6

ದಲಿತರ ಕೇರಿಗೆ ಬಾರದ ನೀರು...

Published:
Updated:

ಕೂಡ್ಲಿಗಿ: ದಲಿತರ ಕೇರಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡುತ್ತಿಲ್ಲ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಗಳಲ್ಲಿ ಸ್ವಚ್ಛತೆ ಇಲ್ಲದೆ ಜನ ಕಾಯಿಲೆಗಳಿಂದ ಬಳಲುತ್ತಿದ್ದಾರೆ, ನಾವು ಯಾರಲ್ಲಿ ಪರಿಹಾರ ಕೇಳಬೇಕು...

–ಪಟ್ಟಣದ ಸಂತ ಮೈಕಲ್ ಶಾಲೆಯಲ್ಲಿ ಭಾನುವಾರ ರಾತ್ರಿ ನಡೆದ ಕೂಡ್ಲಿಗಿ ಪೊಲೀಸ್ ಉಪ ವಿಭಾಗ ಮಟ್ಟದ ದಲಿತರ ಕುಂದು ಕೊರತೆ ಸಭೆಯಲ್ಲಿ ಪಾಲ್ಗೊಂಡವರು ಹೀಗೆ ಅಸಹಾಯಕತೆ ವ್ಯಕ್ತಪಡಿಸಿದರು.

‘ದಲಿತರೇ ಹೆಚ್ಚಾಗಿರುವ 18,19 ಮತ್ತು 20ನೇ ವಾರ್ಡಿನ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. 20ನೇ ವಾರ್ಡಿನಲ್ಲಿ ಅಂಗನವಾಡಿ ಕಟ್ಟಡ ಅಪೂರ್ಣಗೊಂಡಿದೆ. ಮಕ್ಕಳ ಶಿಕ್ಷಣದ ಗತಿ ಏನು? ಕೇರಿಯ ಪಕ್ಕದಲ್ಲಿಯೇ ಮದ್ಯದಂಗಡಿ ತೆರೆಯಲಾಗಿದೆ. ಮಹಿಳೆಯರು ಓಡಾಡುವುದು ಕಷ್ಟವಾಗಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಕೊಟ್ಟೂರಿನ ಹನುಂತಪ್ಪ ಆಗ್ರಹಿಸಿದರು.

‘ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಅನೇಕ ತೆರದ ಬಾವಿಗಳಿದ್ದು, ಅವುಗಳನ್ನು ಮುಚ್ಚುವಂತೆ ಪಂಚಾಯ್ತಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಮರಿಯಮ್ಮನ ಹಳ್ಳಿಯ ತಳವಾರ ಹುಲುಗಪ್ಪ ದೂರಿದರು.

‘ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೆ ತನಿಖೆ ನಡೆಸಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕಾಲೇಜುಗಳಲ್ಲಿ ಅಧಿಕ ಶುಲ್ಕ ಪಡೆದಿಲ್ಲ ಎಂದು ಹಿಂಬರಹ ನೀಡಿದ್ದಾರೆ’ ಎಂದು ಕೂಡ್ಲಿಗಿ ಸಂತೋಷ್ ಆರೋಪಿಸಿದರು.

‘ತಾಲ್ಲೂಕಿನಲ್ಲಿ ದಲಿತರ ಗದ್ದೆಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ತಹಶೀಲ್ದಾರರಿಗೆ ಮನವಿ ನೀಡಲಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದರು.

‘ಸೋವೇನಹಳ್ಳಿ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಸರ್ಕಾರಿ ಜಾಗವನ್ನು ಶಾಲೆಯ ಸುಪರ್ದಿಗೆ ನೀಡಬೇಕು’ ಎಂದು ಅಂಜಿನಪ್ಪ, ಸಣ್ಣ ಹೊನ್ನೂರಪ್ಪ ಒತ್ತಾಯಿಸಿದರು.

‘ಪ್ರತಿ ಗ್ರಾಮಗಳ ದಲಿತ ಕೇರಿಯಲ್ಲಿ ಗಸ್ತು ಪುಸ್ತಕ ಹಾಕಬೇಕು ಹಾಗೂ ದಲಿತರಿಗೆ ಪ್ರತ್ಯೇಕ ಸ್ಮಶಾನ ಸೌಲಭ್ಯ ಕಲ್ಪಿಸಬೇಕು’ ಎಂದು ಕೂಡ್ಲಿಗಿಯ ವಕೀಲ ಡಿ.ಎಚ್. ದುರುಗೇಶ್ ಆಗ್ರಹಿಸಿದರು.

ಉಪ ವಿಭಾಗದ ಪ್ರಭಾರ ಡಿವೈಎಸ್ಪಿ ಓಂಕಾರ ನಾಯ್ಕ್‌, ‘ಇಲಾಖೆಯಿಂದ ಕೈಗೊಳ್ಳಬಹುದಾದ ಕ್ರಮಗಳನ್ನು ನೇರವಾಗಿ ಕೈಗೊಳ್ಳಲಾಗುವುದು. ಅಧಿಕಾರಿಗಳೊಡನೆ ಸಮನ್ವಯ ಸಾಧಿಸಿ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.ಕೂಡ್ಲಿಗಿ ಸಿಪಿಐ ನಹೀಂ ಅಹಮದ್, ಪಿಎಸ್‌ಐಗಳಾದ ಎಂ. ಹಾಲೇಶ್, ಕೃಷ್ಣನಾಯ್ಕ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry