ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯಕ್ಕೆ ಚ್ಯುತಿ

ಜಾತ್ಯತೀತ ಎಂಬ ಸ್ಪಷ್ಟ ಅರ್ಥಕ್ಕೆ ಬದಲಾಗಿ ‘ಸರ್ವಧರ್ಮ ಸಮಭಾವ’ ಎಂಬ ತಿಪ್ಪೆ ಸಾರಿಸುವ ಪದಪ್ರಯೋಗ ಹಲವರಿಗೆ ಪಲಾಯನದ ಉಪಾಯವಾಗಿದೆ
Last Updated 27 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವೆಂಬರ್‌ ಇಪ್ಪತ್ತಾರನ್ನು ದೇಶದಾದ್ಯಂತ ಸಂವಿಧಾನ ದಿನವನ್ನಾಗಿ ಆಚರಿಸಿದ್ದೇವೆ. ಭಾರತ ಸಂವಿಧಾನವನ್ನು 1949ರ ನವೆಂಬರ್ 26ರಂದು ಸಂವಿಧಾನ ಸಭೆ ಅಂಗೀಕರಿಸಿತು. ಇದು 1950ರ ಜನವರಿ 26ರಿಂದ ಜಾರಿಗೆ ಬಂದಿತು. ಎಲ್ಲಾ ಆಚರಣೆಗಳ ಹಾಗೆ ‘ಸಂವಿಧಾನ ದಿನ’ವೂ ಒಂದು ಸಾಂಪ್ರದಾಯಿಕ ಆಚರಣೆಯ ರೂಪವನ್ನು ಪಡೆದಿದೆ. ಪತ್ರಿಕೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಜಾಹೀರಾತುಗಳು ರಾರಾಜಿಸಿವೆ. ಇನ್ನು ಕೆಲವೇ ವರ್ಷಗಳಲ್ಲಿ ಆ ದಿನದಂದು ಎಲ್ಲಾ ಶಾಲಾ–ಕಾಲೇಜು, ಕಚೇರಿಗಳಲ್ಲಿ ಸಂವಿಧಾನದ ಒಂದು ಪ್ರತಿಯನ್ನು ಪೀಠದ ಮೇಲೆ ಇಟ್ಟು, ಹಾರ ಹಾಕಿ, ದೀಪ ಬೆಳಗಿ, ಊದಿನ ಕಡ್ಡಿ ಹಚ್ಚಿ, ತೆಂಗಿನ ಕಾಯಿ ಒಡೆದು ಪೂಜೆ ಮಾಡಿ, ಪ್ರಸಾದ ಹಂಚಿ ಜನ್ಮ ಸಾರ್ಥಕ ಮಾಡಿಕೊಂಡರೆ ಏನೂ ಆಶ್ಚರ್ಯವಿಲ್ಲ.

ಈಗ ಭಾರತ ಸಂವಿಧಾನದ ಪೀಠಿಕೆಯಲ್ಲಿರುವ ಒಂದು ಪದ ನನ್ನನ್ನು ಯಾವಾಗಲೂ ಚಿಂತಿಸುವಂತೆ ಮಾಡುತ್ತದೆ. ನಮ್ಮದು ಎಂಥ ದೇಶ ಎಂದು ನಿರೂಪಿಸಲು ಪೀಠಿಕೆಯಲ್ಲಿಯೇ, ‘Sovereign Socialist Secular Democratic Republic’ ಎಂದು ನಮೂದಿಸಲಾಗಿದೆ. ನನಗೆ ಕಾಡುವುದು Secular ಎಂಬ ಪದ. ಯಾವುದೇ ಅಧಿಕೃತ ನಿಘಂಟುವಿನಲ್ಲಿ ಈ ಪದದ ಅರ್ಥವನ್ನು ‘ಧರ್ಮ ಅಥವಾ ಆಧ್ಯಾತ್ಮಿಕ ವಿಚಾರಗಳಿಗೆ ಸಂಬಂಧಿಸದೇ ಇರುವುದು’, ‘ಧಾರ್ಮಿಕ ನಿಯಮಗಳಿಗೆ ಬದ್ಧವಾಗಿರದೇ ಇರುವುದು’ ಎಂಬಂತೆ ಕೊಡಲಾಗಿದೆ. ಕಣಜ ಅಂತರ್ಜಾಲ ಜ್ಞಾನಕೋಶದಲ್ಲಿ ಸೆಕ್ಯುಲರ್ ಎಂದರೆ ‘ಜಾತ್ಯತೀತ, ಮತಾತೀತ, ಪಾರಮಾರ್ಥಿಕವಲ್ಲದ, ಐಹಿಕ’ ಇತ್ಯಾದಿ ಅರ್ಥವನ್ನು ನೀಡಲಾಗಿದೆ.

ನಾನು ನಮ್ಮ ರಾಷ್ಟ್ರವನ್ನು ವರ್ಣಿಸಲು ಬಳಸಿರುವ ಇತರ ನಾಲ್ಕು ಗುಣವಾಚಕಗಳ ಕುರಿತು ಈಗ ಮಾತಾಡುತ್ತಿಲ್ಲ. ಸೆಕ್ಯುಲರ್ ಎನ್ನುವ ಪದವನ್ನಷ್ಟೆ ನಾವು ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದ್ದೇವೆ, ಸಂವಿಧಾನದ ಈ ಧ್ಯೇಯಕ್ಕೆ ಎಷ್ಟರಮಟ್ಟಿಗೆ ಬದ್ಧರಾಗಿದ್ದೇವೆ ಎಂಬುದರ ಕುರಿತು ಮಾತ್ರ ಮಾತಾಡುತ್ತಿದ್ದೇನೆ. ಒಂದು ರೀತಿಯಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆ ಸೆಕ್ಯುಲರ್ (ಜಾತ್ಯತೀತ) ಮನೋಭಾವವನ್ನು ಕಾಯಾ ವಾಚಾ ಮನಸಾ ಅನುಸರಿಸದೇ ಇದ್ದರೆ ಉಳಿದೆಲ್ಲಾ ಪದಗಳೂ ಬರೀ ಆಲಂಕಾರಿಕವಾಗುತ್ತವೆ. ನಮ್ಮ ದೇಶದಲ್ಲಿ ಎಲ್ಲವನ್ನೂ ಆಡಂಬರದ ಆಚರಣೆಯಲ್ಲಿ ಸಮಾಧಿ ಮಾಡುವ ದುರಭ್ಯಾಸ ಎಲ್ಲ ರಾಜಕೀಯ ಪಕ್ಷಗಳಲ್ಲಿದೆ; ಹೆಚ್ಚಿನ ಜನರೂ ಇದರಲ್ಲಿ ಸಾರ್ಥಕ ಭಾವವನ್ನು ತಾಳುತ್ತಾರೆ. ನಾವು ಬುದ್ಧ, ಬಸವ, ವಿವೇಕಾನಂದ, ಗಾಂಧಿ, ನೆಹರೂ, ಅಂಬೇಡ್ಕರ್ ಎಲ್ಲರನ್ನೂ ಕಲ್ಲಿನಲ್ಲಿ ಕಡೆದು ನಿಲ್ಲಿಸಿಬಿಡುತ್ತೇವೆ. ಅವರ ಸಿದ್ಧಾಂತಗಳನ್ನು ಹುಗಿದು ಬಿಡುತ್ತೇವೆ. ಭಾರತ ಸಂವಿಧಾನವೂ ಆ ಹಾದಿಯಲ್ಲಿದೆ.

ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರಿಗೆ ಇದ್ದ ಹಲವು ಭಿನ್ನಾಭಿಪ್ರಾಯಗಳಲ್ಲಿ ಒಂದು ಮುಖ್ಯವಾದ ವಿಚಾರವಿತ್ತು: ಸನಾತನ ಧರ್ಮನಿಷ್ಠರಾದ ಗಾಂಧಿಯವರು ದೇಶಕ್ಕೆ ರಾಜಕೀಯ ಸ್ವಾತಂತ್ರ್ಯವನ್ನು ಗಳಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡಿದರು. ಆದರೆ ಅಂಬೇಡ್ಕರ್, ‘ರಾಜಕೀಯ ಸ್ವಾತಂತ್ರ್ಯ ಇನ್ನಷ್ಟು ತಡವಾದರೆ ಹೆಚ್ಚು ಹಾನಿಯಿಲ್ಲ, ಈ ದೇಶದಲ್ಲಿ ಮೊದಲು ಸಾಮಾಜಿಕ ಸಮಾನತೆ ಮೂಡಬೇಕು. ಧರ್ಮ, ಸಂಸ್ಕೃತಿ, ಸಂಪ್ರದಾಯಬದ್ಧ ಅಸಮಾನತೆ, ತಾರತಮ್ಯವನ್ನು ಮೈಗೂಡಿಸಿಕೊಂಡ ಭಾರತ ಕೇವಲ ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದರೆ ಏನು ಸಾರ್ಥಕ’ ಎಂದಿದ್ದರು.

ದೇಶ ಈಗಿರುವ ಸ್ಥಿತಿಯಲ್ಲಿ ರಾಜಕೀಯ ಸ್ವಾತಂತ್ರ್ಯ ಪಡೆದರೆ ಈವರೆಗೆ ರಾಜರು, ಸುಲ್ತಾನರು, ಕೊನೆಯಲ್ಲಿ ಸಾಮ್ರಾಜ್ಯಶಾಹಿಗಳು ಆಳುತ್ತಿದ್ದ ದೇಶ ಶ್ರೀಮಂತರು, ಬಂಡವಾಳಶಾಹಿಗಳು, ಭೂಮಾಲೀಕರು, ಉದ್ಯಮಗಳ ಒಡೆಯರು, ಪುರೋಹಿತಶಾಹಿಗಳು, ಧಾರ್ಮಿಕವಾದಿಗಳು, ಮಠಮಾನ್ಯರು ಇಂಥವರ ಕೈಸೇರುತ್ತದೆ. ಸಾಂಪ್ರದಾಯಿಕತೆ, ಫ್ಯೂಡಲ್, ಫ್ಯಾಸಿಸ್ಟ್ ಮನೋಭಾವಗಳು ಸ್ವತಂತ್ರ ಭಾರತದಲ್ಲಿಯೂ ಮುಂದುವರಿಯುತ್ತವೆ ಎಂಬುದು ಅವರ ಆತಂಕವಾಗಿತ್ತು. ಈ ಸನಾತನ ಧಾರ್ಮಿಕ, ಮೂಲಭೂತವಾದಿ ಮನೋಭಾವಗಳು ನಮಗೇ ಗೊತ್ತಿಲ್ಲದ ಹಾಗೆ ನಮ್ಮನ್ನು ಆವರಿಸುವ ರೀತಿ ಬಹಳ ವಿಚಿತ್ರ.

ಒಂದು ಉದಾಹರಣೆ ಕೊಡುತ್ತೇನೆ: ಭಾರತ ಸಂವಿಧಾನದ ಹಿಂದಿ, ಮರಾಠಿ, ಬಂಗಾಲಿ, ತೆಲುಗು, ತಮಿಳು ಇತ್ಯಾದಿ ಭಾಷಾಂತರದಲ್ಲಿ Secular ಎಂಬ ಪದಕ್ಕೆ ‘ಧರ್ಮನಿರಪೇಕ್ಷಿತ’, ‘ಮತ ಸಂಬಂಧಮು ಲೇನಿ’, (ಮತಕ್ಕೆ ಸಂಬಂಧವಿಲ್ಲದ್ದು) ‘ಉಲಗಸಂಬಂಧಮಾನ’(ಪ್ರಪಂಚಕ್ಕೆ ಸಂಬಂಧಿಸಿದ್ದು-ಲೌಕಿಕ) ಎನ್ನುವ ಸಂವಾದಿ ಪದಗಳನ್ನು ಬಳಸಲಾಗಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಕಟವಾಗಿರುವ ಅಧಿಕೃತ ಕನ್ನಡ ಆವೃತ್ತಿಯಲ್ಲಿ Secular ಎಂಬ ಪದವನ್ನು ‘ಸರ್ವಧರ್ಮ ಸಮಭಾವದ’ ಎಂದು ಅನುವಾದಿಸಿದ್ದಾರೆ. ಈ ಬೌದ್ಧಿಕ ಪಿತೂರಿಯನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ, ಈ ವರ್ಷ ಕರ್ನಾಟಕ ಸರ್ಕಾರ ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ನೀಡಿರುವ ಜಾಹೀರಾತಿನಲ್ಲಿರುವ ಸಂವಿಧಾನದ ಪೀಠಿಕೆಯ ಸುಂದರ ಚಿತ್ರದಲ್ಲಿ ಸೆಕ್ಯುಲರ್ ಪದಕ್ಕೆ ಸಂವಾದಿಯಾಗಿ ‘ಜಾತ್ಯತೀತ’ ಎಂಬ ಪದವನ್ನು ಬಳಸಿರುವುದು ಸ್ವಾಗತಾರ್ಹ, ಆದರೆ ಈ ಗೊಂದಲ ಆತಂಕಕಾರಿ. ಜಾತ್ಯತೀತ ಎಂಬ ಸ್ಪಷ್ಟ ಅರ್ಥಕ್ಕೆ ಬದಲಾಗಿ ‘ಸರ್ವಧರ್ಮ ಸಮಭಾವ’ದ ಎಂಬ ತಿಪ್ಪೆ ಸಾರಿಸುವ ಪದಪ್ರಯೋಗವು ಸಾಂಪ್ರದಾಯಿಕ ಮೂಢನಂಬಿಕೆ, ಮೌಢ್ಯಾಚರಣೆಗಳನ್ನು ಗೆಲ್ಲಲಾರದ ಎಲ್ಲಾ ರಾಜಕಾರಣಿ, ರಾಜಕೀಯ ಪಕ್ಷಗಳು, ಧಾರ್ಮಿಕ ಸಂಸ್ಥೆಗಳು, ಹಲವು ಬಗೆಯ ಚಿಂತಕರಿಗೆ ಪಲಾಯನದ ಉಪಾಯವಾಗಿದೆ. ಸರ್ಕಾರ ಎಲ್ಲಾ ಜಾತಿ- ಧರ್ಮಗಳ ಗುಡಿಗುಂಡಾರಗಳಿಗೆ, ಮಠಾದಿಗಳಿಗೆ, ಪುಣ್ಯಕ್ಷೇತ್ರ ದರ್ಶನಕ್ಕೆ, ಹಬ್ಬ ಉತ್ಸವಕ್ಕೆ ಅನುದಾನ, ಧನಸಹಾಯಗಳನ್ನು ನೀಡುವುದರಲ್ಲಿ ನಾಮುಂದು ನೀಮುಂದು ಎಂದು ಸಾರ್ವಜನಿಕ (ಸರ್ವ ಜನರಿಗೆ ಸಂಬಂಧಿಸಿದ, ಸರ್ವಜನರಿಂದ ವಸೂಲಾದ) ಹಣವನ್ನು ದಾನ ಮಾಡುತ್ತಿದೆ. ‘ಅತ್ತೆ ಆಸ್ತಿ ಅಳಿಯ ದಾನ ಮಾಡಿದ ಅಂತಾರಲ್ಲ’ ಹಾಗೆ.

ಹೀಗಾಗಿ ನಮ್ಮಲ್ಲಿ ಹೆಚ್ಚು ಹೆಚ್ಚು ಜಾತಿಗಳು ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವುದಕ್ಕೆ ಪೈಪೋಟಿ ನಡೆಸಿವೆ. ಜಾತಿ, ಧರ್ಮದ ಆಧಾರದ ಮೇಲೆ ಅಧಿಕಾರದ ಗದ್ದುಗೆಗಳನ್ನು ವಶಪಡಿಸಿಕೊಳ್ಳುವುದು ಇವರ ಹುನ್ನಾರ. ‘ಮತ ಬ್ಯಾಂಕು’ ಎನ್ನುವ ಕೆಟ್ಟ ಸಂಪ್ರದಾಯವನ್ನು ಎಲ್ಲಾ ಪಕ್ಷಗಳು ಅನುಸರಿಸುತ್ತಿವೆ. ಸಾರ್ವಜನಿಕ ಸ್ಥಾನಮಾನದಲ್ಲಿರುವವರೂ ದೇವಸ್ಥಾನ, ದರ್ಗಾ, ಈದಗಾಗಳಿಗೆ ಹೋಗುತ್ತಾರೆ. ತಮ್ಮ ತಮ್ಮ ಶಾಸಕ, ಸಚಿವ ಸ್ಥಾನಮಾನದೊಂದಿಗೇ ಯಜ್ಞಯಾಗಾದಿಗಳಲ್ಲಿ, ಹವನಹೋಮಗಳಲ್ಲಿ ಸಾಲಂಕೃತರಾಗಿ ಕುಟುಂಬ ಸಮೇತರಾಗಿ ಭಾಗವಹಿಸುತ್ತಾರೆ. ಸರ್ಕಾರದ ವತಿಯಿಂದಲೇ ಪೂಜೆಗಳು ನಡೆಯುತ್ತವೆ; ವಿಧಾನ ಸೌಧದಲ್ಲಿಯೇ ಶುಕ್ರವಾರದಂದು ಕೆಲವು ಜನ ಕೆಲಸ ಬಿಟ್ಟು ನಮಾಜಿಗೆ ಹೋದರೆ, ಅವರು ಬರುವ ಹೊತ್ತಿಗೆ ಉಳಿದವರು ವರಮಹಾಲಕ್ಷ್ಮಿ ಪೂಜೆ ಮಾಡಿ, ರಾಜ್ಯದ ದೂರದ ಮೂಲೆಯಿಂದ ಅಲ್ಲಿ ಕೆಲಸವಾಗಿಲ್ಲವೆಂದು ಕಂಗಾಲಾಗಿ ಬರುವ ಈ ದೇಶದ ನಾಗರಿಕರಿಗೆ ಪ್ರಸಾದ ಹಂಚಿ ‘ಮುಂದಿನ ವಾರ ಬನ್ನಿ’ ಎನ್ನುತ್ತಾರೆ. ಇವರೇ, ‘ಸಾರ್ವಭೌಮ ಸಮಾಜವಾದಿ ಜಾತ್ಯತೀತ ಜನಸತ್ತಾತ್ಮಕ ಗಣರಾಜ್ಯ’ದ ಆಳುವ ಮತ್ತು ಅಧಿಕಾರ ವರ್ಗ. ನವೆಂಬರ್ 26 ತಾರೀಕು ಭಾರತ ಸಂವಿಧಾನ ದಿನವನ್ನು ಆಚರಿಸುವವರೂ ಇವರೇ!

ಈ ದೇಶದ ಜನ ತಮಗೆ ತಾವೇ ಅರ್ಪಿಸಿಕೊಂಡಿರುವ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ನಾಗರಿಕರ 11 ಮೂಲಭೂತ ಕರ್ತವ್ಯಗಳಲ್ಲಿ ‘ಧರ್ಮ, ಭಾಷೆ, ಪ್ರದೇಶ, ಜಾತಿ ಮತ್ತು ಪಂಗಡಗಳ ಭಿನ್ನತೆಯನ್ನು ಮೀರಿ ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯ ಮತ್ತು ಸಮಾನ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು’ [ಅನುಚ್ಛೇದ 51 ಎ (ಇ)] ಮತ್ತು ‘ವೈಜ್ಞಾನಿಕ ಮನೋವೃತ್ತಿ, ಮಾನವೀಯ ಸಂವೇದನೆ, ಜಿಜ್ಞಾಸೆ ಮತ್ತು ಸುಧಾರಣ ಮನೋಭಾವವನ್ನು ಬೆಳೆಸಿಕೊಳ್ಳುವುದು’, [ಅನುಚ್ಛೇದ 51 ಎ (ಎಚ್)]- ಇವೂ ಸೇರಿವೆ.

ಆದರೆ ಒಂದು ಧರ್ಮದ ಪಾರಮ್ಯವನ್ನು ಮೆರೆಯಲು ಉಡುಪಿಯಲ್ಲಿ ಧರ್ಮ ಸಂಸತ್‌ ನಡೆಯುತ್ತದೆ; ಒಂದು ಭಾಷೆಯ ಪಾರಮ್ಯವನ್ನು ವೈಭವೀಕರಿಸಲು ಮೈಸೂರಿನಲ್ಲಿ ಬೃಹತ್ ಜಾತ್ರೆ ನಡೆಯುತ್ತದೆ. ಇವೆರಡೂ ಭಾರತ ಸಂವಿಧಾನ ದಿನವಾದ ನವೆಂಬರ್ 26ರಂದು ನಡೆದದ್ದು ಕೇವಲ ಕಾಕತಾಳೀಯವಾಗಿರಬಹುದೇ? ಇದನ್ನು ಹೇಗೆ ಸ್ವಾಮಿ ಅರ್ಥ ಮಾಡಿಕೊಳ್ಳುವುದು? ಎಲ್ಲಾ ಬಗೆಯ ಲಾಭಕೋರರ ಈ ಪಿತೂರಿಯನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳದೇ ಹೋದರೆ ಭಾರತ ಸಂವಿಧಾನ ಅಪಾಯ ಎದುರಿಸಬೇಕಾಗುತ್ತದೆ. ಈ ಸಾರ್ವಭೌಮ ದೇಶದ ಒಡೆಯರು ತಾವು; ಉಳಿದವರೆಲ್ಲಾ ತಮ್ಮ ಹಿತಕ್ಕಾಗಿ ಚುನಾಯಿತರಾಗಿರುವವರು, ನೇಮಕವಾಗಿರುವವರು ಎಂಬುದನ್ನು ಈ ದೇಶದ ಪ್ರತಿಯೊಬ್ಬ ನಾಗರಿಕ ಅರ್ಥ ಮಾಡಿಕೊಂಡಾಗಲೇ ದೇಶ ಗಳಿಸಿರುವ ಸ್ವಾತಂತ್ರ್ಯ ಸಾರ್ಥಕ ಮತ್ತು ಸುಸ್ಥಿರವಾಗಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT