ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲನೆಯಾಗದ ಸಂಚಾರ ನಿಯಮ

Last Updated 27 ನವೆಂಬರ್ 2017, 6:40 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆ ಅಭಿವೃದ್ಧಿಯಲ್ಲಿ ಅಷ್ಟೇ ಹಿಂದುಳಿದಿಲ್ಲ, ಸಂಚಾರ ನಿಯಮಗಳನ್ನು ಪಾಲಿಸುವಲ್ಲಿಯೂ ಹಿಂದುಳಿದಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಮೂರು ತಿಂಗಳಿಂದ ಜನರಿಗೆ ತಿಳಿವಳಿಕೆ ನೀಡುತ್ತಲೇ ಇದ್ದಾರೆ. ಆದರೂ ಬಹುತೇಕ ಜನ ನಿಯಮ ಪಾಲನೆಗೆ ಹಿಂದೇಟು ಹಾಕುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳ ಸುಧಾರಣೆ ಕಾರ್ಯ ಆರಂಭವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯ ಸಂದರ್ಭದಲ್ಲಿ ಬಸ್‌ ನಿಲ್ದಾಣದಿಂದ ಮಡಿವಾಳ ವೃತ್ತದ ವರೆಗಿನ ದ್ವಿಪಥ ರಸ್ತೆಯ ಪೈಕಿ ಒಂದು ಬದಿ ಮಾತ್ರ ಡಾಂಬರೀಕರಣ ಮಾಡಲಾಗಿತ್ತು. ಒಂದು ವಾರದ ಹಿಂದೆ ಇನ್ನೊಂದು ಬದಿಯ ರಸ್ತೆಯನ್ನೂ ಡಾಂಬರೀಕರಣ ಮಾಡಲಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಒಂದಾದರೂ ಚೆಂದದ ರಸ್ತೆ ಇದೆಯಲ್ಲ ಎಂದು ಸಮಾಧಾನ ಪಡುವಷ್ಟರ ಮಟ್ಟಿಗೆ ರಸ್ತೆಯನ್ನು ಸುಧಾರಣೆ ಮಾಡಲಾಗಿದೆ. ರಸ್ತೆಯ ಅಂಚಿನಲ್ಲಿ ಲೈನ್‌ ಮಾರ್ಕ್‌ ಹಾಕಲಾಗಿದೆ. ಅಗ್ನಿಶಾಮಕ ದಳದ ಕಚೇರಿಯಿಂದ ಜಿಲ್ಲಾಧಿಕಾರಿ ನಿವಾಸದ ವರೆಗಿನ ರಸ್ತೆಯನ್ನೂ ಸುಧಾರಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆ ಮಾತ್ರ ಇವತ್ತಿಗೂ ದುಃಸ್ಥಿತಿಯಲ್ಲಿಯೇ ಇದೆ.

ಲೈನ್‌ ಮಾರ್ಕ್‌ ಮಾಡಿದ ರಸ್ತೆಗಳ ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ದ್ವಿಚಕ್ರ ವಾಹನ ಸವಾರರು ಅಚ್ಚುಕಟ್ಟಾಗಿ ವಾಹನ ನಿಲುಗಡೆ ಮಾಡುವ ಅಭ್ಯಾಸ ಮಾಡಿಕೊಂಡಿಲ್ಲ. ಕಾರು, ಆಟೊ ಚಾಲಕರು ರಸ್ತೆ ಮೇಲೆ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡುವುದನ್ನು ಮಂದುವರಿಸಿದ್ದಾರೆ.

ಬೀದರ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗುರುನಾನಕ ಗೇಟ್‌ ಸಮೀಪ ಝಿಬ್ರಾ ಕ್ರಾಸಿಂಗ್‌ ನಿರ್ಮಿಸಲಾಗಿದೆ. ನಗರದಲ್ಲಿನ ಟ್ರಾಫಿಕ್‌ ಲೈಟ್‌ಗಳನ್ನು ನಗರಸಭೆಯ ನೆರವಿನೊಂದಿಗೆ ದುರಸ್ತಿ ಮಾಡಿಸಲಾಗಿದೆ. ಆದರೆ, ಜನ ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ.

ಟ್ರಾಫಿಕ್‌ನಲ್ಲಿ ಕೆಂಪು ದೀಪ ಚಾಲು ಇರಲಿ, ಬಂದ್‌ ಆಗಿರಲಿ ಕೆಲವರು ಇದಾವುದನ್ನೂ ಲೆಕ್ಕಿಸದೆ ವೃತ್ತದ ಮಧ್ಯದಿಂದಲೇ ನಡೆದುಕೊಂಡು ಹೋಗಿ ಅಪಾಯವನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಪೊಲೀಸರು ವಿಸಲ್‌ ಹಾಕಿ, ಜೋರಾಗಿ ಕೂಗಿ ರಸ್ತೆ ಪಕ್ಕದಿಂದ ಹೋಗುವಂತೆ ಸೂಚಿಸಿದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪಾದಚಾರಿಗಳಿಗೆ ಸಂಚಾರ ನಿಯಮಗಳ ಬಗೆಗೆ ತಿಳಿವಳಿಕೆ ನೀಡುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ವಾರದ ಹಿಂದೆ ಈಶಾನ್ಯ ವಲಯ ಪೊಲೀಸ್‌ ಮಹಾ ನಿರೀಕ್ಷಕ  ಅಲೋಕಕುಮಾರ ಅವರು ಪೊಲೀಸ್‌ ಅಧಿಕಾರಿಗಳೊಂದಿಗೆ ಬೀದಿಗಿಳಿದು ಸಂಚಾರ ನಿಯಮ ಉಲ್ಲಂಘಿಸಿ ಸಾಗುತ್ತಿದ್ದ ಬೈಕ್‌ ಚಾಲಕರನ್ನು ತಡೆದು ನಿಲ್ಲಿಸಿ ತಿಳಿವಳಿಕೆ ನೀಡಿ ಕಳಿಸಿದ್ದಾರೆ. ಸುರಕ್ಷತೆಗಾಗಿ ಕಡ್ಡಾಯವಾಗಿ  ಹೆಲ್ಮೇಟ್‌ ಧರಿಸುವಂತೆ ಬೈಕ್‌ ಸವಾರರಿಗೆ ಹೇಳುತ್ತಲೇ ಇದ್ದಾರೆ. ಆದರೆ ಈಗಲೂ ಕೆಲವರು ಹೆಲ್ಮೇಟ್‌ ಇಲ್ಲದೆ ವಾಹನ ಓಡಿಸುತ್ತಿದ್ದಾರೆ.

ಹೆಲ್ಮೇಟ್‌ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವ ಸವಾರರನ್ನು ತಡೆದು ದಂಡ ವಿಧಿಸಲಾಗುತ್ತಿದೆ. ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಸಾರ್ವಜನಿಕರಲ್ಲಿ ಸಂಚಾರ ನಿಯಮ ಗಳ ಬಗೆಗೆ ಜಾಗೃತಿ ಮೂಡಿಸಲು ಇನ್ನೂ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್ ಹೇಳುತ್ತಾರೆ.

* * 

ಗರದಲ್ಲಿ ಸಂಚಾರ ವ್ಯವಸ್ಥೆ ಯನ್ನು ಸುಗಮಗೊಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಸಂಚಾರ ಫಲಕ ಅಳವಡಿಕೆಗೆ ನಗರಸಭೆ ಈಗಾಗಲೇ ₹ 12 ಲಕ್ಷ ಅನುದಾನ ಒದಗಿಸಿದೆ.
ಡಿ.ದೇವರಾಜ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT