7

ಸ್ವಾಯತ್ತತೆ ಹೋರಾಟಕ್ಕೆ ಸಂಪೂರ್ಣ ಬೆಂಬಲ

Published:
Updated:
ಸ್ವಾಯತ್ತತೆ ಹೋರಾಟಕ್ಕೆ ಸಂಪೂರ್ಣ ಬೆಂಬಲ

ಮಡಿಕೇರಿ: ‘ಸ್ವಾಯತ್ತತೆ, ಕೊಡವ ಲ್ಯಾಂಡ್‌ನ ಕೇಂದ್ರಾಡಳಿತ ಪ್ರದೇಶ ಹಾಗೂ ಕೊಡವ ಜನಾಂಗವನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸುವ ವಿಚಾರದಲ್ಲಿ ನನ್ನ ಸಂಪೂರ್ಣ ಬೆಂಬಲವಿದ್ದು, ತೆಲಾಂಗಣಕ್ಕೆ ನೀಡಿದ್ದ ಬೆಂಬಲವನ್ನು ನಿಮಗೂ ನೀಡುತ್ತೇನೆ’ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣ್ಯ ಸ್ವಾಮಿ ಭರವಸೆ ನೀಡಿದರು.

ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಕೊಡವ ನ್ಯಾಷನಲ್‌ ಕೌನ್ಸಿಲ್‌ ಆಯೋಜಿಸಿದ್ದ ಕೊಡವ ನ್ಯಾಷನಲ್‌ ಡೇ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ವರ್ಷದ ಹೋರಾಟ ಫಲದಿಂದ ಆಂಧ್ರಪ್ರದೇಶದಿಂದ ತೆಲಾಂಗಣವು ಪ್ರತ್ಯೇಕವಾಗಿದೆ. ಉತ್ತರಾಖಂಡದಲ್ಲೂ ಇದೇ ರೀತಿಯ ಹೋರಾಟಗಳು ನಡೆದಿದ್ದವು. ಭವಿಷ್ಯ ದಲ್ಲಿ ಕೊಡಗಿಗೆ ಸ್ವಾಯತ್ತತೆ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಡವರೇನು ಪಾಕಿಸ್ತಾನದಂತೆ ಪ್ರತ್ಯೇಕ ರಾಷ್ಟ್ರದ ಬೇಡಿಕೆಯಿಟ್ಟಿಲ್ಲ. ಭಾರತದಲ್ಲೇ ಇದ್ದುಕೊಂಡು ಸಂವಿಧಾನ ಬದ್ಧವಾದ ಹಕ್ಕನ್ನೇ ಪ್ರತಿಪಾದಿಸುತ್ತಿದ್ದಾರೆ. ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಬೇಡಿಕೆ ತಪ್ಪಲ್ಲ. ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಸ್ವಾಮಿ ಪುನರುಚ್ಚರಿಸಿದರು.

ಕೊಡವರು ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರತಿ ವಿಚಾರದಲ್ಲೂ ರಾಷ್ಟ್ರಕ್ಕೆ ಕೊಡವರ ಕಾಣಿಕೆಯಿದೆ ಎಂದು ಹೇಳಿದರು.

ಕೊಡಗಿಗೆ ಕಪ್ಪು ಹಣ: ‘ದೇಶದ ನಾನಾ ಕಡೆಯ ಕಪ್ಪುಹಣ ಕೊಡಗಿಗೆ ಬರುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವವರು ಕೊಡಗಿನಲ್ಲಿ ಆಸ್ತಿ ಖರೀದಿಸುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಆಸ್ತಿಯೂ ಇಲ್ಲಿದೆ. ಅಷ್ಟು ಮಾತ್ರವಲ್ಲದೇ ಬಹುರಾಷ್ಟ್ರೀಯ ಕಂಪೆನಿಗಳು ಈ ಪ್ರದೇಶದಲ್ಲಿ ಆಸ್ತಿ ಮಾಡಿವೆ. ಸ್ವಾಯತ್ತತೆ ಸ್ಥಾನಮಾನ ನೀಡಿದರೆ, ಅದಕ್ಕೆ ಕಡಿವಾಣ ಬೀಳಲಿದೆ’ ಎಂದು ಪ್ರತಿಪಾದಿಸಿದರು.

ದೊಡ್ಡ ರಾಜ್ಯಗಳಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಗುರುತಿಸಿಕೊಂಡಿರುವ ಪ್ರದೇಶಗಳು ಅಭಿವೃದ್ಧಿಯ ಉತ್ತುಂಗದಲ್ಲಿವೆ. ಅದರಂತೆ ಸಿಎನ್‌ಸಿಯು ಹೋರಾಟವು ಸಂವಿಧಾನ ಬದ್ಧವಾಗಿದೆ ಎಂದು ಹೇಳಿದರು.

ಬಿಜೆಪಿಯಿಂದ ಸಾಧ್ಯ: ‘ಮುಸ್ಲಿಂ ಧರ್ಮದಲ್ಲಿದ್ದ ತಲಾಕ್‌ ಪದ್ಧತಿಯನ್ನು ಕೋರ್ಟ್‌ಗೆ ಮನವರಿಕೆ ಮಾಡಿ ನಿಷೇಧಿಸಲು ಬಿಜೆಪಿ ಯಶಸ್ವಿಯಾಯಿತು. 70 ವರ್ಷದಿಂದ ಯಾರಿಗೂ ಸಾಧ್ಯವಾಗಿರಲಿಲ್ಲ. ಬಿಜೆಪಿ ಅದನ್ನು ಮಾಡಿ ತೋರಿಸಿತು. ಬಿಜೆಪಿ ವೋಟ್‌ಬ್ಯಾಂಕ್‌ ರಾಜಕಾರಣ ಮಾಡುತ್ತಿಲ್ಲ. ಉತ್ತರಪ್ರದೇಶದಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಬಿಜೆಪಿ ಟಿಕೆಟ್‌ ನೀಡಿರಲಿಲ್ಲ. ಆದರೂ, ನಮಗೆ ಬಹುಮತ ಬಂತು. ಮುಸ್ಲಿಂ ಮಹಿಳೆಯರೂ ನಮ್ಮನ್ನು ಬೆಂಬಲಿಸಿದರು.

ಇನ್ನೂ ಹಲವು ಕೆಟ್ಟ ಸಂಪ್ರದಾಯಗಳಿಗೆ ನಿಷೇಧಿಸುವ ಕಾಲ ಹತ್ತಿರವಿದೆ. ಗೋಹತ್ಯೆ ನಿಷೇಧಿಸಿದ್ದು ಬಿಜೆಪಿ ಹೆಗ್ಗಳಿಕೆ. ಎಲ್ಲ ಕೆಲಸಗಳನ್ನೂ ಸಂವಿಧಾನ ಬದ್ಧವಾಗಿಯೇ ಮಾಡುತ್ತಿದ್ದೇವೆ’ ಎಂದು ಹೇಳಿದರು.

ವಿರಾಟ್‌ ಹಿಂದೂ ಸಂಗಂನ ಪ್ರಧಾನ ಕಾರ್ಯದರ್ಶಿ ಮಾತನಾಡಿ, ‘ಕೊಡವರ ಭಾಷೆ, ಉಡುಗೆ– ತೊಡುಗೆ ಹಾಗೂ ಈ ಭೂಮಿ ಉಳಿಯಬೇಕಾದರೆ ಸಿಎನ್‌ಸಿ ಬೇಡಿಕೆಗಳು ಈಡೇರಲೇಬೇಕು. ಕಾರ್ಮಿಕರ ಸೋಗಿನಲ್ಲಿ ಕೊಡಗಿಗೆ ಅಕ್ರಮ ವಸಲಿಗರು ಬಂದು ನೆಲೆಸಿ ಸ್ಥಳೀಯವಾಗಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಪಡೆದುಕೊಂಡಿದ್ದಾರೆ. ಜತೆಗೆ, ಮೂಲ ನಿವಾಸಗಳಿಗೂ ಭೂಮಿ ಕಳೆದುಕೊಳ್ಳುವ ಆತಂಕವಿದೆ’ ಎಂದು ಎಚ್ಚರಿಸಿದರು. ದೇಶದ ಕಾಫಿ ಉತ್ಪಾದನೆಯಲ್ಲಿ ಜಿಲ್ಲೆಯಿಂದ ಶೇ 40ರಷ್ಟಿದೆ. ಇಂತಹ ನೆಲ ಉಳಿಸಬೇಕು ಎಂದು ಕರೆ ನೀಡಿದರು.

ಸಿಎನ್‌ಸಿ ಅಧ್ಯಕ್ಷ ಎನ್‌.ಯು. ನಾಚಪ್ಪ ಮಾತನಾಡಿ, ದುಷ್ಟಶಕ್ತಿಗಳು ಜಿಲ್ಲೆಯ ಮೂಲ ನಿವಾಸಿಗಳ ನಾಶ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿವೆ. ಈ ನೆಲವನ್ನು ಉಳಿಸಲು ಏಕಾಂಗಿಯಾಗಿ ಹೋರಾಟ ನಡೆಸಲು ಮುಂದಾದರೆ ನನ್ನನ್ನೇ ಭ್ರಷ್ಟ ಎಂದು ಆಪಾದನೆ ಮಾಡಲಾಗುತ್ತದೆ. ಕೊಡವರೇ ನೆಲೆ ಕಳೆದುಕೊಳ್ಳುವ ಆತಂಕವಿದೆ. ಭಯೋತ್ಪಾದಕ ಸಂಘಟನೆಗಳು ಜಿಲ್ಲೆಯನ್ನು ರೆಡ್‌ ಕಾರಿಡಾರ್‌ ಮಾಡಲು ಹೊರಟಿವೆ ಎಂದು ಆಪಾದಿಸಿದರು.

ಕೊಡವರ ಉಡುಗೆಗೆ ಮೆಚ್ಚುಗೆ

ಕೊಡವರ ಉಡುಗೆ ತೊಟ್ಟಿದ್ದ ಸುಬ್ರಮಣಿಯನ್‌ ಸ್ವಾಮಿ ಅವರು, ತಮ್ಮ ಭಾಷಣದಲ್ಲಿ ಆ ಉಡುಗೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು ಕೊಡವರ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದ್ದನ್ನು ಮೆಚ್ಚಿಕೊಂಡು ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯುತ್ತಿದೆ ಎಂದು ಶ್ಲಾಘಿಸಿದರು.

‘ಸಂಸ್ಕೃತ ಭವಿಷ್ಯದ ಭಾಷೆ’

‘ಯುವ ಪೀಳಿಗೆಗೆ ಸಂಸ್ಕೃತವನ್ನು ಕಲಿಸುವ ಅನಿವಾರ್ಯತೆಯಿದೆ; ಅದು ಭವಿಷ್ಯದ ಭಾಷೆ’ ಎಂದು ಸ್ವಾಮಿ ಪ್ರತಿಪಾದಿಸಿದರು.‘ಕೊಡವ, ತಮಿಳು ಸೇರಿದಂತೆ ಹಲವು ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವವಿದೆ. ಹಲವು ಅಕ್ಷರಗಳು ಸಂಸ್ಕೃತದಿಂದ ಬಂದಿವೆ. ಸಂಸ್ಕೃತವು ಕಂಪ್ಯೂಟರ್‌ ಸ್ನೇಹಿ ಭಾಷೆಯೂ ಹೌದು. ಭವಿಷ್ಯದಲ್ಲಿ ರಾಜ್ಯರಾಜ್ಯಗಳ ನಡುವೆ ಸಂಸ್ಕೃತದಲ್ಲಿಯೇ ಸಂವಹನ ನಡೆಯಲಿದೆ’ ಎಂದು ಹೇಳಿದರು

ಸಿಎನ್‌ಸಿ ಬೇಡಿಕೆಗಳು

ಸ್ವಾಯತ್ತತೆ ನೀಡಬೇಕು

ಕೊಡವ ಲ್ಯಾಂಡ್‌ ಕೇಂದ್ರಾಡಳಿತ ಪ್ರದೇಶಕ್ಕೆ ಆಗ್ರಹ

ಕೊಡವರಿಗೆ ಬುಡಕಟ್ಟು ಜನಾಂಗದ ಮಾನ್ಯತೆ ನೀಡಬೇಕು

ಕೊಡಗು ಅಭಿವೃದ್ಧಿ ಮಂಡಳಿ ರಚನೆ ಆಗಲಿ

ಜಮ್ಮಾ ಭೂಮಿ ಸಂಬಂಧ 2011ರ ಭೂಕಂದಾಯ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ

ದೇವಟ್‌ ಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಾಣ

* * 

ತ್ಯೇಕವಾಗಿ ಗುರುತಿಸಿಕೊಂಡಿರುವ ಪ್ರದೇಶಗಳು ಈಗ ಅಭಿವೃದ್ಧಿ ಉತ್ತುಂಗದಲ್ಲಿವೆ. ಅದರಂತೆ ಸಿಎನ್‌ಸಿ ಹೋರಾಟವೂ ಸಂವಿಧಾನ ಬದ್ಧವಾಗಿದೆ

ಸುಬ್ರಮಣಿಯನ್‌ ಸ್ವಾಮಿ,

ರಾಜ್ಯಸಭಾ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry