ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬೆ: ಎರಡನೇ ಅಣೆಕಟ್ಟೆ, ಸಂತ್ರಸ್ತ ರೈತರ ಕಡೆಗಣನೆ

Last Updated 28 ನವೆಂಬರ್ 2017, 5:17 IST
ಅಕ್ಷರ ಗಾತ್ರ

ಬಂಟ್ವಾಳ: ‘ ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಾಣಗೊಂಡ 7 ಮೀಟರ್‌ ಎತ್ತರದ ನೂತನ ಅಣೆಕಟ್ಟೆಯಲ್ಲಿ ಕಳೆದ ಒಂದು ವರ್ಷದಿಂದ ನೀರು ಸಂಗ್ರಹಿಸುತ್ತಿದ್ದರೂ ಇಲ್ಲಿನ ಕೃಷಿ ಭೂಮಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಮಾತ್ರ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ತೀರಾ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ತುಂಬೆ ಅಣೆಕಟ್ಟೆ ಸಂತ್ರಸ್ತ ಹೋರಾಟ ಸಮಿತಿ ಮತ್ತು ಬಂಟ್ವಾಳ ರೈತ ಸಂಘ ಹಸಿರುಸೇನೆ ಆರೋಪಿಸಿದೆ.

‘ಜಲಾವೃತಗೊಂಡ ಜಮೀನಿಗೆ ಸಂಬಂಧಿಸಿದಂತೆ ಶೇ 50 ರಷ್ಟು ಸರ್ವೇ ಕಾರ್ಯ ಪೂರ್ಣಗೊಂಡಿದೆ’ ಎಂದು ಮನಪಾ ಆಯುಕ್ತರು ಸಭೆಯಲ್ಲಿ ಸತ್ಯಕ್ಕೆ ದೂರವಾದ ವಿಚಾರ ಮಂಡಿಸುತ್ತಿದ್ದಾರೆ.

‘2016ನೇ ಜನವರಿ 16ರಂದು ಹೈಕೋರ್ಟ್‌ ಸ್ಪಷ್ಟ ಅದೇಶ ನೀಡಿ, ಇಲ್ಲಿನ ರೈತರ ಸಮಕ್ಷಮ ಪಾರದರ್ಶಕವಾಗಿ ಮುಳುಗಡೆ ಜಮೀನು ಸರ್ವೆ ನಡೆಸಿ ಸಂತ್ರಸ್ತರಿಗೆ ಲಿಖಿತ ಮಾಹಿತಿ ಒದಗಿಸಲು ಸೂಚಿಸಿದೆ. ಇನ್ನೊಂದೆಡೆ ಮುಳುಗಡೆ ಭೀತಿ ಎದುರಿಸುತ್ತಿರುವ ಸಂತ್ರಸ್ತ ರೈತರಿಗೆ ಈ ಬಗ್ಗೆ ಮುಂದಿನ ಒಂದು ತಿಂಗಳೊಳಗೆ ಸ್ಪಷ್ಟ ಲಿಖಿತ ಮಾಹಿತಿ ನೀಡುವಂತೆ ಕೇಂದ್ರ ಜಲ ಆಯೋಗ ಸೂಚಿಸಿದೆ. ಇವೆಲ್ಲವನ್ನೂ ಮರೆತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾ, ಮುಳುಗಡೆ ಭೂಮಿ ವ್ಯಾಪ್ತಿ ಮತ್ತು ಪರಿಹಾರ ಮೊತ್ತಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ದೂರಿದ್ದಾರೆ.

‘ಏಳು ಮೀ.ಎತ್ತರಕ್ಕೆ ಅಣೆಕಟ್ಟೆ ನಿರ್ಮಿಸಿ ಒಳಚರಂಡಿ ನೀರು ಸಹಿತ ಕಲುಷಿತ ನೀರನ್ನು ಜನತೆಗೆ ಕುಡಿಯಲು ಪೂರೈಸಿ ಅವರ ಆರೋಗ್ಯ ಹಾಳು ಮಾಡುವ ಬದಲಾಗಿ ನದಿಯ 10 ಕಿ.ಮೀ.ದೂರದಲ್ಲಿ ತಲಾ 5 ಮೀ. ಎತ್ತರಕ್ಕೆ ಪ್ರತ್ಯೇಕ ಎರಡು ಅಣೆಕಟ್ಟೆ ನಿರ್ಮಿಸಿದ್ದರೆ ಅಂತರ್ಜಲ ವೃದ್ಧಿಸಲು ಸಾಧ್ಯವಾಗುತ್ತಿತ್ತು’ ಎಂದು ಟೀಕಿಸಿದ್ದಾರೆ.

‘ಸಜೀಪ ಮುನ್ನೂರು ಸಹಿತ ಸಜಿಪ ಮೂಡ, ಸಜಿಪನಡು, ಸಜಿಪಡು, ಇರಾ, ಮಂಚಿ, ಚೇಳೂರು ಮತ್ತಿತರ ಪ್ರದೇಶಕ್ಕೆ ತುಂಬೆ ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ ಲಘು ವಾಹನ ಸಂಚರಿಸಲು ಅನೂಕೂಲವಾಗುವಂತೆ ಅಣೆಕಟ್ಟೆ ನಿರ್ಮಿಸಿದ್ದರೆ ಸುಮಾರು 10 ಕಿ.ಮೀ. ದೂರ ಕ್ರಮಿಸುವ ಬದಲಾಗಿ ಇಂಧನ ಮತ್ತು ಸಮಯವೂ ಉಳಿತಾಯ ಸಾಧ್ಯವಾಗುತ್ತಿತ್ತು’ ಎಂದಿದ್ದಾರೆ.

‘ದೂರದೃಷ್ಟಿಯ ಚಿಂತನೆ ಇಲ್ಲದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸದ ಪರಿಣಾಮ ಇಲ್ಲಿನ ಆರು ಗ್ರಾಮಗಳ ಸಾವಿರಾರು ಮಂದಿ ಜನತೆಗೆ ತೊಂದರೆಯಾಗುತ್ತಿದೆ’ ಎಂದು ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT