ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶ್‌–ರಾಧಿಕಾ ವೀಕ್ಷಿಸಲು ನೂಕುನುಗ್ಗಲು

Last Updated 27 ನವೆಂಬರ್ 2017, 5:47 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಶಾಸಕ ಮಾನಪ್ಪ ವಜ್ಜಲ್‌ ಅವರು ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಚಲನಚಿತ್ರ ನಟ ಯಶ್‌–ರಾಧಿಕಾ ದಂಪತಿಯನ್ನು ಹತ್ತಿರದಿಂದ ವೀಕ್ಷಿಸುವ ಕುತೂಹಲದಿಂದಾಗಿ ಜನರ ನಡುವೆ ನೂಕುನುಗ್ಗಲು ಉಂಟಾಯಿತು.

ವೇದಿಕೆಯತ್ತ ಧಾವಿಸಿದ ಜನರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ವಿಶಾಲವಾಗಿ ಹಾಕಿದ್ದ ಮದುವೆ ಮಂಟಪದಲ್ಲಿ ಗದ್ದಲ ಏರ್ಪಟ್ಟಿತು. ಇದರಿಂದ ನಟ ಯಶ್‌–ರಾಧಿಕಾ ಅವರು ನೂತನ ಜೋಡಿಗಳಿಗೆ ಶುಭ ಕೋರಿದ ತಕ್ಷಣವೆ ವೇದಿಕೆಯಿಂದ ನಿರ್ಗಮಿಸಿದರು.

ಜನರನ್ನು ಚದರಿಸಲು ಪೊಲೀಸರು ಲಘು ಲಾಠಿ ಬೀಸಿದರು. ಇದರಿಂದ ರೊಚ್ಚಿಗೆದ್ದ ಜನರು ಪೊಲೀಸರ ಮೇಲೆ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ತೂರಿದ ಪ್ರಸಂಗವೂ ನಡೆಯಿತು.

ಕೆಲವರು ಕುರ್ಚಿಗಳನ್ನು ಮುರಿದು, ಅದರ ತುಂಡುಗಳನ್ನು ಎಸೆದರು. ಯಶ್‌ ದಂಪತಿಯ ನಿರ್ಗಮನದ ಬಳಿಕ ಪರಿಸ್ಥಿತಿ ಶಾಂತವಾಯಿತು. ನೂತನವಾಗಿ ಹಸೆಮಣೆ ಏರಿದ ಜೋಡಿಗಳು ಗದ್ದಲದ ವಾತಾವರಣದಲ್ಲಿ ಸಂಕಷ್ಟ ಪಡಬೇಕಾಯಿತು.

ಪಟ್ಟಣದ ಮಧ್ಯೆ ನಿರ್ಮಿಸಿದ್ದ ಮದುವೆ ಮಂಟಪದಿಂದ ಹೊರವಲಯದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‌ವರೆಗೂ ಸುಮಾರು ಮೂರು ಕಿಲೋ ಮೀಟರ್‌ವರೆಗೂ ಜನಜಂಗುಳಿ ಏರ್ಪಟ್ಟಿತ್ತು. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ನಾಲ್ಕು ಹೆಲಿಕಾಪ್ಟರ್‌ಗಳಲ್ಲಿ ಬಂದಿದ್ದರು. ಹೆಲಿಕಾಪ್ಟರ್‌ ವೀಕ್ಷಿಸಲು ಹಾಗೂ ದೂರದಿಂದ ಅವುಗಳ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂತು.

ನಟ ಯಶ್‌–ರಾಧಿಕಾ ಜೋಡಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಹಕಾರ ಸಚಿವ ರಮೇಶ ಜಾರಕಿಹೊಳಿ ಅವರು ಪ್ರತ್ಯೇಕ ಹೆಲಿಕಾಪ್ಟರ್‌ಗಳಲ್ಲಿ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT