5

ಖಜಾನೆ ಖಾಲಿ ಮಾಡಿದ ಕಾಂಗ್ರೆಸ್‌

Published:
Updated:
ಖಜಾನೆ ಖಾಲಿ ಮಾಡಿದ ಕಾಂಗ್ರೆಸ್‌

ಮಹಾಲಿಂಗಪುರ: ‘ರಾಜ್ಯದ ರೈತರ, ನೇಕಾರರ, ಬಡವರ, ಮಹಿಳೆಯರ ಹಿಂದುಳಿದವರ ಅಭಿವೃದ್ಧಿಗಾಗಿ, ಹಾಗೂ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಮುಂಬರುವ ಚುನಾವಣೆಯಲ್ಲಿ 150 ಕ್ಷೇತ್ರ ಗೆಲ್ಲಿಸಿ ಕೊಡುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದರು. ಮಹಾಲಿಂಗಪುರದಲ್ಲಿ ಸೋಮ ವಾರ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆ ಉದ್ಘಾಟಿಸಿ, ಅವರು ಮಾತನಾಡಿದರು.

‘ದೇಶದಲ್ಲಿ ಹಲವಾರು ವರ್ಷ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷ ಖಜಾನೆಯನ್ನು ಖಾಲಿ ಮಾಡಿದೆ. ಮೂರೂವರೆ ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಸಾಕಷ್ಟು ಪ್ರಯತ್ನವನ್ನು ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನೇಕಾರರು ಸ್ವಾಭಿಮಾನದಿಂದ ಬದುಕುವಂತಾಗಬೇಕು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯಬೇಕು. ಬಡ ಹೆಣ್ಣು ಮಕ್ಕಳಿಗೆ ಮತ್ತು ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಐದು ವರ್ಷಗಳಲ್ಲಿ ₹ 50 ಸಾವಿರ ಕೋಟಿ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇವಲ ₹ 13 ಸಾವಿರ ಕೋಟಿ ಮಾತ್ರ ನೀಡಿದ್ದಾರೆ. ಅದೇ ರೀತಿಯಾಗಿ ಈ ರಾಜ್ಯದ ನೇಕಾರರಿಗೆ ಸರಿಯಾಗಿ ಕಚ್ಚಾ ಸರಕು ಮತ್ತು ಕೂಲಿ ಕೊಡದೆ ರೈತರು ಮತ್ತು ನೇಕಾರರಿಗೆ ರಾಜ್ಯ ಸರ್ಕಾರ ದ್ರೋಹ ಮಾಡಿದೆ’ ಎಂದರು.

ಮುಂದಿನ ದಿನಗಳಲ್ಲಿ ತೇರದಾಳ ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ಹಣ ತರಲು ಪ್ರಯತ್ನಿಸಲಾಗುವುದು. ಬೇಸಿಗೆಯಲ್ಲಿ ಬತ್ತುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಪ್ರತಿವರ್ಷ ನಾಲ್ಕು ಟಿ.ಎಂ.ಸಿ ನೀರು ಹರಿಸಲಾಗುವುದು. ಮಹಾಲಿಂಗಪುರ ಪಟ್ಟಣಕ್ಕೆ ಕೃಷ್ಣಾ ನದಿಯಿಂದ ಕುಡಿಯವು ನೀರು ಪೂರೈಕೆ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು.ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸಲು ಶೀತಲೀಕರಣ ಕೇಂದ್ರವ ಸ್ಥಾಪಿಸಲಾಗುವುದು. ರಬಕವಿ–ಬನಹಟ್ಟಿ ಬಳಿ ಕೃಷ್ಣಾ ನದಿಗೆ ಸೇತುವೆ ನಿರ್ಮಿಸಿ ಅಥಣಿ ನಗರಕ್ಕೆ ಸಂಪರ್ಕ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

‘ತೇರದಾಳ ಮತಕ್ಷೇತ್ರದಲ್ಲಿ ರೈತರು ಮತ್ತು ನೇಕಾರರಿಗೆ ಬಹಳಷ್ಟು ಅನ್ಯಾಯವಾಗಿದೆ. ಅದರಲ್ಲೂ ಕೆಎಚ್‌ಡಿಸಿ ನೇಕಾರರು ತಮ್ಮ ಕೂಲಿ ಮತ್ತು ಕಚ್ಚಾ ವಸ್ತುಗಳಿಗಾಗಿ ಹೋರಾಟ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ ಪಕ್ಷ ರಾಜ್ಯದ ಜನತೆಗೆ ದ್ರೋಹ ಮಾಡಿದೆ’ ಎಂದು ಹರಿಹಾಯ್ದರು.

ಗಮನಸೆಳೆದ ಬೃಹತ್‌ ಬೈಕ್‌ ರ‍್ಯಾಲಿ

ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಗಬೇಕಾದ ಕಾರ್ಯಕ್ರಮ ಸಂಜೆ 6.30ಕ್ಕ ಆರಂಭಗೊಂಡಿತು. ತೇರದಾಳದಿಂದ ಬೃಹತ್‌ ಬೈಕ್‌ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಐದು ಸಾವಿರಕ್ಕೂ ಹೆಚ್ಚು ಬೈಕ್‌ಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದವು.

ತೇರದಾಳದಿಂದ ಮಹಾಲಿಂಗಪುರದವರೆಗೆ ಕೇಸರಿ ಧ್ವಜ ಹಾಗೂ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಇಡೀ ತೇರದಾಳ ಕ್ಷೇತ್ರ ಕೇಸರಿಮಯವಾಗಿತ್ತು. ಪರಿವರ್ತನಾ ಯಾತ್ರೆಗೆ ಕ್ಷೇತ್ರ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಮಾರಂಭಕ್ಕೆ ಬಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry