ಸ್ಮಾರ್ಟ್‌ ಸಿಟಿಯಲ್ಲಿ ದೂಳೇ ಉಸಿರು!

7

ಸ್ಮಾರ್ಟ್‌ ಸಿಟಿಯಲ್ಲಿ ದೂಳೇ ಉಸಿರು!

Published:
Updated:
ಸ್ಮಾರ್ಟ್‌ ಸಿಟಿಯಲ್ಲಿ ದೂಳೇ ಉಸಿರು!

ತುಮಕೂರು: ‘ಸ್ಮಾರ್ಟ್ ಸಿಟಿ’ ಎಂದು ಕರೆಸಿಕೊಳ್ಳಲಿರುವ ತುಮಕೂರು ಮಹಾನಗರದಲ್ಲಿ ಈಗ ದೂಳು. ಎಲ್ಲಿ ನೋಡಿದರೂ ದೂಳು. ವಾಹನಗಳ ಹೊಗೆ ಜತೆಗೆ ದೂಳು ನಗರದ ಜನರಿಗೆ ಮತ್ತೊಂದು ಗೋಳಾಗಿ ಪರಿಣಮಿಸಿದೆ. ಸ್ಮಾರ್ಟ್ ಸಿಟಿಯಲ್ಲಿ ಈಗ ದೂಳೇ ಉಸಿರು ಎಂಬಂತಾಗಿದೆ.

‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆಗೆ ಮಾತ್ರ ಈ ‘ದೂಳು’ ಕಂಡಿಲ್ಲ ಮತ್ತು ಬಾಧಿಸಿಯೂ ಇಲ್ಲ. ಬಾಧಿಸಿದ್ದರೆ, ಅವರ ಕಣ್ಣು, ತಲೆ, ಮೈ ಮೇಲೆ ಒಂದಿಷ್ಟು ದೂಳು ಬಿದ್ದಿದ್ದರೆ, ಮೂಗಿನಲ್ಲಿ, ಬಾಯಲ್ಲಿ ದೂಳು ಹೋಗಿ ಶ್ವಾಸಕೋಶ ಸಮಸ್ಯೆಗೆ ತುತ್ತಾಗಿದ್ದರೆ ಕ್ರಮ ಕೈಗೊಳ್ಳುತ್ತಿದ್ದರು' ಎಂದು ಸಾರ್ವಜನಿಕರು ಆಕ್ರೋಶದಿಂದ ತಮ್ಮ ಗೋಳು ಹೇಳಿಕೊಳ್ಳುತ್ತಿದ್ದಾರೆ.

ಮನೆ ಬಿಟ್ಟು ದ್ವಿಚಕ್ರವಾಹನದಲ್ಲಿ ಹೊರಬಿದ್ದರೆ ಸಾಕು ಮರಳಿ ಮನೆಗೆ ಬರುವಷ್ಟರಲ್ಲಿ ಮೈಮೇಲೊಂದಿಷ್ಟು ದೂಳು ಮೆತ್ತಿಕೊಂಡಿರುತ್ತದೆ.  ಬಿ.ಎಚ್.ರಸ್ತೆ, ಅಶೋಕ ರಸ್ತೆ, ಗುಬ್ಬಿ ರಸ್ತೆ, ಬಟವಾಡಿ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶಿರಾ ಗೇಟ್‌ವರೆಗೆ, ಹೊರಪೇಟೆ, ಕೋರ್ಟ್ ಎದುರು, ಕುಣಿಗಲ್ ರಸ್ತೆ, ಭದ್ರಮ್ಮ ವೃತ್ತದಿಂದ ಡಿಡಿಪಿಐ ಕಚೇರಿಯವರೆಗಿನ ರಸ್ತೆ, ಹನುಮಂತಪುರ,ಶೆಟ್ಟಿಹಳ್ಳಿ ಮುಖ್ಯ ರಸ್ತೆ ಹೀಗೆ ಒಂದಲ್ಲ ಎರಡಲ್ಲ ಹತ್ತಾರು ರಸ್ತೆಗಳಲ್ಲಿ ದೂಳು ಆವರಿಸಿದೆ.

ದೂಳಿನಿಂದ ಬಚಾವಾಗಲು ಕಣ್ಣು, ಮೂಗು, ಬಾಯಿಗೆ ಬಟ್ಟೆ ಸುತ್ತಿಕೊಂಡೇ ಹೊರ ಹೋಗಬೇಕಾದ ಸ್ಥಿತಿ ಉದ್ಭವಿಸಿದೆ. ರಸ್ತೆಯಲ್ಲಿ ಬಿದ್ದ ಕಸಕಡ್ಡಿ, ದೂಳು ಸ್ವಚ್ಛ ಮಾಡುವ ಕೆಲಸವನ್ನೂ ಮಹಾನಗರ ಪಾಲಿಕೆ ಮಾಡುತ್ತಿಲ್ಲ. ಕನಿಷ್ಠ ಪಕ್ಷ ಎಲ್ಲೆಲ್ಲಿ ದೂಳು ಆವರಿಸುತ್ತದೆ ಅಂತಹ ಕಡೆ ಸಂಚಾರ ದಟ್ಟಣೆ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ರಸ್ತೆಗೆ ನೀರು ಸಿಂಪಡಿಸಿ ದೂಳು ಎಳದಂತೆ ಕ್ರಮವನ್ನೂ ಕೈಗೊಂಡಿಲ್ಲ ಎಂದು ಜನರು ದೂರುತ್ತಾರೆ.

ಈಚೆಗೆ, ಮಳೆ ಬಿದ್ದು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಜಲ್ಲಿ ಕಲ್ಲು ಎದ್ದಿದ್ದು, ದ್ವಿಚಕ್ರವಾಹನಗಳನ್ನು ಪಲ್ಟಿ ಹೊಡೆಸುತ್ತಿವೆ. ಒಂದೆಡೆ ಜಲ್ಲಿಕಲ್ಲು ಮತ್ತೊಂದೆಡೆ ದೂಳು. ಇಂತಹ ರಸ್ತೆಯಲ್ಲಿಯೇ ಸವಾರರು ಪ್ರಯಾಸಪಟ್ಟು ಸಾಗುತ್ತಿದ್ದಾರೆ.

ದೂಳು ಕಣ್ಣಿಗೆ ಬಿದ್ದು ಗಾಯಗೊಂಡ ಸವಾರರು, ಪಾದಚಾರಿಗಳ ಸ್ಥಿತಿ ಹೇಳತೀರದು. ಮುಖ್ಯ ರಸ್ತೆಗಳನ್ನು ಬಿಟ್ಟು ವಿವಿಧ ಬಡಾವಣೆಯ ಒಳರಸ್ತೆಗಳನ್ನು ಬಳಸಿ ಸುತ್ತಿಬಳಸಿ ಸಂಚರಿಸುವಂತಾಗಿದೆ. ಅಲ್ಲದೇ, ಕಲಬೆರಕೆ ಇಂಧನ ಹಾಕಿಕೊಂಡು ಸಂಚರಿಸುವ ವಾಹನಗಳೂ ಅತಿರೇಕವಾಗಿವೆ. ಅವುಗಳು ಉಗುಳುವ ಹೊಗೆ ಜನರ ಶ್ವಾಸಕೋಶ ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಪರಿಸರ ತಜ್ಞರು.

ಬೆಳಿಗ್ಗೆ ಮತ್ತು ಸಂಜೆ ಶಾಲಾ ವಾಹನಗಳು, ಆಟೊಗಳಲ್ಲಿ ಹೋಗುವ ಮಕ್ಕಳಿಗೂ ದೂಳಿನ ಕಾಟ ಬಿಟ್ಟಿಲ್ಲ. ವಾಹನ ಕುಳಿತ ಮಕ್ಕಳು ಕಣ್ಣು ತಿಕ್ಕಿಕೊಳ್ಳುವುದು, ಮೂಗು, ಬಾಯಿ ಮುಚ್ಚಿಕೊಳ್ಳುವುದು, ಕೆಮ್ಮುವುದು ಕಾಣುತ್ತದೆ. ಗ್ಲಾಸ್ ಹಾಕಿದರೂ, ಬಿಟ್ಟರೂ ದೂಳಿನ ಕಾಟ ತಪ್ಪಲ್ಲ. ದೂಳು ಬಂದೇ ಬರುತ್ತದೆ. ಪ್ರಮುಖ ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಸಾಗುವುದರಿಂದ ದೂಳು ಅಷ್ಟೇ ವೇಗದಲ್ಲಿ ರಾಚುತ್ತದೆ ಎಂದು ಶಾಲಾ ವಾಹನಗಳ ಚಾಲಕರು, ಸಿಬ್ಬಂದಿ ಸಮಸ್ಯೆ ಹೇಳಿಕೊಳ್ಳುತ್ತಾರೆ.

ಕೆಮ್ಮುವುದು, ನರಳುವುದು ಸಾಮಾನ್ಯ: ನಮ್ಮಂತಹ ಬೀದಿ ಬದಿಯ ವ್ಯಾಪಾರಸ್ಥರಿಗೆ ದೂಳು ಒಗ್ಗಿ ಹೋಗಿದೆ. ಕೆಮ್ಮುವುದು, ನರಳುವುದು, ಆಸ್ತಮಾ ರೋಗಕ್ಕೆ ತುತ್ತಾಗುವುದು ಸಾಮಾನ್ಯ ಎಂಬಂತಾಗಿದೆ ಫುಟ್ ಪಾತ್ ವ್ಯಾಪಾರಸ್ಥರು ಸಮಸ್ಯೆ ಹೇಳಿಕೊಳ್ಳುತ್ತಾರೆ.

ಇಲ್ಲಿ ಬಿಟ್ಟು ಹೋದರೆ ಬದುಕು ನಡೆಯುವುದಿಲ್ಲ. ದೂಳು ಸಹಿಸಿಕೊಂಡೇ ವ್ಯಾಪಾರ ಮಾಡುತ್ತಿದ್ದೇವೆ. ಒಂದು ಕಡೆ ದೂಳು ಹೆಚ್ಚಾದರೆ ಇದೇ ರಸ್ತೆಯ ಮತ್ತೊಂದು ಕಡೆಗೆ ಹೋಗಿ ಸ್ವಲ್ಪ ಹೊತ್ತು ವ್ಯಾಪಾರ ಮಾಡುತ್ತೇವೆ ಎಂದು ಮಂಡಿಪೇಟೆ, ಜೆ.ಸಿ. ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಜನರಲ್ ಕಾರ್ಯಪ್ಪ ರಸ್ತೆಗಳ ಫುಟ್ ಪಾತ್ ವ್ಯಾಪಾರಸ್ಥರು ಸಮಸ್ಯೆ ಹೇಳಿಕೊಳ್ಳುತ್ತಾರೆ.

ಹಣ್ಣು, ತರಕಾರಿ ದೂಳುಮಯ: ಹೊರಪೇಟೆ, ಶೆಟ್ಟಿಹಳ್ಳಿ ಮುಖ್ಯ ರಸ್ತೆ, ಎಸ್.ಎಸ್.ಪುರಂ ಮುಖ್ಯ ರಸ್ತೆ, ಹನುಮಂತಪುರ, ಜೆ.ಸಿ. ರಸ್ತೆ ಹೀಗೆ ಕೆಲ ಕಡೆ ಬೆಳಿಗ್ಗೆ ಮತ್ತು ಸಂಜೆ ತರಕಾರಿ, ಹಣ್ಣು, ಹೂವು ಮಾರಾಟ ನಡೆಯುತ್ತದೆ. ಬಿ.ಎಚ್. ರಸ್ತೆಯಲ್ಲಂತೂ ಬೆಳಿಗ್ಗೆ ಸಂಜೆ ಈಚೆಗೆ ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳನ್ನೂ ದೂಳು ಬಿಟ್ಟಿಲ್ಲ.

ಪ್ಪು, ತರಕಾರಿಗಳಿಗೆ ದೂಳು ಮೆತ್ತಿಕೊಂಡಿರುತ್ತದೆ. ಮನೆಗೆ ಹೋಗಿ ತೊಳೆದಾಗ ಅದರ ಬಣ್ಣ ಬಯಲಾಗುತ್ತದೆ. ಈ ಸಮಸ್ಯೆ ಯಾರಿಗೆ ಹೇಳಿಕೊಳ್ಳಬೇಕು? ಎಂದು ಹೊರಪೇಟೆಗೆ ತರಕಾರಿ ಖರೀದಿಸಲು ಬಂದಿದ್ದ ಗ್ರಾಹಕ ಶಂಕರ್ ಪ್ರಶ್ನಿಸಿದರು.

ರೋಗದ ತಾಣ

ಅಂತರಸನಹಳ್ಳಿ ತರಕಾರಿ, ಹೂವು, ಹಣ್ಣು ಮಾರುಕಟ್ಟೆಯು ಮಾರುಕಟ್ಟೆಯಾಗಿ ಉಳಿದಿಲ್ಲ. ಅದು ಈಚೆಗೆ ಶ್ವಾಸಕೋಶ ಸಂಬಂಧಿ ರೋಗ ಹರಡುವ ತಾಣವಾಗಿದೆ. ಇಲ್ಲಿ ದೂಳೇ ಅಲ್ಲಿನ ತರಕಾರಿ, ಸೊಪ್ಪು ದೂಳುಮಯ. ಮಾರುಕಟ್ಟೆಗೆ ಹೆಜ್ಜೆ ಇಟ್ಟರೆ ಕೆಮ್ಮುತ್ತಲೇ ಇರಬೇಕು. ಮೂಗಿಗೆ ಕರವಸ್ತ್ರ ಕಟ್ಟಿಕೊಂಡೇ ಗ್ರಾಹಕರು ವಸ್ತುಗಳನ್ನು ಖರೀದಿ ಮಾಡಬೇಕಾದ ಸ್ಥಿತಿ ಇದೆ. ಇನ್ನು ವ್ಯಾಪಾರಸ್ಥರನ್ನು ಕೇಳಿದರೆ ಏನ್ಮಾಡೋದು ಅನುಭವಿಸಲೇಬೇಕು ಎಂದು ಒಂದೇ ಮಾತಿನಲ್ಲಿ ತಮ್ಮ ಸಮಸ್ಯೆ ಬಿಚ್ಚಿಡುತ್ತಾರೆ.

ಬಿಳಿ ಆನೆಯಂತಾದ ಸ್ವಚ್ಛತೆ ವಾಹನ

ರಸ್ತೆಯಲ್ಲಿನ ದೂಳು ಸ್ವಚ್ಛಗೊಳಿಸಲು ವಾಹನ ಇದೆ. ಆದರೆ, ಅದು ಬಿಳಿ ಆನೆಯಂತಾಗಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಮಹಾನಗರ ಪಾಲಿಕೆಗೆ ಈ ವಾಹನವನ್ನು ಖರೀದಿ ಮಾಡಲು ಇದ್ದ ಉತ್ಸಾಹ ಅದರ ಬಳಕೆಗೆ ಇಲ್ಲವಾಗಿದೆ.

ಈ ವಾಹನ ರಸ್ತೆ ಸ್ವಚ್ಛಗೊಳಿಸಿದ್ದಕ್ಕಿಂತ ನಿಂತಲ್ಲಿಯೇ ನಿಂತಿದ್ದೇ ಹೆಚ್ಚು. ಲಕ್ಷಾಂತರ ಹಣ ಖರ್ಚು ಮಾಡಿ ದೂಳು ಸ್ವಚ್ಛತೆಗೆ ಬಳಕೆ ಮಾಡದೇ ಇದ್ದರೆ ಏನು ಪ್ರಯೋಜನ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

’ವಾಹನ ಬಳಕೆ ಮಾಡಬೇಕು. ಆದರೆ ಪಾಲಿಕೆ ಬಳಕೆ ಮಾಡುತ್ತಿಲ್ಲದಿರುವುದು ಗೊತ್ತಿದೆ. ಅಧಿಕಾರಿಗಳನ್ನು ಪ್ರಶ್ನಿಸಿದರೆ ರಸ್ತೆಯಲ್ಲಿ ಸ್ವಚ್ಛಗೊಳಿಸುವಾಗ ಸಣ್ಣ ಅಪಘಾತವಾಗಿತ್ತು. ಆಗಿನಿಂದ ಬಳಕೆ ಮಾಡಿಲ್ಲ. ಬಳಕೆ ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿದ್ದಾರೆ. ಮುಂದಿನ ಸಾಮಾನ್ಯ ಸಭೆಯಲ್ಲಿಯೇ ಈ ಬಗ್ಗೆ ಚರ್ಚೆ ಮಾಡಬೇಕಾಗಿದೆ’ಎಂದು ಪಾಲಿಕೆ ಹಿರಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅನಾರೋಗ್ಯಕ್ಕೆ ಮಾರ್ಗ

‘ದೂಳಿನಿಂದ ಕೆಮ್ಮು, ನೆಗಡಿ, ಆಸ್ತಮಾ, ಚರ್ಮ ಖಾಯಿಲೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುತ್ತವೆ. ಎಷ್ಟೇ ಆರೋಗ್ಯಯುತ ವ್ಯಕ್ತಿ ಇದ್ದರೂ ದೂಳು ಇದ್ದರೆ ಬೇಗ ಅನಾರೋಗ್ಯಕ್ಕೀಡಾಗುತ್ತಾರೆ.ಆನಾರೋಗ್ಯಕ್ಕೆ ದೂಳು ಒಂದು ಮಾರ್ಗವಾಗಿದೆ’ ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ವೀರಭದ್ರಯ್ಯ ತಿಳಿಸಿದರು.

‘ಸಾರ್ವಜನಿಕರು ಆದಷ್ಟು ದೂಳಿನಿಂದ ರಕ್ಷಣೆಗೆ ಒತ್ತು ಕೊಡಬೇಕು. ಸ್ಥಳೀಯ ಸಂಸ್ಥೆಗಳು ಫುಟ್ ಪಾತ್ ಪಕ್ಕ ಸೇರಿಕೊಂಡ ಮಣ್ಣನ್ನು ಸ್ವಚ್ಛಗೊಳಿಸಿದರೆ ದೂಳು ನಿಯಂತ್ರಣವಾಗುತ್ತದೆ. ದೂಳು ಏಳುವ ರಸ್ತೆಗಳಲ್ಲಿ ನೀರು ಸಿಂಪರಣೆ ಮಾಡಿ ಸುರಕ್ಷತಾ ಕ್ರಮ ಕೈಗೊಂಡರೆ ಜನರ ಆರೋಗ್ಯ ರಕ್ಷಣೆ ಆಗುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry