ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಜೈಪಾಲ್‌; ಗೌರಿಬಿದನೂರು ರಂಗು

Last Updated 28 ನವೆಂಬರ್ 2017, 6:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಮಾಜ ಸೇವೆಯಿಂದಲೇ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಉದ್ಯಮಿ ಜೈಪಾಲ್‌ ರೆಡ್ಡಿ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಜನವರಿಯಲ್ಲಿ ಸಮಾವೇಶದ ಮೂಲಕ ಜೈಪಾಲ್‌ ರೆಡ್ಡಿ ಬಿಜೆಪಿ ಸೇರ್ಪಡೆ ಅಧಿಕೃತ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.

ಈ ವಿದ್ಯಮಾನ ಗೌರಿಬಿದನೂರು ತಾಲ್ಲೂಕಿನ ಕಮಲ ಪಾಳೆಯದ ಟಿಕೆಟ್‌ ಆಕಾಂಕ್ಷಿಗಳಾಗಿರುವ ಎನ್.ಎಂ.ರವಿನಾರಾಯಣ ರೆಡ್ಡಿ, ಜ್ಯೋತಿ ರೆಡ್ಡಿ, ಸಿ.ಆರ್.ನರಸಿಂಹಮೂರ್ತಿ ಸೇರಿ ಅನೇಕ ಮುಖಂಡರ ಕಣ್ಣು ಕೆಂಪಾಗಿಸಿದೆ.

ಜೈಪಾಲ್‌ ರೆಡ್ಡಿ ಅವರು ಜೆಡಿಎಸ್‌ನಿಂದ ಬಂಡಾಯವೆದ್ದು ಹೊರಬಂದ ಶಾಸಕ ಜಮೀರ್ ಅಹಮ್ಮದ್‌ ಅವರ ಶಿಷ್ಯ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಜೆಡಿಎಸ್‌ ಟಿಕೆಟ್‌ ಕೈತಪ್ಪಿತ್ತು. ಪಕ್ಷೇತರರಾಗಿ ಸ್ಪರ್ಧಿಸಿ ಶಿವಶಂಕರ್‌ ರೆಡ್ಡಿ ಅವರಿಂದ ಸ್ವಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.

ಶಿವಶಂಕರರೆಡ್ಡಿ ಅವರು ‌49,831 ಮತಗಳನ್ನು ಗಳಿಸಿದ್ದರೆ, ಜೈಪಾಲ್‌ ರೆಡ್ಡಿ ‌44,058 ಮತಗಳನ್ನು ಪಡೆದಿದ್ದರು. ಎಲ್ಲ ಪಕ್ಷಗಳ ಮುಖಂಡರೊಂದಿಗೆ ಒಳ್ಳೆಯ ‘ಸಖ್ಯ’ ಇಟ್ಟುಕೊಂಡಿರುವ ಜೈಪಾಲ್‌ ರೆಡ್ಡಿ ಅವರ ಮನೆಯಲ್ಲಿ ಕೆಲ ತಿಂಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ‘ಆತಿಥ್ಯ’ ಸ್ವೀಕರಿಸಿದ್ದರು. ಜಮೀರ್ ಅಹಮ್ಮದ್‌ ಅವರು ಜೆಡಿಎಸ್ ತೊರೆದಿರುವ ಕಾರಣಕ್ಕೆ ಜೈಪಾಲ್‌ ರೆಡ್ಡಿ ಅವರು ಸಹ ಆ ಪಕ್ಷಕ್ಕೆ ‘ವಿದಾಯ’ ಹೇಳಿ ಸದ್ಯ ಹೊಸ ದಾರಿಯ ಹುಡುಕಾಟದಲ್ಲಿದ್ದರು.

ಬರುವ ಚುನಾವಣೆಗಾಗಿ ‘ಅಳೆದು ತೂಗಿ’ ಬಿಜೆಪಿ ಸೇರುವ ನಿರ್ಧಾರಕ್ಕೆ ಬಂದ ಜೈಪಾಲ್‌ ರೆಡ್ಡಿ ಅವರು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಮತ್ತು ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಮುಂದಾಳತ್ವದಲ್ಲಿ ಯಡಿಯೂರಪ್ಪ ಅವರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿ, ಸಂಕ್ಷಿಪ್ತವಾಗಿ ಸೇರ್ಪಡೆ ‘ಶಾಸ್ತ್ರ’ ಮುಗಿಸಿದ್ದಾರೆ ಎನ್ನಲಾಗಿದೆ.

‘ಕೆಲ ವರ್ಷ ಕೆಲಸ ಮಾಡಲಿ. ಅದು ಬಿಟ್ಟು ಟಿಕೆಟ್‌ ಕೇಳಿದರೆ ನೀಡಬಾರದು’ ಎಂದು ಸ್ಥಳೀಯ ಮುಖಂಡರು ವರಿಷ್ಠರ ಬಳಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

‘ಜೈಪಾಲ್‌ ರೆಡ್ಡಿ ಇನ್ನೂ ಬಿಜೆಪಿ ಸೇರಿಲ್ಲ. ಆ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕೆ ನನ್ನ ವಿರೋಧವಿಲ್ಲ. ಏಕೆಂದರೆ ಈ ಬಾರಿ ಪಕ್ಷದ ವರಿಷ್ಠರು ನನಗೆ ಟಿಕೆಟ್‌ ನೀಡುತ್ತಾರೆ ಎನ್ನುವುದು ಶೇ 99ರಷ್ಟು ನಂಬಿಕೆ ಇದೆ. ಜೈಪಾಲ್‌ ರೆಡ್ಡಿ ಅವರೂ ಟಿಕೆಟ್‌ ಆಕಾಂಕ್ಷಿಗಳ ಸ್ಪರ್ಧೆಯಲ್ಲಿ ಇದ್ದರೆ ನಮಗೂ ಥ್ರೀಲ್‌ ಇರುತ್ತೆ ಬಿಡಿ’ ಎಂದು ರವಿನಾರಾಯಣ ರೆಡ್ಡಿ ಹೇಳಿದರು.

‘ಜೈಪಾಲ್‌ ರೆಡ್ಡಿ ಅವರು ಬಿಜೆಪಿಗೆ ಬರುವುದು ನಿಶ್ಚಿತ. ಜನವರಿಯಲ್ಲಿ ಸಮಾವೇಶ ನಡೆಸಿ ಅಧಿಕೃತವಾಗಿ ಘೋಷಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಸ್ಥಳೀಯ ಮುಖಂಡರಿಂದ ವಿರೋಧ ವ್ಯಕ್ತವಾಗಿರುವುದು ನನಗೆ ಗೊತ್ತಿಲ್ಲ. ಟಿಕೆಟ್ ನೀಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ’ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಡಾ.ಜಿ.ವಿ.ಮಂಜುನಾಥ್‌.


ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಉತ್ತಮ ಸಾಧನೆ ತೋರಿರುವ ಜೈಪಾಲ್‌ ರೆಡ್ಡಿ ಅವರಿಗೆ ರಾಷ್ಟ್ರೀಯ ಪಕ್ಷವೊಂದರ ಬೆಂಬಲ ದೊರೆತರೆ ಮುಂಬರುವ ಚುನಾವಣೆಯಲ್ಲಿ ಅವರನ್ನು ಕಟ್ಟಿಹಾಕುವುದು  ಕಷ್ಟವಾಗುತ್ತದೆ ಎನ್ನುವ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಜನಸೇವೆಗೆ ಅಧಿಕಾರಿಗಳ ಅಡ್ಡಗಾಲು!
‘ಶಿವಶಂಕರ್ ರೆಡ್ಡಿ, ರವಿನಾರಾಯಣ ರೆಡ್ಡಿ ಮತ್ತು ಜ್ಯೋತಿ ರೆಡ್ಡಿ ಒಂದೇ ಮನೆತನಕ್ಕೆ ಸೇರಿದವರು. ಪಕ್ಷ ಬೇರೆ, ಬೇರೆಯಾದರೂ ಪರೋಕ್ಷವಾಗಿ ‘ಅಧಿಕಾರ’ ರೆಡ್ಡಿ ಕುಟುಂಬದವರ ಬಳಿ ಇದೆ. ಸರ್ಕಾರಿ ಅಧಿಕಾರಿಗಳ ಮೂಲಕ ಜೈಪಾಲ್‌ ರೆಡ್ಡಿ ಅವರ ಸಮಾಜ ಸೇವೆಯನ್ನು ‘ಹತ್ತಿಕ್ಕುವ’ ಕೆಲಸ ಕ್ಷೇತ್ರದಲ್ಲಿ ಬಹುಹಿಂದಿನಿಂದಲೇ ನಡೆದುಕೊಂಡು ಬರುತ್ತಿದೆ. ಇದಕ್ಕೆ ಹಲವರು ಬೆಂಬಲವಾಗಿದ್ದಾರೆ. ಈಗ ಅದು  ಮತ್ತಷ್ಟು ಚುರುಕು ಪಡೆದಿದೆ’ ಎನ್ನುತ್ತಾರೆ ಗೌರಿಬಿದನೂರು ಕ್ಷೇತ್ರದ ಜನರು.

* * 

ಒಂದೊಮ್ಮೆ ಜೈಪಾಲ್‌ ರೆಡ್ಡಿ ಬಿಜೆಪಿ ಸೇರಿದರೆ ಅವರು ಸಹ ನಮ್ಮಂತೆ ಟಿಕೆಟ್ ಆಕಾಂಕ್ಷಿಗಳ ಸ್ಪರ್ಧೆಯಲ್ಲಿರುತ್ತಾರೆ. ಆದರೆ ನನಗೆ ಟಿಕೆಟ್ ಸಿಗುವುದು ಖಚಿತ.
ಎನ್.ಎಂ. ರವಿನಾರಾಯಣರೆಡ್ಡಿ,
ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT