7

‘ಗಡಿ ಭಾಗಗಳಲ್ಲಿ ಕನ್ನಡ ಭವನ ಕಟ್ಟಿಸಿ’

Published:
Updated:

ವಿಜಯಪುರ: ಕನ್ನಡ ಪರಂಪರೆಗೆ ಅಪಾಯವಾಗದಂತೆ ತಡೆಯಲು ಗಡಿ ಭಾಗಗಳಲ್ಲಿ ಸರ್ಕಾರದ ವತಿಯಿಂದ ಸುಸ­ಜ್ಜಿತ ಕನ್ನಡ ಭವನ ಕಟ್ಟಿಸಿ, ಕನ್ನಡ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಮುಖಂಡ ಮಹೇಶ್ ಕುಮಾರ್ ಹೇಳಿದರು.

ಇಲ್ಲಿನ ಶಾಂತಿನಗರ ಒಂದನೇ ಕ್ರಾಸಿನಲ್ಲಿ ಸೋಮವಾರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಯುವಕರ ಸಂಘದಿಂದ ಆಯೋಜಿಸಿದ್ದ ಐದನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ಜನ­ಜೀವನದ ಜೀವಂತ ದಂತ ಕಥೆಗ­ಳಾಗಿರುವ ಜನಪದ ಮೂಲ ಕಲಾ­ವಿದರನ್ನು ಗುರುತಿಸಿ ಪ್ರೋತ್ಸಾಹಿ­ಸ­ಬೇಕು. ಹಳ್ಳಿಗಾಡಿನಲ್ಲಿ ಸಾಹಿತ್ಯ, ಸಾಂಸ್ಕೃ­ತಿಕ, ಕಲೆ ಮತ್ತು ಇತಿಹಾಸ ಉಳಿ­ಸುವಂತಹ ಚಟುವಟಿಕೆಗ­ಳಿಗೆ ಸರ್ಕಾರ ಹೆಚ್ಚು ಒತ್ತು ಕೊಡಬೇಕಾಗಿದೆ. ನಾವೆಲ್ಲರೂ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು’ ಎಂದರು.

ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಸಿ. ಮುನಿಕೃಷ್ಣಪ್ಪ ಮಾತನಾಡಿ, ‘ತನ್ನನ್ನು ತಾನು ಅರಿತುಕೊಳ್ಳುವ ಹಾಗೂ ಸಮಾಜವನ್ನು ಗೌರವಿಸುವ ಮೌಲ್ಯವನ್ನು ಕನ್ನಡ ಭಾಷೆ ಮತ್ತು ಸಾಹಿತ್ಯ ಕಲಿಸುತ್ತದೆ. ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಮಗೆ ಸಾಹಿತ್ಯ ದಾರಿದೀಪವಾಗಿದೆ’ ಎಂದರು.

ಸಂಗೀತ, ಸಾಹಿತ್ಯ, ಇನ್ನಿತರ ಲಲಿತಕಲೆಗಳು ಮಾನವರಲ್ಲಿ ಉನ್ನತ ಮೌಲ್ಯಗಳನ್ನು ಬಿತ್ತುತ್ತವೆ. ಸಾಹಿತ್ಯದ ಓದು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯದ ಓದಿನ ಗೀಳು ಬೆಳೆಸಿಕೊಳ್ಳಬೇಕು ಎಂದರು.

ಮುಖಂಡ ಸದಾಖತ್ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ತೆಗೆದುಕೊಂಡು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ. ರಾಜ್ಯ ಸರ್ಕಾರ ನೇಮಕಾತಿ ಮಾಡುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಪ್ರೀತಿಸಿ, ಬೆಳೆಸಬೇಕು ಎಂದರು.

ಗುರಪ್ಪನಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ಧ್ವಜ ಆರೋಹಣ ಮಾಡಿದರು. ಮಕ್ಕಳಿಗೆ ನೋಟ್ ಪುಸ್ತಕಗಳು, ಪೆನ್ನುಗಳನ್ನು ವಿತರಣೆ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ ಅರುಣ್ ಕುಮಾರ್, ಸುರೇಶ್, ಬಾಬಾಜಾನ್, ವೆಂಕಟೇಶ್, ನವೀನ್, ಮನೋಹರ್, ಮುನಿರಾಜು, ರಮೇಶ್ ರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry