಕ್ರ ಚೆಂಡನ್ನು ಗುರಿ ಸೇರಿಸಲು ಅಭ್ಯಾಸ ನಡೆಸಿದ ಸಂದರ್ಭ)

**

ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನ

ಈ ಟೂರ್ನಿಯಲ್ಲಿ ಆಡಲಿರುವ ಎಂಟು ತಂಡಗಳಲ್ಲಿ ಐದು ತಂಡಗಳು ಎಫ್‌ಐಎಚ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಮುಂದಿವೆ. ಪ್ರಸ್ತುತ ಭಾರತ ಆರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ (7) ಮತ್ತು ಸ್ಪೇನ್ (8) ತಂಡಗಳು ಮಾತ್ರ ರ‍್ಯಾಂಕಿಂಗ್‌ನಲ್ಲಿ ಹಿಂದಿವೆ.

2016-17 ರ ಸಾಲಿನ ಎಫ್‌ಐಎಚ್ ಹಾಕಿ ವಿಶ್ವಲೀಗ್ 2016ರ ಏಪ್ರಿಲ್‌ನಲ್ಲಿ ಸಿಂಗಪುರದಲ್ಲಿ ಆರಂಭವಾಗಿತ್ತು. ಆರಂಭದಲ್ಲಿ ಒಟ್ಟು 65 ತಂಡಗಳು ಇದ್ದವು. ರೌಂಡ್–1, ರೌಂಡ್–2 ಮತ್ತು ಸೆಮಿಫೈನಲ್ಸ್ ಬಳಿಕ ಒಟ್ಟು ಎಂಟು ತಂಡಗಳು ಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry