6

ಈರುಳ್ಳಿ ಬೆಲೆ ಗ್ರಾಹಕರಿಗೆ ಹೆಚ್ಚಿಸಿದ ಕಣ್ಣೀರು

Published:
Updated:
ಈರುಳ್ಳಿ ಬೆಲೆ ಗ್ರಾಹಕರಿಗೆ ಹೆಚ್ಚಿಸಿದ ಕಣ್ಣೀರು

ಹಾವೇರಿ: ಎರಡು ವಾರದ ಹಿಂದೆ ₹ 20ರಿಂದ ₹ 25 ಆಸುಪಾಸಿನಲ್ಲಿ ಇದ್ದ ಈರುಳ್ಳಿ ಬೆಲೆ ದಿಢೀರ್‌ ಏರಿಕೆಯಾಗಿದ್ದು, ₹ 60 ಗಡಿ ಸಮೀಪಿಸಿ ಗ್ರಾಹಕರ ಕಣ್ಣಲ್ಲಿ ನೀರು ಹೆಚ್ಚಿಸಿದೆ. ಈಚೆಗಷ್ಟೇ ಟೊಮೆಟೊ ಬೆಲೆ ಬಿಸಿ ತಟ್ಟಿದ ಬೆನ್ನಲೇ ಈಗ ಈರುಳ್ಳಿ ಬೆಲೆ ಹೆಚ್ಚಾಗಿದೆ. ಹೀಗಾಗಿ ಒಂದು ಕೆ.ಜಿ. ಖರೀದಿಸುತ್ತಿದ್ದ ಗ್ರಾಹಕರು ಅರ್ಧ ಕೆ.ಜಿ. ಖರೀದಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಈರುಳ್ಳಿ ಉತ್ಪಾದನೆ ಕಡಿಮೆ ಇರುವುದರಿಂದ ಬೆಲೆ ಹೆಚ್ಚಾಗಿದೆ. ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಾವೇರಿ ತಾಲ್ಲೂಕಿನಲ್ಲಿ ಮಾತ್ರ ಈರುಳ್ಳಿ ಬೆಳೆಯಲಾಗುತ್ತಿದ್ದು, ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಸ್ವಲ್ಪ ತಡವಾಗಿ ನಡೆಯಿತು.

ಬಿತ್ತನೆಯಾದ ಈರುಳ್ಳಿ ಗಡ್ಡಿ ಯಾಗುವ ಹಂತದಲ್ಲಿ ಮಜ್ಜಿಗೆ ರೋಗ ಹೆಚ್ಚಾಗಿ ಬೆಳೆ ಸಂಪೂರ್ಣ ಕೊಳೆತು ಹೋಯಿತು. ಹೀಗಾಗಿ, ಜಿಲ್ಲೆಯಲ್ಲಿ ಈರುಳ್ಳಿ ಕಳೆದ ವರ್ಷಕ್ಕಿಂತ ಅರ್ಧಷ್ಟೂ ಕೂಡಾ ಉತ್ಪಾದನೆಯಾಗಿಲ್ಲ.

‘ಪ್ರಸಕ್ತ ನವೆಂಬರ್‌ ಪ್ರಾರಂಭದಲ್ಲಿ ಪ್ರತಿ ಕ್ವಿಂಟಲ್‌ಗೆ ₹ 2,700 ರಿಂದ ₹ 2,900ರ ವರೆಗೆ ಇದ್ದ ಈರುಳ್ಳಿ ಬೆಲೆ, ನವೆಂಬರ್‌ ಮಧ್ಯದಲ್ಲಿ ₹ 3,600 ರಿಂದ ₹ 5,250ರ ವರೆಗೆ ತಲುಪಿತು. ಸದ್ಯ ಪ್ರತಿ ಕೆ.ಜಿ ಗೆ ₹ 50ರಿಂದ ₹ 55ರ ವರೆಗೆ ಮಾರಾಟ ಮಾಡಲಾಗುತ್ತಿದೆ’ ಎಂದು ತರಕಾರಿ ವ್ಯಾಪಾರಿ ಚನ್ನಪ್ಪ ಕೊಲ್ವಾಲ್‌ ತಿಳಿಸಿದರು.

‘ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಕಡಿಮೆ ಇದೆ. ರೈತರು ಈರುಳ್ಳಿ ಒಣಗುವ ಮುಂಚೆಯೇ ಮಾರುಕಟ್ಟೆಗೆ ತರುತ್ತಿದ್ದಾರೆ. ಹಸಿ ಈರುಳ್ಳಿಯೂ ಕೂಡಾ ಅಷ್ಟೇ ತ್ವರಿತವಾಗಿ ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿದೆ.

ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿ ಗೆ ₹ 40 ರಿಂದ ₹ 50 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹50 ರಿಂದ ₹ 55ರ ವರೆಗೆ ಮಾರಾಟವಾಗುತ್ತಿದೆ’ ಎಂದು ಈರುಳ್ಳಿ ವ್ಯಾಪಾರಿ ಇಮಾಮ್‌ ಸಾಬ್‌ ಮತ್ತೇಖಾನ್‌ ಹೇಳಿದರು.

ತರಕಾರಿ ಬೆಲೆಯೂ ಹೆಚ್ಚು: ಮಾರು ಕಟ್ಟೆಯಲ್ಲಿ ಕಡ್ಡಿ, ಸಿತಾರಾ ಹಾಗೂ ಗುಂಟೂರ ಹಸಿರು ಮೆಣಸಿನ ಕಾಯಿಯನ್ನು ₹ 40ರಿಂದ ₹ 50ರ ವೆರೆಗೆ ಹಾಗೂ ಹಿರಿಕಾಯಿ, ಬೀನ್ಸ್, ಬೆಂಡೆ, ಚವಳಿ ಹಾಗೂ ಸವತೆಕಾಯಿಯನ್ನು ಪ್ರತಿ ಕೆ.ಜಿ ಗೆ ₹ 45ರಿಂದ  ₹ 50ರ ವರೆಗೆ ಮಾರಾಟ ಮಾಡುತ್ತಿದ್ದೇವೆ’ ಎಂದು ತರಕಾರಿ ವ್ಯಾಪಾರಸ್ಥೆ ಗಂಗಮ್ಮ ಹಂಚಿನಮನಿ ತಿಳಿಸಿದರು.

‘ಮುಳ್ಳು ಬದನೆಕಾಯಿ ₹ 50ರಿಂದ ₹ 60, ಆಲೂಗಡ್ಡೆ ₹ 20ರಿಂದ ₹25ರ ವರೆಗೆ, ಬೀಟ್‌ರೂಟ್‌, ಕ್ಯಾರೆಟ್‌ ಹಾಗೂ ಡೊಣ್ಣಮೆಣಸಿನಕಾಯಿ ಪ್ರತಿ ಕೆ.ಜಿ ಗೆ ₹ 40ರಿಂದ ₹ 50ರ ವರೆಗೆ ಮಾರು ತ್ತಿದ್ದೇವೆ ಎಂದು ತರಕಾರಿ ವ್ಯಾಪಾರಸ್ಥೆ ರೋಷನ್‌ಬೇಗಂ ಅವರು ಹೇಳಿದರು.

‘ಜಿಲ್ಲೆಯ ಕೆಲವು ಭಾಗಗಳಲ್ಲಿ ಅತೀ ಹೆಚ್ಚು ಮಳೆಯಾದರೆ ಇನ್ನು ಕೆಲವು ಭಾಗಗಳಲ್ಲಿ ಮಳೆಯ ಕೊರತೆಯಾಗಿದೆ. ಹೀಗಾಗಿ, ರೈತರು ಬೆಳೆದ ತರಕಾರಿ ನಾಶವಾಗಿದೆ. ಅಲ್ಪಸ್ವಲ್ಪ ಬೆಳೆದ ರೈತರ ತರಕಾರಿಯನ್ನು ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸಿ, ತಮ್ಮ ಲಾಭಕ್ಕಾಗಿ ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ’ ಎಂದು ಸ್ಥಳೀಯ ಗ್ರಾಹಕ ಲಿಂಗರಾಜ ಎಸ್‌.ಪಾಟೀಲ್‌ ತಿಳಿಸಿದರು.

* * 

ಮಾರುಕಟ್ಟೆಗೆ ಬರಿಗೈಯಲ್ಲಿ ಬರುವ ದಲ್ಲಾಳಿಗಳು ಕಷ್ಟಪಟ್ಟು ತರಕಾರಿ ಬೆಳೆದ ರೈತನ ಹಾಗೂ ಗ್ರಾಹಕರ ಮಧ್ಯದಲ್ಲಿ ಲಾಭ ಪಡೆದು, ಅವರಿಬ್ಬರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದ್ದಾನೆ.

ಲಿಂಗರಾಜ ಎಸ್‌.ಪಾಟೀಲ್‌

ಸಹ ಪ್ರಾಧ್ಯಾಪಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry