7

ವಸತಿ ಯೋಜನೆಗೆ ಅಡ್ಡಿಯಾದ ಮರಳಿನ ಅಭಾವ

Published:
Updated:
ವಸತಿ ಯೋಜನೆಗೆ ಅಡ್ಡಿಯಾದ ಮರಳಿನ ಅಭಾವ

ಮಂಗಳೂರು: ಜಿಲ್ಲೆಯಾದ್ಯಂತ ಮರಳಿನ ಅಭಾವ ತೀವ್ರವಾಗಿದ್ದು, ಸರ್ಕಾರದ ವಸತಿ ಯೋಜನೆಯ ಮೇಲೂ ಪರಿಣಾಮ ಬೀರಿದೆ. ಈ ವರ್ಷ ಒಟ್ಟು 8,300 ಮನೆಗಳು ಜಿಲ್ಲೆಗೆ ಮಂಜೂರಾಗಿದ್ದು, 3 ಸಾವಿರ ಮನೆಗಳು ಮಾತ್ರ ಪೂರ್ಣಗೊಂಡಿವೆ. ಇನ್ನೂ 5 ಸಾವಿರಕ್ಕೂ ಹೆಚ್ಚು ಮನೆಗಳು ಬಾಕಿ ಉಳಿದಿವೆ.

ವಿವಿಧ ಯೋಜನೆಗಳ ಅಡಿಯಲ್ಲಿ ಬಡಜನರಿಗೆ ಸೂರು ಒದಗಿಸಲು ಸರ್ಕಾರದಿಂದ ಈ ಬಾರಿ ಒಟ್ಟು ₹124 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿಯ ಹಂತವನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಕಂತಿನಲ್ಲಿ ಅನುದಾನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ, ಬಹುತೇಕ ಫಲಾನುಭವಿಗಳು ಮರಳಿನ ಸಮಸ್ಯೆಯಿಂದಾಗಿ ಇನ್ನೂ ಮನೆ ನಿರ್ಮಾಣವನ್ನೇ ಆರಂಭಿಸಿಲ್ಲ. ಇದರಿಂದಾಗಿ ಸರ್ಕಾರದ ಎರಡನೇ ಕಂತಿನ ಅನುದಾನವೂ ಸಿಗದಂತಾಗಿದೆ.

ಜಿಲ್ಲೆಯಲ್ಲಿ ಸಿಆರ್‌ಜೆಡ್‌ ಪ್ರದೇಶದಲ್ಲಿ ಮರಳುಗಾರಿಕೆಗೆ ಈಗಾಗಲೇ 41 ಪರವಾನಗಿ ನೀಡಲಾಗಿದೆ. ಆದರೆ, ಸಿಆರ್‌ಜೆಡ್‌ಯೇತರ ಪ್ರದೇಶದಲ್ಲಿ ಮರಳುಗಾರಿಕೆಗೆ ಇದುವರೆಗೆ ಅನುಮತಿ ಸಿಕ್ಕಿಲ್ಲ. ಮರಳುಗಾರಿಕೆ ನಡೆಸುವವರೂ ಹೆಚ್ಚಿನ ಹಣಕ್ಕಾಗಿ ಮರಳನ್ನು ಬೇರೆ ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

‘ಮರಳಿನ ಸಮಸ್ಯೆಯಿಂದಾಗಿಯೇ ವಸತಿ ಯೋಜನೆಯಡಿ ಮನೆ ಕಾಮಗಾರಿ ಪೂರ್ಣಗೊಳಿಸಲು ಆಗುತ್ತಿಲ್ಲ. ಒಂದು ಲಾರಿ ಮರಳಿಗೆ ₹10 ಸಾವಿರ ಕೊಡಬೇಕಾಗಿದೆ. ಇಷ್ಟೊಂದು ಹಣ ಕೊಟ್ಟು ಮರಳು ಖರೀದಿಸಿದರೆ, ಸರ್ಕಾರದ ₹1.20 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲು ಸಾಧ್ಯವೇ ಇಲ್ಲ’ ಎಂದು ಫಲಾನುಭವಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

‘ವಸತಿ ಯೋಜನೆಯಡಿ ನಿರ್ಮಿಸುವ ಮನೆಗಳಿಗೆ ಮರಳು ದೊರೆಯುವಂತೆ ಮಾಡಲು ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗಿದೆ. ಸರ್ಕಾರದ ಆದೇಶ ಪತ್ರವನ್ನು ತೋರಿಸುವ ಫಲಾನುಭವಿಗಳಿಗೆ ಮರಳು ದೊರೆಯುವಂತೆ ವ್ಯವಸ್ಥೆ ಮಾಡಲು ತಹಶೀಲ್ದಾರರಿಗೆ ಸೂಚನೆ ನೀಡುವಂತೆಯೂ ಕೋರಲಾಗಿದೆ. ಈ ಕುರಿತು ಶೀಘ್ರ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ವಸತಿ ಯೋಜನೆಯ ನೋಡಲ್‌ ಅಧಿಕಾರಿ ಟಿ.ಎಸ್‌. ಲೋಕೇಶ್‌ ಹೇಳುತ್ತಾರೆ.

‘ವಾಸ್ತವದಲ್ಲಿ ಮರಳು ಸಿಗದೇ ದೊಡ್ಡ ಬಿಲ್ಡರ್‌ಗಳು ಕಾಮಗಾರಿಯನ್ನು ಸ್ಥಗಿತಗೊಳಿಸುವಂತಾಗಿದೆ. ಇನ್ನೂ ಫಲಾನುಭವಿಗಳ ಗತಿ ಏನು? ಜಿಲ್ಲೆಯಲ್ಲಿ ಮರಳಿಗೆ ಯಾವುದೇ ಕೊರತೆ ಇಲ್ಲ. ಆದರೂ, ಮರಳಿಗಾಗಿ ಪರದಾಡುವಂತಾಗಿದೆ’ ಎಂದು ಬಜ್ಪೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ದೂರುತ್ತಾರೆ.

ಸಮಸ್ಯೆ ಹಲವು: ವಸತಿ ಯೋಜನೆಯಡಿ ನಿರ್ಮಿಸಲಾಗುವ ಮನೆಗಳ ಕಾಮಗಾರಿಯನ್ನು ಸ್ಯಾಟಲೈಟ್‌ ಮೂಲಕ ಪರಿಶೀಲಿಸಲಾಗುತ್ತದೆ. ಕಾಮಗಾರಿಯ ಒಂದು ಹಂತ ಮುಗಿದ ನಂತರ ಫಲಾನುಭವಿಗಳು ಸಲ್ಲಿಸುವ ಭಾವಚಿತ್ರಗಳು ಇದಕ್ಕೆ ಹೊಂದಾಣಿಕೆ ಆಗುತ್ತಿಲ್ಲ. ಇದರಿಂದಾಗಿ ಕೆಲ ಫಲಾನುಭವಿಗಳಿಗೆ ಸಮಸ್ಯೆ ಉಂಟಾಗಿದೆ ಎಂಬುದನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ವಸತಿ ಯೋಜನೆಯಡಿ 700 ಚದರ ಮೀಟರ್‌ನಲ್ಲಿ ಮಾತ್ರ ಮನೆ ನಿರ್ಮಾಣ ಮಾಡಬೇಕು. ಇದಕ್ಕಿಂತ ಸ್ವಲ್ಪ ಹೆಚ್ಚಾದರೂ, ಅದು ಯೋಜನೆಯಡಿ ಅರ್ಹತೆ ಪಡೆಯುವುದಿಲ್ಲ ಎನ್ನುವುದು ಮತ್ತೊಂದು ಸಮಸ್ಯೆ.

ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಲಿಂಕ್‌ ಆಗದೇ ಇರುವುದರಿಂದ ಯೋಜನೆಯ ಫಲಾನುಭವಿಗಳಲ್ಲಿ ಕೆಲವರಿಗೆ ಒಂದೆರಡು ಕಂತಿನ ಹಣ ಬಂದಿಲ್ಲ. ಕೆಲವರಿಗೆ ಮೊದಲಿಂದಲೇ ಬಂದಿಲ್ಲ. ಪುತ್ತೂರು ತಾಲ್ಲೂಕಿನಲ್ಲಿಯೇ 34 ಫಲಾನುಭವಿಗಳು ಇಂತಹ ಸಮಸ್ಯೆ ಎದುರಿಸುವಂತಾಗಿದೆ.

ಮಂಗಳೂರಿಗೆ 1,286 ಮನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 8,300 ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. ಅದರಲ್ಲಿ 3 ಸಾವಿರ ಮನೆಗಳು ಪೂರ್ಣಗೊಂಡಿದ್ದು, ಇನ್ನೂ 5 ಸಾವಿರ ಮನೆಗಳು ವಿವಿಧ ಹಂತಗಳಲ್ಲಿ ಬಾಕಿ ಇವೆ.

ಮಂಗಳೂರು ತಾಲ್ಲೂಕಿಗೆ ಸಂಬಂಧಿಸಿದಂತೆ 1,283 ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಅವುಗಳ ಪೈಕಿ ಈಗಾಗಲೇ 480 ಮನೆಗಳು ಪೂರ್ಣಗೊಂಡಿದ್ದು, ಇನ್ನೂ 803 ಮನೆಗಳು ವಿವಿಧ ಹಂತಗಳಲ್ಲಿವೆ.

ಪುತ್ತೂರು ಸಾಧನೆ ಕಳಪೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ವಸತಿ ಯೋಜನೆಗಾಗಿ ₹124 ಕೋಟಿ ಮಂಜೂರಾಗಿದೆ. ಪುತ್ತೂರು ತಾಲ್ಲೂಕಿಗೆ 1,704 ಮನೆಗಳ ಗುರಿ ನೀಡಲಾಗಿದ್ದು, ₹24 ಕೋಟಿ ಮಂಜೂರಾಗಿದೆ.

ಇತರ ತಾಲ್ಲೂಕಿಗೆ ಹೋಲಿಸಿದರೆ ಪುತ್ತೂರು ಇದರಲ್ಲಿ ತೀರಾ ಹಿಂದುಳಿದಿದೆ. ಕೇವಲ ಶೇ 35 ಶೇ. ಸಾಧನೆಯಾಗಿದೆ. ತಾಲ್ಲೂಕಿನ ರಾಮಕುಂಜ ಗ್ರಾಮ ಪಂಚಾಯಿತಿ ಶೇ 61 ಸಾಧನೆ ಮಾಡಿದ್ದರೆ, ಅರಿಯಡ್ಕ ಕೇವಲ ಶೇ 12 ಕೆಲಸ ಮಾಡಿದೆ. ಈ ಗ್ರಾಮಕ್ಕೆ 80 ಮನೆ ನೀಡಿದ್ದರೆ, ಕೇವಲ 10 ಮನೆ ಪೂರ್ಣವಾಗಿದೆ.

* * 

ನಿಗದಿತ ಅವಧಿಯಲ್ಲಿ ವಸತಿ ಯೋಜನೆಯ ಪ್ರಗತಿಯ ಸಾಧಿಸಬೇಕು. ಇಲ್ಲದೇ ಇದ್ದಲ್ಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಡಾ.ಎಂ.ಆರ್‌. ರವಿ

ಜಿ.ಪಂ. ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry