7

ಹೆಲ್ಮೆಟ್ ದರ ಏರಿಕೆ: ಸವಾರರ ಪರದಾಟ

Published:
Updated:
ಹೆಲ್ಮೆಟ್ ದರ ಏರಿಕೆ: ಸವಾರರ ಪರದಾಟ

ಕಲಬುರ್ಗಿ: ಜಿಲ್ಲೆಯಲ್ಲಿ ಹೆಲ್ಮೆಟ್ ದರವೂ ಏರಿಕೆಯಾಗಿದೆ. ಪೊಲೀಸ್ ಇಲಾಖೆಯು ನ. 24ರಿಂದ ‘ ಬೈಕ್‌ ಸವಾರರಿಗೆ ಹೆಲ್ಮೆಟ್ ಕಡ್ಡಾಯ’ ನಿಯಮವನ್ನು ಜಾರಿಗೊಳಿಸಿದೆ. ಇದರಿಂದ ನಗರದಲ್ಲಿ ವಾರದ ಹಿಂದೆ ಇದ್ದ ಹೆಲ್ಮೆಟ್‌ ಬೆಲೆ ಈಗ ದುಪ್ಪಟ್ಟಾಗಿದೆ. ಮಾರುಕಟ್ಟೆಯಲ್ಲಿ ಒಂದು ಹೆಲ್ಮೆಟ್‌ಗೆ ವಾರದ ಹಿಂದಿನ ದರ ₹250 ಇತ್ತು. ನ.24ರಿಂದ ಹೆಲ್ಮೆಟ್‌ ಕಡ್ಡಾಯವಾಗಿದ್ದರಿಂದ ಈಗ ದರ ₹500 ಇದ್ದು, ಎರಡರಷ್ಟು ಜಾಸ್ತಿಯಾಗಿದೆ.

ಎರಡು, ಮೂರು ದಿನಗಳಿಂದ ನಗರದಾದ್ಯಂತ ಹೆಲ್ಮೆಟ್‌ ಮಾರಾಟ ಗರಿಗೆದರಿದ್ದು, ನೂರಾರು ಬೈಕ್‌ ಸವಾರರು ರಸ್ತೆ ಬದಿಯಲ್ಲಿ, ಆಟೋಮೊಬೈಲ್ಸ್‌ಗಳಲ್ಲಿ ಹೆಲ್ಮೆಟ್‌ ಖರೀದಿಗೆ ಮುಗಿಬಿದ್ದಿದ್ದಾರೆ. ಮಾರಾಟ ಭರ್ಜರಿಯಾಗಿರುವುದರಿಂದ ರಸ್ತೆ ಬದಿಯಲ್ಲಿ ಹೆಲ್ಮೆಟ್‌ ಮಾರಾಟಗಾರರ ಸಂಖ್ಯೆಯೂ ಹೆಚ್ಚಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ಹಿಂದೆಯೇ ಹೆಲ್ಮೆಟ್‌ ಕಡ್ಡಾಯಗೊಳಿಸಲಾಗಿದೆ. ಈ ನಿಯಮ ಈಗ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಸಾರ್ವಜನಿಕರಲ್ಲಿ ಹೆಲ್ಮೆಟ್‌ ಬಗ್ಗೆ ಅರಿವು ಮೂಡಿಸಿ, ಕಾಲಾವಕಾಶ ಸಹ ಪೊಲೀಸ್‌ ಇಲಾಖೆ ನೀಡಿತ್ತು. ಗಡುವು ಮುಗಿದ ನಂತರ ಹೆಲ್ಮೆಟ್‌ ಧರಿಸದೆ ರಸ್ತೆಗಿಳಿದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ತಲಾ ₹100 ದಂಡ ವಿಧಿಸುತ್ತಿದ್ದಾರೆ.

ಪ್ರಮುಖ ರಸ್ತೆಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಸೂಪರ್ ಮಾರ್ಕೆಟ್ ಮತ್ತು ಖರ್ಗೆ ಪೆಟ್ರೋಲ್ ಬಂಕ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ಜಿಲ್ಲಾ ನ್ಯಾಯಾಲಯ ರಸ್ತೆ ಸೇರಿದಂತೆ ಹಲವೆಡೆ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಅವರೇ ಶುಕ್ರವಾರ, ಶನಿವಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಹೆಲ್ಮೆಟ್‌ ಧರಿಸಿದವರಿಗೆ ಹೂ ನೀಡಿ ಸ್ವಾಗತಿಸಿದರು. ಧರಿಸದೆ ಇರುವ ಸವಾರರಿಗೆ ₹100 ದಂಡ ವಿಧಿಸಿದರು.

‘ಹೆಲ್ಮೆಟ್ ಧರಿಸದೇ ಪ್ರಯಾಣಿಸುತ್ತಿದ್ದ ಸವಾರರಿಗೆ ₹100 ದಂಡ ವಿಧಿಸಲಾಗಿದೆ. ಆಟೊ ಚಾಲಕರು ಸಮವಸ್ತ್ರ ಧರಿಸಬೇಕು. ನಾಲ್ಕು ಚಕ್ರ ವಾಹನ ಸವಾರರಿಗೆ ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದ್ದು, ಆದರೆ ದಂಡ ವಿಧಿಸಿಲ್ಲ. ನಿಯಮ ಉಲ್ಲಂಘನೆ ಮಾಡಿದರೆ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುವುದು’ ಎಂದು ಸಂಚಾರ ಠಾಣೆ ಮೂಲಗಳು ತಿಳಿಸಿವೆ.

ಯಾವ ಜಿಲ್ಲೆ ಎಷ್ಟು ಪ್ರಕರಣ ದಾಖಲು 

ಕಲಬುರ್ಗಿ ನಗರದಲ್ಲಿ ಹೆಲ್ಮೆಟ್‌ ಕಡ್ಡಾಯವಾಗಿರುವುದರಿಂದ ಪೊಲೀಸರು ಶುಕ್ರವಾರ 2,800 ಮತ್ತು ಶನಿವಾರ 3,060 ಪ್ರಕರಣ ದಾಖಲಿಸಿಕೊಂಡು ಸವಾರರಿಂದ ಶುಕ್ರವಾರ ಒಟ್ಟು ₹ 3.50 ಲಕ್ಷ, ಶನಿವಾರ ₹3.60ಲಕ್ಷ ದಂಡ ಸಂಗ್ರಹಿಸಿದ್ದಾರೆ.

ಯಾದಗಿರಿಯಲ್ಲಿ ಪೊಲೀಸರು ಶುಕ್ರವಾರ 231 ಮತ್ತು ಶನಿವಾರ 531 ಪ್ರಕರಣ ದಾಖಲಿಸಿಕೊಂಡು ಸವಾರರಿಂದ ಶುಕ್ರವಾರ ₹32 ಸಾವಿರ, ಶನಿವಾರ ₹63 ಸಾವಿರ ದಂಡ ಸಂಗ್ರಹಿಸಿದ್ದಾರೆ.

ಬೀದರ್‌ನಲ್ಲಿ ಪೊಲೀಸರು ಶುಕ್ರವಾರ 750 ಮತ್ತು ಶನಿವಾರ 780 ಪ್ರಕರಣ ದಾಖಲಿಸಿಕೊಂಡು ಸವಾರರಿಂದ ಶುಕ್ರವಾರ ₹ 89 ಸಾವಿರ, ಶನಿವಾರ ₹91 ಸಾವಿರ ದಂಡ ಸಂಗ್ರಹಿಸಿದ್ದಾರೆ ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಹೆಲ್ಮೆಟ್ ದರವನ್ನು ನಾವು ಹೆಚ್ಚಳ ಮಾಡಿಲ್ಲ. ಹೈದರಾಬಾದ್‌ನ ಕಂಪೆನಿಯಿಂದ ಹೆಚ್ಚಿನ ಬೆಲೆಗೆ ಖರೀದಿಸಿರುವುದರಿಂದ ಅದೇ ದರ ನಿಗದಿ ಮಾಡಿದ್ದೇವೆ.

ರಾಜಶೇಖರ ಪೂಜಾರಿ

ವ್ಯಾಪಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry