7

‘ನಾಯಕತ್ವದ ದಂಡ’ ಹಸ್ತಾಂತರಕ್ಕೆ ಕೂಡಿಬಂದ ಕಾಲ

ಡಾ. ಸಂದೀಪ್‌ ಶಾಸ್ತ್ರಿ
Published:
Updated:
‘ನಾಯಕತ್ವದ ದಂಡ’ ಹಸ್ತಾಂತರಕ್ಕೆ ಕೂಡಿಬಂದ ಕಾಲ

ಸಕ್ರಿಯ ರಾಜಕಾರಣಕ್ಕೆ ಬಂದು ಹದಿಮೂರು ವರ್ಷಗಳ ಬಳಿಕ, ಕೊನೆಗೂ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳಲು ರಾಹುಲ್‌ ಗಾಂಧಿ ಸಿದ್ಧರಾಗಿದ್ದಾರೆ. ಪಕ್ಷದ ನೇತೃತ್ವವನ್ನು ಅವರು ಅಧಿಕೃತವಾಗಿ ವಹಿಸಿಕೊಳ್ಳುವುದಕ್ಕೆ ಸಂಬಂಧಿಸಿ ಕಳೆದ ಕೆಲವು ವರ್ಷಗಳಿಂದ ತೀವ್ರವಾದ ಊಹಾಪೋಹಗಳು ಇದ್ದವು. ಈ ಸವಾಲನ್ನು ವಹಿಸಿಕೊಳ್ಳಲು ಅವರಿಗೆ ಹಿಂಜರಿಕೆ ಇದೆ ಎಂಬ ಭಾವನೆಯೂ ವ್ಯಕ್ತವಾಗಿದೆ.

‘ನಾಯಕತ್ವದ ದಂಡ’ ತಾಯಿಯಿಂದ ಮಗನಿಗೆ ಹಸ್ತಾಂತರವಾಗುವುದು ಈಗ ಸ್ಪಷ್ಟವಾಗಿದೆ. ಈ ನಾಯಕತ್ವ ಬದಲಾವಣೆಯು ಕಾಂಗ್ರೆಸ್‌ನ ರಾಜಕಾರಣದ ಸ್ವರೂಪ ಮತ್ತು ಶೈಲಿಯ ಮೇಲೆ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ, ರಾಜಕಾರಣ ಮತ್ತು ನಾಯಕತ್ವದ ಕುರಿತು ಹೊಸ ನಾಯಕರ ಧೋರಣೆ ಬಗ್ಗೆ ಜನರ ವಿಮರ್ಶೆಗಳ ಮೇಲೆಯೂ ಮಹತ್ವದ ಪರಿಣಾಮಗಳನ್ನು ಬೀರಲಿದೆ.

ರಾಹುಲ್‌ ಅವರು ಪಕ್ಷದ ಅಧ್ಯಕ್ಷರಾಗುವುದಕ್ಕೆ ಸಂಬಂಧಿಸಿದ ಔಪಚಾರಿಕ ಪ್ರಕ್ರಿಯೆಗಳು ಗುಜರಾತ್‌ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ ಮೊದಲೇ ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಾಗಿದೆ. ಇದೊಂದು ಕುತೂಹಲಕರ ಕಾರ್ಯತಂತ್ರ– ಚುನಾವಣಾ ಫಲಿತಾಂಶದಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಉತ್ತಮವಾದರೆ ಅದು ನಾಯಕತ್ವ ಬದಲಾವಣೆಯ ಪ್ರತಿಬಿಂಬ ಎಂದು ತಾರೀಫು ಮಾಡಬಹುದು; ಹಿನ್ನಡೆಯಾದರೆ, ‘ಒಳ್ಳೆಯ ದಿನಗಳು ಮುಂದೆ ಬರಲಿವೆ’ ಎಂಬ ಭರವಸೆಯಲ್ಲಿ ಹಿನ್ನಡೆಯನ್ನು ಮರೆತುಬಿಡಬಹುದು.

ಗುಜರಾತ್‌ ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಗಾಂಧಿ ಅವರು ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡಿರುವಂತೆ, ಹೆಚ್ಚು ಚೈತನ್ಯಶೀಲರಂತೆ ಕಾಣಿಸುತ್ತಿದ್ದಾರೆ ಹಾಗೂ ಅವರ ಹೇಳಿಕೆಗಳೆಲ್ಲವೂ ಸರಿಯಾದ ದಿಕ್ಕಿನಲ್ಲಿಯೇ ಇವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಕಾಂಗ್ರೆಸ್‌ ಪಕ್ಷದ ಭಾವಿ ಅಧ್ಯಕ್ಷನ ಬಗ್ಗೆ ಮಾಧ್ಯಮಗಳ ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಧೋರಣೆ ಬದಲಾಗಿದೆಯೇ ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಿಕೊಳ್ಳುವುದು ಬಹಳ ಮುಖ್ಯ. ರಾಹುಲ್‌ ಅವರ ಬಗೆಗಿನ ಮೊನಚಾದ ವಿಮರ್ಶೆ ಮತ್ತು ಅವರನ್ನು ಸಾರಾಸಾಗಟು ಅಲ್ಲಗಳೆದು ಬಿಡುತ್ತಿದ್ದ ಮನೋಭಾವವೂ ಕಡಿಮೆಯಾಗಿದೆ ಎಂಬುದನ್ನು ಗಮನಿಸಬಹುದು. ಬಿಜೆಪಿ ಮತ್ತು ಅದರ ನಾಯಕತ್ವವನ್ನು ಹೆಚ್ಚು ಹೆಚ್ಚು ಟೀಕಿಸುತ್ತಿರುವುದು ರಾಹುಲ್‌ ಅವರಿಗೆ ಪ್ರಯೋಜನಕಾರಿಯಾಗಿದೆ ಎಂಬುದರ ಬಗ್ಗೆಯೂ ನಾವು ಗಮನ ಹರಿಸುವುದು ಮುಖ್ಯ. ಈ ತೀವ್ರವಾದ ಟೀಕೆಗಳು ತನ್ನಿಂತಾನಾಗಿಯೇ ಜನರ ಗಮನವನ್ನು ಪ್ರಮುಖ ವಿರೋಧ ಪಕ್ಷದತ್ತ ಸೆಳೆದಿವೆ.

ರಾಹುಲ್‌ ಅವರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷತೆಗೆ ಏರುವುದು ಅನಿವಾರ್ಯವಾದ ಅಂಶ ಮತ್ತು ಅವರು ಯಾವಾಗ ಅಧ್ಯಕ್ಷರಾಗಲಿದ್ದಾರೆ ಎಂಬುದರ ಬಗ್ಗೆ ಮಾತ್ರ ಚರ್ಚೆ ಇದೆ ಎಂದು ಕೆಲವರು ಭಾವಿಸುತ್ತಿದ್ದಾರೆ. ‘ನೆಹರೂ–ಗಾಂಧಿ’ ಕುಟುಂಬದ ಹೊರಗಿನವರಿಗೆ ನಾಯಕತ್ವ ನೀಡಲು ಪಕ್ಷವು ಸಿದ್ಧವಾಗಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ.

‘ಮೊದಲ ಕುಟುಂಬ’ವೇ ಕಾಂಗ್ರೆಸನ್ನು ಒಟ್ಟಾಗಿ ಇರಿಸುವ ಸಿಮೆಂಟು ಎಂಬುದನ್ನು ಪಕ್ಷದ ನಿಷ್ಠಾವಂತರು ಖಾಸಗಿ ಮಾತುಕತೆ ಸಂದರ್ಭದಲ್ಲಿ ಹೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪಕ್ಷವನ್ನು ಭಾರಿ ಚುನಾವಣಾ ಗೆಲುವಿನತ್ತ ಒಯ್ಯಲು ನಾಯಕತ್ವವು ವಿಫಲವಾಗಿದ್ದರೂ ‘ಮೊದಲ ಕುಟುಂಬ’ದ ನೆರಳನ್ನು ಮೀರಿ ಬೆಳೆಯಲು ಪಕ್ಷಕ್ಕೆ ಸಾಧ್ಯವಿಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ.

ಹಾಗಿದ್ದರೂ, ದಿನದ ಇಪ್ಪತ್ತನಾಲ್ಕು ಗಂಟೆಯೂ ರಾಜಕಾರಣಕ್ಕೆ ಬದ್ಧವಾಗಿರುವ ಸಾಮರ್ಥ್ಯ ರಾಹುಲ್‌ ಗಾಂಧಿ ಅವರಿಗೆ ಇಲ್ಲ ಎಂಬ ಬಗ್ಗೆ ಪಕ್ಷದೊಳಗೆ ಕಳವಳ ಇದೆ. ರಾಜಕೀಯವಾಗಿ ನಿರ್ಣಾಯಕವಾದ ಬೆಳವಣಿಗೆಗಳ ಸಂದರ್ಭಗಳಲ್ಲಿ ರಾಹುಲ್‌ ಅವರ ದೀರ್ಘವಾದ ಗೈರುಹಾಜರಿ, ರಾಜಕೀಯ ವಿವೇಚನೆ ಇಲ್ಲದ ದುಡುಕು ಕ್ರಮಗಳು (ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹರಿದು ಹಾಕಿದಂತಹ ನಡೆಗಳು), ಬಹಿರಂಗ ಭಾಷಣಗಳಲ್ಲಿ ಅವರು ಮಾಡಿಕೊಂಡಿರುವ ಎಡವಟ್ಟುಗಳು ಪಕ್ಷಕ್ಕೆ ಮುಜುಗರ ಉಂಟು ಮಾಡಿವೆ. ಈಗ ಸ್ಪಷ್ಟವಾಗಿ ಕಾಣಿಸುತ್ತಿರುವಂತೆ ರಾಹುಲ್‌ ಗಾಂಧಿ ಅವರು ಸಾಕಷ್ಟು ಬೆಳೆದಿದ್ದಾರೆ, ಕಲಿತಿದ್ದಾರೆ ಮತ್ತು ಪುನಶ್ಚೇತನ ಪಡೆದುಕೊಂಡಿದ್ದಾರೆ ಎಂದು ಅವರ ಬೆಂಬಲಿಗರು ವಾದಿಸಬಹುದು. ಇದು ಸತ್ಯ ಎಂದು ಒಪ್ಪಿಕೊಂಡರೂ ಈ ಪುನಶ್ಚೇತನ ಎಷ್ಟು ಕಾಲ ಉಳಿಯಬಹುದು ಎಂಬುದು ಮಹತ್ವದ ಪ್ರಶ್ನೆಯೇ ಆಗಿದೆ.

ಪಕ್ಷದ ಅಧ್ಯಕ್ಷರಾಗಿ ರಾಹುಲ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ‘ಮೋದಿ–ರಾಹುಲ್‌’ ನಡುವಣ ನಾಯಕತ್ವ ಗುಣಗಳ ಹೋಲಿಕೆ ಮತ್ತು ಪರಸ್ಪರ ಸ್ಪರ್ಧೆಯಿಂದ ಕಾಂಗ್ರೆಸ್‌ ಓಡಿಹೋಗುವುದು ಸಾಧ್ಯವಿಲ್ಲ. ವಿಶೇಷವಾಗಿ 2019ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಈ ಹೋಲಿಕೆಯನ್ನು ಹೆಚ್ಚು ಶಕ್ತಿಯುತವಾಗಿ ಮುಂದಿಡಲು ಬಿಜೆಪಿ ಎಲ್ಲ ಪ್ರಯತ್ನವನ್ನೂ ಮಾಡುತ್ತದೆ. ಇದಕ್ಕೆ ಎರಡು ಪ್ರತಿತಂತ್ರಗಳನ್ನು ಕಾಂಗ್ರೆಸ್‌ ಹೊಂದಿರುವಂತೆ ಕಾಣಿಸುತ್ತದೆ. ಮೊದಲನೆಯದಾಗಿ, ವ್ಯಕ್ತಿಗಳಿಂದ ನೀತಿಗಳತ್ತ ಗಮನವನ್ನು ವರ್ಗಾಯಿಸಲು ಕಾಂಗ್ರೆಸ್‌ ಪಕ್ಷವು ಪ್ರಜ್ಞಾಪೂರ್ವಕ ಪ್ರಯತ್ನ ನಡೆಸುತ್ತಿದೆ. ಈ ರೀತಿಯ ವರ್ಗಾವಣೆ ಕಾಂಗ್ರೆಸ್‌ಗೆ ಅನುಕೂಲಕರವಾಗಿ ಕೆಲಸ ಮಾಡಬಹುದು. ಹೀಗೆ ಆದರೆ, ಪಕ್ಷಗಳು ಕೈಗೊಂಡ ಉಪಕ್ರಮಗಳು ಗಮನ ಕೇಂದ್ರವಾಗಿರುತ್ತವೆಯೇ ಹೊರತು ವ್ಯಕ್ತಿಗಳು ಅಲ್ಲ. ಈ ಧೋರಣೆಯ ಯಶಸ್ಸು ಕಾಂಗ್ರೆಸ್‌ನ ಸಾಧ್ಯತೆಗಳ ಪುನಶ್ಚೇತನದ ಅಡಿಗಲ್ಲಾಗಬಹುದು.

ಎರಡನೆಯದಾಗಿ, ಚುನಾವಣಾ ಸ್ಪರ್ಧೆಯ ಸ್ವರೂಪದಲ್ಲಿ ಆಗಿರುವ ಪ್ರಮುಖ ಬದಲಾವಣೆಯನ್ನು ಕಾಂಗ್ರೆಸ್ ಪಕ್ಷವು ಗುರುತಿಸಿದೆ. ಭಾರತದ ರಾಜ್ಯಗಳು ಭಾರತದ ರಾಜಕಾರಣದ ಹೊಸ ಕೇಂದ್ರಗಳಾಗಿ ಹೊರ ಹೊಮ್ಮುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ. ರಾಜ್ಯದಲ್ಲಿ ಗಟ್ಟಿಯಾದ ಬೇರುಗಳನ್ನು ಹೊಂದಿರುವ ಮತ್ತು ಭಾರಿ ಜನಬೆಂಬಲ ಇರುವ ನಾಯಕರ ಸವಾಲನ್ನು ಎದುರಿಸುವಾಗ ಬಿಜೆಪಿ ತಿಣುಕಾಡಿದ್ದನ್ನು 2014ರ ಬಳಿಕ ನಡೆದ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕಂಡಿದ್ದೇವೆ. ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ಎದುರಿಸಲು ಹೈಕಮಾಂಡ್‌ ಹೊಂದಿರುವ ಸಾಮರ್ಥ್ಯ ಸೀಮಿತ ಎಂಬುದು ಕಳೆದ ಒಂದು ದಶಕದಲ್ಲಿ ಕಾಂಗ್ರೆಸ್‌ನ ಅನುಭವವಾಗಿದೆ.

ಹಾಗಾಗಿಯೇ, ರಾಜ್ಯ ಮಟ್ಟದ ನಾಯಕರನ್ನು ಗಟ್ಟಿಗೊಳಿಸುವ ಹೊಸ ಕಾರ್ಯತಂತ್ರವನ್ನು ಕಾಂಗ್ರೆಸ್‌ ಅಪ್ಪಿಕೊಂಡಿದೆ. ಈ ನಾಯಕರೇ ಚುನಾವಣಾ ಪ್ರಚಾರದ ‘ನಿಜವಾದ’ ಮುಂದಾಳುಗಳು ಎಂಬುದನ್ನು ಅರ್ಥಮಾಡಿಕೊಂಡಿದೆ. ಪಂಜಾಬ್‌ನಲ್ಲಿ ಈ ಪ್ರಯೋಗವನ್ನು ಪರೀಕ್ಷೆಗೆ ಒಡ್ಡಲಾಗಿದೆ. ಅಮರಿಂದರ್‌ ಸಿಂಗ್‌ ಅವರನ್ನು ನಾಯಕನೆಂದು ಬಿಂಬಿಸಿದ್ದು ಕಾಂಗ್ರೆಸ್‌ಗೆ ಭಾರಿ ಲಾಭ ತಂದುಕೊಟ್ಟಿದೆ. ಇದೇ ಪ್ರಯೋಗವನ್ನು ಕರ್ನಾಟಕದಲ್ಲಿ ಪರೀಕ್ಷಿಸಲಾಗುತ್ತಿದ್ದು ಸಿದ್ದರಾಮಯ್ಯ ಅವರನ್ನು ನಾಯಕನಾಗಿ ಬಿಂಬಿಸಲಾಗುತ್ತಿದೆ.

ರಾಜಸ್ಥಾನದಲ್ಲಿ ಸಚಿನ್‌ ಪೈಲಟ್‌ ಮತ್ತು ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಇರಿಸಿಕೊಂಡು ಇದೇ ಪ್ರಯೋಗ ನಡೆಯುವ ಸಾಧ್ಯತೆಗಳು ಕಾಣಿಸುತ್ತಿವೆ. ಗುಜರಾತ್‌ನಲ್ಲಿ ಜನಮನ್ನಣೆಯ ನಾಯಕ ಇಲ್ಲ ಎಂಬುದೇ ಕಾಂಗ್ರೆಸ್‌ ಪಕ್ಷದ ಬಹುದೊಡ್ಡ ಹಿನ್ನಡೆ. ರಾಷ್ಟ್ರೀಯ ಕೇಂದ್ರ ಕಚೇರಿಯಿಂದಲೇ ಚುನಾವಣಾ ಪ್ರಚಾರದ ಸಣ್ಣ ಸಣ್ಣ ಅಂಶಗಳನ್ನು ನಿರ್ವಹಿಸುವ ಬಿಜೆಪಿಯನ್ನು ಚುನಾವಣಾ ಪ್ರಚಾರದ ನೇತೃತ್ವವನ್ನು ರಾಜ್ಯದ ನಾಯಕರಿಗೆ ವಹಿಸುವ ಹೊಸ ಕಾರ್ಯತಂತ್ರದ ಮೂಲಕ ಎದುರಾಗಲು ಕಾಂಗ್ರೆಸ್‌ ಹೊರಟಿದೆ. ಹಾಗಾಗಿ, ಪುನಶ್ಚೇತನಗೊಂಡ ರಾಹುಲ್‌ ಗಾಂಧಿ, ಆವೃತ್ತಿ 2.0ಯಲ್ಲಿ ಹೈಕಮಾಂಡ್‌ ಅನ್ನು ಮಾತ್ರ ಮುಂದೊತ್ತುವ ಬದಲಿಗೆ ‘ಟೀಮ್‌ ಕಾಂಗ್ರೆಸ್‌’ ಅನ್ನು ಮುನ್ನೆಲೆಗೆ ತರುವ ಕಾರ್ಯತಂತ್ರವೂ ಇದೆ.

ಇದು, ಮತ್ತೆ, ಭಾರತದ ರಾಜಕಾರಣದ ವಂಶಾಡಳಿತದ ಅನಿವಾರ್ಯ ಪ್ರಶ್ನೆಯನ್ನು ಎತ್ತುತ್ತದೆ. ‘ನನ್ನ ಹಿಂದೆ ಬೀಳಬೇಡಿ, ಭಾರತ ನಡೆಯುತ್ತಿರುವುದೇ ಹೀಗೆ’ ಎಂದು ಹೇಳಿ ಈ ವಿಚಾರವನ್ನು ಉಪೇಕ್ಷಿಸಲು ರಾಹುಲ್‌ ಗಾಂಧಿ ಪ್ರಯತ್ನಿಸಿದ್ದಾರೆ. ಹಾಗಿದ್ದರೂ ಭಾರತದ ರಾಜಕಾರಣದಲ್ಲಿ ರಾಜಕೀಯ ವಂಶಗಳೇ ಮುನ್ನೆಲೆಯಲ್ಲಿ ಇರುವುದು ವಾಸ್ತವವಾಗಿದೆ. ಡಿಎಂಕೆ, ಬಿಜೆಡಿ, ಜೆಡಿಎಸ್‌, ಟಿಆರ್‌ಎಸ್‌, ವೈಎಸ್‌ಆರ್‌ ಕಾಂಗ್ರೆಸ್‌, ಆರ್‌ಜೆಡಿ, ನ್ಯಾಷನಲ್‌ ಕಾನ್ಫರೆನ್ಸ್‌ಗಳಂತಹ ರಾಜ್ಯ ಮಟ್ಟದ ಪಕ್ಷಗಳು ಹಾಗೂ ಶಿವಸೇನಾ, ಟಿಡಿಪಿ, ಪಿಡಿಪಿ, ಅಕಾಲಿ ದಳ, ಎಲ್‌ಜೆಪಿಯಂತಹ ಬಿಜೆಪಿಯ ಮಿತ್ರ ಪಕ್ಷಗಳ ನೇತೃತ್ವದಲ್ಲಿ ವಂಶಾಡಳಿತವೇ ಮುಂದುವರಿದಿದೆ.

ಬಿಜೆಪಿಯಲ್ಲಿ ಕೂಡ ವಂಶಾಡಳಿತ ಇದೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ, ಗೋಪಿನಾಥ ಮುಂಡೆಯವರ ಮಕ್ಕಳು ಸಕ್ರಿಯ ರಾಜಕಾರಣದಲ್ಲಿ ಮುನ್ನೇರುತ್ತಿರುವುದು ಇದನ್ನೇ ಸೂಚಿಸುತ್ತದೆ. ಕರ್ನಾಟಕದ ಬಿಜೆಪಿಯ ಪ್ರಮುಖ ನಾಯಕರು ಕೂಡ ತಮ್ಮ ಮಕ್ಕಳು ಅಥವಾ ಕುಟುಂಬದ ಸದಸ್ಯರು ರಾಜಕಾರಣದಲ್ಲಿ ಸಕ್ರಿಯರಾಗಲು ಬೇಕಾದ ವೇದಿಕೆ ಒದಗಿಸಿಕೊಟ್ಟಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮಗ ಅವರು ಪ್ರತಿನಿಧಿಸುತ್ತಿದ್ದ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವುದು, ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ಪಾತ್ರಗಳು ಇದಕ್ಕೆ ನಿದರ್ಶನ.

ಕಾಂಗ್ರೆಸ್‌ನಲ್ಲಿ ವಂಶಾಡಳಿತ ಇದೆ ಎಂದು ಪ್ರತಿಸ್ಪರ್ಧಿ ಪಕ್ಷಗಳು ಆರೋಪಿಸುವಾಗ ಅವರದೇ ಹಿತ್ತಿಲಿನಲ್ಲಿ ರಾಜಕೀಯ ಕುಟುಂಬಗಳು ಬೆಳೆಯುತ್ತಿರುವುದು ಈ ಆರೋಪವನ್ನು ಟೊಳ್ಳಾಗಿಸುತ್ತದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಆಂತರಿಕ ಪ್ರಜಾತಂತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟು, ಪಕ್ಷ ವ್ಯವಸ್ಥೆಯಲ್ಲಿ ವ್ಯಾಪಕವಾದ ಸುಧಾರಣೆ ತರುವುದು ಈಗಿನ ಅಗತ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry