5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಅಭದ್ರತೆ: ಹಳ್ಳಿಗಳಲ್ಲಿ ಸೇವೆಗೆ ವೈದ್ಯರ ಹಿಂದೇಟು

Published:
Updated:
ಅಭದ್ರತೆ: ಹಳ್ಳಿಗಳಲ್ಲಿ ಸೇವೆಗೆ ವೈದ್ಯರ ಹಿಂದೇಟು

ವಿಜಯಪುರ: ‘ವೈದ್ಯರ ಮೇಲೆ ಹಲ್ಲೆ, ಆಸ್ಪತ್ರೆಗಳ ಮೇಲಿನ ದಾಳಿಯಿಂದ ಇಡೀ ವೈದ್ಯ ಸಮುದಾಯವೇ ನೊಂದು ಹೋಗಿದ್ದು, ವೈದ್ಯರು ದೇವರಲ್ಲ. ತಮ್ಮ ಕರ್ತವ್ಯ ಮಾತ್ರ ಮಾಡುತ್ತಾರೆ ಎಂಬುದನ್ನು ಮಾಧ್ಯಮಗಳು, ಸಮಾಜ ಗಮನಿಸಬೇಕು’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಮಂಜುನಾಥ ಹೇಳಿದರು.

ನಗರದ ಬಿ.ಎಲ್.ಡಿ.ಇ ವಿಶ್ವ ವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ‘ಇಂದು ಶೇ 60 ರಷ್ಟು ವೈದ್ಯರು ಮಹಿಳೆಯರಾಗಿದ್ದು, ಅಭದ್ರತೆಯ ಕಾರಣಕ್ಕಾಗಿ ಹಳ್ಳಿಗಳಿಗೆ ಹೋಗಿ ಸೇವೆ ಮಾಡಲು ಮುಂದೆ ಬರುತ್ತಿಲ್ಲ. ವೈದ್ಯರು ಕೂಡ ಹಣದ ಹಿಂದೆ ಬೀಳದೆ ಸಮಾಜದಲ್ಲಿ ನಿಮ್ಮ ಸೇವೆಯಿಂದ ಗೌರವವನ್ನು ಹೆಚ್ಚಿಸಿಕೊಳ್ಳಲು ಟ್ರಿಟ್ಮೆಂಟ್ ಫಸ್ಟ್, ಪೇಮೆಂಟ್ ಲಾಸ್ಟ್ ಎಂಬ ಧ್ಯೇಯವನ್ನು ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ಶೇ 50ರಷ್ಟು ಮರಣ ಗಳು ಸಾಂಕ್ರಾಮಿಕ ರೋಗಗಳಿಂದ, ಶೇ 50 ಮರಣಗಳು ಅಸಾಂಕ್ರಾಮಿಕ ರೋಗಗಳಿಂದ ಸಂಭವಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಡೆಂಗಿಯಂತಹ ಕಾಯಿಲೆಗಳನ್ನು ತಪ್ಪಿಸಲು ತೆಲಂಗಾಣದಲ್ಲಿ ಬಡವರಿಗೆ 26 ಲಕ್ಷ ಸೊಳ್ಳೆ ಪರದೆಗಳನ್ನು ನೀಡಿ ದ್ದಾರೆ. ಅಸಾಂಕ್ರಾಮಿಕ ರೋಗಗಳು ನಮ್ಮ ಜೀವನ ಶೈಲಿಯಿಂದ ಉಂಟಾ ಗುವ ರೋಗಗಳಾದ ಹೃದಯಾಘಾತ, ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು, ಕ್ಯಾನ್ಸರ್ ಮಾರಣಾಂತಿಕವಾಗಿ ಪರಿಣಮಿಸಿವೆ’ ಎಂದರು.

‘40 ವರ್ಷದೊಳಗಿನ ಯುವಕರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ಹಿಂದೆ ಮಕ್ಕಳು ತಮ್ಮ ಪಾಲಕರನ್ನು ಹೃದಯದ ಕಾಯಿಲೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಪಾಲಕರೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದರು.

ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೊಧನೆಗಳಿಂದ ಭಾರತ ಸೂಪರ್ ಪಾವರ್ ರಾಷ್ಟ್ರವಾಗಲು ಸಾಧ್ಯ. ರೋಬೋಟಿಕ್ ಸರ್ಜರಿ, ಜೀನ್‌ ಥೆರಪಿ ಮುಂದಿನ ದಿನಗಳಲ್ಲಿ ವೈದ್ಯಕೀಯ ಲೋಕದಲ್ಲಿ ಕಾರ್ಯಮಾಡಲಿದ್ದು, ಹೃದಯ, ಯಕೃತ್‌ ಮರುಜೋಡಣೆ ಸಾಮಾನ್ಯವಾಗಲಿದೆ’ ಎಂದರು.

ಐದು ಚಿನ್ನದ ಪದಕ ಪಡೆದ ಡಾ.ಪರಿಮಿತ ಚೌಧರಿ, ಎರಡು ಚಿನ್ನದ ಪದಕ ಪಡೆದ ಡಾ.ವಿಧ್ಯುಕ್ತ ಗೋಸ್ವಾಮಿ, ಡಾ.ಅಭಿಜ್ಞಾ, ಡಾ.ಶೃತಿ ಕೊಳ್ಳಿ, ಡಾ.ವಿಜಯ ಮಹಾಂತೇಶ, ಡಾ.ಅಸ್ಮಾ ಮಹಾಲ್ದಾರ ಅವರನ್ನು ಇದೇ ವೇಳೆ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ, ಸಚಿವ ಎಂ.ಬಿ.ಪಾಟೀಲ ಗೌರವಿಸಿದರು.

ಡಾ.ಎಸ್.ಎಸ್.ದೇವರಮನಿ, ಡಾ.ಬಿ.ಜಿ.ಮೂಲಿಮನಿ, ಆಡಳಿತ ಮಂಡಳಿ ಸದಸ್ಯರಾದ ಆನಂದಕುಮಾರ ದೇಸಾಯಿ, ಅಶೋಕ ವಾರದ, ಡಾ.ಗುಗ್ಗರಿ ಗೌಡರ, ಡಾ.ಜೆ.ಜಿ.ಅಂಬೇಕರ ಉಪಸ್ಥಿತರಿದ್ದರು. ಉಪಕುಲಪತಿ ಡಾ.ಎಂ.ಎಸ್.ಬಿರಾದಾರ ಸ್ವಾಗತಿಸಿದರು.

* * 

ಅಪೌಷ್ಠಿಕತೆ, ಅಶುದ್ಧ ನೀರು ಬಳಕೆ, ವಾಯು ಮಾಲಿನ್ಯ ಅನಾರೋಗ್ಯಕ್ಕೆ ಮೂಲ ಕಾರಣ. ಇವನ್ನು ತಡೆಗಟ್ಟಲು ಸರ್ಕಾರ, ಸಮಾಜ ಮುಂದಾಗಬೇಕು

ಡಾ.ಮಂಜುನಾಥ

ನಿರ್ದೇಶಕ ಜಯದೇವ ಹೃದ್ರೋಗ ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry