7
ಸಮಾರೋಪದಲ್ಲಿ ಚಂಪಾ ಹೇಳಿಕೆಯ ಸರಿ– ತಪ್ಪು ಚರ್ಚೆ

ಸಾಹಿತ್ಯ–ರಾಜಕಾರಣದ ಹಗ್ಗಜಗ್ಗಾಟ

Published:
Updated:
ಸಾಹಿತ್ಯ–ರಾಜಕಾರಣದ ಹಗ್ಗಜಗ್ಗಾಟ

ಮೈಸೂರು: ಜಾತ್ಯತೀತ ಪಕ್ಷಗಳಿಗೆ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎನ್ನುವ ಡಾ.ಚಂದ್ರಶೇಖರ ಪಾಟೀಲರ ಹೇಳಿಕೆ ಕುರಿತಾದ ಪಾಟೀಸವಾಲಿಗೆ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ವೇದಿಕೆಯಾಯಿತು.

‘ಯಾರಿಗೆ ಮತ ಚಲಾಯಿಸಬೇಕು ಎಂದು ಸಲಹೆ ನೀಡಲಿಕ್ಕೆ ಸಾಹಿತ್ಯ ಸಮ್ಮೇಳನ ವೇದಿಕೆಯಾಗಬಾರದಿತ್ತು’ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಟೀಕಿಸಿದರೆ, ’ಕೋಮುವಾದಿಗಳಿಗೆ ಮತ ಹಾಕಿ ಎಂದು ಚಂಪಾ ಹೇಳಬೇಕಿತ್ತೇ?’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್‌.ಕೆ.ಪಾಟೀಲ ಕುಟುಕಿದರು.

‘ಸಮ್ಮೇಳನದಲ್ಲಿ ರಾಜಕೀಯ ಚರ್ಚೆ ಬೇಕಿರಲಿಲ್ಲ. ಅದನ್ನು ಬೇರೆ ವೇದಿಕೆಗಳಲ್ಲಿ ಪ್ರಸ್ತಾಪಿಸಬೇಕಿತ್ತು. ಇಂಥವರಿಗೇ ಮತ ಹಾಕಿ ಎಂದು ಹೇಳಿರು

ವುದು ಸರಿಯಲ್ಲ’ ಎಂದು ಅನಂತ ಕುಮಾರ್‌ ಹೇಳಿದರು.

ಡೋಂಗಿ ಜ್ಯಾತತೀತವಾದಿಗಳಿಂದ ದೇಶಕ್ಕೆ ಬೆದರಿಕೆಯಿದೆ. ಅಫ್ಜಲ್ಗುರುವಿಗೆ ಗಲ್ಲು ಶಿಕ್ಷೆಯನ್ನು ವಿರೋಧಿಸುವ ಇವರು, ಕಾಶ್ಮೀರದಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಾರೆ. ಇಂತಹವರ ರಾಜಕಾರಣಕ್ಕೆ ಸಮ್ಮೇಳನದ ವೇದಿಕೆ ದುರುಪಯೋಗ ಆಗಬಾರದಿತ್ತು ಎಂದು ಅವರು ಹೇಳಿದರು.

ಕನ್ನಡ ಉಳಿಯಬೇಕಾದರೆ ಕನ್ನಡದ ಸಮಗ್ರ ಸಾಹಿತ್ಯ ಡಿಜಿಟಲೀಕರಣ ಆಗಬೇಕು ಎಂದ ಅವರು, ಕನ್ನಡದ ವಾಹಿನಿಗಳಲ್ಲಿ ಆ್ಯಂಕರ್‌ಗಳು ಬಳಸುವ ಕಂಗ್ಲಿಷ್‌ ಕರ್ಕಶವಾಗಿದೆ. ಇದರಿಂದ ಭಾಷೆ ಹಾಗೂ ಸಂಸ್ಕೃತಿ ನಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅನಂತಕುಮಾರ್ ಮಾತುಗಳಿಗೆ ಪ್ರತಿಕ್ರಿಯಿಸಿದ ಎಚ್‌.ಕೆ.ಪಾಟೀಲ, ’ಜಾತಿವಾದಿಗಳ ಮೇಲೆ ಸಮ್ಮೇಳನಾಧ್ಯಕ್ಷರು ಸರಿಯಾದ ಚಾಟಿ ಬೀಸಿದ್ದಾರೆ. ಇದು ಅವರಿಗಷ್ಟೇ ಸಾಧ್ಯವಾಗುವ ಮಾತು. ಇಂತಹ ಮಾತುಗಳು ಸಮ್ಮೇಳನದಲ್ಲಿ ಹೊರಹೊಮ್ಮಿದ್ದು ಸರಿ’ ಎಂದರು.

’ಬುದ್ಧಿಹೀನ ಮಹಾರಾಷ್ಟ್ರ ನಾಯಕರು ಬೆಳಗಾವಿ ನಮ್ಮದು ಎಂದು ಹೇಳುತ್ತಾರೆ. ಇನ್ನು ಮುಂದೆಯೂ ಹೀಗೆ ಮಾತನಾಡಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ’ಕೆಲವು ಕಾರ್ಪೋರೇಟರ್‌ಗಳು ಕ್ಷುಲ್ಲಕ ಕಾರಣಕ್ಕೆ ಮುಗಿದುಹೋದ ಗಡಿ ವಿವಾದ ಕೆದಕುತ್ತಿದ್ದಾರೆ. ಕೋರ್ಟ್ ಛೀಮಾರಿ ಹಾಕಿದ್ದರೂ ಮಹಾರಾಷ್ಟ್ರದವರಿಗೆ ಬುದ್ದಿ ಬಂದಿಲ್ಲ’ ಎಂದರು.

ಎಚ್‌ಎಸ್‌ವಿ ಸಮರ್ಥನೆ: ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದು ತಪ್ಪೇನೂ ಅಲ್ಲ ಎಂದು ಸಮಾರೋಪ ಭಾಷಣ ಮಾಡಿದ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

’ಆಶಯ ಹಾಗೂ ವಾಸ್ತವದ ನಡುವೆ ಸಾಕಷ್ಟು ಕಂದರವಿದೆ. ಈ ಅಂತರವನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ನಾಡಿನ ಹೋಟೆಲ್‌ಗಳಲ್ಲಿ ಇಂಗ್ಲಿಷ್‌ ಪತ್ರಿಕೆಗಳು ದೊರೆಯುತ್ತಿವೆ ಎನ್ನುವುದನ್ನು ನಾವು ಗಮನಿಸಬೇಕು. ವಿಶ್ವವೇ ಕನ್ನಡದ ಬಗ್ಗೆ ನೋಡುತ್ತಿದೆ. ಆದರೆ ನಾವು ಕನ್ನಡದಿಂದ ದೂರ ಸರಿಯುತ್ತಿದ್ದೇವೆ’ ಎಂದವರು ಹೇಳಿದರು.

ಜಾತ್ಯತೀತತೆ ಎಂದರೆ ಅವರಿಗೆ ಭಯ!

’ಜಾತ್ಯತೀತತೆಯ ಬಗ್ಗೆ ಮಾತನಾಡಿದರೆ ಅನಂತಕುಮಾರ್‌ ಅಂಥವರು ಕನಸಿನಲ್ಲೇ ಮೂತ್ರ ಮಾಡಿಕೊಳ್ಳುತ್ತಾರೆ’ ಎಂದು ತಮ್ಮ ಕುರಿತ ಟೀಕೆಗೆ ಚಂಪಾ ಪ್ರತಿಕ್ರಿಯಿಸಿದರು.

’ಅಧ್ಯಕ್ಷ ಭಾಷಣದಲ್ಲಿ ನಾನು ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಮತ ಕೊಡಿ ಎಂದು ಹೇಳಿಲ್ಲ. ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಜಾತ್ಯತೀತ ಪಕ್ಷಕ್ಕೆ ಮತ ನೀಡುವಂತೆ ಹೇಳಿರುವುದು ಅವರಿಗೆ ಅರ್ಥವಾಗಿಲ್ಲ. ಅವರನ್ನು ರಿಪೇರಿ ಮಾಡಲು ಸಾಧ್ಯವೂ ಇಲ್ಲ’ ಎಂದರು. ಭಾಷಣ ಮುಗಿಸಿದ ನಂತರ ಕಾರ್ಯಕ್ರಮದಿಂದ ನಿರ್ಗಮಿಸಿದ ಅನಂತಕುಮಾರ್‌ ಕುರಿತು ಬೇಸರ ವ್ಯಕ್ತಪಡಿಸಿದ ಅವರು, ’ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಮಾತನಾಡಬಾರದು ಎನ್ನುವ ಕೇಂದ್ರ ಸಚಿವರು, ಈ ವೇದಿಕೆಯಲ್ಲಿ ಮಾತನಾಡಿದ್ದು ಕೂಡ ರಾಜಕೀಯವನ್ನೇ’ ಎಂದರು.

ಅಭಿವೃದ್ಧಿ ಪ್ರಾಧಿಕಾರದ ವರದಿ ಜಾರಿಗೆ ನಿರ್ಣಯ

ಮೈಸೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ವರದಿಗಳನ್ನು ಜಾರಿಗೊಳಿಸುವುದು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ದೊರಕಿಸಿಕೊಡುವುದು ಸೇರಿದಂತೆ ಎರಡು ನಿರ್ಣಯಗಳನ್ನು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಂಡಿದೆ.

ಸರ್ಕಾರಿ ಶಾಲೆಗಳ ಸಬಲೀಕರಣ, ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಕೆ ವರದಿಗಳ ಜೊತೆಗೆ ಸರೋಜಿನಿ ಮಹಿಷಿ ಸಮಿತಿಯ ಪರಿಷ್ಕೃತ ವರದಿಯನ್ನು ಜಾರಿಗೊಳಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

’ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕೂಡಲೇ ಮಾನ್ಯತೆ ನೀಡಬೇಕು ಎಂದು ನಿರ್ಣಯಿಸಿ, ಸರ್ಕಾರವನ್ನು ಒತ್ತಾಯಿಸುತ್ತದೆ’ ಎನ್ನುವುದು ಸಮ್ಮೇಳನದ ಎರಡನೇ ನಿರ್ಣಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry