7

ರಾಮ ಮಂದಿರ ನಿರ್ಮಾಣ ವಿಷಯ ಪ್ರಸ್ತಾವ ಅನಗತ್ಯ

Published:
Updated:
ರಾಮ ಮಂದಿರ ನಿರ್ಮಾಣ ವಿಷಯ ಪ್ರಸ್ತಾವ ಅನಗತ್ಯ

ರಾಮ ಮಂದಿರ ನಿರ್ಮಾಣ ವಿಷಯವನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸಿದೆ ಉಡುಪಿಯಲ್ಲಿ ನಡೆದ ಧಾರ್ಮಿಕ ಸಂಸತ್‌. ಇಂತಹ ವಿಷಯಗಳಲ್ಲಿ ಜನರ ಭಾವನೆಗಳನ್ನು ಕೆರಳಿಸುವುದು ಸುಲಭ; ಶಮನಗೊಳಿಸುವುದು ಕಷ್ಟ. ಅದನ್ನೂ ಧಾರ್ಮಿಕ ಮುಖಂಡರು ಅರ್ಥ ಮಾಡಿಕೊಳ್ಳಬೇಕು ರಾಮ ಮಂದಿರ ನಿರ್ಮಾಣವಿಷಯ ಪ್ರಸ್ತಾವ ಅನಗತ್ಯ

ದೇಶದ ವಿವಿಧೆಡೆಯ ಹಿಂದೂ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದ ‘ಧರ್ಮ ಸಂಸತ್‌’ ಉಡುಪಿಯಲ್ಲಿ ಮುಕ್ತಾಯಗೊಂಡಿದೆ. ಆದರೆ ಜೊತೆಯಲ್ಲಿಯೇ ಅದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದೆ. ‘ಮಂದಿರ ನಿರ್ಮಾಣ ಆಗುವ ತನಕ ವಿರಮಿಸುವುದಿಲ್ಲ. ಸಂಧಾನದ ಮಾತು ಇಲ್ಲವೇ ಇಲ್ಲ. ತೋಳ್ಬಲದ ಮೇಲೆ ಮಂದಿರ ಕಟ್ಟುತ್ತೇವೆ’ ಎಂಬ ಮಾತುಗಳು ಧಾರ್ಮಿಕ ಮುಖಂಡರ, ಸಂಸ್ಕೃತಿ ಸಂಘಟನೆಗಳ ನಾಯಕರ ಬಾಯಿಂದ ಬಂದಿವೆ. ರಾಮ ಮಂದಿರಕ್ಕೆ ಸಂಬಂಧಪಟ್ಟ ವಿಷಯವನ್ನು ಸುಪ್ರೀಂ ಕೋರ್ಟ್ ವಿಚಾರಣೆ ಮಾಡುತ್ತಿದೆ ಎನ್ನುವುದು ಇವರೆಲ್ಲರಿಗೂ ಗೊತ್ತು.

ನಮ್ಮದು ಸಂವಿಧಾನ ಮತ್ತು ಕಾನೂನೇ ಪರಮೋಚ್ಚ ಎಂದು ಒಪ್ಪಿಕೊಂಡ ದೇಶ. ಆದ್ದರಿಂದ, ಕೋರ್ಟ್ ತೀರ್ಮಾನ ಹೊರ ಬೀಳುವ ತನಕ ಕಾಯಬೇಕು ಇಲ್ಲವೇ ಸಂಧಾನದ ಮಾರ್ಗ ಅನುಸರಿಸಬೇಕು. ಕಾನೂನನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುತ್ತೇವೆ ಎನ್ನುವ ಧೋರಣೆ ಅರಾಜಕತೆಗೆ ಕಾರಣವಾಗುತ್ತದೆ. ನಾಳೆ ಪ್ರತಿಯೊಬ್ಬರೂ ಇದೇ ಧಾಟಿಯಲ್ಲಿ ಮಾತನಾಡಿದರೆ ಅದಕ್ಕೊಂದು ಕೊನೆ ಎನ್ನುವುದೇ ಇರುವುದಿಲ್ಲ. ಇದು ನಾವೇ ಒಪ್ಪಿಕೊಂಡ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧ. ಜನತಂತ್ರವನ್ನು ದುರ್ಬಲಗೊಳಿಸಿ ಧಾರ್ಮಿಕ ಸಂಕುಚಿತ ಭಾವನೆ ಹೇರುವ ಪ್ರಯತ್ನ. ‘ಶ್ರೀರಾಮ ಜೋಪಡಿಯಲ್ಲಿದ್ದಾನೆ. ಅದಕ್ಕಾಗಿಯೇ ದೇಶ ಸಂಕಷ್ಟದಲ್ಲಿ ನರಳುತ್ತಿದೆ’ ಎಂದು ವಿಶ್ವ ಹಿಂದೂ ಪರಿಷತ್‌ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ವ್ಯಾಖ್ಯಾನಿಸಿರುವುದಂತೂ ತೀರಾ ಅವೈಜ್ಞಾನಿಕ.

ಸಮಸ್ಯೆಗಳು, ಸಂಕಷ್ಟಗಳು ಇಲ್ಲದ ಸಮಾಜ, ದೇಶ ಈ ಜಗತ್ತಿನಲ್ಲಿ ಎಲ್ಲಾದರೂ ಇದೆಯೇ? ಹೀಗಿರುವಾಗ ಮಂದಿರಕ್ಕೂ ಸಂಕಷ್ಟಕ್ಕೂ ತಳಕು ಹಾಕುವುದು ಮೂಢನಂಬಿಕೆಯನ್ನು ಬೆಳೆಸಿದಂತೆ. ಮಂದಿರ ನಿರ್ಮಾಣಕ್ಕೆ ಇರುವುದು ಎರಡೇ ಮಾರ್ಗ. ಕೋರ್ಟ್‌ನ ಹೊರಗೆ ಸಂಧಾನ ಮುಂದುವರಿಸುವುದು ಅಥವಾ ಕೋರ್ಟ್ ತೀರ್ಪು ಬರುವ ವರೆಗೂ ಕಾಯುವುದು. ಆದ್ದರಿಂದ ಆವೇಶದಿಂದ ಮಾತನಾಡುವ ಮುನ್ನ ಈ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಜನಸಮುದಾಯವನ್ನು ಪ್ರಚೋದಿಸುವ ಪ್ರಯತ್ನ ರಾಜಕೀಯಪ್ರೇರಿತ ಎನಿಸಿಕೊಳ್ಳುತ್ತದೆ. ಸಂತರು ಕೂಡ ರಾಜಕೀಯ ಪಕ್ಷವೊಂದನ್ನು ಓಲೈಸುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟು ಹಾಕುತ್ತದೆ.

‘ವಸುಧೈವ ಕುಟುಂಬಕಂ, ಸರ್ವೇ ಜನಾಃ ಸುಖಿನೋ ಭವಂತು’ ಎನ್ನುತ್ತದೆ ಹಿಂದೂ ಧರ್ಮ ಪರಂಪರೆ. ಅಂದರೆ ‘ಇಡೀ ವಿಶ್ವವೇ ನನ್ನ ಕುಟುಂಬ; ಜಗತ್ತಿನ ಎಲ್ಲರೂ ಸುಖವಾಗಿರಲಿ’ ಎನ್ನುವ ಈ ವಿಶಾಲ ಮನೋಭಾವದ ಹಿಂದೆ ವಿಶ್ವ ಭ್ರಾತೃತ್ವ, ಸಹೋದರಭಾವ ಇದೆ. ಅದುವೇ ಈ ಪರಂಪರೆಯ ಶಕ್ತಿ ಮತ್ತು ಸತ್ವ. ಅದನ್ನು ಕಾಪಾಡಿಕೊಳ್ಳಬೇಕು. ಆ ದಿಸೆಯಲ್ಲಿ ಸಾಧು ಸಂತರು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ಅಸ್ಪೃಶ್ಯತೆ ಪಿಡುಗು ನಿರ್ಮೂಲನೆಯ ದಿಸೆಯಲ್ಲಿ ಧರ್ಮ ಸಂಸತ್‌ ತೆಗೆದುಕೊಂಡ ನಿರ್ಣಯ ಅಂತಹ ಒಂದು ಪ್ರಯತ್ನ ಎನ್ನಬಹುದು. ನಗರ ಪ್ರದೇಶಗಳಲ್ಲಿ ಅಸ್ಪೃಶ್ಯತೆಯ ಬಿಸಿ ಅಷ್ಟಾಗಿ ತಟ್ಟದೇ ಹೋದರೂ ಗ್ರಾಮಾಂತರಗಳಲ್ಲಿ ಇನ್ನೂ ಜೀವಂತವಾಗಿದೆ. ಇಡೀ ಹಿಂದೂ ಸಮಾಜವನ್ನು ಹುಣ್ಣಿನಂತೆ ಕಾಡುತ್ತಿದೆ. ಅದರ ಮುಂದುವರಿಕೆಯು ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸುತ್ತಿದೆ. ಅದರ ಕಹಿ ಪರಿಣಾಮ ಇಡೀ ಸಮಾಜದ ಮೇಲಾಗುತ್ತಿದೆ.

ಆದ್ದರಿಂದ ಅಸ್ಪೃಶ್ಯತೆ ತೊಡೆದು ಹಾಕಬೇಕು ಮತ್ತು ಅಸ್ಪೃಶ್ಯರಿಗೆ ಮನೆ– ಮಂದಿರಗಳಲ್ಲಿ ಮುಕ್ತವಾದ ಪ್ರವೇಶ ಇರಬೇಕು ಎನ್ನುವ ನಿರ್ಣಯ ತೆಗೆದುಕೊಂಡಿರುವುದು ಸ್ವಾಗತಾರ್ಹ. ಬಾವಿ, ಕೆರೆ, ಸ್ಮಶಾನ ಬಳಕೆಗೆ ಸಂಬಂಧಪಟ್ಟಂತೆ ತಾರತಮ್ಯ ಹೋಗಲಾಡಿಸಬೇಕು ಎನ್ನುವ ಆಶಯ ಕೂಡ ಸಮಕಾಲೀನ ಅವಶ್ಯಕತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ನಿರ್ಣಯ ಅಂಗೀಕರಿಸಿದ ಮಾತ್ರಕ್ಕೆ ಕೆಲಸ ಮುಗಿಯಲಿಲ್ಲ. ಅದನ್ನು ಪ್ರಾಮಾಣಿಕವಾಗಿ ಆಚರಣೆಗೆ ತರುವುದು ಕೂಡ ಮುಖ್ಯ. ಧಾರ್ಮಿಕ ನಾಯಕರು ಈ ವಿಷಯದಲ್ಲಿ ಇಡೀ ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕು. ಆಗ ಮಾತ್ರ ನಿರ್ಣಯಕ್ಕೂ ಬೆಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry