7

ದ್ರಾಕ್ಷಾರಸ ಉತ್ಸವ ವೀಕ್ಷಿಸಿದ ದೇಶಪಾಂಡೆ

Published:
Updated:

ಕಾರವಾರ: ಇಲ್ಲಿನ ಕೋಡಿಬಾಗದ ಕಾಳಿ ರಿವರ್‌ ಗಾರ್ಡನ್‌ಗೆ ಶನಿವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಅವರು ದ್ರಾಕ್ಷಾರಸ ಉತ್ಸವವನ್ನು ವೀಕ್ಷಿಸಿದರು. ವೈವಿಧ್ಯಮಯ ವೈನ್‌ಗಳ ಕುರಿತು ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೈನ್‌ಗಳಲ್ಲಿ ವಿವಿಧ ನಮೂನೆ ಇದೆ. ಬಣ್ಣ, ರುಚಿಗಳು ಕೂಡ ಒಂದಕ್ಕೊಂದು ವಿಭಿನ್ನ ಇದೆ ಎಂದು ಕೇಳಿದ್ದೇನೆ. ಈ ನಿಟ್ಟಿನಲ್ಲಿ ದ್ರಾಕ್ಷಾರಸ ಉತ್ಸವವನ್ನು ನಗರದಲ್ಲಿ ಆಯೋಜಿಸಿರುವುದು ಖುಷಿ ತಂದಿದೆ. ರಾಜ್ಯದಲ್ಲಿಯೂ ಒಳ್ಳೆಯ ವೈನ್‌ಗಳ ಉತ್ಪಾದನೆಯಾಗಬೇಕು. ಆ ಮೂಲಕ ರೈತರಿಗೆ, ದ್ರಾಕ್ಷಿ ಬೆಳೆಗಾರರಿಗೆ ಸಹಾಯವಾಗಬೇಕು. ಕೃಷಿ ಪ್ರಧಾನ ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗಬೇಕು. ಅಲ್ಲಿನ ಉತ್ಪಾದನೆಗಳಿಗೆ ಮಾರುಕಟ್ಟೆ ಒದಗಿಸಬೇಕು’ ಎಂದು ಹೇಳಿದರು.

‘ಇಂಥ ಉತ್ಸವಗಳನ್ನು ಆಯೋಜಿಸುವುದರಿಂದ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ. ಮೊದಲ ಬಾರಿಗೆ ಇಲ್ಲಿ ಆಯೋಜನೆಗೊಂಡಿರುವ ಈ ಮೇಳ ಯಶಸ್ವಿಯಾಗಲಿ’ ಎಂದು ಶುಭ ಹಾರೈಸಿದರು.

***

ಸೂಕ್ತ ದಾಖಲೆ ಒದಗಿಸಲಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್ ಕುಲಕರ್ಣಿ ಅವರ ಹೆಸರು ಕೇಳಿ ಬಂದಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ‘ಇತ್ತೀಚಿನ ದಿನಗಳಲ್ಲಿ ಆಪಾದನೆ ಮಾಡುವುದು ಒಂದು ಚಟವಾಗಿ ಪರಿವರ್ತನೆಗೊಂಡಿದೆ ಮತ್ತು ಅದು ಸುಲಭವಾಗಿದೆ.

ಆದರೆ ಆ ಆಪಾದನೆಗೆ ಸೂಕ್ತ ದಾಖಲೆಗಳನ್ನು ನೀಡಬೇಕು. ಬಳಿಕ ಅದು ನಿಜವಾದಲ್ಲಿ ಅವರ ವಿರುದ್ಧ ಖಂಡಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲಿ ಪಕ್ಷ, ಜಾತಿ, ಧರ್ಮ ಯಾವುದು ಮುಖ್ಯವಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry