ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರೇ ಪ್ರಕಾಶ್‌ಗೆ ಬುದ್ಧಿ ಕಲಿಸುವರು

Last Updated 27 ನವೆಂಬರ್ 2017, 8:56 IST
ಅಕ್ಷರ ಗಾತ್ರ

ಕೋಲಾರ: ಶಾಸಕ ವರ್ತೂರು ಪ್ರಕಾಶ್‌ ತನ್ನ ಸ್ವಂತ ಶಕ್ತಿಯಿಂದ ಅಭಿವೃದ್ಧಿಯಾಗಿಲ್ಲ. ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್‌ಗೆ ವಿಶ್ವಾಸ ದ್ರೋಹ ಬಗೆದು ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ (ಆರ್‌ಪಿಐ) ರಾಜ್ಯ ಘಟಕದ ಅಧ್ಯಕ್ಷ ವೆಂಕಟಸ್ವಾಮಿ ಆರೋಪಿಸಿದರು.

ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ಆರ್‌ಪಿಐ ಪಕ್ಷದ ವತಿಯಿಂದ ಭಾನುವಾರ ನಡೆದ ‘ವರ್ತೂರ್ ಪ್ರಕಾಶ್ ಹಠಾವೋ ಕೋಲಾರ ಬಚಾವೋ’ ಹೋಬಳಿ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ‘ಶಾಸಕ ಎಂಟಿಬಿ ನಾಗರಾಜ್‌ಗೆ ವಿಶ್ವಾಸ ದ್ರೋಹ ಬಗೆದು ಜಮೀನನ್ನು ಮಾರಾಟ ಮಾಡಿ ಶಾಸಕ ವರ್ತೂರು ಪ್ರಕಾಶ್ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ರಾಜ್ಯದಲ್ಲಿ ಕುರುಬರು ಹೆಚ್ಚಾಗಿರುವ ಭಾಗಗಳಲ್ಲಿ ಸಂಚರಿಸುತ್ತಿರುವ ವರ್ತೂರು ಪ್ರಕಾಶ್‌ಗೆ ಅವರೇ ಬುದ್ದಿ ಕಲಿಸಲಿದ್ದಾರೆ. ಕುರುಬರು ಇನ್ನೂ ಸಹ ಕುರಿಗಳಾಗಿಯೇ ಇಲ್ಲ. ಬದಲಾಗಿದ್ದಾರೆ. ಡಿ.19ಕ್ಕೆ ನಮ್ಮ ಕಾಂಗ್ರೆಸ್ ಘೋಷಣೆ ಆದರೆ ಅದೇ ನಿಮಗೆ ಜೈಲ್ ಕಾಂಗ್ರೆಸ್ ಆಗಿಯೂ ಬದಲಾವಣೆ ಆಗಲಿದೆ. ಅಂತಹ ಮಹತ್ತರ ನಿಮ್ಮ ಹಗರಣಗಳ ದಾಖಲೆಗಳನ್ನು ಡಿ.20ರಂದು ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆ ಮಾಡಲಾಗುವುದು ಎಂದು ಸವಾಲು ಹಾಕಿದರು.

ದಾಖಲೆ ಬಿಡುಗಡೆ: ರಾಜ್ಯದಾದ್ಯಂತ ಆರ್‌ಪಿಐ ಅಭಿಯಾನ ಆರಂಭವಾಗಿದ್ದು, ನಿಮ್ಮಂತಹ ಅನೇಕ ಶಾಸಕರು ಪಟ್ಟಿಯಲ್ಲಿದ್ದಾರೆ. ಇಂದು ನಡೆದ ಸಮಾವೇಶದ ಪ್ಲೆಕ್ಸ್, ಬ್ಯಾನರ್‌ಗಳನ್ನು ನಿಮ್ಮ ಹಿಂಬಾಲಕರು ಹರಿದು ಹಾಕಿದ್ದು ಅದೇ ನಿಮಗೆ ಮುಂದೆ ಕಂಟಕವಾಗಲಿದೆ. ನಿಮ್ಮ ರಾಜಕೀಯ ಜೀವನಕ್ಕೆ ನಾವೇ ಕತ್ತರಿ ಹಾಕುತ್ತೇವೆ ಎಂದು ಎಚ್ಚರಿಸಿದರು.

ವರ್ತೂರು ಪ್ರಕಾಶ್‌ ಡಿ.19ಕ್ಕೆ ‘ನಮ್ಮ ಕಾಂಗ್ರೆಸ್’ ಪಕ್ಷ ಸ್ಥಾಪಿಸಿದ ಮರುದಿನವೇ ಆರ್‌ಪಿಐ ಪಕ್ಷದ ಡಿ.20ಕ್ಕೆ ಕೋಲಾರದಲ್ಲಿ ಹಗರಣಗಳ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಅಂಬರೀಶ್ ತಿಳಿಸಿದರು.

‘ವರ್ತೂರ್ ಪ್ರಕಾಶ್ ಮಾಡಿರುವ ಹಗರಣಗಳು ಲಾರಿ ಲೋಡ್‌ನಷ್ಟು ಮಾಹಿತಿ ತಮ್ಮ ಬಳಿ ಇದೆ. ಕಳೆದ ಚುನಾವಣೆಯಿಂದ ಈವರೆಗೆ ಜಿಲ್ಲೆಯಲ್ಲಿ ಸುಮಾರು 500 ಎಕರೆ ಜಮೀನನ್ನು ಮಾಡಿಕೊಂಡಿದ್ದಾರೆ. ಕೇವಲ ನಾಲ್ಕು ವರ್ಷಗಳಲ್ಲಿ ಇಷ್ಟು ಸಂಪಾದನೆ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದರು.

‘ಕ್ಷಣಕ್ಕೆ ಒಂದು ಪಕ್ಷದ ಹೆಸರು ಹೇಳುವ ಊಸರವಳ್ಳಿ ಶಾಸಕರು ನೀವು. ಕ್ಷೇತ್ರದಲ್ಲಿ ಜಾತಿ-ಜಾತಿಗಳ ನಡುವೆ ಎತ್ತಿಕಟ್ಟಿರುವ ನಿಮಗೆ ನಿಮ್ಮ ಕುರುಬ ಸಮುದಾಯದವರೇ ವಿರೋಧಿಗಳಾಗಿದ್ದಾರೆ. ದಕ್ಷ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರಿಗೆ ಜಾತಿ ಪಟ್ಟ ಕಟ್ಟಿರುವ ನಿಮ್ಮ ಕುರಿತಾಗಿ ದಾಖಲೆಗಳನ್ನು ನಾವು ಬಿಡುಗಡೆ ಮಾಡಿದರೆ ಡಿಸೆಂಬರ್ ಅಥವಾ ಜನವರಿ ವೇಳೆಗೆ ಅವರೇ ನಿಮ್ಮನ್ನು ಜೈಲಿಗೆ ಕಳುಹಿಸಲಿದ್ದಾರೆ’ ಎಂದರು.

ಲೋಕಾಯುಕ್ತ ಕಚೇರಿ ಮುಂದೆ ಧರಣಿ: ಚುನಾವಣೆಗೆ ಇನ್ನು 6 ತಿಂಗಳು ಸಮಯ ಇದೆ. ನೀವು ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ನಾವು ಬಿಡುವುದಿಲ್ಲ. ಸದ್ಯದಲ್ಲಿಯೇ ಪಕ್ಷದಿಂದ ಶಾಸಕರ ಹಗರಣಗಳ ಕುರಿತಾದ ಪುಸ್ತಕ ಹಾಗೂ ಸಿಡಿಗಳನ್ನು ಬಿಡುಗಡೆ ಮಾಡಲಿದ್ದೇವೆ. ಹಗರಣಗಳ ಕುರಿತಾಗಿ ಲೋಕಾಯುಕ್ತದಲ್ಲಿ ಮಾಹಿತಿ ಕೇಳಲಾಗಿದ್ದು, ಅವರೂ ಹಿಂಜರಿಯುತ್ತಿದ್ದಾರೆ. ಮಾಹಿತಿ ನೀಡದಿದ್ದಲ್ಲಿ ಲೋಕಾಯುಕ್ತ ಕಚೇರಿ ಎದುರು ಸಹ ಧರಣಿ ನಡೆಸಲಾಗುವುದು ಎಂದು ಹೇಳಿದರು.

ವರ್ತೂರ್‌ಪ್ರಕಾಶ್‌ ಅವರೇ ನಾವು ದಲಿತ ಪರಂಪರೆಯಲ್ಲಿ ಹುಟ್ಟಿ ಬೆಳೆದವರು. ನಮ್ಮನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ನೀವೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಾನೇ ನಿಮಗೆ ₹ 1 ಕೋಟಿ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನವನ್ನು ದುರುಪಯೋಗ ಪಡಿಸಿಕೊಳ್ಳಲು ಬರಬೇಡಿ. ಕುರುಬರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದೀರಿ. ಸಂವಿಧಾನ ಏನು ನಿಮ್ಮಪ್ಪಂದಾ ಎಂದು ಪ್ರಶ್ನಿಸಿದರು. ಆರ್‌ಪಿಐ ಪಕ್ಷದ ಪದಾಧಿಕಾರಿ ಗಳಾದ ಮು.ತಿಮ್ಮಯ್ಯ, ಟಿ.ವಿಜಯ್‌ ಕುಮಾರ್, ಗೋವಿಂದಸ್ವಾಮಿ, ಪತಿ, ವಾಸು, ನವೀನ್ ಹಾಜರಿದ್ದರು.

* * 

ಕುರುಬರು ಹೆಚ್ಚಾಗಿರುವ ಭಾಗಗಳಲ್ಲಿ ಸಂಚರಿಸುತ್ತಿರುವ ವರ್ತೂರುಗೆ ಅವರೇ ಬುದ್ಧಿ ಕಲಿಸುತ್ತಾರೆ. ಕುರುಬರು ಇನ್ನೂ ಸಹ ಕುರಿಗಳಾಗಿಯೇ ಇಲ್ಲ. ಬದಲಾಗಿದ್ದಾರೆ. ಡಿ.19ಕ್ಕೆ ನಮ್ಮ ಕಾಂಗ್ರೆಸ್ ಘೋಷಣೆ ಆದರೆ ಅದೇ ನಿಮಗೆ ಜೈಲ್ ಕಾಂಗ್ರೆಸ್ ಆಗಿ ಬದಲಾವಣೆ ಆಗಲಿದೆ
ವೆಂಕಟಸ್ವಾಮಿ,
ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT