7

‘ಮತ ಗಳಿಕೆಗೆ ಸರ್ಕಾರದ ಟಿಪ್ಪು ಜಯಂತಿ’

Published:
Updated:

ವಿಜಯಪುರ: ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಗಳಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಟಿಪ್ಪು ಜಯಂತಿ ಮಾಡಿದೆಯೇ ಹೊರತು ಜನಾಂಗದ ಅಭಿವೃದ್ಧಿಗಾಗಿ ಅಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಇಮ್ರಾನ್ ಪಾಷಾ ಹೇಳಿದರು.

ದಾದಾಪೀರ್‌ ದರ್ಗಾ ಮೊಹಲ್ಲಾದಲ್ಲಿ ಶನಿವಾರ ಆಯೋಜಿಸಿದ್ದ ಹಜರತ್ ಸಯ್ಯದನಾ ದಾದಾಪೀರ್ ಬಾಬಾ ಅವರ ಗಂಧಾ ಮತ್ತು ಉರುಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಟಿಪ್ಪು ಜಯಂತಿಗಿಂತ ವಿಶ್ವವಿದ್ಯಾಲಯ ನಿರ್ಮಾಣ ಮಾಡುವ ಮೂಲಕ ಜನಾಂಗದ ಅಭಿವೃದ್ಧಿಗಾಗಿ ಸಹಕಾರ ನೀಡಬೇಕು. ರೇಷ್ಮೆಯನ್ನು ಪರಿಚಯಿಸಿ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರ ಮಾಡಿಕೊಟ್ಟ ಅವರ ಸೇವೆ ಶ್ಲಾಘನೀಯ ಎಂದರು.

ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ, ಇಬ್ಬರು ಮಕ್ಕಳನ್ನು ಒತ್ತೆಯಿಟ್ಟ ಸೇನಾನಿಯ ಜೀವನ ಆದರ್ಶವಾಗಿಟ್ಟುಕೊಂಡು ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಎಲ್ಲಾ ಸಮುದಾಯಗಳೊಟ್ಟಿಗೆ ಸಮನ್ವಯತೆ ಕಾಪಾಡಿಕೊಂಡು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಾಜ ಉತ್ತಮವಾಗಿ ರೂಪಿಸಬೇಕು ಎಂದರು.

ಪುರಸಭಾ ಸದಸ್ಯ ಆರ್.ಸಿ.ಮಂಜುನಾಥ್ ಮಾತನಾಡಿ, ಎಲ್ಲಾ ಸಮುದಾಯಗಳ ಜನರು ಪ್ರೀತಿ, ವಿಶ್ವಾಸಗಳಿಂದ ಜೀವನ ಮಾಡುತ್ತಿರುವ ನಗರ ವಿಜಯಪುರವಾಗಿ, ಎಲ್ಲಾ ವಿಚಾರಗಳಲ್ಲಿ, ವ್ಯಾಪಾರ ವಹಿವಾಟುಗಳು ಸೇರಿದಂತೆ ಧಾರ್ಮಿಕವಾದ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಗ್ಗೂಡಿ ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಸೌಹಾರ್ಧಯುತವಾದ ವಾತಾವರಣ ಮುಂದಿನ ಪೀಳಿಗೆಯು ಪಾಲನೆ ಮಾಡಿಕೊಂಡು ಬರಬೇಕು. ಭಾವೈಕ್ಯತೆ ಅವರಿಗೆ ಮನಮುಟ್ಟುವಂತೆ ತಿಳಿಸಿಕೊಡಬೇಕು ಎಂದರು.

ಮಾದಿಗ ದಂಡೊರ ರಾಜ್ಯ ಘಟಕದ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಎಲ್ಲಾ ಧರ್ಮಗಳ ಪ್ರತಿಯೊಬ್ಬ ಮಾನವರು ಸತ್ತ ನಂತರ ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವುದು ಸಹಜ ಪ್ರಕ್ರಿಯೆ, ಇಲ್ಲಿ ಬದುಕಿರುವವರೆಗೂ ಮಾಡುವಂತ ಉತ್ತಮವಾದ ಕಾರ್ಯಗಳು, ದೇವರು ನಮಗೆ ಕೊಟ್ಟಿರುವ ಆತ್ಮ ಪರಿಶುದ್ಧಗೊಳಿಸಿಕೊಳ್ಳುವ ಮೂಲಕ ದೇವರನ್ನು ಹೃದಯಗಳಲ್ಲಿ ನೆಲೆಸುವಂತೆ ಮಾಡಿಕೊಂಡರೆ ಮಾತ್ರವೇ ಮುಕ್ತಿ ಸಿಗಲು ಸಾಧ್ಯ ಎಂದರು.

ಎಲ್ಲಾ ಧರ್ಮಗಳ ಜನರು ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. ಜಾತಿ, ಧರ್ಮಗಳನ್ನು ಹೊರಗಿಟ್ಟು ನಾವೆಲ್ಲರೂ ಮಾನವರು ಎಂಬುದನ್ನು ಅರ್ಥ ಮಾಡಿಕೊಂಡು ಬದುಕಬೇಕಾಗಿದೆ ಎಂದರು. ಕೋಲಾರಕ್ಕೆ ವರ್ಗಾವಣೆಗೊಂಡಿರುವ ಪೊಲೀಸ್ ಸಬ್ ಇನ್‌ ಸ್ಪೆಕ್ಟರ್‌ ಎಂ.ಶ್ರೀನಿವಾಸ್ ಅವರನ್ನು ಸನ್ಮಾನಿಸಿದರು. ಕವ್ವಾಲಿ ಕಾರ್ಯಕ್ರಮ ಎಲ್ಲರ ಮನಸೆಳೆಯಿತು.

ದೇವನಹಳ್ಳಿ ಪುರಸಭಾ ಅಧ್ಯಕ್ಷ ನರಸಿಂಹಮೂರ್ತಿ, ಪುರಸಭಾ ಸದಸ್ಯರಾದ ಎಸ್.ಭಾಸ್ಕರ್, ಜೆ.ಎನ್.ಶ್ರೀನಿವಾಸ್, ಮುಖಂಡರಾದ ಭರತ್, ಎಚ್.ಎಂ.ಕೃಷ್ಣಪ್ಪ, ಎನ್.ನಾರಾಯಣಸ್ವಾಮಿ, ಹನೀಪುಲ್ಲಾ, ಸುರೇಶ್, ಸೈಪುಲ್ಲಾ, ಮೆಹಬೂಬ್ ಪಾಷ, ಎಜಾಜ್ ಅಹ್ಮದ್, ಜೆಡಿಎಸ್ ನಗರ ಯುವ ಘಟಕದ ಅಧ್ಯಕ್ಷ ಕಿರಣ್, ಜೆಡಿಎಸ್ ನಗರದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ, ವಿ.ರಾ.ಶಿವಕುಮಾರ್, ಕಾರ್ಯದರ್ಶಿ ಮೋಹನ್ ಶ್ರೀವತ್ಸ, ಫೈಜಲ್ ಇದ್ದರು.

ಧರ್ಮಗಳ ಸಮ್ಮಿಲನವೇ ಭಾರತ ದೇಶ

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಹಿಂದೂ, ಮುಸ್ಲಿಂ , ಕ್ರೈಸ್ತ , ಜೈನ, ಪಾರ್ಸಿ, ಬೌದ್ಧ ಧರ್ಮಗಳು ಸೇರಿದಂತೆ ಹಲವಾರು ಧರ್ಮಗಳ ಸಮ್ಮಿಲನವೇ ಭಾರತ ದೇಶ. ಎಲ್ಲಾ ಧರ್ಮಗಳ ಜನರು ಸ್ವಾಭಿಮಾನದಿಂದ ಬದುಕಲು ಅವಕಾಶವಿದೆ ಎಂದರು.

ದರ್ಗಾಗಳಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಏಕತೆಯಿಂದ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡುವ ಇಂತಹ ವಾತಾವರಣದಿಂದ ಭಾವೈಕ್ಯ ಹೆಚ್ಚಾಗಲಿದೆ. ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry