7

ಕೈ ಬೀಸಿ ಕರೆಯುತ್ತಿದೆ ಬಿಂಕದಕಟ್ಟಿ ಮೃಗಾಲಯ

Published:
Updated:
ಕೈ ಬೀಸಿ ಕರೆಯುತ್ತಿದೆ ಬಿಂಕದಕಟ್ಟಿ ಮೃಗಾಲಯ

ಗದಗ: ಉತ್ತರ ಕರ್ನಾಟಕದ ಪ್ರಮುಖ ಪ್ರಾಣಿ ಸಂಗ್ರಹಾಲಯವಾಗಿರುವ ಬಿಂಕದಕಟ್ಟಿ ಮೃಗಾಲಯವು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳ ಸಂಖ್ಯೆಯಲ್ಲೂ ಹೆಚ್ಚಳ ವಾಗಿದ್ದು, ವಾರಾಂತ್ಯದ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ.

40 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಈ ಪ್ರಾಣಿ ಸಂಗ್ರಹಾಲಯಕ್ಕೆ ಇದುವರೆಗೆ ‘ಕಿರು’ ಮೃಗಾಲಯದ ಸ್ಥಾನ ಇತ್ತು. ಎರಡು ತಿಂಗಳ ಹಿಂದಷ್ಟೇ ಇದಕ್ಕೆ ‘ಸಣ್ಣ’ ಮೃಗಾಲಯದ ಮಾನ್ಯತೆ ಲಭಿಸಿದೆ. ಈ ಸ್ಥಾನಮಾನ ಲಭಿಸಿರುವುದರಿಂದ ಮೃಗಾಲಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಲಭಿಸಲಿದೆ. ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರವು ಇತ್ತೀಚೆಗೆ ₹1 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಪ್ರಸ್ತಾವನೆಗೆ ತಾಂತ್ರಿಕ ಅನುಮೋದನೆ ನೀಡಿದೆ.

‘ಪ್ರತಿ ದಿನ ಸರಾಸರಿ 200ರಿಂದ 250 ಪ್ರವಾಸಿಗರು ಭೇಟಿ ನಿಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ 400ರಿಂದ 450 ದಾಟುತ್ತದೆ. ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಮೃಗಾಲಯದ ವರಮಾನ ಹೆಚ್ಚಳಕ್ಕೂ ಕ್ರಮ ವಹಿಸಲಾಗಿದೆ. ಮೈಸೂರು ಮೃಗಾಲಯದಿಂದ ವಾರದ ಹಿಂದಷ್ಟೇ ಇಲ್ಲಿಗೆ ಹೊಸ ಅತಿಥಿಗಳು ಬಂದಿದ್ದಾರೆ. ಶೀಘ್ರದಲ್ಲೇ ಹುಲಿಗಳನ್ನೂ ತರಲಾಗುವುದು’ ಎಂದು ಮೃಗಾಲಯದ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ಹೇಳಿದರು.

‘ಸದ್ಯ ಮೃಗಾಲಯದಲ್ಲಿ 280ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿವೆ. ಜಿಂಕೆ, ಕೃಷ್ಣಮೃಗ, ನೀಲಗಾಯಿ, ಕಡವೆ, ಕರಡಿ, ನರಿ, ಮೊಸಳೆ, ಆವೆು, ಹೆಬ್ಬಾವು ಮತ್ತು ನಾಲ್ಕು ಚಿರತೆಗಳು ಪ್ರಮುಖ ಆಕರ್ಷಣೆ. ಇದರ ಜತೆಗೆ ಇತ್ತೀಚೆಗೆ ಮೈಸೂರು ಮೃಗಾಲಯದಿಂದ ವಿವಿಧ ಜಾತಿಯ 90 ಪಕ್ಷಿಗಳನ್ನು ಇಲ್ಲಿಗೆ ತರಲಾಗಿದೆ. ಇದರಲ್ಲಿ ಕರಿ ಹಂಸ, ಲೇಡಿ ಅಮೆರ್ಸ್ಟ್‌ ಪೆಸೆಂಟ್, ನೈಟ್‌ ಹೆರಾನ್‌, ಬಡ್ಜ್‌ರಿಗರ್‌, ರೋಸ್‌ ರಿಂಗ್ಡ್‌ ಪ್ಯಾರಾಕೀಟ್‌, ಜವಾ ಸ್ಪಾರೋ, ಫಿಂಚಸ್‌, ಬಣ್ಣದ ಕೊಕ್ಕರೆ, ರೆಡ್‌ಜಂಗಲ್‌ ಪೌಲ್‌, ರೋಸ್‌ ಪೆಲಿಕನ್‌ ಪಕ್ಷಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ’ ಎಂದು ಅವರು ತಿಳಿಸಿದರು.

‘ಪಕ್ಷಿಗಳ ಮಧ್ಯೆ ಪ್ರವಾಸಿಗರು ನಡೆದುಕೊಂಡು ಹೋಗಿ, ಅವುಗಳನ್ನು ಹತ್ತಿರದಿಂದ ನೋಡಲು ಅನುಕೂಲವಾಗುವಂತೆ ಮೃಗಾಲಯದ ಆವರಣದಲ್ಲಿ ವಿಶೇಷ ಪಂಜರ, ‘ಹಕ್ಕಿಕಾಪು’ ನಿರ್ಮಿಸಲಾಗಿದ್ದು, ಕಳೆದ ವಾರವಷ್ಟೇ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಇಡೀ ರಾಜ್ಯದಲ್ಲೇ ಇಂಥ ಸೌಲಭ್ಯ ಇರುವುದು ಬಿಂಕದಕಟ್ಟಿ ಮೃಗಾಲಯದಲ್ಲಿ ಮಾತ್ರ’ ಎಂದು ಅವರು ಹೇಳಿದರು.

’ಮೃಗಾಲಯದಲ್ಲಿ ಇದೀಗ ಆರ್‌ಎಫ್‌ಒ ಸೇರಿ 25 ಸಿಬ್ಬಂದಿ ಇದ್ದಾರೆ. ಸಣ್ಣ ಮೃಗಾಲಯ ಮಾನ್ಯತೆ ಸಿಕ್ಕಿರುವುದರಿಂದ ಸ್ವತಂತ್ರ ಪಶು ವೈದ್ಯರನ್ನು ನೇಮಿಸಿಕೊಳ್ಳುವ ಅವಕಾಶವು ಲಭ್ಯವಾಗಿದೆ. ಶೀಘ್ರದಲ್ಲೇ ರಾತ್ರಿ ಬೆಳಗುವ ಸೋಲಾರ್ ದೀಪಗಳು ಅಳವಡಿಕೆ ಆಗಲಿದೆ. ಪ್ರಾಣಿ-ಪಕ್ಷಿಗಳಿಗೆ ಆಹಾರ ಪೂರೈಸಲು ಆವರಣದ ಲ್ಲಿನ ಓಡಾಡಟಕ್ಕೆ ವಾಹನವೊಂದು ಬರಲಿದೆ. ‘ಮೃಗಾಲಯ ಪ್ರೇಮಿಗಳ ತಾಣ ಎಂಬ ಅಪಖ್ಯಾತಿ ತಪ್ಪಿಸಲು ಸಿಬ್ಬಂದಿ ದಿನಪೂರ್ತಿ ಮೃಗಾಲಯದ ಆವರಣದಲ್ಲಿ ಗಸ್ತು ತಿರುಗುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಪಾದಾಚಾರಿ ಮಾರ್ಗ ಹೊರತುಪಡಿಸಿ, ಉಳಿದ ಕಡೆ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದು ಅವರು ವಿವರಿಸಿದರು.

ಕಳೆದ ಬೇಸಿಗೆಯಲ್ಲಿ ಮೃಗಾಲಯದಲ್ಲಿ ನೀರಿಗೆ ತತ್ವಾರ ಉಂಟಾಗಿತ್ತು. ನಾಲ್ಕು ಕೊಳವೆ ಬಾವಿಗಳ ಪೈಕಿ ಒಂದು ಸಂಪೂರ್ಣ ಬತ್ತಿ ಹೋಗಿದ್ದು, ಉಳಿದ ಮೂರು ಬೋರ್‌ವೆಲ್‌ನಲ್ಲಿ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿತ್ತು. ಹೀಗಾಗಿ ಮೃಗಾಲಯದಲ್ಲಿರುವ ಪ್ರಾಣಿ,ಪಕ್ಷಿಗಳು, ಮರಗಳಿಗೆ ಸಮರ್ಪಕ ನೀರು ಪೂರೈಕೆಗೆ ಸಮಸ್ಯೆಯಾಗಿತ್ತು. ಈ

ಬಾರಿ ಬೇಸಿಗೆಗೆ ಮುನ್ನವೇ ನೀರಿನ ಸಮಸ್ಯೆ ನೀಗಿಸಲು ಯೋಜನೆ ರೂಪಿಸಲಾಗಿದೆ.

ತಾಲ್ಲೂಕಿನ ಹಿರೇಹಂದಿಗೋಳ ಸಮೀಪದ ಕೆರೆ ನೀರನ್ನು ಮೃಗಾಲಯದ ಉದ್ಯಾನ ನಿರ್ವಹಣೆಗೆ ಬಳಸಿಕೊಳ್ಳುವ ಚಿಂತನೆ ನಡೆದಿದೆ. ಈ ಕೆರೆಯಿಂದ ಈಗಾಗಲೇ ಬಿಂಕದಕಟ್ಟಿ ಗ್ರಾಮದವರೆಗೆ ಪೈಪ್‌ಲೈನ್‌ ಇದೆ. ಅಲ್ಲಿಂದ ಮೃಗಾಲಯದವರೆಗೆ ಒಂದು ಕಿಲೋಮೀಟರ್ ಉದ್ದದವರೆಗೆ ಪೈಪ್‌ಲೈನ್‌ ಅಳವಡಿಸಿದರೆ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ನೀಗಿಸಬಹುದು ಎಂದು ಮೃಗಾಲಯದ ಸಿಬ್ಬಂದಿ ತಿಳಿಸಿದರು.

* * 

ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳ ಸಂಖ್ಯೆ 280 ದಾಟಿದೆ. ಇತ್ತೀಚೆಗೆ ₹1 ಕೋಟಿ ಮೊತ್ತದ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ

ಮಹಾಂತೇಶ ಪೆಟ್ಲೂರ 

ಮೃಗಾಲಯದ ಆರ್‍ಎಫ್‌ಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry