7
ಕಲೆ, ಸಾಹಿತ್ಯ, ನಾಟಕ, ಸಿನಿಮಾಗಳನ್ನು ನೋಡುವ ಕಣ್ಣುಗಳನ್ನು ಹೊಲಿದುಕೊಳ್ಳಬೇಕೇ ಅಥವಾ ಕಣ್ಮುಚ್ಚಿ ಒಳಗಣ್ಣಲ್ಲಿ ಮಾತ್ರ ಅನುಭವಿಸಬೇಕೇ?

‘ಪದ್ಮಾವತಿ’ ಮತ್ತು ಚರಿತ್ರೆಯ ತಾಕಲಾಟ

Published:
Updated:
‘ಪದ್ಮಾವತಿ’ ಮತ್ತು ಚರಿತ್ರೆಯ ತಾಕಲಾಟ

‘ಪದ್ಮಾವತಿ ಉನ್ಮಾದಕ್ಕೆ ಹೊಣೆ ಯಾರು?’ ಎಂಬ ಲೇಖನವು (ಪ್ರ.ವಾ., ಎ. ಸೂರ್ಯಪ್ರಕಾಶ್, ನ. 22) ನೆಹರೂವಾದಿ ಹಾಗೂ ಎಡಪಂಥೀಯ ಇತಿಹಾಸಕಾರರನ್ನು ನಕಲಿ ಇತಿಹಾಸಕಾರರು ಎನ್ನುತ್ತದೆ. ನೆಹರೂವಾದಿಗಳು ಮತ್ತು ಮಾರ್ಕ್ಸ್‌ವಾದಿಗಳ ಮಿಶ್ರಣವೇ ಸರಿಸುಮಾರು 2014ರವರೆಗೆ ನವದೆಹಲಿಯಲ್ಲಿ ‘ಪ್ರಭುತ್ವ’ವೂ ಆಗಿದ್ದ ಕಾರಣ, ಅವರ ಮಾರಕ ಪ್ರಭಾವವು ಸಾಹಿತ್ಯ ಮತ್ತು ಸಿನಿಮಾದವರೆಗೂ ಹಬ್ಬಿ, ಅದು ಚಿತ್ರಕಲೆಗೂ ದಾಟಿ ಎಂ.ಎಫ್. ಹುಸೇನ್ ಅಂತಹವರಿಗೂ ಧೈರ್ಯ ನೀಡಿತು ಎನ್ನುತ್ತದೆ. ಇಷ್ಟಲ್ಲದೆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ನಡೆಯು ನಮ್ಮ ರಾಷ್ಟ್ರಜೀವನದ ಈಗಿನ ಹಂತದಲ್ಲಿ ಚಾಲ್ತಿಯಲ್ಲಿದೆ ಎನ್ನುತ್ತದೆ.

ಇವೆಲ್ಲವೂ ಗಾಂಧಿಯವರ ಶ್ರೀರಾಮನ ನಡಿಗೆಗಳನ್ನು ಅತ್ತ ಸರಿಸಿ ಗೋಡ್ಸೆಯ ಗುಡಿ ಕಡೆಗೆ ನಡೆಮುಡಿ ಹಾಸುವ ಶೋಭಾ ಯಾತ್ರೆಗಳಂತಿವೆ. ಜಗದೇಕ ಸುಂದರಿಯಾಗಿದ್ದ ಪದ್ಮಾವತಿ, ಬಿರುಗಾಳಿಯಾಗಿ ಅಪ್ಪಳಿಸಿ ಬಂದ ಅಲ್ಲಾವುದ್ದೀನ್ ಖಿಲ್ಜಿಗೆ ಕನಸಿನಲ್ಲಿ ದೇವನರ್ತನ ಮಾಡಿದ ರಾಣಿ. ಇದು ಬಾಲಿವುಡ್ ಸಿನಿಮಾದ ಕಥನ. ಚರಿತ್ರೆ ಸಮರ ರಂಗದಲ್ಲಿ ಕನಸಾಗಿ ಕಾಡಿಲ್ಲ. ಸೋತ ರಾಜನ ಮಡದಿಯರೊಂದಿಗೆ ಜೋಹರ್ ಪದ್ಧತಿಯಂತೆ ಹಿಡಿ ಬೂದಿಯಾದಳು. ದೇವಿಯಾದಳು. ರಜಪೂತರ ಮಾಸ್ತಿಯಾದಳು. ಇವೆಲ್ಲದರ ಆಳವಾದ ಬೇರುಗಳು ಸನಾತನ ಭಾರತದ ಸತಿ ಸಹಗಮನ ಪದ್ಧತಿಯ ಆಳದಲ್ಲಿವೆ. ಪರದೆಯ ಹಿಂದೆ ಮರೆಯಾಗಿ ಹೋಗಿವೆ.

ಇಲ್ಲಿ ಮಂಡನೆಯಾಗಿರುವ ಲೇಖಕರ ಅಭಿಪ್ರಾಯವು ಸಂಜಯ್‌ ಲೀಲಾ ಬನ್ಸಾಲಿ ಹಾಗೂ ದೀಪಿಕಾ ಪಡುಕೋಣೆಯ ತಲೆ ಕಡಿದು ಬಂದವರಿಗೆ ತಲಾ ಐದು ಕೋಟಿ ರೂಪಾಯಿ ಇನಾಂ ನೀಡುವವರನ್ನು ಬೆಂಬಲಿಸುವ ಹಾಗೂ ಶೂರ್ಪನಖಿಯ ಮೂಗು ಕೊಯ್ದ ಲಕ್ಷ್ಮಣನ ತತ್ವದ ಅನುಮೋದನೆಯಂತಿದೆ. ಖಾಲಿದ್ ಹುಸೇನ್ ಕಾದಂಬರಿ ‘ದ ಕೈಟ್ ರನ್ನರ್’ ‘ಅಫ್ಗಾನಿಸ್ತಾನಕ್ಕಿದ್ದ ಪರಂಪರೆಯೆಲ್ಲವನ್ನೂ ತಾಲಿಬಾನರು ನಾಶ ಮಾಡಿದ್ದಾರೆ. ಬಾಮಿಯಾನ್ ಬೃಹತ್ ಬುದ್ಧನಿಗೆ ಅವರು ಮಾಡಿದ್ದನ್ನು ನೋಡಿದಿರಲ್ಲವೇ...’ ಎನ್ನುತ್ತದೆ. ಹೌದು, ಕಂದಹಾರ್ ಎಂಬ ಗಾಂಧಾರಿ ನಾಡಿಂದು ಹಿಂದುತ್ವವಾದಿಗಳಿಗೆ ಶಾಲೆ ಮತ್ತು ರೂಪಕದಂತಾಗುತ್ತಿದೆ. ‘ಧರ್ಮವೊಂದು ಅಫೀಮು’ ಎಂದಿರುವ ಕಾರ್ಲ್‌ ಮಾರ್ಕ್ಸ್‌ ಮಾತನ್ನು ಅನುಸರಿಸಿದ ನೆಹರೂ ಅವರ ಸೆಕ್ಯುಲರ್ ಹೆಜ್ಜೆಗಳು ದೇಶಕ್ಕಿಂದು ಬೇಕಾಗಿಲ್ಲ. ವೈಚಾರಿಕ ಚಿಂತನೆಗಳು ಬೇಕಾಗಿಲ್ಲ. ಅಫ್ಗಾನಿಸ್ತಾನ, ಪಾಕಿಸ್ತಾನ ಮಾದರಿಗಳಿಗೆ ನಾವೇನು ಕಡಿಮೆ ಎಂಬುದು ಭಾರತದ ಸವಾಲು.

‘ನೆಹರೂ ಅವರು ಮೂಢ ಮತಾಚಾರದ ಮಂಕು ದಿಣ್ಣೆಯಲ್ಲ. ಅಧ್ಯಾತ್ಮ ಮತ್ತು ವಿಜ್ಞಾನಗಳ ಸರ್ವಶ್ರೇಷ್ಠ ನಿಧಿ ಮತ್ತು ಪ್ರತಿನಿಧಿ’ ಎಂದು ತೂಕದ ಮಾತನ್ನಿಟ್ಟವರು ವೈಚಾರಿಕ ಚಿಂತನೆಯ ಕುವೆಂಪು. ಈ ಮಾತುಗಳು ಪಕ್ಷಗಳ ರಾಜಕೀಯ ನುಡಿಗಳಲ್ಲ. ಭವಿಷ್ಯ ಭಾರತಕ್ಕೆ ಎಚ್ಚರದ ನುಡಿಗಳು. ರಾಜಕೀಯ ಜೇನು ಹನಿಯ ಸಿಹಿ ಏನೇ ಇರಲಿ ನಮ್ಮ ದೇಶದ ಪಾಲಿಗೆ ಕಂದಹಾರ್ ದಿಕ್ಕಿನ ಚಲನೆ ಎನ್ನುವುದು ಬುದ್ಧ ಪರ್ವತವನ್ನು ನುಚ್ಚು ನೂರು ಮಾಡಿದ ರೀತಿಯ ಆತಂಕದ್ದು. ಅದನ್ನೇ ಗಾಂಧೀಜಿ ‘ಧರ್ಮವಿಲ್ಲದೆ ರಾಜಕೀಯವಿಲ್ಲ. ಧರ್ಮ ಎಂದರೆ ದ್ವೇಷ, ಜಗಳ ತುಂಬಿದ ಮೌಢ್ಯದ ಕುರುಡು ಧರ್ಮವಲ್ಲ. ಸಹಿಷ್ಣುತೆಯ ವಿಶ್ವಧರ್ಮ’ ಎಂದರು.

ದೇಶವಿಂದು ‘ಪದ್ಮಾವತಿ’ ಪಾತ್ರ ನಿರ್ವಹಿಸಿರುವ ಅಸಹಾಯಕ ನಟಿಯಂತಹವರ ಮೂಗು ಕೊಯ್ಯಲು ಕತ್ತಿ ಮಸೆದುಕೊಳ್ಳುತ್ತಿದೆ. ಸನಾತನ ಭಾರತವು ಅಲ್ಲಾವುದ್ದೀನ್‌ ಖಿಲ್ಜಿಯ ಕನಸುಗಳಲ್ಲಿ ಜೀವಸತ್ವಗಳನ್ನು ಹುಡುಕಿಕೊಳ್ಳಬೇಕಾಗಿಲ್ಲ ಸರಿ. ಆದರೆ ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ ಇತ್ಯಾದಿಗಳನ್ನು ನೋಡುವ ಕಣ್ಣುಗಳನ್ನು ಹೊಲಿದುಕೊಳ್ಳಬೇಕೇ ಅಥವಾ ಕಣ್ಮುಚ್ಚಿ ಒಳಗಣ್ಣಲ್ಲಿ ಮಾತ್ರ ಅನುಭವಿಸಬೇಕೇ?

ಬಾಲಿವುಡ್‌ಗೆ ಬಹುಕೋಟಿ ತರುವ ಸುಂದರಿ ‘ಪದ್ಮಾವತಿ’ಯು ರಜಪೂತರು ಚರಿತ್ರೆಯಲ್ಲಿ ಅಗೆಯುವ ಗುಂಡಿಯಿಂದ ಎದ್ದು ಓಡಲಾರಂಭಿಸಿದ್ದಾಳೆ. ಇವು ತಪ್ಪುಗಳನ್ನು ಸರಿಪಡಿಸಿಕೊಳ್ಳುವ ರೀತಿ ಎಂದು ಪ್ರಧಾನಮಂತ್ರಿಯ ನೆರಳಿನಲ್ಲಿ ನಿಂತು ಬೇರೆ ಬೇರೆ ಮುಖ್ಯಮಂತ್ರಿಗಳು ಹೇಳಲಾರಂಭಿಸಿದ್ದಾರೆ. ಚರಿತ್ರಕಾರರ ಲೇಖನಿಗಳು ‘ಡಿಸ್ಕವರಿ ಆಫ್ ಇಂಡಿಯಾ’ ಮಾದರಿಯಲ್ಲಿ ಸತ್ಯಕ್ಕೆ ಹತ್ತಿರವಾದ ಇತಿಹಾಸವನ್ನು ಬರೆಯಬಲ್ಲವೇ ಹೊರತು ಗುಂಡಿಗಳನ್ನು ಬಗೆದು ಮೂಳೆಗಳನ್ನು ಎಣಿಸಲಾರವು.

ಚರಿತ್ರೆ ಪುರಾಣವಾಗುವುದು, ದೈವತ್ವದ ಕಡೆ ಚಲಿಸುವುದು ಕಾಲದ ಗುಣ. ಅನೇಕ ಮಹಾಭಾರತಗಳು, ಮೂರುಸಾವಿರ ರಾಮಾಯಣಗಳು ಈ ದೇಶವೊಂದರಲ್ಲೇ ಇವೆ. ಇಂತಹವುಗಳನ್ನು ಸರ್ಕಾರ ಬಹುಮುಖಿ ಸಂಸ್ಕೃತಿಯಾಗಿ ಕಾಪಾಡಿಕೊಳ್ಳಬೇಕು. ಸಮಾಜ ಎಚ್ಚರದಿಂದ ಕಾಪಾಡಿಕೊಳ್ಳಬೇಕು. ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಅಧಿಕಾರದಲ್ಲಿದ್ದಾಗ ಮಾಡುವ ಗಾಯ ಹುಣ್ಣಾಗಿ ಬೆಳೆಯುತ್ತದೆ.

ಶ್ರೀರಾಮನೇನು, ದುರ್ಯೋಧನನೇನು, ಖಿಲ್ಜಿಯೇನು! ಇಡೀ ಪುರುಷ ಜಗತ್ತು ಮಾತೃ ಮೌಲ್ಯವನ್ನು ಧಿಕ್ಕರಿಸಿದೆ. ಸ್ವತಂತ್ರ ಭಾರತದಲ್ಲೂ ಸ್ತ್ರೀಯರ ಮೇಲೆ ಬಹಳಷ್ಟು ಅತ್ಯಾಚಾರಗಳು ನಡೆದಿವೆ. ಘಜ್ನಿ ಸೋಮನಾಥಪುರಕ್ಕೆ ದಂಡೆಯಾತ್ರೆ ಶೌರ್ಯ ಮಾಡಿದರೆ, ಈ ದೇಶದ ಪುರುಷ ಜಗತ್ತು ಕಾಶಿ ಯಾತ್ರೆ ಮಾಡುತ್ತದೆ. ಖಿಲ್ಜಿ ಗಡಿ ದಾಟಿ ಆರ್ಭಟಿಸಿ ನುಗ್ಗಿದರೆ ಕೋಟೆ ಒಳಗೆ ರಾಜಾ ರತ್ನ ಸಿಂಗ್ ಶರಣಾಗುತ್ತಾನೆ. ಪದ್ಮಿನಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ. ಭೂತಕಾಲದಿಂದ ಕಲಿತುಕೊಂಡು ನಾವು ತಿದ್ದಿಕೊಳ್ಳಬೇಕಿತ್ತು. ಆಗ ದೇವಿ ಸ್ವರೂಪ ಪಡೆದ ಪದ್ಮಾವತಿಗೆ ಗೌರವ ದಕ್ಕುತ್ತಿತ್ತು. ಆದರೆ ಅದು ಆಗುತ್ತಿಲ್ಲ. ತೆರೆಯ ಮೇಲೆ ತನ್ನ ವೇಷ ಹಾಕಿ, ಪಾತ್ರದಲ್ಲಿ ಆತ್ಮವಾಗಿ ಪ್ರವೇಶಿಸಿದ ಒಬ್ಬ ಮಹಿಳೆಯನ್ನು ಬೆದರಿಸಲಾಗುತ್ತಿದೆ. ಈ ದೇಶಕ್ಕೆ ಇನ್ನೂ ಅರೆ ಸ್ವಾತಂತ್ರ್ಯ ದೊರೆತಿದೆ. ಅದೂ ಪುರುಷರಿಗೆ ಮಾತ್ರ ದಕ್ಕಿರುವ ಸ್ವಾತಂತ್ರ್ಯ. ಅಂತಹುದನ್ನು ಉತ್ತರ ಭಾರತ ಜಾಗಟೆ ಹೊಡೆದು ಹೇಳುತ್ತಿದೆ. ದಕ್ಷಿಣ ಭಾರತದ ಕಿವಿಗೂ ಇದು ಕೇಳದೆ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry