ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕ್ಕುರುಳಲಿರುವ ಮೊದಲ ವ್ಯಾಯಾಮ ಶಾಲೆ

Last Updated 27 ನವೆಂಬರ್ 2017, 9:06 IST
ಅಕ್ಷರ ಗಾತ್ರ

ಶಿವಮೊಗ್ಗ: ಹಲವು ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟುಗಳನ್ನು ಹುಟ್ಟುಹಾಕಿರುವ ಜಿಲ್ಲೆಯ ಮೊದಲ ವ್ಯಾಯಾಮ ಶಾಲೆ ಇತಿಹಾಸದ ಪುಟ ಸೇರಲಿದೆ. ಹೌದು, ಸ್ವಾತಂತ್ರ್ಯಪೂರ್ವದಲ್ಲಿಯೇ ಸ್ಥಾಪನೆಯಾದ ಪುಲಿಕೇಶಿ ವ್ಯಾಯಾಮ ಶಾಲೆ ತನ್ನದೇ ಆದ ಇತಿಹಾಸ ಹೊಂದಿದೆ. ಇಲ್ಲಿ ವ್ಯಾಯಾಮ ಕಲಿತ ಅನೇಕರು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಜಿಲ್ಲೆಯ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿದ್ದಾರೆ. ಇಂತಹ ಶಾಲೆಯನ್ನು ಇದೀಗ ಅಭಿವೃದ್ಧಿಯ ಹೆಸರಿನಲ್ಲಿ ನೆಲಕ್ಕುರುಳಿಸಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ.

ಕೆರಡಿ ಕೃಷ್ಣಮೂರ್ತಿ ಅವರಿಂದ 1932ರಲ್ಲಿ ಸ್ಥಾಪನೆಯಾದ ಈ ಪುಲಿಕೇಶಿ ವ್ಯಾಯಾಮ ಶಾಲೆಯು ಜಿಲ್ಲೆಯ ಮೊದಲ ಶಾಲೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೆಲ ಸ್ಥಳಗಳ ಬದಲಾವಣೆಯ ನಂತರ ಈ ಶಾಲೆಯನ್ನು 1982ರಲ್ಲಿ ಕುವೆಂಪು ರಸ್ತೆ ಜಿಲ್ಲಾ ಪಂಚಾಯ್ತಿ ಮುಂಭಾಗದಲ್ಲಿ ಸ್ಥಾಪಿಸಲಾಯಿತು. 2001ರಲ್ಲಿ ದಿ.ಬಂಗಾರಪ್ಪ ಅವರ ಅನುದಾನದಲ್ಲಿ ವ್ಯಾಯಾಮ ಶಾಲೆಯನ್ನು ಮಲ್ಟಿ ಜಿಮ್‌ ಆಗಿ ಪರಿವರ್ತಿಸಲಾಯಿತು.

ಹೆಸರಿನಲ್ಲೇ ಸ್ಫೂರ್ತಿ:  ಪುಲಿಕೇಶಿ ವ್ಯಾಯಾಮ ಶಾಲೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಇಲ್ಲಿ ಕಲಿತವರು ಸಾಧನೆಯ ಮೆಟ್ಟಿಲು ತುಳಿಯುವ ಪ್ರತೀತಿ ಇದೆ. ಹಾಗಾಗಿ ಈ ಶಾಲೆಯ ಹೆಸರು ಕೇಳಿದಾಕ್ಷಣ ಅನೇಕರಿಗೆ ಎಲ್ಲಿಲ್ಲದ ಉತ್ಸಾಹ ಬರುತ್ತದೆ.  ಹಲವೆಡೆ ಅತ್ಯಾಕರ್ಷಕ ಜಿಮ್‌ಗಳಿದ್ದರೂ ಇದರ ಮೌಲ್ಯ ಕುಸಿದಿಲ್ಲ.

ಬಡವರ ಶಾಲೆ ಎಂಬ ಖ್ಯಾತಿ: ಈ ಶಾಲೆ ಬಡವರ ವ್ಯಾಯಾಮ ಶಾಲೆಯೆಂದೆ ಖ್ಯಾತಿ ಪಡೆದಿದೆ. ಕೇವಲ ₹ 2 ಶುಲ್ಕದೊಂದಿಗೆ ಪ್ರಾರಂಭವಾಗಿರುವ ಶಾಲೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಮಾಸಿಕ ₹ 50 ಮಾತ್ರ ಶುಲ್ಕ ಪಡೆಯುತ್ತಿದೆ. ಹಾಗಾಗಿ ಬಡವರು, ಹಿಂದುಳಿದವರು, ಕೂಲಿಕಾರ್ಮಿಕರಿಗೆ ಈ ಶಾಲೆ ತಮ್ಮದೆಂಬ ಭಾವನೆಯಿದೆ.

ಖ್ಯಾತನಾಮರು: ಈ ಶಾಲೆಯಲ್ಲಿ ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ  ವ್ಯಾಯಾಮ ಮಾಡಿದ್ದಾರೆ. ಇದರಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ದೇಹದ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಸುಧಾಕರ್ ಕಾಮತ್, ಬೋಳಾರ್, ಎಂ.ಬಿ.ಸುರೇಶ್, ಪ್ರಭಾಕರ್, ರಾಜಪ್ಪ, ಸುಬ್ಬಣ್ಣ, ಪರಶುರಾಮ, ಎಂ.ಎಸ್.ಅನಿಲ್‌ ಕುಮಾರ್, ಎಂ.ಎಸ್.ಸುಧೀರ್, ಎನ್.ಆರ್.ರಮೇಶ್, ಜಿ.ಸಿ.ಜಗದೀಶ್, ರಾಜೇಂದ್ರ, ಮಂಜುನಾಥ್, ಪ್ರವೀಣ್‌ಕುಮಾರ್, ಸತೀಶ್ ಕಂಬ್ಳಿ, ಮಧು, ರಾಜು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಖ್ಯಾತನಾಮರು. ಇವರಲ್ಲಿ ಕೆಲವರು ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಕೆಡವಲು ಕಾರಣ: ಮಹಾನಗರ ಪಾಲಿಕೆ ಜಾಗದಲ್ಲಿರುವ ಈ ವ್ಯಾಯಾಮ ಶಾಲೆಯ ಪಕ್ಕದಲ್ಲಿ ಬೃಹತ್ ಆಕಾರದ ನೀರಿನ ಟ್ಯಾಂಕ್ ಇದ್ದು, ಇದು ಶಿಥಿಲಗೊಂಡಿದೆ. ಇದನ್ನು ಕೆಡವುತ್ತಿರುವುದರಿಂದ ಪಕ್ಕದಲ್ಲೇ ಇರುವ ವ್ಯಾಯಾಮ ಶಾಲೆಗೂ ಹಾನಿಯಾಗಲಿದೆ. ‌

ಹೀಗಾಗಿ ಟ್ಯಾಂಕ್‌ನ ಜತೆಗೆ ಶಾಲೆಯನ್ನು ಕೆಡವಲು ಪಾಲಿಕೆ ತೀರ್ಮಾನಿಸಿದ್ದು, ಅದಕ್ಕೆ ಸೂಚನೆ ದೊರೆತಿದೆ.ಮಧುರ ನೆನಪುಗಳನ್ನು ಹೊತ್ತ ಈ ಶಾಲೆಯನ್ನು ಕೆಡವಬಾರದು.  ಕೆಡವಿದರೆ ಟ್ಯಾಂಕ್‌ ಮರು ನಿರ್ಮಾಣದ ನಂತರ ಇದೇ ಸ್ಥಳದಲ್ಲಿ ಶಾಲೆಯನ್ನು ಮರು ಸ್ಥಾಪಿಸಬೇಕು ಎಂದು ನೂರಾರು ದೇಹದಾರ್ಢ್ಯ ಪಟುಗಳು ಒತ್ತಾಯಿಸಿದ್ದಾರೆ.

ಈ ವ್ಯಾಯಾಮಶಾಲೆ ಅನೇಕರ ಪಾಲಿಗೆ ಆಶ್ರಯವಾಗಿದೆ. ಇದನ್ನು ಕೆಡವಿದರೆ ಸಾಕಷ್ಟು ನೋವಾಗುತ್ತದೆ. ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚು ಒಲವು ತೋರಬೇಕು. ಕೆಡವುದೇ ಆದರೆ ಇದೇ ಸ್ಥಳದಲ್ಲಿಯೇ ಮರು ನಿರ್ಮಾಣ ಮಾಡಬೇಕು.
ಸತೀಶ್ ಕಂಬಳಿ, ವ್ಯಾಯಾಮ ಶಾಲೆ ತರಬೇತುದಾರ.(26ಎಸ್ಎಂ13ಇಪಿ)

ಶಿಥಿಲಗೊಂಡಿರುವ ಟ್ಯಾಂಕ್ ಬೀಳಿಸುವಾಗ ವ್ಯಾಯಾಮಶಾಲೆಗೂ ಹಾನಿಯಾಗಲಿದೆ. ಹಾಗಾಗಿ ಅನಿವಾರ್ಯವಾಗಿ ಅದನ್ನು ತೆಗೆಯಬೇಕಿದೆ. ತಾತ್ಕಾಲಿಕವಾಗಿ ಪರ್ಯಾಯ ಜಾಗ ನೀಡಿದ ನಂತರವೇ ಶಾಲೆಯನ್ನು ಕೆಡವಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.
ಕೆ.ಬಿ.ಪ್ರಸನ್ನಕುಮಾರ್, ಶಾಸಕ. (26ಎಸ್ಎಂ14ಇಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT