7

ವಾಮನ ಸೌತೆಯ ತ್ರಿವಿಕ್ರಮ ನೆಗೆತ!

Published:
Updated:
ವಾಮನ ಸೌತೆಯ ತ್ರಿವಿಕ್ರಮ ನೆಗೆತ!

ಗೋವಿನಜೋಳ, ಹತ್ತಿ ಬೆಳೆ ಮಾರಿ ರೊಕ್ಕ ಉಳದ್ರೆ ನಮ್ಮ ಅದೃಷ್ಟ. ಮಿಡಿಸೌತೆ (ಗೆರ್ಕಿನ್‌) ತೋಟದಾಗ ಕೈಗೆ ಒಂದಿಷ್ಟು ರೊಕ್ಕ ಸಿಗೋದ ಖಾತ್ರಿ. ಈ ಬೆಳೆ ಎರಡು ಹೊತ್ತು ಊಟಕ್ಕೆ ತೊಂದರೆ ಇಲ್ದಾಂಗ ಮಾಡೈತ್ರಿ...’

ಇದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ರೈತ ಚಿಕ್ಕಪ್ಪ ಪುಟ್ಟಪ್ಪ ಬಸಾಪುರ ಅವರ ಮನದ ಮಾತು. ರಷ್ಯಾ, ಅಮೆರಿಕ ಹಾಗೂ ಯುರೋಪ್‌ನ ಹಲವು ರಾಷ್ಟ್ರಗಳ ಜನರ ಊಟದ ತಟ್ಟೆಗಳನ್ನು ಸಿಂಗರಿಸುವ ಮಿಡಿಸೌತೆ, ಬಸಾಪುರ ಅವರಂತಹ ಸಾವಿರಾರು ರೈತರ ಬದುಕಿಗೆ ಆಸರೆಯಾಗಿದೆ. ವಿದೇಶಿಗರ ಉಪ್ಪಿನಕಾಯಿಗೆ ಬಳಕೆಯಾಗುವ ಈ ಬೆಳೆ, ಇಲ್ಲಿನ ರೈತರ ಹೊಟ್ಟೆಯನ್ನೇ ತುಂಬಿಸುತ್ತಿದೆ!

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ನಾಗತಿಬಸಾಪುರದಿಂದ 40 ವರ್ಷಗಳ ಹಿಂದೆ ಚೌಡಯ್ಯದಾನಪುರಕ್ಕೆ ಕೂಲಿ ಹುಡುಕಿಕೊಂಡು ಬಂದ ಬಸಾಪುರ ಅವರಿಗೆ ಸ್ವಂತ ಭೂಮಿ ಇಲ್ಲ. ಅವರಿವರ ಭೂಮಿ ಲಾವಣಿ ಹಿಡಿದು ಕೃಷಿ ಕಾಯಕದಲ್ಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ.

‘80 ಸಾವಿರ ಕೊಟ್ಟು 12 ಎಕರೆ ಲಾವಣಿ ಹಿಡದೇನ್ರೀ. ಜೋಳಕ್ಕೆ ಸೈನಿಕ ಹುಳು ಬಿದ್ದೈತ್ರಿ. ಹತ್ತಿಯ ಇಳುವರಿಯೂ ಕಡಿಮೆ ಆಗೈತ್ರಿ. ಟೊಮೆಟೊಗೆ ಬೆಲೆ ಸಿಗಲಿಲ್ರೀ. ಮುಂಗಾರಿಗೆ ಒಂದು ಎಕರೆಯಲ್ಲಿ ಹಾಕಿದ್ದ ಮಿಡಿಸೌತೆಯಿಂದ ಸುಮಾರು ₹40 ಸಾವಿರ ಲಾಭ ಆಗೈತ್ರಿ. ಹಿಂಗಾರಿಗೂ ಇದ್ನ ಹಾಕಿದ್ದೆ. ಅಕ್ಟೋಬರ್‌ನಲ್ಲಿ ಭಾರಿ ಮಳೆಯಾಗಿ ಗಿಡ ಹಾಳಾಗೋತ್ರಿ’ ಎಂದ ಬಸಾಪುರ, ಈ ವರ್ಷದ ಮೂರನೇ ಬೆಳೆಯ ಸಸಿ ಮಡಿಗಳಿಗೆ ನೀರು ಹಾಯಿಸತೊಡಗಿದರು.

ವಿದೇಶಿ ಬೆಳೆಯಾದ ಮಿಡಿಸೌತೆ ಜೊತೆಗೆ ಇವರದ್ದು ಸುಮಾರು 10 ವರ್ಷ ಗಳ ನಂಟು. ಒಪ್ಪಂದ ಕೃಷಿಯ (ಕಾಂಟ್ರಾಕ್ಟ್‌ ಫಾರ್ಮಿಂಗ್‌) ಭಾಗವಾಗಿರುವ ಈ ಬೆಳೆಯನ್ನು ಇವರು ಬೆಳೆಯಲು ಆರಂಭಿಸಿದಾಗ ಒಂದು ಕೆ.ಜಿ.ಗೆ ಫಸ್ಟ್‌ ಗ್ರೇಡ್‌ ಬೆಲೆ ₹ 8 – ₹ 10 ಇತ್ತು. ಈ ವರ್ಷ ₹ 32 ನಿಗದಿಯಾಗಿದೆ. ಗಾಳಿ– ಮಳೆಗೆ ತೋಟ ಸಿಲುಕದೇ ಇದ್ದರೆ, ಇದು ಅಲ್ಪಾವಧಿಯಲ್ಲೇ ಅಧಿಕ ಲಾಭ ತಂದುಕೊಡುವ ಆಶಾದಾಯಕ ಬೆಳೆ ಎಂಬುದು ಬಸಾಪುರ ಅವರ ಅನುಭವದ ಮಾತು.

(ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ರೈತ ಚಿಕ್ಕಪ್ಪ ಪುಟ್ಟಪ್ಪ ಬಸಾಪುರ ಅವರು ಮೊಳಕೆಯೊಡೆದ ಗೆರ್ಕಿನ್‌ ಸಸಿಗಳಿಗೆ ನೀರುಣಿಸುತ್ತಿರುವುದು)

ಕೈಹಿಡಿದ ಒಪ್ಪಂದ ಕೃಷಿ: ಮಿಡಿಸೌತೆಗೆ ನಮ್ಮ ದೇಶದಲ್ಲಿ ಗ್ರಾಹಕರಿಲ್ಲ. ರಷ್ಯಾ, ಅಮೆರಿಕ, ಜಪಾನ್‌ ಸೇರಿ ಹಲವು ವಿದೇಶಗಳಲ್ಲಿ ಈ ಕಾಯಿಗೆ ಒಳ್ಳೆಯ ಬೇಡಿಕೆ ಇದೆ. ಹೀಗಾಗಿ ನಮ್ಮಲ್ಲಿನ ಕೆಲವು ಆಹಾರ ಉತ್ಪನ್ನ ಕಂಪನಿಗಳು ಇಲ್ಲಿನ ರೈತರೊಂದಿಗೆ ಮಿಡಿಸೌತೆಯನ್ನು ಮರು ಖರೀದಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳುತ್ತಿವೆ. ರೈತರಿಂದ ಅದನ್ನು ಖರೀದಿಸಿ, ಸಂಸ್ಕರಿಸಿ ರಫ್ತು ಮಾಡುತ್ತಿವೆ.

‘ಆರು ವರ್ಷಗಳಿಂದ ಮಿಡಿಸೌತೆ ಬೆಳೀತಿದ್ದೇನ್ರೀ. ಬೀಜ, ಎಣ್ಣೆ (ಕೀಟ ನಾಶಕ), ಗೊಬ್ಬರವನ್ನು ಮುಂಗಡ ಸಾಲದ ರೂಪದಲ್ಲಿ ಬಡ್ಡಿ ರಹಿತವಾಗಿ ಕಂಪನಿಯವರೇ ಕೊಡ್ತಾರ. ಅವರಿಗೆ ಕಾಯಿ ಕೊಟ್ಟಾಗ ಬೀಜ, ಗೊಬ್ಬರದ ಹಣ ಮುರಿದ್ಕೊಂಡು ಉಳಿದ ಹಣ ನಮ್ಗ ಕೊಡ್ತಾರ. ಈ ಬಾರಿ ಮುಂಗಾರಿನಲ್ಲಿ ಖರ್ಚು ತೆಗೆದು ಸುಮಾರು ₹ 80 ಸಾವಿರ ಲಾಭ ಆಗೈತ್ರಿ. ಹಿಂಗಾರಿನಲ್ಲಿ ಅಷ್ಟು ಇಳುವರಿ ಬಂದಿಲ್ರಿ. ಖರ್ಚು ತೆಗೆದು ₹ 30 ಸಾವಿರ ಉಳಿಯಬಹುದು’ ಎನ್ನುತ್ತ ಚೌಡಯ್ಯದಾನಪುರದ ರೈತ ಮಂಜಪ್ಪ ಮಲ್ಲಪ್ಪ ಬನ್ನಿಮಟ್ಟಿ ತಮ್ಮ ತೋಟವನ್ನು ತೋರಿಸತೊಡಗಿದರು.

ಬೀಜ, ಗೊಬ್ಬರವನ್ನು ಕಂಪನಿಯವರೇ ಮುಂಗಡ ಹಣ ಪಡೆಯದೇ ನೀಡುವುದರಿಂದ ಮಿಡಿಸೌತೆ ಬೆಳೆಯಲು ಬ್ಯಾಂಕ್‌ನಲ್ಲಿ ಸಾಲ ಮಾಡ ಬೇಕಾಗಿಲ್ಲ. ಉಳಿದ ಸಾಂಪ್ರದಾಯಿಕ ಬೆಳೆ ನಷ್ಟವಾದರೆ, ಹಾಕಿದ ಬಂಡವಾಳವೂ ಕೈಗೆ ಸಿಗುವುದಿಲ್ಲ. ಜೊತೆಗೆ ಸಾಲ ಮರುಪಾವತಿಸುವಂತೆ ಬ್ಯಾಂಕ್‌ನವರು ಬೆನ್ನಿಗೆ ಬೀಳುತ್ತಾರೆ. ಆದರೆ, ಕಂಪನಿಯವರು ಮುಂದಿನ ಬೆಳೆ ಬರುವವರೆಗೂ ಕಾಯ್ದು, ಆ ಬಳಿಕ ಲೆಕ್ಕ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆರಂಭದಲ್ಲೇ ತೋಟ ಹಾಳಾದರೆ ಬೀಜ, ಗೊಬ್ಬರದ ಖರ್ಚನ್ನೂ ವಸೂಲಿ ಮಾಡುವುದಿಲ್ಲ. ಮೊದಲೇ ದರ ನಿಗದಿ ಯಾಗುವುದರಿಂದ ಬೆಲೆ ಏರಿಳಿತದ ಭಯವೂ ಇಲ್ಲ. ಹೊಲಕ್ಕೇ ಬಂದು ತೂಕ ಮಾಡಿಕೊಂಡು ಕಾಯಿಯನ್ನು ಒಯ್ಯುವುದರಿಂದ ಸಾಗಾಟದ ವೆಚ್ಚ, ಏಜೆಂಟರ ಕಮಿಷನ್‌ ಚಿಂತೆಯೂ ಇಲ್ಲ ಎಂಬ ಹಲವು ಸಕಾರಾತ್ಮಕ ಅಂಶಗಳಿಂದಾಗಿ ರೈತರು ಈ ಬೆಳೆಯತ್ತ ಒಲವು ತೋರುತ್ತಿದ್ದಾರೆ.

‘ಈ ಬಾರಿ ಮುಂಗಾರಿಗೆ ಆರು ಎಕರೆ ಸೌತೆ ಹಾಕಿದ್ದೆ. ಕೂಲಿಗೆ ನೀಡಿದ ಹಣ, ಬೀಜ, ಎಣ್ಣೆ, ಗೊಬ್ಬರದ ಖರ್ಚಿನ ಲೆಕ್ಕ ತೆಗೆದು ಈ ಮೂರು ತಿಂಗಳ ಬೆಳೆಯಿಂದ ₹2.20 ಲಕ್ಷ ಉಳಿದಿತ್ತು. ಮೂರು ಎಕರೆ ಗೋವಿನಜೋಳವನ್ನೂ ಹಾಕಿದ್ದೆ. ಖರ್ಚು ತೆಗೆದು ಕೇವಲ ₹ 60 ಸಾವಿರ ಕೈಗೆ ಸಿಕ್ಕಿದೆ. ನಾಲ್ಕು ಕಾಸು ಕೈಯಲ್ಲಿ ಉಳಿಯಬೇಕು ಎಂದರೆ ಇದನ್ನು ಬೆಳೆಯಲೇಬೇಕು ಎಂಬ ಅನಿವಾರ್ಯತೆ ಎದುರಾಗಿದೆ’ ಎಂಬುದು ಇದೇ ಗ್ರಾಮದ ರೈತ ಹನುಮಂತ ಲಕ್ಷ್ಮಣ ದೀಪಾವಳಿ ಅವರ ಅನುಭವದ ಮಾತು.

90ರ ದಶಕದಲ್ಲಿ ರಾಜ್ಯಕ್ಕೆ ಬಂದ ಮಿಡಿಸೌತೆ ಬೆಳೆ ಈಗ ರಾಣೆಬೆನ್ನೂರು ತಾಲ್ಲೂಕಿನ ತುಂಗಭದ್ರಾ ನದಿ ತೀರ ಹಾಗೂ ಕಾಲುವೆ ಬದಿಯ ಹತ್ತಾರು ಹಳ್ಳಿಗಳ ಹಲವು ರೈತರಿಗೆ ಚಿರಪರಿಚಿತ. ಭತ್ತ, ಕಬ್ಬು, ಹತ್ತಿ, ಗೋವಿನಜೋಳದ ಜೊತೆಗೆ ಇದನ್ನೂ ಬೆಳೆಸುತ್ತಿದ್ದಾರೆ. ಸಣ್ಣ ರೈತರು ಅರ್ಧದಿಂದ ಒಂದು ಎಕರೆಗೆ ಹಾಕಿದರೆ, ಬೇರೆ ಊರಿನಿಂದ ಕೂಲಿಗಳನ್ನು ಕರೆದುಕೊಂಡು ಬರಲು ವಾಹನ ಸೌಲಭ್ಯ ಇರುವ ದೊಡ್ಡ ರೈತರು ನಾಲ್ಕೈದು ಎಕರೆವರೆಗೂ ಇದನ್ನು ಬೆಳೆಸುತ್ತಿದ್ದಾರೆ. ಹೆಚ್ಚಿನ ಇಳುವರಿ ಬರುತ್ತದೆ ಎಂಬ ಕಾರಣಕ್ಕೆ ರೈತರು ಮುಂಗಾರಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಇದನ್ನು ಬೆಳೆಯುತ್ತಿದ್ದಾರೆ. ಹಿಂಗಾರಿಗೆ ಇದರ ಪ್ರಮಾಣ ಕುಸಿದರೆ, ಬೇಸಿಗೆ ಬೆಳೆಯಾಗಿ ಬೆಳೆಯುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.‌

(ವಿನೇಗಾರ್‌ ದ್ರಾವಣದಿಂದ ತೆಗೆದ ಗೆರ್ಕಿನ್‌ ಅನ್ನು ವಿಂಗಡಿಸುತ್ತಿರುವುದು)

ಕಾಡುವ ಕೂಲಿ ಸಮಸ್ಯೆ: ‘ಕೂಲಿಯದ್ದೇ ನಮಗಿರುವ ದೊಡ್ಡ ಖರ್ಚಿನ ಬಾಬ್ತು. ಒಬ್ಬ ಹೆಣ್ಣಾಳಿಗೆ ದಿನಕ್ಕೆ ₹200 ಕೂಲಿ ನೀಡಬೇಕು. ಅರ್ಧ ಎಕರೆ ಹೊಲದಲ್ಲಿ ಕಾಯಿ ಕೊಯ್ಯಲು ದಿನಕ್ಕೆ ಸುಮಾರು ಏಳು ಆಳು ಬೇಕು. ಕೂಲಿ ಸಮಸ್ಯೆ ಇರುವುದರಿಂದ ಪ್ರತಿಯೊಬ್ಬ ಆಳಿಗೂ ₹3,000 ಮುಂಗಡ ನೀಡಿ ತಪ್ಪದೇ ಕೆಲಸಕ್ಕೆ ಬರುವಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದು ಧ್ವನಿಗೂಡಿಸಿದರು ರೈತ ರುದ್ರಪ್ಪ ಮಲ್ಲಪ್ಪ ಚಕ್ರಸಾಲಿ.

‘ಮನೆಯಲ್ಲಿ ಯಾರೋ ಸತ್ತರು ಎಂದು ಕಾಯಿ ಕೊಯ್ಯುವುದನ್ನು ಒಂದು ದಿನವೂ ಬಿಡುವಂತಿಲ್ಲ. ಒಂದು ದಿನ ಕಾಯಿ ಹೆಚ್ಚು ಬಲಿತರೆ ಎರಡನೇ ಗ್ರೇಡ್‌ನ ಕಾಯಿ ಆಗಿಬಿಡುತ್ತದೆ. ಆಗ ಪ್ರತಿ ಕೆ.ಜಿ.ಗೆ ₹32 ದರದ ಬದಲು ₹20 ಕೊಡುತ್ತಾರೆ. ಕಾಯಿ ದೊಡ್ಡದಾದರೆ ಬಳ್ಳಿಯೂ ಬೇಗನೆ ಹಾಳಾಗುತ್ತದೆ. ಎರಡು ದಿನಗಳಿಗೆ ಒಮ್ಮೆ ಗಿಡಕ್ಕೆ ಔಷಧಿ ಹೊಡೆಯಬೇಕು. ಕಾಯಿ ಕೊಡುತ್ತಿರು ವಾಗ ದಿನಾಲೂ ನೀರು ಹಾಯಿಸಬೇಕು’ ಎಂದು ಹೇಳಿದರು ಚಕ್ರಸಾಲಿ. ಮುಂಗಾರಿನಲ್ಲಿ ತಮ್ಮ ಅರ್ಧ ಎಕರೆ ಸೌತೆ ತೋಟದಿಂದ ₹60 ಸಾವಿರ ಲಾಭವನ್ನೂ ಪಡೆದುಕೊಂಡಿದ್ದಾರೆ.

‘ನನ್ನ ಕಾಕಾ ಸೌತೆ ಹಾಕ್ತಿದ್ರೀ. ಒಳ್ಳೆ ಲಾಭ ಸಿಗ್ತಿತ್ತು. ಅದ್ಕ ಈ ಬಾರಿ ನಾನೂ ಹಿಂಗಾರಿಗೆ ಅರ್ಧ ಎಕರೆ ಸೌತೆ ಹಾಕೇನ್ರೀ. ಕಾಯಿ ಸ್ವಲ್ಪ ಕಡಿಮೆ ಬಂದಾವ್ರೀ. ಇಷ್ಟ ದಿನ ಕಂಪನಿಗೆ ಕೊಟ್ಟ ಕಾಯಿ ಬೀಜ, ಗೊಬ್ಬರ, ಎಣ್ಣಿಯ ಹಣಕ್ಕೆ ಹೊಂದಾಣಿಕೆ ಮಾಡ್ಕೊಂಡಾರ್‍ರೀ.ಇನ್‌ಮ್ಯಾಲ್‌ ಕೊಡೊ ಕಾಯಿಯಿಂದ ಸ್ವಲ್ಪ ರೊಕ್ಕ ಸಿಗಬಹುದು, ನೋಡ್ರಿ’ ಎಂದ ನೂಕಾಪುರ ಗ್ರಾಮದ ರಾಂಪುರ ತಾಂಡಾದ ರೈತ ಈರೇಶಿ ಶೇಖಪ್ಪ ಪಮ್ಮಾರ ಸೌತೆ ಬಳ್ಳಿಗಳ ಸಾಲಿಗೆ ನೀರು ಹಾಯಿಸತೊಡಗಿದರು. ಇವರ ಮಾತು ಹೊಸ ತಲೆಮಾರಿನ ರೈತರೂ ಈ ಬೆಳೆಯತ್ತ ಮುಖ ಮಾಡುತ್ತಿರುವುದರ ಮುನ್ಸೂಚನೆ ನೀಡಿತು.

‘ಮಿಡಿಸೌತೆ ಸಣ್ಣದಾಗಿರುವಾಗ ಸುತ್ತಲೂ ಮುಳ್ಳು (ಸುಂಗು) ಬೆಳೆದಿರುತ್ತದೆ. ಅದನ್ನು ತೆಗೆಯದೇ ತಿನ್ನುವುದು ಕಷ್ಟ. ಎಳೆಯ ಕಾಯಿಗೆ ಒಳ್ಳೆಯ ದರವೂ ಇರುವುದರಿಂದ ಯಾರೂ ಬಲಿಯಲು ಬಿಡುವುದಿಲ್ಲ. ಕಣ್ತಪ್ಪಿ ಬಳ್ಳಿಯಲ್ಲೇ ಉಳಿದು ದೊಡ್ಡದಾದ ಕಾಯಿಯನ್ನು ಕೆಲವೊಮ್ಮೆ ಮನೆಗೆ ತೆಗೆದುಕೊಂಡು ಹೋಗಿ ಪಲ್ಯೆ ಮಾಡುತ್ತೇವೆ. ಆದರೆ, ನಮ್ಮ ಎರೆ ಸೌತೆಕಾಯಿಯಷ್ಟು ರುಚಿ ಮಿಡಿಸೌತೆಗೆ ಇಲ್ಲ’ ಎನ್ನುವ ರೈತರು, ‘ಈ ಬೆಳೆ ಇರುವುದು ನಮ್ಮ ಬಳಕೆಗಾಗಿ ಅಲ್ಲ; ಬೆಳೆದು ಮಾರಾಟ ಮಾಡಲಿಕ್ಕಷ್ಟೇ’ ಎಂಬ ಸಂದೇಶವನ್ನೂ ನೀಡುತ್ತಾರೆ.

‘ಮಿಡಿಸೌತೆ ಬೆಳೆಯಲು ನೀರಿನ ಸೌಲಭ್ಯ ಹಾಗೂ ಉತ್ತಮ ಹವಾಗುಣ ಅಗತ್ಯ. ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಈ ಬೆಳೆ ಬೆಳೆಯಲು ಹೆಚ್ಚು ಅನುಕೂಲಕರ ವಾತಾವರಣ ಇದೆ. ಹೀಗಾಗಿ ಸುಮಾರು 15 ಕಂಪನಿಗಳು ಈ ಭಾಗದಲ್ಲಿ ರೈತರಿಂದ ಮಿಡಿಸೌತೆ ಬೆಳೆಸುತ್ತಿವೆ. ಮುಂಗಾರಿನಲ್ಲಿ ಈ ಭಾಗದಿಂದ ನಮ್ಮ ಕಂಪನಿಯಿಂದ ಸುಮಾರು 2,000 ಟನ್‌ ಕಾಯಿ ಕಳುಹಿಸಿಕೊಟ್ಟಿದ್ದೇವೆ. ರೈತರಲ್ಲಿ ಈ ಬೆಳೆಯ ಬಗ್ಗೆ ವಿಶ್ವಾಸ ಮೂಡುತ್ತಿದೆ. ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯಲು ಅವಕಾಶವಿದೆ’ ಎಂದು ಹುಬ್ಬಳ್ಳಿಯ ‘ಕೆನ್‌ ಅಗ್ರಿಟೆಕ್‌’ ಕಂಪನಿಯ ಸಹಾಯಕ ಕ್ಷೇತ್ರೀಯ ಅಧಿಕಾರಿ ಮಾಲತೇಶ ಸಿ.ಬಿ ಮಾಹಿತಿ ನೀಡಿದರು.

**

ಕಾಡಿದ ಕ್ರಿಮಿಯಾ ಬಿಕ್ಕಟ್ಟು

2014ರಲ್ಲಿ ಕ್ರಿಮಿಯಾ ದೇಶವು ರಷ್ಯಾದೊಳಗೆ ವಿಲೀನಗೊಳ್ಳಲು ಮುಂದಾದಾಗ ಉಂಟಾದ ರಾಜಕೀಯ ಬಿಕ್ಕಟ್ಟಿನ ಪರಿಣಾಮ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಯಿತು. ತೈಲದ ವಹಿವಾಟನ್ನೇ ನೆಚ್ಚಿಕೊಂಡಿದ್ದ ರಷ್ಯಾದ ‘ರುಬೆಲ್‌’ ಮೌಲ್ಯ ಕುಸಿದು, ಅದರ ಆರ್ಥಿಕತೆ ನೆಲಕಚ್ಚಿತು. ಆಮದು ಮಾಡಿಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಯಿತು. ಇದರಿಂದ ಭಾರತದಲ್ಲಿ ಬೆಳೆದ ಮಿಡಿಸೌತೆಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಕಡಿಮೆಯಾಯಿತು.

(ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದ ರೈತ ಮಂಜಪ್ಪ ಮಲ್ಲಪ್ಪ ಬನ್ನಿಮಟ್ಟಿ ಅವರು ತಮ್ಮ ತೋಟದಲ್ಲಿ ಎಳೆಯ ‘ಗೆರ್ಕಿನ್‌’ ಕಾಯಿಯನ್ನು ಕೊಯ್ಯುತ್ತಿರುವುದು)

‘ಕ್ರಿಮಿಯಾ ಬಿಕ್ಕಟ್ಟಿನ ಪೂರ್ವದಲ್ಲಿ ಭಾರತದಿಂದ ವಾರ್ಷಿಕ ಒಟ್ಟು 1.80 ಲಕ್ಷ ಟನ್‌ ಮಿಡಿಸೌತೆ ರಫ್ತಾಗುತ್ತಿತ್ತು. ಇದರಲ್ಲಿ ಶೇ 35ರಷ್ಟು ರಷ್ಯಾಕ್ಕೇ ಹೋಗುತ್ತಿತ್ತು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಷ್ಯಾದ ಬೇಡಿಕೆ ಶೇ 50ರಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ ನಮ್ಮಲ್ಲಿ ಬರಗಾಲ ಕಾಣಿಸಿಕೊಂಡಿದ್ದರಿಂದ ಇಳುವರಿಯೂ ಕಡಿಮೆಯಾಗಿದೆ. ಬೇಡಿಕೆಗಿಂತಲೂ ಉತ್ಪಾದನೆ ಹೆಚ್ಚಾಗದೇ ಇರುವುದರಿಂದ ಕ್ರಿಮಿಯಾ ಬಿಕ್ಕಟ್ಟಿನಿಂದ ಎದುರಾದ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಯಿತು. ಜೊತೆಗೆ ಮೆಣಸಿನಕಾಯಿ, ಬೇಬಿಕಾರ್ನ್‌ನಂತಹ ಪರ್ಯಾಯ ಬೆಳೆಯನ್ನೂ ಬೆಳೆಸಿ ರಫ್ತು ಮಾಡತೊಡಗಿದ್ದೇವೆ’ ಎನ್ನುತ್ತಾರೆ ಇಂಡಿಯನ್‌ ಗೆರ್ಕಿನ್‌ ಎಕ್ಸ್‌ಪೋರ್ಟರ್ಸ್‌ ಅಸೋಸಿಯೇಷನ್‌ನ ಖಜಾಂಚಿ ಮುನೇಗೌಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry