7

ರೈತರಿಗೆ ಅನ್ಯಾಯವಾಗುವುದಿಲ್ಲ: ಆಯುಕ್ತ

Published:
Updated:
ರೈತರಿಗೆ ಅನ್ಯಾಯವಾಗುವುದಿಲ್ಲ: ಆಯುಕ್ತ

ವಿಜಯಪುರ: ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಗೆ ನೂತನ ಆಯುಕ್ತ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾರುಕಟ್ಟೆಯಲ್ಲಿನ ವ್ಯವಸ್ಥೆ, ಮಾರುಕಟ್ಟೆಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣ, ಇ–ಹರಾಜು, ರೈತರಿಗೆ ಬಟವಾಡೆ ಆಗುತ್ತಿರುವ ವಿಧಾನ, ಸ್ವಚ್ಚತೆ, ಗೂಡು ತೂಕ ಹಾಕುವ ವಿಧಾನ, ಎಷ್ಟು ಪ್ರಮಾಣದಲ್ಲಿ ದ್ವಿತಳಿ ಗೂಡು ಬರುತ್ತಿದೆ. ಗೂಡು ತುಂಬಿಸಲು ಬಳಕೆ ಮಾಡುತ್ತಿರುವ ಕ್ರೇಟ್ ಗಳನ್ನು ಪರಿಶೀಲಿಸಿದರು.

ಮಾರುಕಟ್ಟೆಗೆ ಗೂಡು ತೆಗೆದುಕೊಂಡು ಬಂದಿದ್ದ ರೈತರನ್ನು ಸಂಪರ್ಕ ಮಾಡಿದ ಅವರು, ‘ಎಲ್ಲಿಂದ ಬಂದಿದ್ದೀರಿ, ಎಷ್ಟು ಲಾಟು ಗೂಡು ತಂದಿದ್ದೀರಿ, ಎಷ್ಟು ಬೆಲೆಗೆ ಹರಾಜಾಗಿದೆ. ಇ ಹರಾಜು ನಿಮಗೆ ತೃಪ್ತಿ ತಂದಿದೆಯೆ, ಮಾರುಕಟ್ಟೆಗೆ ಬಂದಾಗ ಹರಾಜಾದ ಗೂಡಿಗೆ ತಕ್ಕ ಬೆಲೆ, ಹಾಗೂ ನಿಗದಿತ ಸಮಯದಲ್ಲಿ ನಿಮಗೆ ಪಾವತಿ ಆಗುತ್ತಿದೆಯೆ, ರೇಷ್ಮೆ ಬೆಳೆ ಹೇಗೆ ಆಗುತ್ತಿದೆ, ಏನೇನು ಸಮಸ್ಯೆ ಎದುರಿಸುತ್ತಿದ್ದೀರಿ’ ಎಂಬ ಪ್ರಶ್ನೆಗಳನ್ನು ಕೇಳಿದರು.

ರೈತ ನಾರಾಯಣಸ್ವಾಮಿ ಮಾತನಾಡಿ, ‘ಇ–ಹರಾಜು ಆಗುತ್ತಿರುವುದು ತೃಪ್ತಿಯಿದೆ. ಸರಿಯಾದ ಸಮಯಕ್ಕೆ ನಮಗೆ ಹಣ ಕೈಗೆ ಸಿಗುತ್ತಿದೆ. ಈಚೆಗೆ ಹಿಪ್ಪುನೇರಳೆ ತೋಟಗಳಿಗೆ ಸುರುಳಿ ಹುಳುಗಳು ಬಿದ್ದು ಬೆಳೆ ನಾಶವಾಗಿದೆ’ ಎಂದರು.

‘ಬೆಳೆ ಎತ್ತಿ ಹೊರಗೆ ಬಿಸಾಡಲಿಕ್ಕೆ ಮನಸ್ಸಿಲ್ಲದೆ, ತೋಟಗಳಲ್ಲಿ ಹುಳುಗಳು ತಿಂದಿರುವ ಎಲೆಗಳನ್ನು ಬಿಡಿಸಿದ ನಂತರ ವಿಧಿಯಿಲ್ಲದೆ ಅದೇ ಸೊಪ್ಪನ್ನು ಕೊಟ್ಟು ಮೇಯಿಸುತ್ತಿದ್ದೇವೆ. ಎಕರೆಗಟ್ಟಲೆ ತೋಟಗಳು ಹಾಳಾಗಿವೆ. ಮಾರುಕಟ್ಟೆಯಲ್ಲಿ ಕರಪತ್ರ ವಿತರಣೆ ಮಾಡಿ, ನೂವಾನ್ ಸಿಂಪಡಣೆ ಮಾಡುವಂತೆ ಹೇಳಿದ್ದರು. ಆದರೂ ಹುಳುಗಳು ಹತೋಟಿಗೆ ಬರುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ನಮ್ಮ ನಷ್ಟಕ್ಕೆ ಪರಿಹಾರವನ್ನು ತುಂಬಿಕೊಡಬೇಕು’ ಎಂದು ಮನವಿ ಮಾಡಿದರು.

ರೈತ ಮುಖಂಡ ಧರ್ಮಪುರ ಬಸವರಾಜು ಮಾತನಾಡಿ, ‘ರೇಷ್ಮೆ ಚಾಕಿ ಕೇಂದ್ರಗಳಲ್ಲಿ ತುಂಬಾ ಅನ್ಯಾಯವಾಗುತ್ತಿದೆ. ಗುಣಮಟ್ಟದ ಬಿತ್ತನೆ ಸಿಗುತ್ತಿಲ್ಲ. ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಇಲಾಖೆ ಅವರ ಮೇಲೆ ನಿಗಾ ವಹಿಸಬೇಕು, ರೈತರಿಗೆ ನೀಡುವ ಬಿತ್ತನೆ ಹುಳುವಿನ ಬೆಲೆ ಗಗನಮುಖಿಯಾಗಿದೆ’ ಎಂದು ಆರೋಪಿಸಿದರು.

ರೀಲರ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಜಮೀರ್ ಪಾಷ ಮಾತನಾಡಿ, ಇಲಾಖೆಯಿಂದ ರೈತರ ಗೂಡಿನ ನೀಡುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಿರುವುದರಿಂದ ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ ಕಡಿಮೆಯಾಗಿದೆ. ರೈತರು ಮಾರುಕಟ್ಟೆಗೆ ಬರುವ ಬದಲಿಗೆ ಹಳ್ಳಿಗಳಲ್ಲೇ ತೂಕ ಹಾಕಿಕೊಳ್ಳುತ್ತಿದ್ದಾರೆ. ಇ–ಹರಾಜು ಇರುವುದರಿಂದ ಚಿಕ್ಕ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಗೂಡು ಸಿಗುತ್ತಿಲ್ಲ ಎಂದರು.

‘ಆದ್ದರಿಂದ ನಾವು ನೇರವಾಗಿ ಹಳ್ಳಿಗಳಿಗೆ ಹೋಗಿ ಗೂಡು ಖರೀದಿ ಮಾಡಿಕೊಂಡು ಬರಬೇಕಾಗಿದೆ. ಅಲ್ಲಿಗೆ ಹೋದರೆ ಅವರು ಕೇಳಿದಷ್ಟು ಹಣವನ್ನು ಕೊಟ್ಟು ಖರೀದಿ ಮಾಡಿಕೊಂಡು ಬರುತ್ತಿದ್ದೇವೆ. ಆದ್ದರಿಂದ ಉದ್ಯಮವನ್ನು ಬಿಟ್ಟು ಬೇರೆ ಕಸುಬು ಮಾಡಲು ಗೊತ್ತಿಲ್ಲದ್ದರಿಂದ ನಷ್ಟವಾದರೂ ಮಾಡುತ್ತಿದ್ದೇವೆ. ಕಾರ್ಮಿಕರ ಹಿತ ಕಾಪಾಡುತ್ತಿದ್ದೇವೆ. ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ನಿಂದ ರೇಷ್ಮೆನೂಲು ಖರೀದಿ ಮಾಡುತ್ತಿದ್ದರೆ, ಪೈಪೋಟಿ ಏರ್ಪಡುತ್ತದೆ. ನಮಗೂ ನ್ಯಾಯವಾದ ಬೆಲೆ ಸಿಗಲಿದೆ’ ಎಂದರು.

ರೀಲರ್ ಸಾದಿಕ್ ಪಾಷ ಮಾತನಾಡಿ, ‘ನಮಗೆ ನಿಗದಿತ ಸಮಯದಲ್ಲಿ ಪ್ರೋತ್ಸಾಹಧನ ನೀಡಿದರೆ ಅನುಕೂಲವಾಗುತ್ತದೆ. 2016–17 ನೇ ವರ್ಷದ ಪ್ರೋತ್ಸಾಹಧನ ಶೀಘ್ರವಾಗಿ ಬಿಡುಗಡೆ ಮಾಡುವುದಾಗಿ ಹಿಂದಿನ ಆಯುಕ್ತರು ಹೇಳಿದ್ದರು. ಇದುವರೆಗೂ ಬಿಡುಗಡೆ ಮಾಡಿಲ್ಲ. ನಮಗೆ ಜನರೇಟರ್ ಖರೀದಿಗಾಗಿ ನೀಡುತ್ತಿರುವ ಪ್ರೋತ್ಸಾಹಧನದ ಬದಲಿಗೆ ಸೋಲಾರ್ ಖರೀದಿಗೆ ಅನುದಾನ ಬಿಡುಗಡೆ ಮಾಡಿಕೊಡಿ’ ಎಂದು ಮನವಿ ಮಾಡಿದರು.

‘ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಗಳನ್ನು ತರಿಸಿಕೊಂಡು ಅಗತ್ಯವಾದ ಕ್ರಮ ಕೈಗೊಳ್ಳುತ್ತೇವೆ. ಯಾರಿಗೂ ಅನ್ಯಾಯವಾಗುವುದಿಲ್ಲ’ ಎಂದು ಆಯುಕ್ತ ಎಂ.ಎಸ್.ಮಂಜುನಾಥ್ ಹೇಳಿದರು.

ಜಂಟಿ ನಿರ್ದೇಶಕ ಎಸ್.ವಿ.ಕುಮಾರ್, ಮಾರುಕಟ್ಟೆ ಉಪನಿರ್ದೇಶಕ ಎಂ.ಎಸ್.ಬೈರಾರೆಡ್ಡಿ, ಎ.ಡಿ.ಎಸ್ ರಾಮ್ ಕುಮಾರ್, ಎಸ್.ಸಿ.ಒ.ಚಂದ್ರಪ್ಪ, ಮುನಿರಾಜು, ಚಂದ್ರಪ್ಪ, ರೀಲರುಗಳಾದ ಸಾದಿಕ್ ಪಾಷ, ಅಕ್ರಂ ಪಾಷ, ಇಲಿಯಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry