ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಮುಂಜಾಗ್ರತೆಯಿಲ್ಲದೆ ಕಟ್ಟಡ ತೆರವು

Last Updated 27 ನವೆಂಬರ್ 2017, 6:45 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಿದ್ಧತೆಗಳು ಭರದಿಂದ ಸಾಗಿದೆ. ಡಿವಿಯೇಷನ್ ರಸ್ತೆ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ನ್ಯಾಯಾಲಯ ರಸ್ತೆ, ಬಿ. ರಾಚಯ್ಯ ಜೋಡಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ವಿಸ್ತರಣೆಗಾಗಿ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಹೆಚ್ಚಿನ ಕಡೆ ಕಟ್ಟಡ ಮಾಲೀಕರೇ ಸ್ವತಃ ತೆರವು ಕಾರ್ಯಗಳನ್ನು ನಡೆಸುತ್ತಿದ್ದಾರೆ. ಆದರೆ, ಇಲ್ಲಿ ಸುರಕ್ಷತೆಯನ್ನು ನಿರ್ಲಕ್ಷಿಸಲಾಗುತ್ತಿದೆ.

ರಸ್ತೆ ವಿಸ್ತರಣೆಗಾಗಿ ಒಂದು ಮಹಡಿ ಕಟ್ಟಡದಿಂದ ಮೂರು ನಾಲ್ಕು ಅಂತಸ್ತಿನವರೆಗಿನ ಕಟ್ಟಡಗಳನ್ನು ಕತ್ತರಿಸಲಾಗುತ್ತಿದೆ. ಸುತ್ತಿಗೆ ಮತ್ತು ಯಂತ್ರಗಳನ್ನು ಬಳಸಿ ಗೋಡೆ, ಚಾವಣಿ, ಕಿಟಕಿ–ಬಾಗಿಲು, ಕಂಬಗಳನ್ನು ಒಡೆಯಲಾಗುತ್ತಿದೆ. ಇಲ್ಲೆಲ್ಲೂ ಕೆಲಸಕ್ಕೆ ತೊಡಗಿಕೊಂಡಿರುವ ಕಾರ್ಮಿಕರು ಮತ್ತು ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಹಾಗೂ ಪಾದಚಾರಿಗಳ ಸುರಕ್ಷತೆಗೆ ಯಾವುದೇ ಕ್ರಮಗಳನ್ನು ಅನುಸರಿಸುತ್ತಿಲ್ಲ.

ಅಪಾಯಕಾರಿ ಕೆಲಸ: ಕಾರ್ಮಿಕರು ಕಟ್ಟಡದ ತುದಿಯಲ್ಲಿ ನಿಂತು ದೊಡ್ಡ ಸುತ್ತಿಗೆ ಬಳಸಿ ಗೋಡೆಗಳನ್ನು ಒಡೆಯುತ್ತಾರೆ. ಇಲ್ಲಿ ತುಸು ಆಯ ತಪ್ಪಿದರೂ ಕೆಳಕ್ಕೆ ಬೀಳುವ ಅಪಾಯವಿದೆ. ಅವರು ಬೀಳದಂತೆ ತಡೆಯಲು ಅಥವಾ ಆಧಾರಕ್ಕಾಗಿ ಸಾಧನಗಳನ್ನು ಅಳವಡಿಸಲು ಯಾವುದೇ ಮುನ್ನೆಚ್ಚರಿಕೆ ವಹಿಸುತ್ತಿಲ್ಲ.

ಅಲ್ಲದೆ, ಕಟ್ಟಡ ಕೊರೆಯುವು ದರಿಂದ ಏಳುವ ದೂಳನ್ನು ಕುಡಿಯುವುದು ಕಾರ್ಮಿಕರಿಗೆ ಅನಿವಾರ್ಯವಾಗಿದೆ. ಬಹುಪಾಲು ಕಾರ್ಮಿಕರು ಮುಖಕ್ಕೆ ಮಾಸ್ಕ್‌ ಮತ್ತು ಕೈಕಾಲುಗಳಿಗೆ ರಕ್ಷಣೆಯ ಸಾಧನಗಳಿಲ್ಲದೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಪಾದಚಾರಿಗಳಿಗೂ ಅಪಾಯ: ಜನನಿಬಿಡ ರಸ್ತೆಗಳಲ್ಲಿಯೇ ಕಟ್ಟಡ ತೆರವು ಕಾರ್ಯಗಳು ನಡೆಯುತ್ತಿವೆ. ಇದರಿಂದ ತುಸು ಹೆಚ್ಚು ಕಡಿಮೆ ಆದರೂ ಅಪಾಯ ಕಟ್ಟಿಟ್ಟ ಬುತ್ತಿ. ಕಟ್ಟಡ ತೆರವುಗೊಳಿಸುವಾಗ ಇಟ್ಟಿಗೆ, ಸಿಮೆಂಟ್‌ಗಳ ಅವಶೇಷ ಪಾದಚಾರಿಗಳು ಮತ್ತು ವಾಹನಗಳ ಮೇಲೆ ಬೀಳದಂತೆ ಕ್ರಮವಹಿಸಬೇಕು. ಅವಶೇಷ ಬೀಳುವ ಜಾಗದಲ್ಲಿ ಪ್ಲಾಸ್ಟಿಕ್‌ ಅಥವಾ ಲೋಹದ ಷೀಟ್‌ಗಳನ್ನು ಅಡ್ಡಲಾಗಿ ಇರಿಸಬೇಕು. ಆದರೆ, ಈ ಸುರಕ್ಷತೆಯ ವಿಧಾನಗಳನ್ನು ಎಲ್ಲಿಯೂ ಅನುಸರಿಸುತ್ತಿಲ್ಲ ಎಂದು ದೂರುತ್ತಾರೆ ಸಾರ್ವಜನಿಕರು.

ರಸ್ತೆಯಲ್ಲಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ಹಾಕಿಲ್ಲ. ಒಡೆದ ಅವಶೇಷಗಳು ಅಡ್ಡಾದಿಡ್ಡಿ ಕೆಳಕ್ಕೆ ಬೀಳುತ್ತವೆ. ಕೆಲವೊಮ್ಮೆ ರಸ್ತೆಗೆ ಉರುಳಿಬರುತ್ತವೆ. ಇವು ಕೆಳಕ್ಕೆ ಓಡಾಡುವವರ ಮೈಮೇಲೆ ಬಿದ್ದರೆ ಏನು ಗತಿ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಇತ್ತೀಚೆಗೆ ಅಂಗಡಿಬೀದಿಯಲ್ಲಿ ಗೋಡೆಯ ಭಾಗವೊಂದು ವಿದ್ಯುತ್‌ ಕಂಬದ ಮೇಲೆ ಬಿದ್ದ ಪರಿಣಾಮ ಕಂಬ ನೆಲಕ್ಕುರುಳಿತ್ತು. ಅದೃಷ್ಟವಷಾತ್‌ ಸಮೀಪದಲ್ಲಿ ಜನರು ಇರದಿದ್ದರಿಂದ ಅವಘಡ ಸಂಭವಿಸಲಿಲ್ಲ.

ಜನರಿಂದಲೂ ನಿರ್ಲಕ್ಷ್ಯ: ಕೆಲವೆಡೆ ಕೆಲಸ ಪ್ರಗತಿಯಲ್ಲಿದೆ ಎಂದು ತಡೆ ಹಾಕಿದ್ದರೂ ಜನರು ಅದನ್ನು ಲೆಕ್ಕಿಸದೆ ದಾಟಿ ಸಾಗುತ್ತಾರೆ. ಕೆಲವರು ಸ್ವಲ್ಪದರಲ್ಲಿಯೇ ಅಪಾಯ ತಪ್ಪಿಸಿಕೊಂಡಿದ್ದಾರೆ.

ಅನೇಕರು ನೆಲಕ್ಕೆ ಬಿದ್ದ ಅವಶೇಷಗಳಿಂದ ಕಬ್ಬಿಣವನ್ನು ಬೇರ್ಪಡಿಸಿ ತೆಗೆದುಕೊಳ್ಳಲು ಮುಂದಾ ಗುತ್ತಾರೆ. ಕಾರ್ಯಾಚರಣೆ ನಡೆಯುತ್ತಿರುವಂತೆಯೇ ಕಬ್ಬಿಣ ಹೆಕ್ಕಲು ಅವರು ಪೈಪೋಟಿಗಿಳಿಯುತ್ತಾರೆ. ಇದರಿಂದ ಕೆಲವು ಕೂಲಿ ಕಾರ್ಮಿಕರ ನಡುವೆಯೇ ಜಗಳ ನಡೆದ ಉದಾಹರಣೆಗಳಿವೆ.

ಕಟ್ಟಡ ಮಾಲೀಕರು ಸ್ವತಃ ಕಾರ್ಯಾಚರಣೆ ನಡೆಸಿದರೂ ಅಥವಾ ಜಿಲ್ಲಾಡಳಿತದಿಂದ ನಡೆಸಿದರೂ ಅಲ್ಲಿ ಸುರಕ್ಷತಾ ವಿಧಾನಗಳನ್ನು ಅನುಸರಿಸುತ್ತಿಲ್ಲ. ಅಭಿವೃದ್ಧಿ ಕೆಲಸದಷ್ಟೇ ಜನರ ಪ್ರಾಣವೂ ಮುಖ್ಯ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎನ್ನುತ್ತಾರೆ ಸಾರ್ವಜನಿಕರು. 

* * 

ಕಟ್ಟಡದ ಅವಶೇಷಗಳು ರಸ್ತೆಯ ಮೇಲೆ ಬೀಳದಂತೆ ಎಚ್ಚರವಹಿಸಿ ಕಾರ್ಯಾಚರಣೆ ನಡೆಸಬೇಕು. ತಪ್ಪಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು 
ರಾಕೇಶ್‌, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT