7

ಜಿಲ್ಲೆಯ 7 ಕಡೆ ಇಂದಿರಾ ಕ್ಯಾಂಟೀನ್

Published:
Updated:
ಜಿಲ್ಲೆಯ 7 ಕಡೆ ಇಂದಿರಾ ಕ್ಯಾಂಟೀನ್

ಬಾಗಲಕೋಟೆ: ಬಡವರಿಗೆ ರಿಯಾಯಿತಿ ದರದಲ್ಲಿ ಊಟ–ಉಪಹಾರ ಒದಗಿಸಲು ಬಾಗಲಕೋಟೆ ನಗರದಲ್ಲಿ ಎರಡು ಕಡೆ ಸೇರಿದಂತೆ ಜಿಲ್ಲೆಯ ಏಳು ಕಡೆ ಇಂದಿರಾ ಕ್ಯಾಂಟೀನ್ ತೆರೆಯಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಅಲ್ಲಿ ಮುಂಜಾನೆ ₹ 5ಕ್ಕೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಎರಡು ಹೊತ್ತು ₹  10ಕ್ಕೆ ಸಾರ್ವಜನಿಕರಿಗೆ ಊಟ ಒದಗಿಸಲಾಗುತ್ತದೆ.

‘ಬೆಂಗಳೂರಿನಲ್ಲಿ ವಾರ್ಡ್‌ಗೊಂಡು ಇಂದಿರಾ ಕ್ಯಾಂಟೀನ್‌ ತೆಗೆದು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ಯೋಜನೆಯ ಪ್ರಯೋಜನವನ್ನು ರಾಜ್ಯದ ಉಳಿದ ಭಾಗಗಳಿಗೂ ವಿಸ್ತರಿಸಲು ಮುಂದಾಗಿದೆ’. ಎಂದು ಹೇಳಿದ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಹೇಳುತ್ತಾರೆ.

ಜಿಲ್ಲಾ ಮಟ್ಟದ ಸಮಿತಿ ರಚನೆ: ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿದ್ಧತೆ ಹಾಗೂ ನಂತರ ನಿರ್ವಹಣೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಔದ್ರಾಮ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

‘ರಾಜ್ಯದ 173 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎರಡು ಹಂತದಲ್ಲಿ ಇಂದಿರಾ ಕ್ಯಾಂಟೀನ್‌ ಕಾರ್ಯಾರಂಭ ಮಾಡಲಿವೆ. ಜಿಲ್ಲೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಕ್ಯಾಂಟಿನ್‌ಗಳಿಗೆ ಎರಡನೇ ಹಂತದಲ್ಲಿ 2018ರ ಫೆಬ್ರುವರಿ 2ರಿಂದ ಚಾಲನೆ ಸಿಗಲಿದೆ’ ಎಂದು ಔದ್ರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಯಾಂಟೀನ್‌ಗಳ ಆರಂಭಿಸಲು ಈಗಾಗಲೇ ನಿವೇಶನ ಗುರುತಿಸಲಾಗಿದೆ. ಭೂಸೇನಾ ನಿಗಮದಿಂದ ಶೀಘ್ರ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಫ್ಯಾಬ್ರಿಕೇಟೆಡ್ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ’ ಎಂದರು.

ಊಟಕ್ಕೆ ಮಿತಿ ನಿಗದಿ: ಆಯಾ ನಗರ ಹಾಗೂ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ಹೊತ್ತಿಗೆ ಊಟೋಪಹಾರ ಒದಗಿಸಬೇಕಾದ ವ್ಯಕ್ತಿಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಅದರಂತೆ 25 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಬೀಳಗಿ ಹಾಗೂ ಹುನಗುಂದ ಪಟ್ಟಣಗಳಲ್ಲಿ ತಲಾ 200 ಮಂದಿ, 45 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಬಾದಾಮಿಯಲ್ಲಿ 300 ಮಂದಿಗೆ, 45 ಸಾವಿರದಿಂದ ಒಂದು ಲಕ್ಷದವರೆಗೆ ಜನ ವಾಸ ಇರುವ ಮುಧೋಳ ಹಾಗೂ ಜಮಖಂಡಿಯಲ್ಲಿ ತಲಾ 500 ಮಂದಿಗೆ ಒಂದು ಲಕ್ಷ ಜನಸಂಖ್ಯೆ ಹೊಂದಿರುವ ಬಾಗಲಕೋಟೆ ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರ ವ್ಯವಸ್ಥೆ ಮಾಡಲಾಗುತ್ತಿದೆ.

‘ಸ್ಥಳೀಯ ಊಟೋಪಹಾರಕ್ಕೆ ಚಿಂತನೆ: ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರಕ್ಕೆ ಇಡ್ಲಿವಡೆ, ವಾಂಗಿಬಾತ್, ಬಿಸಿಬೇಳೆಬಾತ್, ಖಾರಾಬಾತ್, ಪುಳಿಯೋಗರೆ ಕೊಡಲಾಗುತ್ತಿದೆ. ಇಲ್ಲಿ ಸ್ಥಳೀಯ ಉಪಾಹಾರ, ಊಟಕ್ಕೆ ಆದ್ಯತೆ ನೀಡಲು ಚಿಂತಿಸಲಾಗಿದೆ. ವ್ಯಕ್ತಿಯೊಬ್ಬರಿಗೆ ದಿನವೊಂದಕ್ಕೆ ₹  57 ಖರ್ಚು ಮಾಡಲು ಅವಕಾಶವಿದೆ. ಅಷ್ಟು ಹಣದಲ್ಲಿ ಸ್ಥಳೀಯ ಊಟ ಕೊಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶೀಘ್ರ ಟೆಂಡರ್: ‘ಇಂದಿರಾ ಕ್ಯಾಂಟೀನ್ ಕಟ್ಟಡಗಳಿಗೆ ಉಚಿತವಾಗಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಸೂಕ್ತ ಸಿದ್ಧತೆ ಕೈಗೊಳ್ಳಲು ನಗರಸಭೆ ಹಾಗೂ ಪುರಸಭೆಗಳ ಮುಖ್ಯಾಧಿಕಾರಿಗಳ ಸಭೆ ಕರೆದು ಸೂಚನೆ ನೀಡಲಾಗಿದೆ. ಆಹಾರ ವಸ್ತು ಪೂರೈಕೆಗೆ ಶೀಘ್ರ ಟೆಂಡರ್ ಕರೆಯಲಾಗುವುದು’ ಎಂದು ಹೇಳಿದರು.

ಎಲ್ಲೆಲ್ಲಿ ಇಂದಿರಾ ಕ್ಯಾಂಟೀನ್...?

l ಬಾಗಲಕೋಟೆ ನವನಗರದ 22ನೇ ಸೆಕ್ಟರ್‌ ಬಳಿಯ ಬಸ್‌ನಿಲ್ದಾಣ

l ಹಳೇ ಬಾಗಲಕೋಟೆ ಬಸ್ ನಿಲ್ದಾಣದ ಬಳಿ

l ಜಮಖಂಡಿ ಬಸ್ ನಿಲ್ದಾಣದ ಬಳಿ

l ಮುಧೋಳ ನಗರಸಭೆ ಸಮೀಪ ಮುನಿಸಿಪಲ್ ಜಾಗ

l ಬಾದಾಮಿ ಅರಣ್ಯ ಇಲಾಖೆ ಕಚೇರಿ ಸಮೀಪ

l ಹುನಗುಂದ ಶಿಕ್ಷಣ ಇಲಾಖೆ ಕಚೇರಿ ಹತ್ತಿರ

l ಬೀಳಗಿ ನೀರಾವರಿ ನಿಗಮದ ಕಚೇರಿ ಬಳಿ

* * 

ರಾಜ್ಯ ಸರ್ಕಾರ ನೀಡಲಿರುವ ಘಟಕ ವೆಚ್ಚ ಆಧರಿಸಿ ಇಂದಿರಾ ಕ್ಯಾಂಟೀನ್‌ನಲ್ಲಿ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ

ಪಿ.ಎ.ಮೇಘಣ್ಣವರ ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry