ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುಜ, ಕಾಲಿಗೆ ಬಲತುಂಬುವ ಗೋಮುಖಾಸನ

Last Updated 27 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಿಗ್ಗೆಯಿಂದ ಸಂಜೆಯವರೆಗೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಕೆಲ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇವರು ಒಂದೇ ಕಡೆ ಕುಳಿತು, ದೃಷ್ಟಿಯನ್ನು ಕೇಂದ್ರೀಕರಿಸಿ ನಿರಂತರವಾಗಿ ಕೆಲಸ ನಿರ್ವಹಿಸಬೇಕು. ಈ ಸಂದರ್ಭದಲ್ಲಿ ಸಹಜವಾಗಿ ಕಣ್ಣಿಗೆ ಆಯಾಸ, ಕುತ್ತಿಗೆ ಭುಜಗಳ ಸೆಳೆತ, ಬೆನ್ನು ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ.

ಕಂಪ್ಯೂಟರ್ ಎದುರು ಸತತವಾಗಿ ಕುಳಿತು ಕೆಲಸ ಮಾಡುವವರು ಯೋಗದ ಕೆಲವು ಸರಳ ಆಸನ ಮಾಡುವ ಮೂಲಕ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಯೋಗ ಅಭ್ಯಾಸ ಮಾಡಿದರೆ ದೇಹದ ಒಳಗಿನ ಅಂಗಗಳಿಗೆ ವ್ಯಾಯಾಮ ಮತ್ತು ಚೆನ್ನಾಗಿ ರಕ್ತಪರಿಚಲನೆ ಆಗುತ್ತದೆ. ಯೋಗದಿಂದ ಪ್ರತಿ ಅಂಗಗಳಿಗೂ ನವಚೈತನ್ಯ ಉಂಟಾಗುತ್ತದೆ. ಯೋಗವನ್ನು ಶಿಸ್ತುಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಗುರುಮುಖೇನ ಕಲಿತು ನಿರಂತರ ಅಭ್ಯಾಸ ಮಾಡಬೇಕು.

ಹೀಗೆ ಮಾಡುವುದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ತಾಳ್ಮೆ, ಶಾಂತಿ ಒದಗಿ ಬರುತ್ತದೆ. ಮನಸ್ಸು ಪ್ರಫುಲ್ಲವಾಗುತ್ತದೆ.

ಗೋಮುಖಾಸನ: ಗೋಮುಖಾಸನದಿಂದ ಭುಜಗಳ ಭಾಗ ಮತ್ತು ಕಾಲಿನ ಭಾಗ ಬಲಗೊಳ್ಳುತ್ತದೆ. ಗೋ ಎಂದರೆ ಹಸು. ಈ ಆಸನದ ಭಂಗಿಯು ಹಸುವಿನ ಮುಖವನ್ನು ಹೋಲುವುದರಿಂದ ಇದಕ್ಕೆ ಗೋಮುಖಾಸನ ಎಂದು ಹೆಸರು.

ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ಎಡಗಾಲನ್ನು ಮಡಚಿ ಹಿಂದಕ್ಕೆ  ತೆಗೆದುಕೊಂಡು ಎಡಪಾದದ ಮೇಲೆ ಪೃಷ್ಠವನ್ನೂರಬೇಕು. ನಂತರ ಬಲಗಾಲನ್ನು ತುಸು ಮೇಲೆತ್ತಿ ಬಲತೊಡೆಯನ್ನು ಎಡತೊಡೆಯ ಮೇಲೆ ಬರುವಂತೆ ಅಳವಡಿಸಬೇಕು. ಎಡಪಾದದ ಬೆರಳುಗಳು ಹಿಂದೆ ಚಾಚಿರಲಿ. ಆಮೇಲೆ ಎಡಗೈಯನ್ನು ಬೆನ್ನ ಹಿಂದೆ ತರಬೇಕು. ಬಲಗೈಯನ್ನು ಮೇಲೆತ್ತಿ ಬೆನ್ನ ಹಿಂದಿರುವ ಎಡಗೈಯನ್ನು ಹಿಡಿಯಬೇಕು (ಚಿತ್ರ ಗಮನಿಸಿ).

ಈ ಭಂಗಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತಾ ಕೆಲ ಸಮಯ ಇರಬೇಕು. ಈ ಸ್ಥಿತಿಯಲ್ಲಿ ಕುತ್ತಿಗೆ, ತಲೆ, ಬೆನ್ನು ನೇರವಾಗಿರಬೇಕು. ನಂತರ ನಿಧಾನವಾಗಿ ದಂಡಾಸನದ ಸ್ಥಿತಿಗೆ ಬರಬೇಕು. ಅನಂತರ ಕಾಲುಗಳನ್ನು ಮತ್ತು ಕೈಗಳನ್ನು ಬದಲಿಸಿ ಇನ್ನೊಂದು ಬಾರಿ ಅಭ್ಯಾಸ ಮಾಡಬೇಕು. ಕೊನೆಗೆ ವಿಶ್ರಾಂತಿ ಪಡೆಯಬೇಕು.

ಉಪಯೋಗಗಳು: ಈ ಆಸನದ ನಿಯಮಿತ ಅಭ್ಯಾಸದಿಂದ ಭುಜಗಳು ಬಲಗೊಳ್ಳುತ್ತವೆ. ಕಾಲುಗಳ ಬಿಗಿತ (ಮರಗಟ್ಟುವಿಕೆ) ಹೋಗುತ್ತದೆ. ಎದೆಯ ಭಾಗ ಹಿಗ್ಗುತ್ತದೆ. ಬೆನ್ನು ನೆಟ್ಟಗಾಗುತ್ತದೆ. ಹೆಗಲು ನೋವು ಮತ್ತು ಕುತ್ತಿಗೆ ನೋವಿನ ನಿವಾರಣೆಗೆ ಸಹಾಯ ಮಾಡುತ್ತದೆ. ಬೆನ್ನಿನ ನೋವು ಕಡಿಮೆಯಾಗುತ್ತದೆ. ಗೂನುಬೆನ್ನು ನಿವಾರಣೆಗೂ ಸಹಕಾರಿ. ಕಚೇರಿಯಲ್ಲಿ ದೀರ್ಘಕಾಲ ಕಂಪ್ಯೂಟರ್ ಎದುರು ಕೆಲಸ ನಿರ್ವಹಿಸುವವರಿಗೆ ಈ ಆಸನದ ಅಭ್ಯಾಸ ಉಪಯುಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT