7
ಕಲಾವಿದರ ವಿರುದ್ಧದ ಪ್ರತಿಭಟನೆ ಅಪಾಯಕಾರಿ ಬೆಳವಣಿಗೆ: ವಿನಯಾ ಒಕ್ಕುಂದ

ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಸಾಂಸ್ಕೃತಿಕ ಭಯೋತ್ಪಾದನೆ

Published:
Updated:
ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಸಾಂಸ್ಕೃತಿಕ ಭಯೋತ್ಪಾದನೆ

ಮೈಸೂರು: ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣ ಹತ್ತಿಕ್ಕುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದರೆ ಅದು ಸಾಂಸ್ಕೃತಿಕ ಭಯೋತ್ಪಾದನೆ’ ಎಂದು ಕವಯಿತ್ರಿ ವಿನಯಾ ಒಕ್ಕುಂದ ಹೇಳಿದರು.

ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಭಾನುವಾರ ನಡೆದ ‘ಸಮಕಾಲೀನ ಸಂದರ್ಭ: ಬಹುತ್ವದ ಸವಾಲುಗಳು’ ಗೋಷ್ಠಿಯಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಬಿಕ್ಕಟ್ಟುಗಳು’ ಕುರಿತು ಅವರು ಮಾತನಾಡಿದರು.

ಸರ್ಕಾರದ ಹುಸಿ ಭರವಸೆಗಳನ್ನು ರೇಖೆಗಳಲ್ಲಿ ಚಿತ್ರಿಸಿದ ಕಾರಣಕ್ಕೆ ತಮಿಳುನಾಡು ಸರ್ಕಾರ ವ್ಯಂಗ್ಯಚಿತ್ರಕಾರನನ್ನು ಬಂಧಿಸಿದ ಪ್ರಕರಣವು, ಪ್ರಭುತ್ವವೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತಿದೆ ಎಂಬುದಕ್ಕೆ ಉತ್ತಮ ಉದಾಹರಣೆ ಎಂದರು.

‘ಧರ್ಮದ ವಿಚಾರಧಾರೆಗಳು ಮತ್ತು ಪ್ರಭುತ್ವದ ನಡುವಿನ ಅಪವಿತ್ರ ಮೈತ್ರಿಯು ಇಂದು ನಮ್ಮ ಮಾತು, ಆಲೋಚನೆ, ಸೃಜನಶೀಲ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತಿದೆ. ಒಂದು ಸಣ್ಣ ಟೀಕೆಯನ್ನು ಒಪ್ಪಿಕೊಳ್ಳಲು ಆಗದಂತಹ ಮನಃಸ್ಥಿತಿ ಮೂಲಭೂತವಾದಿಗಳಲ್ಲಿ ಇಲ್ಲದಿರುವುದು ಕಳವಳದ ವಿಚಾರ’ ಎಂದು ಹೇಳಿದರು.

‘ಪದ್ಮಾವತಿ ’ ಸಿನಿಮಾದ ನಟಿ ಮತ್ತು ನಿರ್ದೇಶಕರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ, ಅವರ ತಲೆಗೆ ಇಷ್ಟು ಇನಾಮು ಎಂಬ ಘೋಷಣೆಯು ನಾವು ಅತ್ಯಂತ ಭಯಾನಕವಾದ ಸಾಂಸ್ಕೃತಿಕ ಬಿಕ್ಕಟ್ಟು ಎದುರಿಸುತ್ತಿರುವುದನ್ನು ಸೂಚಿಸುತ್ತದೆ ಎಂದರು.

ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿದ ಕಮಲ್‌ ಹಾಸನ್‌, ತಮ್ಮ ಸಿನಿಮಾದಲ್ಲಿ ಸರ್ಕಾರವನ್ನು ಟೀಕಿಸಿದ ವಿಜಯ್‌, ನೋಟು ರದ್ದತಿಯನ್ನು ಪ್ರಶ್ನಿಸಿದ ಪ್ರಕಾಶ್‌ ರೈ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಅಪಾಯಕಾರಿ ಬೆಳವಣಿಗೆಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆ ಘಟನೆಗಳು ನಮ್ಮ ಸಾಂಸ್ಕೃತಿಕ ದಿವಾಳಿತನವನ್ನು ಜಗತ್ತಿನ ಮುಂದೆ ತೆರೆದಿಟ್ಟಿವೆ. ಕೋಮುವಾದಿಗಳು ಮತ್ತು ಬಂಡವಾಳಶಾಹಿಗಳು ಭಯೋತ್ಪಾದನೆಯನ್ನು ಹುಟ್ಟುಹಾಕಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದಾರೆ ಎಂದು ಆರೋಪಿಸಿದರು.

’ನವರಾಷ್ಟ್ರೀಯತೆ: ಧಾರ್ಮಿಕ ಮೂಲಭೂತ’ವಾದ ಕುರಿತು ವಿಷಯ ಮಂಡಿಸಿದ ಸಾಹಿತಿ ಪ್ರಧಾನ್‌ ಗುರುದತ್ತ, ಭಾರತೀಯ ಸಂಸ್ಕೃತಿಯು ಇಡೀ ವಿಶ್ವವನ್ನು ಒಂದು ಕುಟುಂಬ ಎಂಬುದಾಗಿ ಭಾವಿಸುತ್ತದೆ. ಕುಟುಂಬದಲ್ಲಿ ಎಲ್ಲರೂ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡುತ್ತದೆ ಎಂದರು.

ಭಾರತದಲ್ಲಿ ಧರ್ಮ ಎಂಬುದು ರಾಷ್ಟ್ರೀಯತೆಗೆ ಎಂದೂ ಕಂಟಕಪ್ರಾಯವಾಗಿರಲಿಲ್ಲ. ಮೂಲಭೂತವಾದವು ಭಯೋತ್ಪಾದನೆಯ ರೂಪ ಪಡೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಧರ್ಮದ ಮೂಲಭೂತವಾದವಾದರೂ ಅದರಿಂದ ದೇಶಕ್ಕೆ ಅಪಾಯವಿದೆ ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಕಾಳೇಗೌಡ ನಾಗವಾರ, ‘ನಾವು ಅಸಹಿಷ್ಣುತೆಯ ನಡುವೆ ಬದುಕುತ್ತಾ ಇದ್ದೇವೆ. ಧಾಬೋಲ್ಕರ್‌ ಹತ್ಯೆಯೊಂದಿಗೆ ಪುಣೆಯಲ್ಲಿ ಆರಂಭವಾದ ಅಸಹಿಷ್ಣುತೆಯ ಕರಾಳತೆ ಬೆಂಗಳೂರಿನವರೆಗೆ ಚಾಚಿದೆ. ಆದರೆ ಜ್ಞಾನವನ್ನು ಕಿತ್ತುಕೊಳ್ಳಲು ಯಾವ ಶಕ್ತಿಗೂ ಸಾಧ್ಯವಿಲ್ಲ’ ಎಂದರು.

ದೇಶದಲ್ಲಿ ಸಂಪತ್ತಿನ ವಿಕೇಂದ್ರೀಕರಣ ನಡೆಯಬೇಕು. ಜನರ ಕೋಟ್ಯಂತರ ಹಣ ತಿರುಪತಿ, ಧರ್ಮಸ್ಥಳ ಮುಂತಾದ ದೇವಸ್ಥಾನಗಳಲ್ಲಿ ಕೊಳೆಯುತ್ತಿದೆ ಎಂದು ಹೇಳಿದರು.

***

‘ಅಸಹಿಷ್ಣುತೆಯಿಂದ ಆತ್ಮಹತ್ಯೆ’

‘ಅಸಹಿಷ್ಣುತೆ ವಿಷಮ ವಿಸ್ತಾರ’ ಕುರಿತು ಮಾತನಾಡಿದ ವೀರಣ್ಣ ದಂಡೆ, ಬದುಕಿನ ಬಗ್ಗೆಯೇ ಶಂಕೆ ವ್ಯಕ್ತಪಡಿಸಿ ಆತ್ಮಹತ್ಯೆಗೆ ಶರಣಾಗುವುದು ಕೂಡಾ ಅಸಹಿಷ್ಣುತೆಯ ಭಾಗವಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಇದಕ್ಕೆ ಉತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟರು.

ಕುಟುಂಬವನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂಬ ಚಿಂತೆಯಿಂದ ರೂಪುಗೊಳ್ಳುವ ಅಸಹಿಷ್ಣುತೆಯಿಂದ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ ಎಂದು ಹೇಳಿದರು.

ಅಸಹಿಷ್ಣುತೆಯು ಮಾನಸಿಕ ಸಂಕೀರ್ಣತೆ ಆಗಿದೆ. ಅದು ಯಾರಲ್ಲಿ ಇದೆ, ಯಾರಲ್ಲಿ ಇಲ್ಲ ಎಂಬುದನ್ನು ಸುಲಭವಾಗಿ ಹೇಳಲಾಗದು. ಮನುಷ್ಯನ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಅಸಹಿಷ್ಣುತೆ ಕಾಣಬಹುದು. ಎಲ್ಲೆಲ್ಲಿ ಮೌಲ್ಯಗಳ ಕೊರತೆ ಇದೆಯೋ ಅಲ್ಲೆಲ್ಲ ಅಸಹಿಷ್ಣುತೆಯನ್ನು ತಡೆಯಲು ಕಷ್ಟವಾಗುತ್ತದೆ ಎಂದರು.

ಸಹನೆಯ ಕಟ್ಟೆ ಒಡೆದರೆ ಅಸಹನೆಯ ವಿರಾಟರೂಪ ಕಾಣುತ್ತದೆ. ಇನ್ನೊಬ್ಬರ ವಿಚಾರ, ಧರ್ಮಗಳನ್ನು ಸಹಿಸಿಕೊಳ್ಳುವುದು ದೊಡ್ಡ ಗುಣ. ಆದರೆ ಈ ಗುಣ ಎಲ್ಲರಲ್ಲೂ ಬೆಳೆಯಲು ಸಾಧ್ಯವಿಲ್ಲ ಎಂದು ನುಡಿದರು.

***

ಸಾಹಿತ್ಯ ಸಮ್ಮೇಳನದಲ್ಲಿ ಬಹುತ್ವದ ಕುರಿತು ಅರ್ಥಪೂರ್ಣ ಚರ್ಚೆ ನಡೆಯುತ್ತಿದ್ದರೆ, ಉಡುಪಿಯ ಧರ್ಮ ಸಂಸತ್‌ ಏಕತ್ವದ ಸಂದೇಶ ಸಾರುತ್ತಿರುವುದು ದುರಂತ.

ವಿನಯಾ ಒಕ್ಕುಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry