7

ರೈತರ ಆತ್ಮಹತ್ಯೆಗೆ ಸರ್ಕಾರಗಳೇ ಹೊಣೆ

Published:
Updated:

ಹಿರಿಯೂರು: ‘ಭಾರತದಲ್ಲಿ ಪ್ರತಿ 26 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದಕ್ಕೆ ನಮ್ಮನ್ನಾಳುವ ಸರ್ಕಾರಗಳೇ ಕಾರಣ’ ಎಂದು ಪ್ರಗತಿಪರ ರೈತ ಆರನಕಟ್ಟೆ ಶಿವಕುಮಾರ್ ಆರೋಪಿಸಿದರು.

ತಾಲ್ಲೂಕಿನ ಹೊಸಯಳನಾಡು ಸರ್ಕಾರಿ ಪಿಯು ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ ಸೋಮವಾರ ಹಮ್ಮಿಕೊಂಡಿದ್ದ ‘ಕರ್ನಾಟಕದಲ್ಲಿ ರೈತ ಚಳವಳಿಯ ಹುಟ್ಟು ಮತ್ತು ಬೆಳವಣಿಗೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಾಕಿಸ್ತಾನದಂತಹ ರಾಷ್ಟ್ರಗಳಲ್ಲೂ ರೈತರಿಗೆ ಅಲ್ಲಿನ ಸರ್ಕಾರ ಶೇ 18ರಷ್ಟು ರಿಯಾಯಿತಿ ನೀಡುತ್ತಿದೆ. ಜಪಾನ್‌ ದೇಶದಲ್ಲಿ ಶೇ 33ರಷ್ಟು ನೀಡಲಾಗುತ್ತಿದೆ. ಭಾರತದಲ್ಲಿ ಈ ಪ್ರಮಾಣ ಕೇವಲ ಶೇ 3ರಷ್ಟಿದೆ. ಇದರಿಂದಾಗಿಯೇ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಎಲ್ಲ ವರ್ಗದವರಿಗೂ ವೇತನ ನಿಗದಿ ಪಡಿಸುತ್ತದೆ. ಆದರೆ, ರೈತನ ಬೆಳೆಗೆ ಏಕೆ ನಿಗದಿ ಮಾಡುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.

‘ಪ್ರೊ. ನಂಜುಂಡಸ್ವಾಮಿ ನೇತೃತ್ವದಲ್ಲಿ ಎಲ್ಲರೂ ನಿಬ್ಬೆರಗಾಗುವಂತೆ ರಾಜ್ಯದಲ್ಲಿ ರೈತ ಚಳುವಳಿ ಬೆಳೆದಿತ್ತು. ರೈತರು ಹಸಿರು ಶಾಲು ಬೀಸಿದರೆ ವಿಧಾನಸೌಧ ಅಲ್ಲಾಡುತ್ತಿತ್ತು. ನಂತರದ ದಿನಗಳಲ್ಲಿ ಸ್ವತಂತ್ರ ಸಂಘ ರಾಜಕೀಯ ಪ್ರವೇಶ ಮಾಡಿದ್ದರಿಂದ ನಿಧಾನವಾಗಿ ಚಳವಳಿಗಳು ಮೊನಚು ಕಳೆದುಕೊಂಡವು. ಪ್ರಸ್ತುತ ರೈತ ಸಂಘ ಹಲವು ಶಾಖೆಗಳಾಗಿವೆ. ವೈಯಕ್ತಿಕ ಹಿತಾಸಕ್ತಿ ಮರೆತು ಒಗ್ಗೂಡಬೇಕಿದೆ’ ಎಂದು ಶಿವಕುಮಾರ್ ತಿಳಿಸಿದರು.

ಸಮಾಜಶಾಸ್ತ್ರ ಉಪನ್ಯಾಸಕ ಎಚ್.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ತಿಮ್ಮಶೆಟ್ರು ಅಧ್ಯಕ್ಷತೆ ವಹಿಸಿದ್ದರು. ಎಸ್.ನಿಜಲಿಂಗಪ್ಪ ಸ್ವಾಗತಿಸಿದರು. ಕೆ.ಟಿ.ನಾಗೇಂದ್ರಪ್ಪ ವಂದಿಸಿದರು. ಆರ್.ಗುರುಸ್ವಾಮಿ, ಎಂ.ಸಿ.ಶಿವು, ಎಂ.ಕೆ.ಲಕ್ಷ್ಮೀ, ನಿರಂಜನಮೂರ್ತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry