7

ಬಿಜೆಪಿ, ಕಾಂಗ್ರೆಸ್‌ನಿಂದ ಸಂಪತ್ತು ಲೂಟಿ

Published:
Updated:
ಬಿಜೆಪಿ, ಕಾಂಗ್ರೆಸ್‌ನಿಂದ ಸಂಪತ್ತು ಲೂಟಿ

ಕೋಲಾರ: ‘ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯದ ಸಂಪತ್ತು ಲೂಟಿ ಮಾಡುತ್ತಿವೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಆರೋಪಿಸಿದರು. ನಗರದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ನೂತನ ಕಚೇರಿ ಉದ್ಘಾಟನಾ ಸಮಾರಂಭ ಹಾಗೂ ಕಾರ್ತಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ರಾಜ್ಯದ ಖಜಾನೆಯ ಖಾಲಿ ಮಾಡಲು ಮುಂದಾಗಿರುವಾಗ ಜನರ ಸಮಸ್ಯೆ ಬಗೆಹರಿಸಲು ಹೇಗೆ ಸಾಧ್ಯ ಎಂದು ದೂರಿದರು.

ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅನೇಕ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ನಾಲ್ಕುವರೆ ವರ್ಷದಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಇದರಿಂದಾಗಿ ರಾಜ್ಯದ ಜನ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಕುಮಾರ ಪರ್ವ’ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲು ಆಶ್ವಾಸನೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ರಾಜ್ಯದ ಯಾವ ಮೂಲೆಗೆ ಹೋದರೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಜಿಲ್ಲೆಯಲ್ಲಿ ಕಾರ್ಯಕರ್ತರು ಭಿನ್ನಾಭಿಪ್ರಾಯ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೋಡಗಿಸಿಕೊಳ್ಳಬೇಕು. ಪಕ್ಷಕ್ಕೆ ವಿರುದ್ಧವಾಗಿ ಗುಂಪುಗಾರಿಕೆ ಮಾಡಿದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿಯಿಂದ ಮಾತ್ರ ಸಾಧ್ಯ: ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ರಾಷ್ಟ್ರದಲ್ಲಿ ರಾಹುಲ್ ಗಾಂಧಿ ಅವರು ಗ್ರಾಮ ವಾಸ್ತವ್ಯ ನಡೆಸಲು ಅಗಲಿಲ್ಲ. ಎರಡ್ಮೂರು ದಿನ ನಡೆಸಿ ಸುಮ್ಮನಾದರು. ಯಡಿಯೂರಪ್ಪ ದಲಿತ ಮನೆಗೆ ಹೋಟೆಲ್‌ನಿಂದ ತಿಂಡಿ ತಿಂದು ನಾನು ದಲಿತ ಮನೆಯಲ್ಲಿ ತಿಂಡಿ ತಿಂದೆ ಎಂದು ಪ್ರಚಾರಗಿಟ್ಟಿಸಿಕೊಳ್ಳಲು ಹೋಗಿ ಜನರ ಗುರಿಗೆ ಪಾತ್ರರಾದರು. ಆದರೆ ಕುಮಾರಸ್ವಾಮಿ ಅವರಿಂದ ಮಾತ್ರ ಯಶಸ್ವಿ ಗ್ರಾಮವಾಸ್ತವ್ಯ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ನ.29ರಂದು ಶ್ರೀನಿವಾಸಪುರ ಪಟ್ಟಣದಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಪ್ರತಿ ಕ್ಷೇತ್ರದಿಂದಲ್ಲೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು ಎಂದು ಕೋರಿದರು.

’ಜಿಲ್ಲೆಯಲ್ಲಿ ಕಾರ್ಯರ್ತರು ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಗೆ ಮುಂದಾದರೆ ಆರು ಕ್ಷೇತ್ರಗಳಲ್ಲೂ ಗೆಲ್ಲುವುವು ಸಾಧಿಸುವುದು ಖಚಿತ’ ಎಂದು ಮುಖಂಡ ಕೆ.ಶ್ರೀನಿವಾಸಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಅನ್ವರ್ ಪಾಷ, ಜಿಲ್ಲೆಯಲ್ಲಿ ಶ್ರೀನಿವಾಸಗೌಡರಿಗೆ ಯಾರು ಆಡ್ಡಿಯಿಲ್ಲ. ಹೀಗಾಗಿ ಹೊರಗೆ ಬಂದು ಪಕ್ಷದ ಪರವಾಗಿ ಪ್ರಚಾರ ನಡೆಸಿದರೆ ಜನರ ವಿಶ್ವಾಸಗಳಿಸುವ ಮೂಲಕ ಚುನಾವಣೆಯಲ್ಲಿ ಗೆಲವು ಸಾಧಿಸಬಹುದು ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲಾ ಉಸ್ತುವಾರಿ ಕೆ.ಬಿ.ಗೋಪಾಲಕೃಷ್ಣ, ಜಿಲ್ಲಾ ಘಟಕದ ಉಪಾಧ್ಯಕ್ಷ ಈ.ಗೋಪಾಲಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ, ಕೆ.ವಿ.ದಯಾನಂದ್, ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ,  ಮಂಗಮ್ಮ ಮುನಿಸ್ವಾಮಿ, ಜಿಲ್ಲಾ ಹಿಂದುಳಿವ ವರ್ಗಗಳ ಘಟಕದ ಅಧ್ಯಕ್ಷ ಅಶೋಕ್, ತಾಲ್ಲೂಕು ಅಧ್ಯಕ್ಷ ಕೆ.ಎಂ.ಜೆ.ಮೌನಿ ಬಾಬು, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಭಾಗವಹಿಸಿದ್ದರು.

ದುರಾಡಳಿತ ಕಾರಣ

ಎಚ್.ಡಿ.ಕುಮಾರಸ್ವಾಮಿ 20 ತಿಂಗಳ ಕಾಲ ಆಡಳಿತ ನಡೆಸಿದರೂ ಜನರ ಮನೆಮಾತಾಗಿದ್ದಾರೆ. ಆದರೆ ಬಿಜೆಪಿ 5 ವರ್ಷ ಹಾಗೂ ಕಾಂಗ್ರೆಸ್ ನಾಲ್ಕುವರೆ ವರ್ಷಗಳಿಂದ ಆಡಳಿತ ನಡೆಸುತ್ತಿದ್ದರು ಜನರ ವಿಶ್ವಾಸಗಳಿಸಲು ಅಗಲಿಲ್ಲ. ಇದಕ್ಕೆ ಅವರು ನಡೆಸಿದ ದುರಾಡಳಿತ ಕಾರಣವಾಗಿದೆ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ಎಂದರು.

* * 

’ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣವಿದೆ. ಆದರೆ ನಮ್ಮವರೇ ಕೆಲವರು ಹಣದಾಸೆಗೆ ಬೇರೆ ಬೇರೆ ಚಿಂತನೆ ಮಾಡುತ್ತಿದ್ದಾರೆ. ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವುದು ಅಗತ್ಯವಿದೆ. ಯುವಕರು, ಮಹಿಳೆಯರಿಗೆ ಆದ್ಯತೆ ನೀಡಬೇಕು

ಕೆ.ಶ್ರೀನಿವಾಸಗೌಡ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry