3

ಐವರು ನಕಲಿ ಅಧಿಕಾರಿಗಳ ಬಂಧನ

Published:
Updated:

ಬೀದರ್: ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ)ಯ ಅಧಿಕಾರಿಗಳೆಂದು ಪರಿಚಯಿಸಿಕೊಂಡು ವೈದ್ಯರನ್ನು ವಂಚಿಸಲು ಯತ್ನಿಸಿದ ಇಬ್ಬರು ಮಹಿಳೆಯರು ಸೇರಿ ಐವರನ್ನು ಇಲ್ಲಿನ ಮಾರ್ಕೆಟ್‌ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿನಗರದ ಸುನೀಲ್ ನಾಗೇಶ್‌, ವಕೀಲೆ ಪ್ರಿಯದರ್ಶಿನಿ ಅಯ್ಯರ್, ಕಾರು ಚಾಲಕರಾದ ಗಣಪತಿಪುರ ಅಪ್ಪಣ್ಣ ಗಾರ್ಡನ್‌ನ ಜಿನಿತ್‌ ಶಿವನಗೌಡ, ಕೆಂಗೇರಿ ಕಾಮಯ್ಯನಪಾಳ್ಯದ ಪುನೀತ್ ಜಯರಾಮ್, ವಕೀಲೆಯಾಗಿರುವ ಮೈಸೂರಿನ ಲಷ್ಕರ್‌ ಮೊಹಲ್ಲಾದ ಮಂಜುಳಾ ಶಿವಣ್ಣ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

‘ಆರೋಪಿಗಳು ಎರಡು ದಿನಗಳ ಹಿಂದೆ ನಗರದ ಹಬ್ಸಿಕೋಟ್‌ ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದರು. ಬ್ರಿಮ್ಸ್ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಯಲ್ಲೂ ಕೆಲಸ ಮಾಡುವುದನ್ನು ಖಚಿತಪಡಿಸಿಕೊಂಡು ನವೆಂಬರ್‌ 24 ರಂದು ಬಾವಗಿ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆ ಮೇಲೆ ದಾಳಿ ನಡೆಸಿದಂತೆ ನಾಟಕವಾಡಿದ್ದರು. ತನಿಖೆ ನಡೆಸಿ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗವುದು. ಅದಕ್ಕೂ ಮುಂಚೆ ಹಣಕೊಟ್ಟು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ವೈದ್ಯರಿಗೆ ಸೂಚಿಸಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ತಿಳಿಸಿದ್ದಾರೆ.

‘ಬಾವಗೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಮಂಜುನಾಥ ಶರಣಪ್ಪ ಅವರಿಗೆ ಅನುಮಾನ ಬಂದು ಗುರುತಿನ ಚೀಟಿ ಕೇಳಿದ್ದಾರೆ. ಗೆಸ್ಟ್‌ಹೌಸ್‌ಗೆ ಬಂದರೆ ಗುರುತಿನ ಚೀಟಿ ತೋರಿಸುವುದಾಗಿ ದಾಳಿ ಮಾಡಿದ ವ್ಯಕ್ತಿಗಳು ನಂಬಿಸಿದ್ದಾರೆ. ಮರುದಿನ ಡಾ.ಮಂಜುನಾಥ ಅವರು ಕಾಂಪೌಂಡರ್ ನಾಗರಾಜ ಹಾಗೂ ಮಹೇಶ ಬಾವಗೆ ಅವರೊಂದಿಗೆ ಗೆಸ್ಟ್‌ಹೌಸ್‌ಗೆ ಬಂದಾಗ ಕೇಳಿದಷ್ಟು ಹಣಕೊಡುವಂತೆ ಒತ್ತಡ ಹಾಕಿದ್ದಾರೆ. ಡಾ.ಮಂಜುನಾಥ ಅವರು ತಮ್ಮ ಗೆಳೆಯರಿಗೆ ಮೊಬೈಲ್‌ ಕರೆ ಮಾಡಿ ವಿಚಾರಿಸಿದಾಗ ಇದೇ ತಂಡ ನವಜೀವನ ಆಸ್ಪತ್ರೆಗೂ ಹೋಗಿ ಹಣ ಕೇಳಿರುವುದು ಗೊತ್ತಾಗಿದೆ. ಡಾ. ಮಂಜುನಾಥ ಅವರು ಸಂಜೆ ದೂರು ನೀಡಿದ ನಂತರ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಅವರು ಹೇಳಿದ್ದಾರೆ.

ಅಪರಿಚಿತ ವ್ಯಕ್ತಿಗಳು ಅಧಿಕಾರಿಗಳೆಂದು ಪರಿಚಯಿಸಿಕೊಂಡು ಹಣ ವಸೂಲಿ ಮಾಡಲು ಯತ್ನಿಸಿದರೆ ತಕ್ಷಣ ಪೊಲೀಸರಿಗೆ ದೂರು ಕೊಡುವಂತೆ ಡಿ.ದೇವರಾಜ್‌ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry