7

ತರನಳ್ಳಿ: ಐತಿಹಾಸಿಕ ರೇವಪಯ್ಯಾ ಜಾತ್ರೆ ಇಂದಿನಿಂದ

Published:
Updated:

ಭಾಲ್ಕಿ: ಜಿಲ್ಲೆಯ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ತಾಲ್ಲೂಕಿನ ತರನಳ್ಳಿ ಗ್ರಾಮದ ರೇವಪಯ್ಯಾ ಶಿವಶರಣರ ಜಾತ್ರಾ ಮಹೋತ್ಸವ ಇಂದಿನಿಂದ (ನ.28ರಿಂದ ಡಿಸೆಂಬರ್‌ 2ರವರೆಗೆ) ಐದು ದಿನಗಳ ಕಾಲ ಜರುಗಲಿದೆ.

1956ರಲ್ಲಿ ರೇವಪಯ್ಯಾ ಶಿವಶರಣರು ಗ್ರಾಮಕ್ಕೆ ಬಂದು ಜನರಲ್ಲಿ ಸಾಮಾಜಿಕ, ಧಾರ್ಮಿಕ ಜಾಗೃತಿ ಮೂಡಿಸಿ, ಶಾಂತಿ, ಏಕತೆ ನೆಲೆಸುವಂತೆ ಮಾಡಿದ್ದರು. ಅದರ ಪ್ರತೀಕವಾಗಿ ಪ್ರತಿವರ್ಷ ರೇವಪಯ್ಯಾ ಶಿವಶರಣರ ಜಾತ್ರೆಯನ್ನು ನಡೆಸಲಾಗುತ್ತಿದೆ. ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇವಸ್ಥಾನ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ. ಜಿಲ್ಲೆಯಷ್ಟೇ ಅಲ್ಲದೆ ಹೊರ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಹಸ್ರರಾರು ಭಕ್ತರು ಬರುತ್ತಾರೆ. ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಅಗತ್ಯ ಮೂಲ ಸೌಕರ್ಯಗಳ ಸಿದ್ಧತೆ ಮಾಡಲಾಗಿದೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ಭೀಮರಾವ ಪಾಟೀಲ ತಿಳಿಸಿದರು.

ಜಾತ್ರೆಯ ಪ್ರಮುಖ ಆಕರ್ಷಣೆ ನಾಟಕ, ಜಂಗಿಕುಸ್ತಿ. ಸುತ್ತಮುತ್ತಲಿನ ಗ್ರಾಮಗಳಾದ ಸಿದ್ದೇಶ್ವರ, ಜ್ಯಾಂತಿ, ನೇಳಗಿ, ತೇಗಂಪೂರ, ಹಲಬರ್ಗಾ, ಕಣಜಿ, ಸಿದ್ದೇಶ್ವರವಾಡಿ, ಧನ್ನೂರ, ರುದನೂರ ಸೇರಿದಂತೆ ಮುಂತಾದ ಕಡೆಗಳಿಂದ ಜನರು ತಂಡೋಪ ತಂಡವಾಗಿ ಬರುತ್ತಾರೆ.

ಜಂಗಿ ಕುಸ್ತಿಗಳಲ್ಲಿ ಪಾಲ್ಗೊಳ್ಳಲು ಜಿಲ್ಲೆಯವರಲ್ಲದೆ, ಹೊರ ಜಿಲ್ಲೆಯ ಕುಸ್ತಿ ಪೈಲ್ವಾನರು ಬರುತ್ತಾರೆ. ಕುಸ್ತಿ ನೋಡಲು ಜನರು ಮುಗಿ ಬೀಳುತ್ತಾರೆ. ಗೆದ್ದ ಪೈಲ್ವಾನರಿಗೆ ಬೆಳ್ಳಿ ಖಡ್ಗವನ್ನು ತೋಡಿಸಲಾಗುತ್ತದೆ. ಗ್ರಾಮದ ಮಹಿಳೆಯರೆಲ್ಲರೂ ಯಾವುದೇ ಭೇದ–ಭಾವವಿಲ್ಲದೆ ಭಕ್ತಿ ಭಾವದಿಂದ ಒಂದೆಡೆ ಸೇರಿ ಭಕ್ತಿಗೀತೆಗಳ ಮೇಲೆ ಕೋಲಾಟ ಆಡಿ, ಗೀಗೀಪದ ಹಾಡಿ ಸಂಭ್ರಮಿಸುತ್ತಾರೆ ಎನ್ನುತ್ತಾರೆ ಹಿರಿಯರು.

ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಗ್ರಾಮದ ಪ್ರತಿಯೊಬ್ಬರು ಸಹೋದರತೆಯಿಂದ ಪಾಲ್ಗೊಳ್ಳುತ್ತಾರೆ. ಗ್ರಾಮದ ಪ್ರತಿಯೊಂದು ಮನೆಯೂ ನೆಂಟರಿಷ್ಟರಿಂದ ತುಂಬಿರುತ್ತವೆ ಎಂದು ಶರಣಪ್ಪಾ ನಾವದಗೆ ತಿಳಿಸಿದರು.

ಕಾರ್ಯಕ್ರಮದ ವಿವಿರ: ನ.28ರಂದು ಸಂಜೆ 7 ಗಂಟೆಗೆ ಧ್ವಜಾರೋಹಣ ನೇರವೇರಿಸುವ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. ನ.29ರಂದು ಬೆಳಿಗ್ಗೆ ಪಾದಪೂಜೆ, ರಾತ್ರಿ 10 ಗಂಟೆಗೆ ಕಮಲಾಪೂರದ ಶ್ರೀ ರೇವಣಸಿದ್ಧೇಶ್ವರ ನಾಟ್ಯ ವಸ್ತು ಭಂಡಾರ ನಿರ್ದೇಶನದಲ್ಲಿ ‘ಹೆತ್ತವರ ಕನಸು ಅರ್ಥಾತ್‌ ಯುಗಪುರುಷ’ ಎಂಬ ಸಾಮಾಜಿಕ ನಾಟಕ ಪ್ರಸ್ತುತಪಡಿಸಲಾಗುತ್ತದೆ.

ನ.30ರಂದು ಅಗ್ನಿಪೂಜೆ, ಕೋಲಾಟ, ಗೀಗೀಪದ ಗಾಯನ, ಡೊಳ್ಳು ಕುಣಿತ, ಸಂಗೀತ ಸಂಜೆ ಕಾರ್ಯಕ್ರಮ ನಡೆಯುತ್ತವೆ. ಡಿ.1ರಂದು ರಥೋತ್ಸವ, ಡಿ.2ರಂದು ಜಂಗಿಕುಸ್ತಿ ನಡೆಯುತ್ತವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry