7

‘ಬಹುಗ್ರಾಮ’ ಯೋಜನೆಯಲ್ಲಿ ಅವ್ಯವಹಾರ

Published:
Updated:

ನಾಗಮಂಗಲ: ಆದಿಚುಂಚನಗಿರಿ ಸೇರಿ 128 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ನೀರಿನ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ₹ 80 ಕೋಟಿ ಯೋಜನಾ ಮೊತ್ತವನ್ನು ಏರಿಸಲಾಗಿದೆ. ಘಜ್ನಿ ಮೊಹಮ್ಮದ್‌ ಲೂಟಿ ಮಾಡಿದಂತೆ ಈ ಯೋಜನೆಯಲ್ಲಿ ಹಣ ಲೂಟಿ ಮಾಡಲಾಗಿದೆ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು. ತಾಲ್ಲೂಕಿನ ಬೆಳ್ಳೂರಿನಲ್ಲಿ ಸೋಮವಾರ ಜೆಡಿಎಸ್ ಕೆಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನ ಜನರಿಗೆ ಕುಡಿಯಲು ನೀರಿಲ್ಲ ಎಂದು ನಾನು ಸಂಸತ್ತಿನಲ್ಲಿ ಹೋರಾಟ ಮಾಡಿದ್ದೇನೆ. ಇವರೆಲ್ಲ ಆಗ ಎಲ್ಲಿ ಹೋಗಿದ್ದರು? ಈಗ ಬಂದು ನಾನೇ ಯೋಜನೆ ತಂದಿದ್ದೇನೆ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಜನರ ಹಣವನ್ನು ಲೂಟಿ ಹೊಡೆದಿದ್ದಾರೆ. ಕಾವೇರಿ ನೀರಿನ ವಿಚಾರವಾಗಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಉಪವಾಸ ಕುಳಿತಾಗ ಅಂದು ಪ್ರಧಾನಿ ನರೇಂದ್ರ ಮೋದಿ ಕಾವೇರಿ ಬೋರ್ಡ್‌ ಸ್ಥಾಪಿಸುತ್ತೇನೆ ಎಂದು ಭರವಸೆ ನೀಡಿದ್ದರು. ಉಸಿರು ಇರುವವರೆಗೆ ಹೋರಾಟ ಮುಂದುವರಿಸುತ್ತೇನೆ’ ಎಂದು ಹೇಳಿದರು.

‘1996 ಮತ್ತು 2004ರಲ್ಲಿ ನಾನು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದೆ ಎಂದು ಆರೋಪಿಸುತ್ತಾರೆ. ಅಂದು ಜೆ.ಎಚ್. ಪಟೇಲ್ ದೆಹಲಿಯ ಕರ್ನಾಟಕ ಭವನದಲ್ಲಿ ನನ್ನ ಎದುರು ನಿಲ್ಲಲು ಬರುತ್ತಿಯ ಎಂದು ಸಿದ್ದರಾಮಯ್ಯ ಅವರನ್ನು ಜಾಡಿಸಿದ್ದರು. 2004ರಲ್ಲಿ ಸೋನಿಯಾ ಮನೆಗೆ 5 ಬಾರಿ ಹೋಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಮನವಿ ಮಾಡಿದ್ದೆ. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಇವರನ್ನು ನಾನು ಉಪಮುಖ್ಯಮಂತ್ರಿ ಮಾಡಿದ್ದೆ. ಆದರೆ ಈಗ ಇವರು ನನ್ನ ಪಕ್ಷವನ್ನು ನಿರ್ನಾಮ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ’ ಎಂದರು.

‘ಉಡುಪಿಯಲ್ಲಿ ಹಿಂದೂ ಜನಜಾಗೃತಿ ಸಮಾವೇಶ ನಡೆಸಿದ್ದಾರೆ. ನಾನು ಈಶ್ವರನ ಭಕ್ತ, ಅಜ್ಮೀರ್ ದರ್ಗಾ, ಅಮೃತಸರ, ತಿರುಪತಿ ಸೇರಿ ಎಲ್ಲಾ ಕಡೆ ಹೋಗಿದ್ದೇನೆ. ನನಗೆ ಎಲ್ಲಾ ದೇವರು, ಧರ್ಮ ಒಂದೇ. ಈಶ್ವರ, ಅಲ್ಲಾ, ಏಸು ಎನ್ನಬಹುದು, ಆದರೆ ನಾವೆಲ್ಲರೂ ಮೊದಲು ಮನುಷ್ಯರು. ಗಾಂಧೀಜಿ ಸ್ವಾತಂತ್ರ್ಯ ತಂದಿದ್ದು ಒಂದು ಜಾತಿ ಮತ್ತು ಧರ್ಮಕ್ಕಲ್ಲ, ಎಲ್ಲರಿಗೂ ಅನ್ನ ಸಿಗಬೇಕು ಎಂಬುದು ಅವರ ಆಸೆಯಾಗಿತ್ತು’ ಎಂದರು.

ಇದಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ನಿಂದ ಜೆಡಿಎಸ್ ಕಾರ್ಯಕರ್ತರು, ಸಾವಿರಾರು ಬೈಕ್‌ಗಳ ಮೂಲಕ ಎಚ್.ಡಿ. ದೇವೇಗೌಡ ಅವರನ್ನು ಬೆಳ್ಳೂರಿಗೆ ಕರೆತಂದರು.

ಸಂಸದ ಸಿ.ಎಸ್. ಪುಟ್ಟರಾಜು, ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಅಪ್ಪಾಜಿಗೌಡ , ಮಾಜಿ ಶಾಸಕ ಸುರೇಶ್ ಗೌಡ, ಮುಖಂಡ ನೆಲ್ಲಿಗೆರೆ ಬಾಲು ಭಾಗವಹಿಸಿದ್ದರು. ಜೆಡಿಎಸ್ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಜವರೇಗೌಡ, ಮಹಿಳಾ ಮುಖಂಡರಾದ ಅಂಬುಜಮ್ಮ, ಸಾವಿತ್ರಮ್ಮ, ಮಾಜಿ ಶಾಸಕ ಎಂ.ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಜಯ ಕುಮಾರ್, ಸದಸ್ಯರಾದ ಎನ್. ಬಿ. ರಾಘವೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್, ಟಿ. ರಾಜು ಹಾಜರಿದ್ದರು.

ಸಿದ್ದರಾಮಯ್ಯ ವಿರುದ್ಧದ ಚುನಾವಣೆ

‘ವಿಧಾನಸಭೆ ಚುನಾವಣೆಗೆ ಇನ್ನು 120 ದಿನಗಳು ಮಾತ್ರ ಬಾಕಿ ಉಳಿದಿವೆ. ಚುನಾವಣೆ ವೇಳೆ ನಾನು ತಾಲ್ಲೂಕಿನ ಎಲ್ಲಾ ಬಾಗಕ್ಕೂ ಬಂದು ಚುನಾಣೆ ಪ್ರಚಾರ ಮಾಡುತ್ತೇನೆ. ತಾಲ್ಲೂಕಿನಲ್ಲಿ ನನ್ನ ಮತ್ತು ಸಿದ್ದರಾಮಯ್ಯ ವಿರುದ್ಧ ಚುನಾವಣೆ ನಡೆಯುತ್ತದೆ’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸುರೇಶ್‌ಗೌಡರ ಕೈಎತ್ತಿ ಹಿಡಿದು, ಇವರೇ ನಾಗಮಂಗಲ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry