7

ನ್ಯಾಯಾಂಗದಲ್ಲೂ ವಂಶಪಾರಂಪರ್ಯ: ರವಿವರ್ಮ ಕುಮಾರ್‌

Published:
Updated:
ನ್ಯಾಯಾಂಗದಲ್ಲೂ ವಂಶಪಾರಂಪರ್ಯ: ರವಿವರ್ಮ ಕುಮಾರ್‌

ಮೈಸೂರು: ‘ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಗಳು ಸಿಗದೆ, ಘೋರ ಅನ್ಯಾಯವಾಗುತ್ತಿದೆ. ಮೀಸಲಾತಿ ನೀಡುವ ಮೂಲಕ ಇದನ್ನು ಸರಿಪಡಿಸಬೇಕು’ ಎಂದು ವಕೀಲ ಪ್ರೊ.ರವಿವರ್ಮ ಕುಮಾರ್‌ ಹೇಳಿದರು.

ಸಾಹಿತ್ಯ ಸಮ್ಮೇಳನ ಅಂಗವಾಗಿ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದ ಸಮಾನಾಂತರ ವೇದಿಕೆಯಲ್ಲಿ ಭಾನುವಾರ ನಡೆದ ‘ಜನಪರ ಚಳವಳಿಗಳು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನ್ಯಾಯಾಂಗ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಈವರೆಗೆ ಒಬ್ಬ ಮಹಿಳೆ ಕೂಡ ಮುಖ್ಯ ನ್ಯಾಯಮೂರ್ತಿ ಸ್ಥಾನ ಪಡೆದಿಲ್ಲ. ಇದು ಮಹಿಳೆಯರಿಗೆ ಅನ್ಯಾಯ. ದೇಶದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಮಹಿಳೆಯರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೀಸಲಾತಿ ಅಗತ್ಯವಿದೆ. ಇಂಥ ಗಂಭೀರ ವಿಷಯಗಳನ್ನು ಹೋರಾಟಕ್ಕೆ ಆಯ್ದುಕೊಳ್ಳಬೇಕು’ ಎಂದು ಅವರು ಸಂಘಟನೆಗಳಿಗೆ ಸಲಹೆ ನೀಡಿದರು.

ವಂಶಪಾರಂಪರ್ಯ ಪದ್ಧತಿ ರಾಜಕೀಯದಲ್ಲಿ ಮಾತ್ರವಲ್ಲ, ನ್ಯಾಯಾಂಗ ವ್ಯವಸ್ಥೆಯಲ್ಲೂ ಇದೆ. ನ್ಯಾಯಾಧೀಶರ ಮಕ್ಕಳೇ ನ್ಯಾಯಾಧೀಶರಾದ ಉದಾಹರಣೆಗಳು ಸಾಕಷ್ಟಿವೆ. ಇದರ ವಿರುದ್ಧ ಚಳವಳಿ ಅಗತ್ಯ ಎಂದರು.

‘ಕನ್ನಡ ಚಳವಳಿ’ ಕುರಿತು ಮಾತನಾಡಿದ ಸಾಹಿತಿ ರಾ.ನಂ.ಚಂದ್ರಶೇಖರ್‌, ‘ಆದಿಕವಿ ಪಂಪನಿಂದಲೇ ಕನ್ನಡ ಸಾರಸ್ವತ ಚಳವಳಿ ಆರಂಭವಾಗಿದೆ. ಸಂತರು, ಶರಣರು, ದಾಸರು ಅದನ್ನು ಇನ್ನಷ್ಟು ಪರಿಣಾಮಕಾಯಾಗಿ ಮುನ್ನಡೆಸಿದರು. ಆಧುನಿಕ ಕನ್ನಡ ಚಳವಳಿಗಳಿಗೆ ಮೈಸೂರು ಇಂಬು ನೀಡಿತು. ಬಿ.ಎಂ.ಶ್ರೀ ಅವರು ‘ಹಾರಿಸಿ ಏರಿಸಿ ಕನ್ನಡದ ಬಾವುಟ’ ಎಂದು ಘೋಷಣೆ ಕೂಗುತ್ತ ಸಾಗಿದ್ದೇ ಮೊದಲ ಚಳವಳಿ ಎಂದು ಪರಿಗಣಿಸಲಾಗಿದೆ. ಕರ್ನಾಟಕ ಏಕೀಕರಣ, ಗೋಕಾಕ್‌ ಚಳವಳಿಯಂಥ ಹಲವು ಮೈಲುಗಲ್ಲುಗಳನ್ನು ನಾವು ನೆಟ್ಟಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಅಸ್ಮಿತೆ ಉಳಿಸಿಕೊಂಡೇ ಹೋರಾಟ ಮಾಡಬೇಕಾಗಿದೆ’ ಎಂದು ಸಲಹೆ ನೀಡಿದರು.

‘ರೈತ ಚಳವಳಿ’ ಬಗ್ಗೆ ಮಾತನಾಡಿದ ಚಾಮರಸ ಮಾಲಿಪಾಟೀಲ ಅವರು ‘ನರಗುಂದ ಬಂಡಾಯ’ದಿಂದ ಆರಂಭಗೊಂಡ ರೈತರ ಹೋರಾಟದ ವಿವಿಧ ಮಜಲುಗಳನ್ನು ಹಾಗೂ ಹೋರಾಟದಲ್ಲೇ ಜೀವ ತೇದ  ಮಹನೀಯರನ್ನು ಸ್ಮರಿಸಿದರು.

ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮಿ ‘ಕಾರ್ಮಿಕ ಚಳವಳಿಗಳು’ ಕುರಿತು, ಎಲ್‌.ಜಿ. ಮೀರಾ ‘ಮಹಿಳಾ ಚಳವಳಿ’ ಕುರಿತು ವಿಷಯ ಮಂಡಿಸಿದರು. ಸತೀಶ್‌ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

***

ಚೀಟಿಯ ಕಿರಿಕಿರಿ; ಗೋಷ್ಠಿ ತರಾತುರಿ

ಸಮ್ಮೇಳನದ ಬಹುತೇಕ ಗೋಷ್ಠಿಗಳಲ್ಲಿ ‘ನಿಮ್ಮ ಸಮಯ ಮುಗಿಯಿತು’ ಎಂಬ ಚೀಟಿಗಳು ವಿಚಾರಮಂಡನೆ ಮಾಡುವವರಿಗೆ ಕಾಣಿಸಿಕೊಂಡವು. ಕೊನೆಯ ದಿನದ ಯಾವುದೇ ಗೋಷ್ಠಿ ಸಮಯಕ್ಕೆ ಸರಿಯಾಗಿ ಆರಂಭ ಆಗಲಿಲ್ಲ. ಹೀಗಾಗಿ, ಎಲ್ಲರೂ ತರಾತುರಿಯಲ್ಲಿ, ಒಂದೇ ಉಸಿರಿನಲ್ಲಿ ತಮ್ಮ ವಿಷಯ ಮಂಡಿಸಿದರು. ಇದರಿಂದ ಪ್ರೇಕ್ಷಕರು ಬೇಸತ್ತರು, ಆಲಿಸುವ ಆಸಕ್ತಿ ಕಳೆದುಕೊಂಡರು.

ಶತಮಾನೋತ್ಸವ ಭವನದಲ್ಲಿ ಬೆಳಿಗ್ಗೆ 9.30ಕ್ಕೆ ನಿಗದಿಯಾದ ‘ಚಳವಳಿ’ಯ ಗೋಷ್ಠಿ ಬರೋಬ್ಬರಿ 11ಕ್ಕೆ ಶುರುವಾಯಿತು. ಆಶಯ ಭಾಷಣ ಮಾಡುವವರು, ವಿಷಯ ಮಂಡಿಸುವವರೆಲ್ಲ ಗಂಟೆಗಟ್ಟಲೆ ಭಾಷಣ ಮಾಡಿದರು. ‘ಇದು ಕನ್ನಡ ಸಮ್ಮೇಳನ, ಕನ್ನಡ ಚಳವಳಿ ಬಗ್ಗೆ ನಾನು ಮಾತನಾಡಲೇಬೇಕು. ಉಳಿದವರೆಲ್ಲ ಹೆಚ್ಚು ಸಮಯ ಮಾತನಾಡಿಲ್ಲವೇ? ನಾನು ನಿಲ್ಲಿಸುವುದಿಲ್ಲ’ ಎಂದು ರಾ.ನಂ. ಚಂದ್ರಶೇಖರ್‌ ಆಯೋಜಕರ ಚೀಟಿಗೆ ತಿರುಗೇಟು ನೀಡಿದರು.

***

ದೇಶವನ್ನು ಕಟ್ಟಿ, ಬೆಳೆಸಿದ ಕಾರ್ಮಿಕರೇ ಅನ್ನ–ನೀರು–ಸೂರು ಇಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಹಾಗೂ ಉದ್ಯಮ ವಲಯಗಳು ನಮ್ಮ ಶಕ್ತಿಯನ್ನು ಮಾತ್ರ ಬಳಸಿಕೊಳ್ಳುತ್ತಿವೆ. ಕ್ಷೇಮ ಕಡೆಗಣಿಸಿವೆ

ಎಸ್‌.ವರಲಕ್ಷ್ಮಿ, ಅಧ್ಯಕ್ಷೆ, ಸಿಐಟಿಯು

***

ಪಕ್ಕದ ರಾಜ್ಯದಲ್ಲಿ ಭಾಷೆಗಾಗಿ ಹೋರಾಡುವವರಿಗೆ ಗೌರವ ಧನ, ಆರೋಗ್ಯ ಸೌಲಭ್ಯ ನೀಡಲಾಗುತ್ತಿದೆ. ಆದರೆ, ನಮ್ಮ ಕನ್ನಡ ಚಳವಳಿಗಾರನ್ನು ಕೇಸು ಜಡಿದು, ಜೈಲಿಗೆ ಅಟ್ಟಲಾಗುತ್ತಿದೆ

ರಾ.ನಂ.ಚಂದ್ರಶೇಖರ್‌, ಕನ್ನಡ ಚಳವಳಿಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry