ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 1.07 ಲಕ್ಷ ಜನರಿಗೆ ‘ಅನಿಲ ಭಾಗ್ಯ’

Last Updated 28 ನವೆಂಬರ್ 2017, 7:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಡಿ ಉಚಿತ ಅನಿಲ ಸಿಲಿಂಡರ್ ಸಂಪರ್ಕ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ‘ಅನಿಲ ಭಾಗ್ಯ’ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಅನಿಲ ಸಂಪರ್ಕ ಇಲ್ಲದ 1,07,554 ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಕುಟುಂಬಗಳಿಗೆ ಮುಖ್ಯಮಂತ್ರಿಯವರ ಅನಿಲ ಭಾಗ್ಯ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿಕೊಡಲಾಗುವುದು. ಮೊದಲ ಹಂತದಲ್ಲಿ 34,151 ಫಲಾನುಭವಿಗಳಿಗೆ ಈ ಸೌಲಭ್ಯ ವಿತರಿಸಲಾಗುತ್ತಿದೆ. ಎಂಟು ದಿನಗಳಲ್ಲಿ ಆಯಾ ತಾಲ್ಲೂಕಿನ ಫಲಾನುಭವಿಗಳ ಪಟ್ಟಿಯನ್ನು ಶಾಸಕರು ಕಳುಹಿಸಿಕೊಡಬೇಕು ಎಂದು ತಿಳಿಸಿದರು.

ಆನ್‌ಲೈನ್‌ ದಾಖಲೆ: ಆಯ್ಕೆಯಾದ ಫಲಾನುಭವಿಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಿ, 15 ದಿನಗಳಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಆಯ್ಕೆ ಮಾಡುವ ಫಲಾನುಭವಿಗಳ ವಿವರವನ್ನು ಆನ್‌ಲೈನ್‌ನಲ್ಲಿ ಆಯಾ ಗ್ರಾಮ ಪಂಚಾಯ್ತಿಗಳಲ್ಲೇ ಭರ್ತಿ ಮಾಡಬೇಕು. ಫಲಾನುಭವಿಗಳು ಬಂದು ವಿವರ ನೀಡುವ ಬದಲು, ಅಧಿಕಾರಿಗಳೇ ಫಲಾನುಭವಿಗಳ ಸಂಪೂರ್ಣ ವಿವರ ಪಡೆದು, ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಇದರಿಂದ, ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ ಎಂದರು.

ಮೊದಲ ಹಂತ ಪೂರ್ಣಗೊಂಡ ನಂತರ ಫೆಬ್ರುವರಿ ಅಥವಾ ಮಾರ್ಚ್ ತಿಂಗಳ ಒಳಗಾಗಿ ಎರಡು ಹಾಗೂ ಮೂರನೇ ಹಂತದಲ್ಲಿ ಎಲ್ಲಾ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಪ್ರತಿ ಫಲಾನುಭವಿಗೆ ₹ 4,040 ವೆಚ್ಚ: ಪ್ರತಿ ಫಲಾನುಭವಿಗೆ ₹ 4,040 ವೆಚ್ಚದಲ್ಲಿ ಎರಡು ಬರ್ನಲ್‌ನ ಗ್ಯಾಸ್‌ ಸ್ಟೌ, ಅನಿಲ ತುಂಬಿದ ಎರಡು ಸಿಲಿಂಡರ್, ರೆಗ್ಯುಲೇಟರ್, ಲೈಟರ್ ಸೇರಿ ಏಳು ವಸ್ತುಗಳನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ‘ಉಜ್ವಲ’ ಯೋಜನೆಯಡಿ ಪ್ರತಿ ಫಲಾನುಭವಿಗೆ ಕೇವಲ ₹ 1,450 ಸಹಾಯಧನ ನೀಡಲಾಗುತ್ತಿದೆ. ಕೇಂದ್ರದ ಯೋಜನೆಗಿಂತ ಇದು ಹೆಚ್ಚು ಪ್ರಯೋಜನಕಾರಿ’ ಎಂದು ವಿಶ್ಲೇಷಿಸಿದರು.

ಈಗಾಗಲೇ ಅಡುಗೆ ಅನಿಲ ಸಂಪರ್ಕ ಹೊಂದಿರುವ ಕುಟುಂಬಗಳು ಈ ಯೋಜನೆಗೆ ಅರ್ಹರಾಗುವುದಿಲ್ಲ. ಗ್ಯಾಸ್ ಸಂಪರ್ಕ ಹೊಂದಿರುವವರು ಅದಕ್ಕೆ ಆಧಾರ್ ಸಂಖ್ಯೆ ಲಿಂಕ್ ಮಾಡಿರುವುದರಿಂದ, ಈಗಾಗಲೇ ಗ್ಯಾಸ್ ಸಂಪರ್ಕ ಪಡೆದಿರುವವರನ್ನು ಪತ್ತೆ ಮಾಡುವುದು ಸುಲಭ. ಅಂಥವರನ್ನು ಈ ಯೋಜನೆಯಿಂದ ಹೊರಗಿಡಲಾಗುವುದು ಎಂದರು.

ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಂದ ಬಿಲ್ ಹೊರತಾಗಿ ಹೆಚ್ಚುವರಿಯಾಗಿ ₹ 30ರಿಂದ ₹ 40 ವಸೂಲಿ ಮಾಡಲಾಗುತ್ತಿದೆ. ಆದರೆ, ಬಿಲ್ಲಿನ ಮೊತ್ತ ಹೊರತಾಗಿ ಯಾವುದೇ ಶುಲ್ಕವನ್ನು ಗ್ಯಾಸ್ ಏಜೆನ್ಸಿಯವರು ಪಡೆಯುವಂತಿಲ್ಲ. ಪಡೆದಲ್ಲಿ ಸಂಬಂಧಿಸಿದ ಗ್ಯಾಸ್ ಕಂಪೆನಿಯ ಏಜೆನ್ಸಿ ರದ್ದುಪಡಿಸಲು ಕ್ರಮ ಕೈಗೊಳ್ಳುತ್ತಾರೆ. ಗ್ರಾಹಕರೂ ಹೆಚ್ಚುವರಿ ಹಣ ನೀಡಬಾರದು. ಬದಲಿಗೆ ಸಂಬಂಧಿಸಿದ ಕಂಪೆನಿಯವರಿಗೆ ದೂರು ನೀಡಬೇಕು ಎಂದು ಸಲಹೆ ನೀಡಿದ ಸಚಿವರು, ಈ ಕುರಿತು ಪರಿಶೀಲನೆ ನಡೆಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ ಉಪಸ್ಥಿತರಿದ್ದರು.

ಶಾಸಕರ ನೇತೃತ್ವದ ಸಮಿತಿಯಿಂದ ಆಯ್ಕೆ

‘ಜಿಲ್ಲೆಯಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರನ್ನೊಳಗೊಂಡ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಬೇಕು’ ಎಂದು ಸಚಿವ ಆಂಜನೇಯ ತಿಳಿಸಿದರು. ‘ಆಯ್ಕೆ ಮಾಡುವುದು ನಿಗದಿತ ಸಮಯಕ್ಕಿಂತ ವಿಳಂಬವಾದರೆ, ಜಿಲ್ಲಾಮಟ್ಟದ ಸಮಿತಿಯಿಂದಲೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಪ್ರತಿ ಫಲಾನುಭವಿಗೆ ₹ 4,040 ವೆಚ್ಚ
ಪ್ರತಿ ಫಲಾನುಭವಿಗೆ ₹ 1,450 ಸಿಲಿಂಡರ್ ಭದ್ರತಾ ಠೇವಣಿ, ರೆಗ್ಯುಲೇಟರ್ ಭದ್ರತಾ ಠೇವಣಿ ₹ 150, ₹ 190 ವೆಚ್ಚದ ಸುರಕ್ಷಾ ಹೋಸ್ ಪೈಪ್, ₹ 50 ಮೊತ್ತದ ಡಿಜಿಸಿ ಪುಸ್ತಕ, ₹ 100 ತಪಾಸಣಾ ಮತ್ತು ಜೋಡಣಾ ವೆಚ್ಚ, ₹ 1,000 ಮೊತ್ತದ ಎರಡು ಬರ್ನರ್‌ನ ಗ್ಯಾಸ್ ಸ್ಟೌ, ₹ 1,100 ಮೊತ್ತದ ಎರಡು ತುಂಬಿದ ಸಿಲಿಂಡರ್. ಇವೆಲ್ಲ ಸೇರಿ ಒಟ್ಟು ₹ 4,040 ವೆಚ್ಚ ಮಾಡಲಾಗುತ್ತದೆ.

ಎರಡು ತಿಂಗಳೊಳಗೆ ‘ದುರ್ಗೋತ್ಸವ’
ಜಿಲ್ಲಾ ಉತ್ಸವವಾದ ‘ದುರ್ಗೋತ್ಸವ’ವನ್ನು ಬರಗಾಲದ ಕಾರಣ ಆಯೋಜಿಸಿರಲಿಲ್ಲ. ಈ ವರ್ಷ ಮಳೆ ಉತ್ತಮವಾಗಿದೆ. ತುಸು ಸಮಾಧಾನ ತಂದಿದೆ. ಹೀಗಾಗಿ ಈ ವರ್ಷ ದುರ್ಗೋತ್ಸವ ನಡೆಸಲು ಉದ್ದೇಶಿಸಲಾಗಿದೆ ಎಂದು ಆಂಜನೇಯ ತಿಳಿಸಿದರು.

ದುರ್ಗೋತ್ಸವ ಆಯೋಜನೆ ಕುರಿತ ಪೂರ್ವ ಸಿದ್ಧತೆ ರೂಪುರೇಷೆಗಳ ಕುರಿತು ಚರ್ಚೆಗಾಗಿ ಮುಂದಿನ ವಾರ ವಿಶೇಷ ಸಭೆ ಕರೆಯಲಾಗುವುದು. ಡಿಸೆಂಬರ್ ಅಥವಾ ಜನವರಿಯಲ್ಲಿ ಸಂಕ್ರಾತಿ ಹಬ್ಬದ ಆಸು–ಪಾಸಿನಲ್ಲಿ ಉತ್ಸವ ಆಯೋಜಿಸುವ ಉದ್ದೇಶವಿದೆ ಎಂದರು.

* * 

ರಸ್ತೆ ವಿಸ್ತರಣೆಯ ಕಾಮಗಾರಿ ಅನುಮೋದನೆಗಾಗಿ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು
ಎಚ್. ಆಂಜನೇಯ,
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT