7

ಪುರಸಭೆಯ ಕನಸು; ಸೌಕರ್ಯಕ್ಕೆ ಬಡಿದ ಕತ್ತಲು

Published:
Updated:
ಪುರಸಭೆಯ ಕನಸು; ಸೌಕರ್ಯಕ್ಕೆ ಬಡಿದ ಕತ್ತಲು

ಕೊರಟಗೆರೆ: ಇಲ್ಲಿನ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರುವ ಹೊಸ್ತಿಲಲ್ಲಿ ಇದ್ದರೂ ಚರಂಡಿ ಹಾಗೂ ಇನ್ನಿತರೆ  ಮೂಲಸೌಕರ್ಯಗಳಿಲ್ಲದೇ ಪಟ್ಟಣ ಬಳಲುತ್ತಿದೆ.

’ಪಟ್ಟಣದ ಅಭಿವೃದ್ಧಿಗಾಗಿ ದುಡಿಯುವಲ್ಲಿ ಪುರಸಭೆ ಆಡಳಿತ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ‍ಸದಸ್ಯರಿಗೆ ದೂರದೃಷ್ಟಿಯೇ ಇಲ್ಲವಾಗಿದೆ. ಅವರಿಗೆ ನಗರದ ಅಭಿವೃದ್ಧಿ ಬೇಕಾಗಿಲ್ಲ. ಕಾಲಹರಣ ಮಾಡುತ್ತಿದ್ದಾರೆ’ ಜನರು ದೂರುತ್ತಿದ್ದಾರೆ.

ಜಿಲ್ಲೆಯ ಅತಿ ಚಿಕ್ಕ ಪಟ್ಟಣವಾಗಿದ್ದರೂ 2011ರ ಜನಗಣತಿ ಪ್ರಕಾರ ಸುಮಾರು 15,265 ಜನಸಂಖ್ಯೆ ಇದೆ.ಜನಸಂಖ್ಯೆ ಆಧಾರದಲ್ಲಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವಂತೆ ಜನರಿಗೆ, ಸಂಘ ಸಂಸ್ಥೆಗಳಿಂದ ಒತ್ತಾಯ ಕೇಳಿಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಪಟ್ಟಣದ ಅಭಿವೃದ್ಧಿಯೂ ನಡೆಯಬೇಕಾಗಿತ್ತು. ಆದರೆ ಈ ರೀತಿಯ ಕೆಲಸ ಆಗುತ್ತಿಲ್ಲ ಎಂಬುದು ಜನರ ನೋವು ಆಗಿದೆ.

ಪಟ್ಟಣದಲ್ಲಿ ಎಲ್ಲೆ ನೋಡಿದರೂ ತೆರೆದ ಚರಂಡಿಗಳೇ ಕಾಣ ಸಿಗುತ್ತಿವೆ. ತಾಲ್ಲೂಕು ಪಟ್ಟಣವಾದರೂ ಒಳಚರಂಡಿ ವ್ಯವಸ್ಥೆ ಮಾತ್ರ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ. ಪಟ್ಟಣದ ಬಹಳಷ್ಟು ಕಡೆಗಳಲ್ಲಿ ಮನೆ, ಶೌಚಾಲಯದ ಕಕ್ಕಸಿನ ನೀರನ್ನು ತೆರೆದ ಚರಂಡಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಚರಂಡಿಗಳು ದುರ್ನಾಥ ಬೀರುತ್ತಿವೆ.

ಮುಖ್ಯ ರಸ್ತೆ ಅಕ್ಕಪಕ್ಕದಲ್ಲಿನ ಚರಂಡಿಗಳೂ ಕೂಡ ಇದರಿಂದ ಹೊರತಾಗಿಲ್ಲ. ಸೊಳ್ಳೆ, ನೊಣಗಳ ಕಾಟ ಹೆಚ್ಚಾಗುತ್ತಲೆ ಇದೆ. ತೆರೆದ ಚರಂಡಿಗಳು ಪಟ್ಟಣದ  ಅಂದವನ್ನೇ ಕೆಡಿಸಿವೆ. ಹಂದಿಗಳ ಸಂಖ್ಯೆ ವಿಪರೀತವಾಗಿದೆ. ಅನೈರ್ಮಲ್ಯದ ಕಾರಣ ಜ್ವರ ಹಾಗೂ  ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ.

ರೋಗ ಹರಡದಂತೆ, ದುರ್ವಾಸನೆ ಬೀರದಂತೆ ಬ್ಲೀಚಿಂಗ್ ಪೌಡರ್ ಹಾಕುವುದಾಗಲೀ, ಸೊಳ್ಳೆ ನಿಯಂತ್ರಣಕ್ಕೆ ಪಟ್ಟಣದಾದ್ಯಂತ ಧೂಮೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಕೆಲವು ಮಾಂಸದ ಅಂಗಡಿಗಳು ತ್ಯಾಜ್ಯವನ್ನು ಚರಂಡಿಗೆ ಎಸೆಯುತ್ತಿದ್ದಾರೆ. ಖಾಸಗಿ ಸೇರಿದಂತೆ ಸರ್ಕಾರಿ ಆಸ್ಪತ್ರೆಯಿಂದ ಹೊರ ಹೋಗುವ ತ್ಯಾಜ್ಯದ ನೀರು ಕೂಡ ಚರಂಡಿಗೆ ಬಿಡಲಾಗುತ್ತಿದೆ.ಆದರೂ ಪರಿಸರ ಅಧಿಕಾರಿಗಳು ಮೌನವಾಗಿರುವುದು ಜನರಲ್ಲಿ ಅನೇಕ ಅನುಮಾನಗಳಿಗೆ ಕಾರಣವಾಗುತ್ತಿದೆ.

ಪಟ್ಟಣದ ಎಲ್ಲ ಚರಂಡಿಗಳು, ನೂರಾರು ಮನೆಗಳ ಕಕ್ಕಸಿನ ನೀರನ್ನು ಪಟ್ಟಣಕ್ಕೆ ಹೊಂದಿಕೊಂಡಿರುವ ಸುವರ್ಣಮುಖಿ ನದಿಗೆ ಬಿಡಲಾಗಿದೆ. ಇದರಿಂದಾಗಿ ನದಿಯೂ ಕಲುಷಿತವಾಗುತ್ತಿದೆ. ತ್ಯಾಜ್ಯ ಒಳಗೊಂಡ ನೀರು ನದಿ ಮೂಲಕ ಕೆಳ ಭಾಗದಲ್ಲಿ ಬರುವ ಕೆರೆಗಳಿಗೆ ಸೇರುತ್ತಿದೆ. ಇಲ್ಲಿನ ಗೋಕುಲದ ಕೆರೆಗೂ ಚರಂಡಿಯ ಕಲುಷಿತ ನೀರು ಹರಿಯುತ್ತಿದ್ದು ಕೆರೆ ನೀರು ಕೂಡ ಕಲುಷಿತಗೊಂಡಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಏನು ಮಾಡುತ್ತಿದೆ?

‘ನದಿ, ಕೆರೆಗಳಿಗೆ ಚರಂಡಿ ನೀರು ಬಿಡಬಾರದು. ಪರಿಸರ ಮಾಲಿನ್ಯನಿಯಂತ್ರಣ ಮಂಡಳಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಹಿರಿಯ ನಾಗರಿಕರೊಬ್ಬರು ಒತ್ತಾಯಿಸಿದರು.

ಇದೆಲ್ಲ ಸಮಸ್ಯೆಗೆ ಪ್ರಮುಖ ಕಾರಣ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೇ ಇರುವುದು. ಒಳ ಚರಂಡಿ ಯೋಜನೆಯನ್ನು ಪಟ್ಟಣಕ್ಕೂ ತರಬೇಕು. ಕಲುಷಿತ ಹಾಗೂ ರೋಗಗಳಿಂದ ಮುಕ್ತವಾಗಲು ಒಳ ಚರಂಡಿಯ ಅವಶ್ಯಕತೆ ಹೆಚ್ಚಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

* * 

ನಗರ ಮತ್ತು ಒಳಚರಂಡಿ ಇಲಾಖೆಯಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಗಾಗಿ ₹ 49 ಕೋಟಿಯ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry