7

ಬೆಳೆ ವಿಮೆ: ಸಕಾಲದಲ್ಲಿ ಸರ್ವೆ ಮಾಡಲು ತಾಕೀತು

Published:
Updated:

ಮೈಸೂರು: ‘ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ವಿಮೆ ಮಾಡಿಕೊಡಲಾಗಿದೆ. ರೈತರಿಗೆ ಬೆಳೆ ಹಾನಿ ಆದಾಗ ವಿಮೆ ಹಣ ಸಿಗಬೇಕಾದರೆ ಅಧಿಕಾರಿಗಳು ಸರಿಯಾದ ಸಮಯಲ್ಲಿ ಕಟಾವಿನ ಬಗ್ಗೆ ಸರ್ವೆ ಮಾಡಿ, ಅದರ ಫೋಟೊಗಳನ್ನು ಆ್ಯಪ್‌ ಮೂಲಕ ಅಪ್‌ಲೋಡ್‌ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಬೆಳೆ ವಿಮೆ ಮತ್ತು ಕೃಷಿ, ಕಂದಾಯ, ಗ್ರಾಮೀಣ ಅಭಿವೃದ್ಧಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳ ಜೊತೆ ನಡೆದ ಆಕ್ಷೇಪಣೆ ಇತ್ಯರ್ಥ ಸಭೆಯಲ್ಲಿ ಅವರು ಮಾತನಾಡಿದರು.

2016– 17ರ ಹಿಂಗಾರು ಹಂಗಾಮಿನಲ್ಲಿ ಬೆಳೆಗಳ ಸರಿಯಾದ ಕಟಾವು ಮಾಹಿತಿ ನೀಡದ ಕಾರಣ ರೈತರಿಗೆ ವಿಮೆ ಹಣ ತಲುಪಿಲ್ಲ. ಮೊಬೈಲ್ ಆ್ಯಪ್‌ನಲ್ಲಿ ತಂತ್ರಜ್ಞಾನ ಸಮಸ್ಯೆ ಇದ್ದರೆ ತಿಳಿಸಿ. ಇದರಲ್ಲಿ ಸುಧಾರಣೆ ತರಲಾಗಿದ್ದು, ಅದರ ಬಗ್ಗೆ ತರಬೇತಿ ನೀಡಲಾಗುವುದು ತಿಳಿಸಿದರು.

30 ಸಾವಿರಕ್ಕೂ ಅಧಿಕ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ, ಅಧಿಕಾರಿಗಳು ಫಾರಂ 1 ಮತ್ತು ಫಾರಂ 2 ಅನ್ನು ಒಂದೇ ದಿನದಲ್ಲಿ ಮಾಡಿಸಿದ್ದಾರೆ. ಸಕಾಲದಲ್ಲಿ ಸರ್ವೆ ಮಾಡಬೇಕು. ಇಲ್ಲದಿದ್ದರೆ ಅದರ ಹೊಣೆ ಅಧಿಕಾರಿಗಳೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಳೆ ಕಟಾವು ನಡೆಯುವ ಸಂದರ್ಭದಲ್ಲಿ ಕೃಷಿ, ಕಂದಾಯ, ಗ್ರಾಮೀಣ ಅಭಿವೃದ್ಧಿ ಹಾಗೂ ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ವಿಮೆಗೆ ಸಂಬಂಧಿಸಿದಂತೆ ಬೇಕಿರುವ ಛಾಯಾಚಿತ್ರಗಳನ್ನು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಯಾವುದೇ ತರಹದ ಆಕ್ಷೇಪಣೆಗಳು ಬರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಅಂಕಿ– ಅಂಶ ಇಲಾಖೆ ಸಹಾಯಕ ನಿರ್ದೇಶಕ ಎಂ.ಪ್ರಕಾಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಂದ್ರ, ವಿಮಾ ಕಂಪೆನಿಯ ಅಧಿಕಾರಿಗಳಾದ ಪ್ರಭಾಕರ್, ಬಾಲರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry