ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ವಿನಯ ವಿರುದ್ಧ ಕಾನೂನು ಹೋರಾಟ: ದೇಸಾಯಿ

Last Updated 27 ನವೆಂಬರ್ 2017, 7:12 IST
ಅಕ್ಷರ ಗಾತ್ರ

ಧಾರವಾಡ: ‘ಜಿಲ್ಲೆ ಸೇರಿದಂತೆ ವಿವಿಧೆಡೆ ಹರಿದಾಡುತ್ತಿರುವ ಅಶ್ಲೀಲ ಪತ್ರಗಳ ಹಿಂದೆ ನನ್ನ ಕೈವಾಡವಿದೆ ಎಂದು ಆಧಾರ ರಹಿತ ಸುಳ್ಳು ಆರೋಪ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಬಿಜೆಪಿ ಮುಖಂಡ ಅಮೃತ ದೇಸಾಯಿ ಹೇಳಿದರು.

‘ನಾನು ಬೇರೆಯವರ ಆಸ್ತಿ ಕಬಳಿಸಿದ್ದೇನೆ. ಬೆದರಿಕೆ ಹಾಕಿದ್ದೇನೆ ಎಂದೂ ಸಚಿವರು ಆಧಾರ ರಹಿತ ಆರೋಪ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂಥ ಕ್ಷುಲ್ಲಕ ಆರೋಪ ಮಾಡುವುದು ಸರಿಯಲ್ಲ. ಆ ಕುರಿತು ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕು. ನಿರಾಧಾರ ಆರೋಪದಿಂದ ಆಘಾತವಾಗಿದ್ದು, ನನ್ನ ಗೌರವಕ್ಕೆ ಚ್ಯುತಿ ಬಂದಿದೆ. ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.   

‘ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಇಂಥ ಅಶ್ಲೀಲ ಹಾಗೂ ಬೆದರಿಕೆ ಪತ್ರಗಳು ಹರಿದಾಡುತ್ತಿವೆ. ಈ ಕುರಿತು ಕೂಲಂಕಷ ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಶಿಕ್ಷೆಗೆ ಗುರಿಪಡಿಸಬೇಕು. ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ ಈ ಕುರಿತು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.  

’ಯೋಗೀಶಗೌಡ ಗೌಡರ ಕೊಲೆಗೂ ಮೊದಲು 2016 ರ ಏಪ್ರಿಲ್ 20ರಂದು (ಪೋಸ್ಟ ಆಗಿದ್ದು ಏ.18) ಸಚಿವ ವಿನಯ ಕುಲಕರ್ಣಿ, ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಸಹೋದರ ವಿಜಯ ಕುಲಕರ್ಣಿ ಹೆಸರಿನಲ್ಲಿ ನನಗೆ ಪತ್ರಗಳು ಬಂದಿವೆ. ಯಾರೋ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಅತೀ ಅಶ್ಲೀಲವಾಗಿ ಪತ್ರ ಬರೆದಿದ್ದು, ಅದನ್ನು ನಿರ್ಲಕ್ಷ್ಯ ಮಾಡಿದ್ದೇನೆ. ಆದರೆ ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ನಾನೇ ಪತ್ರ ಬರೆದಿದ್ದೇನೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ನನಗೆ ಬಂದಿರುವ ಪತ್ರಗಳ ಕುರಿತೂ ಅನುಮಾನ ವ್ಯಕ್ತವಾಗುತ್ತಿದೆ’ ಎಂದ ಅವರು, ಪತ್ರಗಳನ್ನು ಪ್ರದರ್ಶಿಸಿದರು. ಸುದ್ದಿಗೋಷ್ಠಿಯಲ್ಲಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ, ಶಂಕರ ಮುಗದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT